ಭಾನುವಾರ, ನವೆಂಬರ್ 17, 2019
29 °C

ತಾ.ಪಂ. ಕಚೇರಿ ತಪಾಸಣೆ

Published:
Updated:

ಕೊಳ್ಳೇಗಾಲ: ಕೇಂದ್ರ ತೆರಿಗೆ ಗುಪ್ತಚರ ವಿಶೇಷ ತನಿಖಾ ತಂಡ ಮಂಗಳವಾರ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ತೀವ್ರ ತಪಾಸಣೆ ನಡೆಸಿತು.ತಾಲ್ಲೂಕಿನಲ್ಲಿ ನಡೆದಿರುವ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳ ಗುತ್ತಿಗೆದಾರರ ಬಗ್ಗೆ ಮಾಹಿತಿ ಜಲಾನಯನ ಇಲಾಖೆ ಕಾಮಗಾರಿಗಳ ಬಗ್ಗೆ ತಂಡ ವಿಶೇಷ ಮಾಹಿತಿಯನ್ನು ಸಂಗ್ರಹಿಸಿತು.ಮೂರ‌್ನಾಲ್ಕು ವಾಹನಗಳಲ್ಲಿ ಆಗಮಿಸಿದ ಈ ತಂಡ ತಾಲ್ಲೂಕು ಕಚೇರಿ ಪ್ರವೇಶಿಸುತ್ತಿದ್ದಂತೆಯೇ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ವಿದ್ಯುತ್ ಸಂಚಲನ ಉಂಟಾಯಿತು. ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದ ಕಾರ್ಯನಿರ್ವಾಹಕ ಅಧಿಕಾರಿಯನ್ನು ತಮ್ಮ ಬಳಿಗೆ ಕರೆದುಕೊಂಡು ಅಧಿಕಾರಿಗಳು ತಕ್ಷಣ ಅಲ್ಲಿಯೇ ಇದ್ದ ಜಲಾನಯನ ತಾಲ್ಲೂಕು ಅಧಿಕಾರಿ ಶ್ರೀಕಂಠಸ್ವಾಮಿ ಅವರನ್ನು ವಾಹನದಲ್ಲಿ ಕೂರಿಸಿಕೊಂಡು ಅವರ ಕಚೇರಿಗೆ ತೆರಳಿ ಕಡತಗಳ ಪರಿಶೀಲನೆ ನಡೆಸಿದರು.ತಾಲ್ಲೂಕು ಪಂಚಾಯಿತಿ ಕಂಪ್ಯೂಟರ್ ಕೊಠಡಿಯಲ್ಲಿ ಉದ್ಯೋಗ ಖಾತ್ರಿಗೆ ಸಂಬಂಧಿಸಿದಂತೆ ಮಾಹಿತಿಗಳನ್ನು ಸಂಗ್ರಹಿಸಿದ ಅವರು ಅನೇಕ ಕಡತಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವಸ್ವಾಮಿ, ಲೆಕ್ಕಾಧಿಕಾರಿ ಗಂಗಾಧರ್, ಸಾಕಮ್ಮ, ಗುತ್ತಿಗೆದಾರರಿಂದ ವಿಶೇಷ ಮಾಹಿತಿಗಳನ್ನು ಅವರು ಪಡೆದುಕೊಂಡಿದ್ದಾರೆ.2007, ಜೂನ್ 1ರಿಂದ ನಡೆದಿರುವ ಉದ್ಯೋಗ ಖಾತ್ರಿ ಅನುಷ್ಠಾನ ಯೋಜನೆಯಲ್ಲಿ ತೆರಿಗೆ ವಂಚಿಸಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಈ ತನಿಖಾ ತಂಡ ವ್ಯಾಪಕ ಲೆಕ್ಕಪತ್ರಗಳ ಪರಿಶೀಲನೆ ನಡೆಸಲಿದೆ ಎಂದು ಹೇಳಲಾಗುತ್ತಿದೆ.

ಪ್ರತಿಕ್ರಿಯಿಸಿ (+)