ಬುಧವಾರ, ಅಕ್ಟೋಬರ್ 23, 2019
23 °C

ತಾಯಿ ಮಡಿಲೇ ಚೆಂದ...

Published:
Updated:

ಆಕೆ ಪ್ರಖ್ಯಾತ ರೂಪದರ್ಶಿ. ಫ್ಯಾಷನ್ ಜಗತ್ತಿನಲ್ಲಿ ಯಶಸ್ಸಿನ ಏಣಿಯ ಎಲ್ಲ ಮೆಟ್ಟಿಲು ಹತ್ತಿದಾಕೆ. ಆಕೆಯನ್ನು ದೈಹಿಕವಾಗಿ ಬಳಸಿಕೊಂಡ ಮಾಡೆಲಿಂಗ್ ಏಜೆನ್ಸಿಯ ಬಾಸ್, ಉಂಡು ಎಸೆದ ಬಾಳೆ ಎಲೆಯಂತೆ ಬಿಸಾಕಿದಾಗ ರ‌್ಯಾಂಪ್ ಜಗತ್ತಿನಿಂದ ದೂರ ಸರಿದು ಮುಖ ಮರೆಸಿಕೊಳ್ಳುತ್ತಾಳೆ. ಅಪ್ಪ, ಅಮ್ಮನ ಮಡಿಲಿಗೆ ಗುಬ್ಬಚ್ಚಿಯಂತೆ ಮರಳುತ್ತಾಳೆ.ವಾತ್ಸಲ್ಯದ ಗೂಡಿನಲ್ಲಿ ಮತ್ತೆ ಚಿಗುರೊಡೆದು ಆತ್ಮವಿಶ್ವಾಸದಿಂದ ತಲೆಎತ್ತಿ ನಿಲ್ಲುತ್ತಾಳೆ.

ಇದು ಮೂರು ವರ್ಷಗಳ ಹಿಂದೆ ತೆರೆಕಂಡಿದ್ದ ಮಧುರ್ ಭಂಡಾರ್‌ಕರ್ ನಿರ್ದೇಶನದ `ಫ್ಯಾಷನ್~ ಚಿತ್ರದ ಕಥೆ. ನಾಯಕಿ ಪ್ರಿಯಾಂಕ ಚೋಪ್ರಾ ತಮ್ಮ ಅಭಿನಯಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನೂ ಬಾಚಿಕೊಂಡ ಚಿತ್ರ ಇದು.`ಫ್ಯಾಷನ್~ ಚಿತ್ರದ ಈ ಕತೆಗೂ ನಾಯಕಿ ಪ್ರಿಯಾಂಕಾ ಚೋಪ್ರಾ ಖಾಸಗಿ ಜೀವನಕ್ಕೂ ಸ್ವಲ್ಪ ಸಾಮ್ಯ ಇದ್ದೇ ಇದೆ. ಹನ್ನೆರಡು ವರ್ಷಗಳ ಹಿಂದೆ `ಮಿಸ್ ವರ್ಲ್ಡ್~ ಕಿರೀಟ ತೊಟ್ಟು ಮಾಡೆಲಿಂಗ್‌ನಿಂದ ಚಿತ್ರ ಜಗತ್ತಿಗೆ ಜಿಗಿದಿದ್ದ ಪ್ರಿಯಾಂಕಾ ಯಾನೆ `ಪಿಗ್ಗಿ ಚೋಪ್ರಾ~ ಪಾಲಿಗೆ ದೊಡ್ಡ ಸ್ಟ್ರೆಸ್ ಬಸ್ಟರ್, ಅಮ್ಮನ ಮಮತೆಯ ಮಡಿಲಂತೆ. ಹೊಸ ವರ್ಷದ ಸಂದರ್ಭದಲ್ಲಿ ಖುದ್ದು `ಪಿಗ್ಗಿ~ ಹಾಗಂತ ಹೇಳಿಕೊಂಡಿದ್ದಾರೆ.ಸಿನಿಮಾಗಳ ಮೇಲೆ ಸಿನಿಮಾ. ಉಸಿರಾಡಲು ಪುರುಸೊತ್ತಿಲ್ಲ ಅನ್ನುವಷ್ಟು ಶೂಟಿಂಗ್. ಪ್ರಚಾರಕ್ಕಾಗಿ ದೇಶ ಸುತ್ತಾಟ. ಜಾಹೀರಾತಿನ ಹಂಗು. ಈ ಮಧ್ಯೆ ಸಂಗೀತದ ಗೀಳು. `ರಿಯಾಲಿಟಿ ಶೋ~ಗೆ ಬಂದು ಟಿಆರ್‌ಪಿ ಹೆಚ್ಚಿಸುವಂತೆ ಚಾನೆಲ್‌ಗಳ ದುಂಬಾಲು. ತಲೆ ಸಿಡಿಯುವಷ್ಟು ಒತ್ತಡ. ಅವೆಲ್ಲವುಗಳಿಂದ ನುಣುಚಿಕೊಂಡು ಆಗೀಗ ಪ್ರಿಯಾಂಕ ಮಾಯವಾಗುವುದೂ ಉಂಟು. ಹಾಗೆ ಮಾಯವಾಗುವ ಅವರು ಪ್ರತ್ಯಕ್ಷರಾಗುವುದು ಅಮ್ಮನ ಮಡಿಲಲ್ಲಿ!`ಅಪ್ಪ, ಅಮ್ಮನ ಜತೆ ಕೂತು ಹರಟೆ ಹೊಡೆದು ಅಮ್ಮನ ತೊಡೆ ಮೇಲೆ ಮಲಗಿದರೆ ಸಾಕು; ಒತ್ತಡವೆಲ್ಲ ನೀರ ಮೇಲಿನ ಗುಳ್ಳೆಯಂತೆ ಒಡೆದುಹೋಗುತ್ತದೆ. ಮನಸ್ಸು ನಿರಾಳವಾಗುತ್ತದೆ~ ಎನ್ನುವ 29 ವರ್ಷದ ಪ್ರಿಯಾಂಕ ಅಕ್ಷರಶಃ ಅಮ್ಮನ ಮಡಿಲಲ್ಲಿ ಮಗುವಾಗುತ್ತಾರಂತೆ.

`ಒತ್ತಡದಿಂದ ಪಾರಾಗಲು ಒಬ್ಬೊಬ್ಬರು ಒಂದೊಂದು ವಿಧಾನ ಅನುಸರಿಸುತ್ತಾರೆ. ಆನೆಗೆ ಅದರ ಸಮಸ್ಯೆ ದೊಡ್ಡದಾದರೆ, ಇರುವೆಗೆ ಅದರ ಸಮಸ್ಯೆಯೇ ದೊಡ್ಡದು. ಒತ್ತಡದಲ್ಲಿ ಸಿಲುಕಿದ ಪ್ರತಿ ವ್ಯಕ್ತಿಯೂ ತನ್ನ ಸಮಸ್ಯೆಯೇ ದೊಡ್ಡದು ಅಂದುಕೊಳ್ಳುತ್ತಾನೆ. ನಂಗಾದರೋ ಅಮ್ಮನ ನೋಡಿದ ತಕ್ಷಣ ಎಲ್ಲ ಮರೆತುಹೋಗುತ್ತದೆ~ ಎಂದು ಪುಟ್ಟ ಹುಡುಗಿಯಂತೆ ಉಲಿಯುತ್ತಾರೆ `ಪಿಗ್ಗಿ~.ಕರಣ್ ಜೋಹರ್‌ನ `ಅಗ್ನಿಪಥ್~, ಅನುರಾಗ್ ಬಸುವಿನ `ಬರ್ಫಿ~, ಕುನಾಲ್ ಕೊಹ್ಲಿಯ `ತೇರಿ ಮೇರಿ ಕಹಾನಿ~, ರಾಕೇಶ್ ರೋಷನ್‌ನ `ಕ್ರಿಶ್-2~.... ಸಾಲುಸಾಲು ಸಿನಿಮಾಗಳಲ್ಲಿ ನಾಯಕಿಯಾಗಿರುವ ಪ್ರಿಯಾಂಕಾ ಒತ್ತಡದ ಮಾತನಾಡುತ್ತಿರುವುದು ಸುಖಾಸುಮ್ಮನೇ ಅಲ್ಲ. ಅದರಲ್ಲೂ ಹುರುಳಿದೆ ಎನ್ನುತ್ತಾರೆ ಬಾಲಿವುಡ್ ಪಂಡಿತರು. ಅಂದಹಾಗೆ, ಶಾರುಖ್ ಖಾನ್ ಹಾಗೂ ಪ್ರಿಯಾಂಕಾ ಜೋಡಿಯಾಗಿರುವ `ಡಾನ್-2~ ಗಲ್ಲಾಪೆಟ್ಟಿಗೆಯಲ್ಲಿ ಸಾಕಷ್ಟು ಹಣ ದೋಚುತ್ತಿದೆ. 

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)