ಶನಿವಾರ, ಮೇ 21, 2022
26 °C

ತಾಪಮಾನ ಪರಿಣಾಮ ತಡೆಗೆ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಶ್ವದ ಪ್ರತಿಯೊಂದು ರಾಷ್ಟ್ರಕ್ಕೂ ಸವಾಲಾಗಿ ಪರಿಣಮಿಸಿರುವ ಜಾಗತಿಕ ತಾಪಮಾನ ಪರಿಣಾಮಗಳ ತಡೆಗೆ ಎಲ್ಲ ದೇಶಗಳು ಗಡಿ ರೇಖೆಗಳ ಅಡೆತಡೆಯಿಲ್ಲದೆ ಒಗ್ಗಟ್ಟಿನಿಂದ ಕಾರ್ಯಯೋಜನೆಗಳನ್ನು ರೂಪಿಸಬೇಕಾಗಿದೆ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಇಲ್ಲಿ ಅಭಿಪ್ರಾಯಪಟ್ಟರು.ಸಾಮಾಜಿಕ ಮತ್ತು ಬದಲಾವಣೆ ಸಂಸ್ಥೆ ಹಾಗೂ ಜರ್ಮನಿಯ ಅಲೆಕ್ಸಾಂಡರ್ ವನ್ ಹಂಬೋಲ್ಡ್ ಫೌಂಡೇಷನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ `ಜಾಗತಿಕ ತಾಪಮಾನದ ಪರಿಣಾಮಗಳು~ ಕುರಿತ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.`ಅರಣ್ಯ ನಾಶದ ಜತೆಗೆ, ಪರಿಸರದ ಮೇಲೆ ಮಾನವ ನಡೆಸುತ್ತಿರುವ ದೌರ್ಜನ್ಯದಿಂದಾಗಿ ಜಾಗತಿಕ ತಾಪಮಾನ ಹೆಚ್ಚಿ ವಿಶ್ವದಲ್ಲಿ ಅವಾಂತರ ಸೃಷ್ಟಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಷ್ಟ್ರಗಳು ಜಾಗತಿಕ ತಾಪಮಾನ ಪರಿಣಾಮಗಳ ತಡೆಗೆ ಒತ್ತು ನೀಡಬೇಕಾಗಿದೆ~ ಎಂದರು.`ಭಾರತದ ಸುಂದರ ಪ್ರದೇಶಗಳಲ್ಲೊಂದಾದ ಹಿಮಾಲಯ ಕೂಡ ಇಂದು ಬದಲಾಗಿದೆ. ಸಾಕಷ್ಟು ಅರಣ್ಯ ನಾಶ ಮಾಡಿರುವುದರಿಂದ ಅದರ ಸೌಂದರ‌್ಯಕ್ಕೂ ಧಕ್ಕೆಯಾಗಿದೆ. ಇನ್ನು ಪವಿತ್ರ ನದಿಗಳಾದ ಗಂಗಾ-ಯಮುನಾ ನದಿಗಳನ್ನು ಮಲಿನಗೊಳಿಸಿದ್ದೇವೆ. ಇದರಿಂದ ಜನ ರೋಗಗಳಿಗೆ ತುತ್ತಾಗಿ ನರಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ~ ಎಂದರು.`ಕರ್ನಾಟಕದ ಜೀವನದಿ ಕಾವೇರಿಯ ಪವಿತ್ರತೆ ಕಾಯ್ದುಕೊಂಡಿರುವುದರ ಜತೆಗೆ, ಅದನ್ನು ಉತ್ತಮವಾಗಿ ನಿರ್ವಹಣೆ ಮಾಡಿಕೊಂಡು ಬರಲಾಗುತ್ತಿದೆ~ ಎಂದು ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿದರು.ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಮಾತನಾಡಿ, `ಜಾಗತಿಕ ತಾಪಮಾನದ ಪರಿಣಾಮಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದರು.`ಮಾಲಿನ್ಯ ತಡೆಗೆ ನವೀಕರಿಸಬಹುದಾದ ಇಂಧನ ಮೂಲಗಳು ಹಾಗೂ ಸೋಲಾರ್ ಶಕ್ತಿಯ ಬಳಕೆ ಜತೆಗೆ, ಪರಿಸರಸ್ನೇಹಿ ನಗರಗಳ ಅಭಿವೃದ್ಧಿಗೆ ಸರ್ಕಾರ ಪ್ರಯತ್ನ ನಡೆಸುತ್ತಿದೆ~ ಎಂದರು.ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ ಮುಖ್ಯಸ್ಥ ಪ್ರೊ.ಕೆ.ಆರ್.ಎಸ್. ಮೂರ್ತಿ, ನಿರ್ದೇಶಕ ಪ್ರೊ.ಆರ್.ಎಸ್. ದೇಶಪಾಂಡೆ, ಜರ್ಮನಿಯ ಪಾಟ್ಸ್‌ಡ್ಯಾಮ್ ಜಾಗತಿಕ ಸಂಶೋಧನಾ ಸಂಸ್ಥೆಯ ಪ್ರೊ. ಜ್ಯೂರ್ಜನ್ ಕ್ರಾಪ್, ಕಾರ್ಯಕ್ರಮ ನಿರ್ದೇಶಕರಾದ ಡಾ. ಜುಡಿತ್ ಸಿಲ್ಡ್ ಮತ್ತಿತರರು ಉಪಸ್ಥಿತರಿದ್ದರು.ಭಾರತ ಮತ್ತು ಜರ್ಮನಿ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದ 60ನೇ ವಾರ್ಷಿಕೋತ್ಸವ ಅಂಗವಾಗಿ ಈ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.