ತಾಯಿ ಹೃದಯದ ಮಾತೃಶ್ರೀ

7

ತಾಯಿ ಹೃದಯದ ಮಾತೃಶ್ರೀ

Published:
Updated:
ತಾಯಿ ಹೃದಯದ ಮಾತೃಶ್ರೀ

ಹೆಣ್ಣು ಗರ್ಭವತಿಯಾದ ದಿನದಿಂದಲೇ ತನ್ನ ಮಗು ಹೇಗಿರಬೇಕೆಂದು ಕನಸಿನ ಕೋಟೆ ಕಟ್ಟಿಕೊಂಡಿರುತ್ತಾಳೆ. ಮಗು ಹುಟ್ಟಿದಾಗ ಅದಕ್ಕೆ ಶಾಶ್ವತ ಸಮಸ್ಯೆ ಇರುವುದು ಗೊತ್ತಾದಾಗ ಆ ಮಾತೃ ಜೀವಕ್ಕೆ ಆಘಾತವಾಗದೇ ಇರದು.ಕೆಲವೊಮ್ಮೆ ಅಮ್ಮನೂ ಕುಸಿಯುತ್ತಾರೆ. ಇಲ್ಲವೇ ಮಗುವನ್ನು ತ್ಯಜಿಸುತ್ತಾರೆ. ಆದರೆ ಇಲ್ಲೊಬ್ಬ ತಾಯಿ ತನ್ನ ಮಗು ನರಕೋಶಗಳ ತೊಂದರೆಗೆ ತುತ್ತಾಗಿದೆ. ಶಾಶ್ವತ ಬುದ್ಧಿ ಮಾಂದ್ಯವಾಗಿದೆ ಎಂದು ಅರಿತಾಗ ಎಲ್ಲರಂತೆ ಆತ್ಮಸ್ಥೈರ್ಯ ಕಳೆದುಕೊಳ್ಳಲಿಲ್ಲ.ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದರು. ತಮ್ಮ ಮಗು ಇನ್ನು ಸದಾ ಕಾಲವೂ ಹಸುಗೂಸು ಎಂಬುದನ್ನು ಮನಗಂಡರು. ಮತ್ತೆ ಇಂಥ ಮಕ್ಕಳು ಎಷ್ಟಿರಬಹುದು? ಅವುಗಳ ಲಾಲನೆ ಪಾಲನೆ ಹೇಗೆ? ಎಂಬ ಪ್ರಶ್ನೆ ಎದುರಾಯಿತು. ಮಗುವನ್ನು ಹಾಸ್ಟೆಲ್‌ಗೆ ಬಿಡಲು ಸಾಧ್ಯವಾಗದ ಸ್ಥಿತಿ. ಆರೈಕೆಯ ಬಗ್ಗೆ ಅನುಮಾನ. ಬಿಟ್ಟಿರಲು ಸಾಧ್ಯವಾಗದ ಅಸಹಾಯಕತೆ. ಆ ಪರಿಸ್ಥಿತಿಯಲ್ಲೇ ಇದೇ ರೀತಿ ಬುದ್ಧಿಮಾಂದ್ಯತೆ ಇರುವ ಮಕ್ಕಳಿಗೆ ಆಸರೆ ನೀಡಬೇಕು ಎಂಬ ತುಡಿತ ಶುರುವಾಯಿತು.

 

ಪರಿಣಾಮ ತಮ್ಮ ಒಬ್ಬ ಮಗನೊಂದಿಗೆ ಇನ್ನಿಬ್ಬರು ಮಕ್ಕಳನ್ನೂ ತಮ್ಮ ಮಡಿಲಿಗೆ ಒಪ್ಪಿಸಿಕೊಂಡರು. 2003ರಲ್ಲಿ ಬಾಡಿಗೆ ಮನೆಯಲ್ಲಿ ಒಂದು ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ ಆರಂಭಿಸಿದರು.ಅವರ ಹೆಸರು ಸ್ವರ್ಣ. ಅದು ಮಾತೃಶ್ರೀ ಸಂಸ್ಥೆ.  ಕುಮಾರ ಪಾರ್ಕ್‌ನ  (ಪಶ್ಚಿಮ) 2ನೇ ಅಡ್ಡರಸ್ತೆಯಲ್ಲಿದೆ ಈ ಮನೋವಿಕಾಸ ಕೇಂದ್ರ. ಸಂಸ್ಥೆ ಆರಂಭಿಸಲು ಈಗಿನ ಕಾರ್ಯದರ್ಶಿ ಬಸವರಾಜು ಕೈಜೋಡಿಸಿದರು. ಸದ್ಯ ಹತ್ತು ಮಂದಿ ಟ್ರಸ್ಟಿಗಳಿದ್ದಾರೆ.

 

ನಿವೃತ್ತ ಎಸ್.ಪಿ. ಬೆಟ್ಟೇಗೌಡ, ಸರ್ಕಲ್ ಇನ್‌ಸ್ಪೆಕ್ಟರ್ ಲೋಕೇಶ್ವರ ಕ್ರಮವಾಗಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಸಂಸ್ಥೆಯಲ್ಲಿ 92 ಮಕ್ಕಳು ಆಶ್ರಯ ಪಡೆಯುತ್ತಿದ್ದಾರೆ.ಎರಡು ತಿಂಗಳ ಹಸುಗೂಸಿನಿಂದ 25 ವರ್ಷದ ಯುವಕರವರೆಗಿನ ಮಂದಿ ಈ ವಸತಿ ಕೇಂದ್ರದಲ್ಲಿ ಆಸರೆ ಪಡೆಯುತ್ತಿದ್ದಾರೆ. ಕೆಲವು ಮಕ್ಕಳಿಗಂತೂ ಹಾಸಿಗೆಯಲ್ಲಿಯೇ ನಿತ್ಯಕರ್ಮಗಳು ಆಗಬೇಕು. ದೇಹದ ಮೇಲೆ ಸ್ವಾಧೀನವೇ ಇಲ್ಲ. ಬೆನ್ನುಹುರಿಯ ಸಮಸ್ಯೆ ಇರುವ ಎರಡು ತಿಂಗಳ ಮಗು ಸಹ ಈಗ ಮಾತೃಶ್ರೀ ಮಡಿಲಲ್ಲಿ ಆರೈಕೆ ಪಡೆಯುತ್ತಿದೆ.

 

ರಮ್ಯಾ ಎಂಬ ಆರು ತಿಂಗಳ ಮಗು ಶಬ್ದ ಅಥವಾ ಇನ್ನಾವುದೇ ಕ್ರಿಯೆಗೆ ಯಾವ ಪ್ರತಿಕ್ರಿಯೆಯನ್ನೂ ತೋರುತ್ತಿರಲಿಲ್ಲ. ಅದಕ್ಕೆ ಮೆದುಳಿನ ವಾತ ಸಮಸ್ಯೆ (ಸೆರೆಬ್ರಲ್ ಪಾಲ್ಸಿ). ಆ ಮಗುವಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದರಿಂದ ಈಗ ಯಾರ ಸಹಾಯವೂ ಇರದೆ ಒಂದೆಡೆ ಕೂರುವಂತಾಗಿದೆ.

 

ಕೈ ಕಾಲುಗಳನ್ನು ಆಡಿಸುತ್ತದೆ. ಜೊತೆಗೆ ಆಕೆಯ ಹೆಸರು ಕರೆದರೆ ತಿರುಗಿ ನೋಡುತ್ತದೆ. ಅಷ್ಟರ ಮಟ್ಟಿಗೆ ಬೆಳವಣಿಗೆಯಾಗಿದೆ. ರಮ್ಯಾಗೆ ಈಗ ಎರಡೂವರೆ ವರ್ಷ ವಯಸ್ಸು ಎಂದು ಹೇಳುತ್ತಾರೆ ಸ್ವರ್ಣ.ತೀವ್ರ ತರಹದ ಬುದ್ಧಿಮಾಂದ್ಯತೆ ಹಾಗೂ `ಸೆರೆಬ್ರೆಲ್ ಪಾಲ್ಸಿ~ ಸಮಸ್ಯೆಯಿಂದ ಬಳಲುತ್ತಿದ್ದ ರಾಜು ಎಂಬ ಮಗು ಸಂಸ್ಥೆಗೆ ಬಂದಾಗ ಕೂರುವುದು ಮಾತ್ರ ಗೊತ್ತಿತ್ತು. ಈಗ ಪ್ರತಿನಿತ್ಯ ಸೂಕ್ತ ತರಬೇತಿ ಹಾಗೂ ವ್ಯಾಯಾಮದ ಅಭ್ಯಾಸ ಮಾಡಿಸಿದ್ದರಿಂದ ಈಗ ಗೋಡೆ ಆಸರೆಯಲ್ಲಿ ಸ್ವತ: ತಾನೇ ನಿಲ್ಲುತ್ತಾನೆ. ಜೊತೆಗೆ ತೆವಳಿಕೊಂಡು ಮುಂದೆ ಹೋಗುವಷ್ಟು ಶಕ್ತನಾಗಿದ್ದಾನೆ ಎಂದು ವಿವರಿಸುತ್ತಾರೆ.ಇಲ್ಲಿರುವ ಬಹುತೇಕ ಮಕ್ಕಳು ಮೃದು, ಸಾಧಾರಣ, ತೀವ್ರ ಬುದ್ಧಿಮಾಂದ್ಯತೆ, ಸೆರೆಬ್ರೆಲ್ ಪಾಲ್ಸಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂಥ ಮಕ್ಕಳಿಗೆ ಇಲ್ಲಿ ವಿಶೇಷ ಶಿಕ್ಷಣ ಕೊಡಲಾಗುತ್ತಿದೆ. ಊಟ ಮಾಡುವುದು, ಸಂವಹನ ಕಲೆ ಹಾಗೂ ದಿನನಿತ್ಯದ ಕೆಲಸಗಳನ್ನು ತಾವೇ ಮಾಡಿಕೊಳ್ಳಲು ಸಮರ್ಥರಾಗುವಂತೆ ರೂಪಿಸಲಾಗುತ್ತದೆ. ಈ ಮಕ್ಕಳಿಗಾಗಿ ಹತ್ತು ಮಂದಿ ಶಿಕ್ಷಕರು ಇದ್ದಾರೆ. ದಿನಕ್ಕೆ 45 ನಿಮಿಷ ಫಿಜಿಯೋಥೆರಫಿ ಮಾಡಿಸಲಾಗುತ್ತದೆ.`ಈಗಲೂ ದಿನಕ್ಕೆ ಎರಡು ಮೂರು ಮಕ್ಕಳನ್ನು ಕರೆದುಕೊಂಡು ಬರುತ್ತಾರೆ. ಆದರೆ ಇಲ್ಲಿ ಜಾಗದ ಕೊರತೆಯಿದೆ. ಹಾಗಾಗಿ ಸೇರಿಸಿಕೊಳ್ಳಲಾಗುತ್ತಿಲ್ಲ~ ಎಂದು ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ ಸ್ವರ್ಣ.ಮಕ್ಕಳ ಪಾಲನೆಗೆ ಹತ್ತು ಮಂದಿ ಸಹಾಯಕಿಯರಿದ್ದಾರೆ. ಕೆಲವು ಮಕ್ಕಳು ತಲೆ ಚಚ್ಚಿಕೊಳ್ಳುವುದಲ್ಲದೆ ಬೇರೆ ಮಕ್ಕಳೊಂದಿಗೆ ಜಗಳವಾಡುತ್ತವೆ. ಅಂಥ ಮಕ್ಕಳನ್ನು ಎದುರಿಗಿದ್ದೇ ನಿಭಾಯಿಸಬೇಕು~ ಎಂದು ಮಾತು ಮುಂದುವರಿಸುತ್ತಾರೆ.`ತಿಂಗಳಿಗೊಮ್ಮೆ ವೈದ್ಯರು ಬಂದು ಈ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡುತ್ತಾರೆ. ಕಾಳಜಿ ಇರುವ ಕೆಲವು ಸಾರ್ವಜನಿಕರು ತಮ್ಮ ಮನೆಯಿಂದ ಅಕ್ಕಿ ಬೇಳೆ, ಹಣ್ಣು, ತರಕಾರಿ ತಂದು ಕೊಡುತ್ತಾರೆ.ಜೊತೆಗೆ ಹುಟ್ಟುಹಬ್ಬ, ಮದುವೆ ವರ್ಷಾಚರಣೆ ಇನ್ನಿತರ ಸಮಾರಂಭಗಳನ್ನು ಈ ಮಕ್ಕಳ ಜೊತೆಗೆ ಆಚರಿಸಿಕೊಂಡು ತಮ್ಮ ಕೈಲಾದ ಸಹಾಯ ಮಾಡುತ್ತಾರೆ. ಸಹೃದಯರೂ ಕೈಗೂಡಿಸುವುದರಿಂದ ನಿಭಾಯಿಸುವುದು ಕಷ್ಟವಾಗುತ್ತಿಲ್ಲ. ಆದರೆ ಸುಲಭವೂ ಅಲ್ಲ~ ಎಂಬುದು ಕಾರ್ಯದರ್ಶಿ ಬಸವರಾಜು ಅವರ ಅನುಭವದ ಮಾತು. ಬಿಟ್ಟ ಕಂಗಳಿಂದ ಕಿಟಕಿಯಾಚೆ ನೋಡುತ್ತಿದ್ದ ಮಗುವನ್ನು ಕಂಡೊಡನೆ ಈ ಮಕ್ಕಳು ಮಾಡಿದ ತಪ್ಪಾದರೂ ಏನು ಎಂಬ ಪ್ರಶ್ನೆ ಮೂಡದೇ ಇರದು. ದಾಸನಪುರ ಹೋಬಳಿ ಗೌಡನಹಳ್ಳಿಯಲ್ಲಿ ಹೆಣ್ಣು ಮಕ್ಕಳಿಗಾಗಿಯೇ ಹೊಸದಾಗಿ ಕಟ್ಟಿಸಿರುವ ಮೂರು ಅಂತಸ್ತಿನ ಮಹಡಿ ಜುಲೈ 21ಕ್ಕೆ ಉದ್ಘಾಟನೆಯಾಗಲಿದೆ.ಹೆಚ್ಚಿನ ಮಾಹಿತಿಗೆ ಹಾಗೂ ಮಾತೃಶ್ರೀ ಮನೋವಿಕಾಸ ಕೇಂದ್ರಕ್ಕೆ ದೇಣಿಗೆ ನೀಡುವವರು 2356 2456, 2346 2454 ಅಥವಾ 98450 42454 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry