ಶುಕ್ರವಾರ, ಮೇ 14, 2021
27 °C

ತಾ.ಪಂ. ಸಭೆ: ಬರ ಪರಿಹಾರದ ಚಕಾರವಿಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊಳಕಾಲ್ಮುರು: ತಾಲ್ಲೂಕು ಪಂಚಾಯ್ತಿಯಲ್ಲಿ ಮಂಗಳವಾರ ನಡೆದ ಕೆಡಿಪಿ (ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳು) ಪರಿಶೀಲನಾ ಸಭೆಯಲ್ಲಿ, ಬರ ಪರಿಹಾರ ಕುರಿತು ಚರ್ಚೆ ನಡೆಯದೇ, ನೀರಸವಾಗಿತ್ತು.

ಅಧಿಕಾರಿಗಳ ಗೈರು ಗೈರುಹಾರಿ ಪುನರಾವರ್ತನೆಯಾಯಿತು.

 

ಅಧೀನ ಅಧಿಕಾರಿಗಳನ್ನು ಕಳುಹಿಸ್ದ್ದಿದು ಕಂಡುಬಂದಿತು. ಗಂಟೆ ವಿಳಂಬವಾಗಿ ಸಭೆ ಆರಂಭವಾಯಿತು. ಬರಗಾಲ ಉಂಟಾಗಿದ್ದರೂ ಮೇವು, ಬಿತ್ತನೆಬೀಜ, ಗೋಶಾಲೆಗಳ ವ್ಯವಸ್ಥೆ ಕುರಿತು ಯಾರೂ ಚಕಾರ ಎತ್ತಲಿಲ್ಲ.ಜಿ.ಪಂ. ಎಇಇ ಶ್ರೀನಿವಾಸ್ ಮಾತನಾಡಿ, 2011-12ನೇ ಸಾಲಿನಲ್ಲಿ ಒಟ್ಟು 48 ಮುಂದುವರಿದ ಕಾಮಗಾರಿ ಕೈಗೊಂಡಿದ್ದು, ಈ ಪೈಕಿ 43 ಕಾಮಗಾರಿ ಮುಗಿದಿವೆ. ಐದು ಕಾಮಗಾರಿ ಪ್ರಗತಿಯಲ್ಲಿವೆ. ಬಿಆರ್‌ಜಿಎಫ್ ಯೋಜನೆಯಲ್ಲಿ ಕೈಗೊಂಡಿರುವ 19 ಕಾಮಗಾರಿಗಳ ಪೈಕಿ 15 ಕಾಮಗಾರಿ ಪೂರ್ಣವಾಗಿವೆ ಎಂದು ಮಾಹಿತಿ ನೀಡಿದರು.ಇಒ ಅಂಜನ್‌ಕುಮಾರ್ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಹೆಚ್ಚಳವಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದ್ದು, ಬೇಸಿಗೆ ಮುಗಿಯುವ ತನಕ ಸಮಸ್ಯೆಯನ್ನು ಸರಿಯಾಗಿ ನಿಭಾಯಿಸಿಕೊಂಡು ಹೋಗಬೇಕು ಎಂದು ಸೂಚಿಸಿದರು.ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಕಾಂತರೆಡ್ಡಿ ಮಾತನಾಡಿ, ಜಿ.ಪಂ. ಎಂಜಿನೀಯರ್ ಚಂದ್ರಶೇಖರ್ ದೇವಸಮುದ್ರ ಹೋಬಳಿಯಲ್ಲಿ ತಮಗೆ ಇಷ್ಟ ಬಂದ ರೀತಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಾರೆ. ಜನಪ್ರತಿನಿಧಿಗಳ ಮಾತಿಗೆ ಬೆಲೆ ನೀಡುವುದಿಲ್ಲ. ಒಟ್ಟಿನಲ್ಲಿ ಅವರದು ಸರ್ವಾಧಿಕಾರಿ ಧೋರಣೆ ಆಗಿದ್ದು ಕ್ರಮ ಕೈಗೊಳ್ಳುವಂತೆ ಜಿ.ಪಂ. ಎಇಇ ಅವರಿಗೆ ಸೂಚಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಉಮಾದೇವಿ ಮಾತನಾಡಿ, ತಾಲ್ಲೂಕಿನಲ್ಲಿ ಒಟ್ಟು 99 ಶಿಕ್ಷಕರ ಕೊರತೆಯಿದೆ. ಈ ವರ್ಷ ಒಟ್ಟು 156 ಶಿಕ್ಷಕರು ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಮುಂದಿನ ವರ್ಷವೂ ಸಹ ಶಿಕ್ಷಕರ ಕೊರತೆ ಉಂಟಾಗುವ ಲಕ್ಷಣವಿದೆ. ಗಡಿಭಾಗದ ಐದು ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಮೇ ತಿಂಗಳಿನಲ್ಲಿ ಎಲ್ಲಾ ಶಾಲೆಗಳಿಗೆ ಮುಂದಿನ ಶೈಕ್ಷಣಿಕ ವರ್ಷದ ಪಠ್ಯಪುಸ್ತಕಗಳನ್ನು ಹಾಗೂ ಸಮವಸ್ತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.ರೇಷ್ಮೆ ಇಲಾಖೆಯ ಹನುಮಂತಪ್ಪ ಮಾತನಾಡಿ, `ತಾಲ್ಲೂಕಿನಲ್ಲಿ 2011-12ನೇ ಸಾಲಿನಲ್ಲಿ 204 ಟನ್ ಮಿಶ್ರತಳಿ ರೇಷ್ಮೆಗೂಡು, 20 ಟನ್ ವಿದೇಶಿ ತಳಿ ಗೂಡು ಉತ್ಪಾದನೆ ಮಾಡಲಾಗಿದೆ. ಈ ಮೂಲಕ ಬೆಳೆಗಾರರಿಗೆ ಅಂದಾಜು ರೂ 5 ಕೋಟಿ ಲಾಭ ಬಂದಿದೆ ಎಂದರು.ತಾ.ಪಂ. ಸಭೆಗಳಿಗೆ ಅಧಿಕಾರಿಗಳು ಗೈರು ಆಗುವುದು ಮತ್ತು ಅಧೀನ ಅಧಿಕಾರಿಗಳನ್ನು ನಿಯೋಜನೆ ಮಾಡುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಇಒ ನಾವು ಯಾರಿಗಾಗಿ ಸಭೆ ಮಾಡಬೇಕು. ಬಾರದೇ ಇರುವ ಅಧಿಕಾರಿಗಳಿಗೆ ಷೋಕಾಸ್ ನೋಟಿಸ್ ಜಾರಿ ಮಾಡುವುದಾಗಿ ಹೇಳಿದರು.ಅಧ್ಯಕ್ಷೆ ಕವಿತಾಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಕಾಂತರೆಡ್ಡಿ, ಗಡಿ ಅಭಿವೃದ್ಧಿ ಪ್ರಾಧಿಕಾರ ಸಮಿತಿ ಸದಸ್ಯ ಕೆ.ಜಿ. ಪಾರ್ಥಸಾರಥಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.