ತಾಯಿ ರಕ್ಷಣೆಗೆ ಗರ್ಭಪಾತ: ಐರ್ಲೆಂಡ್ ಅವಕಾಶ

ಬುಧವಾರ, ಜೂಲೈ 17, 2019
24 °C
ಸವಿತಾಗೆ ಸಿಕ್ಕ `ಮರಣೋತ್ತರ ನ್ಯಾಯ'

ತಾಯಿ ರಕ್ಷಣೆಗೆ ಗರ್ಭಪಾತ: ಐರ್ಲೆಂಡ್ ಅವಕಾಶ

Published:
Updated:

ಡಬ್ಲಿನ್ (ಪಿಟಿಐ): ತಾಯಿಯ ಪ್ರಾಣ ಅಪಾಯದಲ್ಲಿದ್ದಾಗ ಗರ್ಭಪಾತ ಮಾಡಲು ಅವಕಾಶ ನೀಡುವ ಮಸೂದೆಗೆ ಐರ್ಲೆಂಡ್ ಸರ್ಕಾರ ಕೊನೆಗೂ ಸಮ್ಮತಿ ನೀಡಿದೆ. ಈ ಮೂಲಕ ವಿಶ್ವವ್ಯಾಪಿ ಪ್ರತಿಭಟನೆಗೆ ಕಾರಣವಾದ ಭಾರತದ ಸವಿತಾ ಹಾಲಪ್ಪನವರಗೆ  `ಮರಣೋತ್ತರ ನ್ಯಾಯ' ಸಿಕ್ಕಂತಾಗಿದೆ.ದೀರ್ಘ ಅವಧಿಯವರೆಗೆ ನಡೆದ ಚರ್ಚೆಯ ಬಳಿಕ 127-31 ಮತಗಳ ಅಂತರದಿಂದ ಮಸೂದೆಗೆ ಶುಕ್ರವಾರ ನಸುಕಿನ ಜಾವ ಅಂಗೀಕಾರ ನೀಡಲಾಯಿತು. ಮೈತ್ರಿಕೂಟ ಸರ್ಕಾರ ಬಹುಮತ ಹೊಂದಿದ್ದು, ಇದರ ಜತೆ ವಿರೋಧ ಪಕ್ಷಗಳ ಕೆಲವು ಸದಸ್ಯರೂ ಮಸೂದೆ ಪರ ಮತ ಹಾಕಿದರು. ಇದಕ್ಕೆ ಇನ್ನೂ ಮೇಲ್ಮನೆ ಒಪ್ಪಿಗೆ ನೀಡುವ ಅಗತ್ಯವಿದ್ದು, ಅಲ್ಲಿ ಸರ್ಕಾರಕ್ಕೆ ಬಹುಮತ ಇರುವುದರಿಂದ ಮಸೂದೆಗೆ ಸುಲಭವಾಗಿ ಅಂಗೀಕಾರ ಸಿಗುವ ನಿರೀಕ್ಷೆಯಿದೆ.ಪ್ರಧಾನ ಮಂತ್ರಿ ಎಂಡಾ ಕೆನ್ನಿ ಹಾಗೂ ಅವರ ಮೈತ್ರಿಕೂಟ ಸರ್ಕಾರ ಮಂಡಿಸಿದ ಮಸೂದೆಯಲ್ಲಿ, ತಾಯಿ ಜೀವ ಅಪಾಯಕ್ಕೆ ಸಿಲುಕಿದ ಸಂದರ್ಭಗಳಲ್ಲಿ ಗರ್ಭಪಾತ ಮಾಡಿ ಆಕೆಯನ್ನು ರಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಕ್ಯಾಥೊಲಿಕ್ ಸಮುದಾಯವೇ ಪ್ರಧಾನವಾಗಿರುವ ಐರ್ಲೆಂಡ್‌ನಲ್ಲಿ ಗರ್ಭಪಾತಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ ಇದೀಗ ಸರ್ಕಾರ ಅಂಗೀಕರಿಸಿದ ಹೊಸ ಮಸೂದೆಯು, ತಾಯಿ ಜೀವ ರಕ್ಷಿಸಲು ಕೆಲವು ಸಂದರ್ಭಗಳಲ್ಲಿ ಗರ್ಭಪಾತಕ್ಕೆ ಅವಕಾಶ ಕಲ್ಪಿಸಲಿದೆ.ಕಳೆದ ಅಕ್ಟೋಬರ್‌ನಲ್ಲಿ ಭಾರತೀಯ ಮೂಲದ ದಂತವೈದ್ಯೆ ಸವಿತಾ ಹಾಲಪ್ಪನವರ ಅವರು ಗಾಲ್ವೆ ಆಸ್ಪತ್ರೆಗೆ ದಾಖಲಾಗಿದ್ದು, ಆಕೆಯ ಜೀವ ಅಪಾಯದಲ್ಲಿ ಇದ್ದರೂ ಗರ್ಭಪಾತಕ್ಕೆ ಅಲ್ಲಿಯ ವೈದ್ಯರು ನಿರಾಕರಿಸಿದ್ದರು. ನಂತರ ಸವಿತಾ ವಿಪರೀತ ರಕ್ತಸ್ರಾವದಿಂದ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಐರ್ಲೆಂಡ್‌ನ ಕಾನೂನಿನ ಕುರಿತು ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ವ್ಯಾಪಕ ಚರ್ಚೆ, ಪ್ರತಿಭಟನೆ ನಡೆದಿತ್ತು. ತಾಯಿ ಪ್ರಾಣಕ್ಕೆ ಅಪಾಯ ಎದುರಾದಾಗಲೂ ಗರ್ಭಪಾತಕ್ಕೆ ಅವಕಾಶ ನೀಡದ ಐರ್ಲೆಂಡ್ ಕಾನೂನು ಬಗ್ಗೆ ತೀವ್ರ ಆಕ್ಷೇಪ ಕೇಳಿ ಬಂದಿತ್ತು.ವಿರೋಧ:ಈ ಮಧ್ಯೆ ಗರ್ಭಪಾತ ವಿರೋಧಿ ಸಂಘಟನೆಗಳು ನೂತನ ಮಸೂದೆಗೆ ವಿರೋಧ ವ್ಯಕ್ತಪಡಿಸಿವೆ. ದೇಶದಾದ್ಯಂತ ಈ ಮಸೂದೆ ಪರ- ವಿರೋಧ ಅಭಿಪ್ರಾಯ ಕೇಳಿಬರುತ್ತಿದೆ. ಮೇಲ್ಮನೆಯಲ್ಲಿ ಮಸೂದೆಗೆ ಅಂಗೀಕಾರ ದೊರಕಿದರೆ, ಗರ್ಭಪಾತ ಸಂಖ್ಯೆ ಹೆಚ್ಚಾಗಬಹುದು ಎಂದು ಮಸೂದೆ ವಿರೋಧಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry