ತಾಯ್ತನಕ್ಕೆ ಏನು ತೊಂದರೆ?

7

ತಾಯ್ತನಕ್ಕೆ ಏನು ತೊಂದರೆ?

Published:
Updated:

ದಂಪತಿಗಳಿಗೆ ಮಕ್ಕಳಾಗುವ ಸಾಧ್ಯತೆಯ ಮೇಲೆ ಅತೀ ಹೆಚ್ಚಿನ ಪ್ರಭಾವ ಬೀರುವ ಅಂಶವೆಂದರೆ ತಾಯಿಯಾಗುವವಳ ವಯಸ್ಸು, ಸಾಮಾನ್ಯವಾಗಿ ತಾಯ್ತನದ ಸಾಧ್ಯತೆ 24 ವಯಸ್ಸಿನ ನಂತರ ಇಳಿಮುಖವಾಗುತ್ತಾ ಬರುತ್ತದೆ. 37 ವಯಸ್ಸಿನ ನಂತರ ಈ ಇಳಿಮುಖ ಮತ್ತೂ ಹೆಚ್ಚುತ್ತದೆ.ವಯಸ್ಸಾಗುತ್ತಿದ್ದಂತೆ ಮುಖ್ಯವಾಗಿ ಆಕೆಯಲ್ಲಿ ಬಿಡುಗಡೆಯಾಗುವ ಅಂಡಾಣುವಿನ ಗುಣಮಟ್ಟ ಕಡಿಮೆಯಾಗುತ್ತದೆ, ವಯಸ್ಸಾದ ಮಹಿಳೆಗೆ ‘ಉತ್ತಮ ಅಂಡಾಣುದಾನ’ ನೀಡಿದಾಗ ಆಕೆ ಗರ್ಭವತಿಯಾಗುವುದನ್ನು ನೋಡಿದಾಗ ಈ ಅಂಶ ಮತ್ತಷ್ಟು ಸ್ಪಷ್ಟವಾಗುತ್ತದೆ.ಹೆಣ್ಣು ತನ್ನ ತಾಯಿಯ ಗರ್ಭಾಶಯದಲ್ಲಿರುವಾಗ, ಇಪ್ಪತ್ತು ವಾರಗಳಾಗಿರುವಾಗಲೇ ಸುಮಾರು 6 ರಿಂದ 7 ದಶಲಕ್ಷ ಅಂಡಾಣುಗಳನ್ನು ಹೊಂದಿರುತ್ತಾಳೆ, ಆದರೆ ಆಕೆಯ ಜನನದ ಸಮಯಕ್ಕೆ ಈ ಸಂಖ್ಯೆ 2 ದಶಲಕ್ಷಕ್ಕೆ ಇಳಿಯುತ್ತದೆ. ಹರೆಯಕ್ಕೆ ಬಂದಾಗ 6 ರಿಂದ 7 ಲಕ್ಷಕ್ಕೆ ಇಳಿದಿರುತ್ತದೆ. ಆಕೆಗೆ 37 ವರ್ಷವಾಗುತ್ತಿದ್ದಂತೆ ಈ ಇಳಿತ ಮತ್ತಷ್ಟು ವೇಗವಾಗಿ ಸಾಗುತ್ತದೆ. ಅಂಡಾಣುಗಳ ಸಂಖ್ಯೆ ಕಡಿಮೆಯಾಗುವುದರ ಜೊತೆಗೆ ಅವುಗಳ ಗುಣಮಟ್ಟವೂ ಕಡಿಮೆಯಾಗುತ್ತದೆ. ಜೊತೆಗೆ ವಯಸ್ಸಾಗುತ್ತಿದ್ದಂತೆ ವರ್ಣತಂತುಗಳ ವಿಕೃತತೆಯೂ ಹೆಚ್ಚಾಗುತ್ತದೆ. ಇದರಿಂದಾಗಿ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 70-80ರಷ್ಟು ಗರ್ಭಪಾತಗಳಾಗುತ್ತವೆ.ತಂದೆಯಾಗುವವನ ವಯಸ್ಸು

ಪುರುಷನಿಗೆ 40 ವರ್ಷವಾದಂತೆ ಟೆಸ್ಟೋಸ್ಟೀರಾನ್ ಎಂಬ ಪುರುಷ ಹಾರ್ಮೋನಿನ ಉತ್ಪತ್ತಿ ಕಡಿಮೆಯಾಗುತ್ತಾ ಬರುತ್ತದೆ. ಆತನಿಗೆ ಇಪ್ಪತ್ತು ವರ್ಷಕ್ಕೆ ಇದ್ದ ಹಾರ್ಮೋನಿನ ಮಟ್ಟ ಆತನಿಗೆ 75 ವರ್ಷವಾದಾಗ ಅರ್ಧಕ್ಕೆ ಇಳಿದಿರುತ್ತದೆ. ಇದರಿಂದಾಗಿ ಆತನ ವೀರ್ಯದ ಪ್ರಮಾಣ, ಚಲನೆ, ವೀರ್ಯಾಣುಗಳ ರಚನೆ ಇವುಗಳ ಗುಣಮಟ್ಟ ಕಡಿಮೆಯಾಗುತ್ತದೆ,  ವಯಸ್ಸಾದಂತೆ ಪುರುಷರ ವರ್ಣತಂತುವಿನಲ್ಲೂ ವಿಕೃತತೆ ಮೂಡುತ್ತದೆ.ಸೇರುವ ಸಮಯ

ಅಂಡಾಣು ಬಿಡುಗಡೆಯ ಆಚೆ ಈಚೆ, ಯಾವಾಗ ದಂಪತಿಗಳು ಸೇರುತ್ತಾರೆ ಎಂಬುದು ಆಕೆ ಗರ್ಭವತಿಯಾಗುವುದನ್ನು ನಿರ್ಧರಿಸುತ್ತದೆ, ಅಂಡಾಣು ಬಿಡುಗಡೆಯಾಗುವ 6 ದಿನಗಳ ಮುಂಚಿನಿಂದ ಸೇರಿದವರಲ್ಲಿ ಗರ್ಭ ಧರಿಸುವುದು ಹೆಚ್ಚಾಗಿ ಕಂಡುಬಂದಿದೆ. ಅದರಲ್ಲೂ ಅಂಡಾಣು ಬಿಡುಗಡೆಯ ಎರಡು ದಿನ ಮುಂಚೆ ಸೇರಿದವರಲ್ಲಿ ಈ ಸಾಧ್ಯತೆ ಇನ್ನೂ ಹೆಚ್ಚು. ಅಂಡಾಣು ಬಿಡುಗಡೆಯಾದಾಗ ಮಾತ್ರ ಸೇರಿದವರಲ್ಲಿ ಗರ್ಭಿಣಿಯಾಗುವ ಸಾಧ್ಯತೆ ಕಡಿಮೆ, 6 ದಿನಗಳ ಮುಂಚಿನ ದಿನಗಳಲ್ಲಿ 4 ರಿಂದ 6 ಬಾರಿ ಸೇರಿದವರಿಗಿಂತ 2-3 ಬಾರಿ ಮಾತ್ರ ಸೇರಿದವರಲ್ಲಿ ತಾಯ್ತನದ ಸಾಧ್ಯತೆ ಹೆಚ್ಚಾಗಿದೆ.

ಗರ್ಭಿಣಿಯಾಗಲು ಬೇಕಾದ ಸಮಯ

ಸಾಮಾನ್ಯವಾಗಿ ದಂಪತಿಗಳು ಏನನ್ನೂ ಬಳಸದೆ ಮಗು ಬೇಕೆಂದು ಒಂದು ವರ್ಷ ಪ್ರಯತ್ನಪಟ್ಟು ಸಫಲರಾಗದಿದ್ದಾಗ ಮಾತ್ರ ವೈದ್ಯರಲ್ಲಿಗೆ ಹೋಗಬೇಕು. 31 ವರ್ಷದೊಳಗಿನ ಮಹಿಳೆಯರಲ್ಲಿ ಶೇ. 73 ರಷ್ಟು, 31 ರಿಂದ 35 ವರ್ಷದವರು ಶೇ. 61 ರಷ್ಟು, 35 ವರ್ಷಕ್ಕೆ ಮೇಲ್ಪಟ್ಟವರು ಶೇ. 54 ರಷ್ಟು ಜನ ಈ ಹನ್ನೆರಡು ತಿಂಗಳಲ್ಲಿ ಗರ್ಭಿಣಿಯಾಗುತ್ತಾರೆ. ಶೇ. 85ರಷ್ಟು ಪ್ರಕರಣಗಳಲ್ಲಿ ಮೊದಲ 6 ತಿಂಗಳಲ್ಲಿ ಗರ್ಭಿಣಿಯರಾಗುತ್ತಾರೆ. ಇದರಿಂದಾಗಿ 35 ವರ್ಷವಾದ ಮಹಿಳೆ ಮದುವೆಯಾಗಿ 6 ತಿಂಗಳು ಪ್ರಯತ್ನಿಸಿ, ವಿಫಲರಾದರೆ ಚಿಕಿತ್ಸೆ ಒಳ್ಳೆಯದು.ಕುಟುಂಬ ಯೋಜನಾ ವಿಧಾನಗಳು

ಯಾವ ಬಗೆಯ ಕುಟುಂಬ ಯೋಜನೆಯನ್ನು ದಂಪತಿಗಳು ಬಳಸಿದ್ದರು ಎಂಬುದು ಗರ್ಭಿಣಿಯಾಗುವ ಸಮಯದ ಮೇಲೆ ಪ್ರಭಾವ ಬೀರುತ್ತದೆ. ಕಾಂಡೋಮ್ ಬಳಸಿ ನಿಲ್ಲಿಸಿದ ಮೇಲೆ ಗರ್ಭಿಣಿಯಾಗಲು ತೆಗೆದುಕೊಳ್ಳುವ ಸಮಯ 4, 6 ತಿಂಗಳು, ಮಾತ್ರೆ ನುಂಗುತ್ತಿದ್ದವರಲ್ಲಿ 7, 6 ತಿಂಗಳು, ಲೂಪ್ ಧರಿಸಿದ್ದವರಲ್ಲಿ 7, 5 ತಿಂಗಳು, ಇಂಜೆಕ್ಷನ್ ಪಡೆದವರಲ್ಲಿ 13, 6 ತಿಂಗಳು ಬೇಕಾಗುತ್ತದೆ ಎಂದು ಹಸಾನ್ ಮತ್ತು ಕಿಲ್ಲಿಕ್ ನಡೆಸಿದ ಅಧ್ಯಯನ ಹೇಳುತ್ತದೆ.ಜೊತೆಗೆ ಈ ವಿಧಾನಗಳನ್ನು ಎಷ್ಟು ಅವಧಿ ಉಪಯೋಗಿಸಲಾಗಿದೆ ಎಂಬುದೂ ಗರ್ಭಿಣಿಯಾಗುವುದಕ್ಕೆ ತೆಗೆದುಕೊಳ್ಳುವ ಸಮಯದ ಮೇಲೆ ಪ್ರಭಾವ ಬೀರುತ್ತದೆ.ಔದ್ಯೋಗಿಕ ತೊಂದರೆಗಳು

ಪರಿಸರದಲ್ಲಾಗಲೀ, ಕೆಲಸ ಮಾಡುವಲ್ಲಿಯಾಗಲೀ, ರಾಸಾಯನಿಕಕ್ಕೆ ಒಡ್ಡಿಕೊಳ್ಳುವ ಸಾಧ್ಯತೆಯಿದೆ. ಉದಾಹರಣೆಗೆ ದಂತವೈದ್ಯರು ನೈಟ್ರಸ್ ಆಕ್ಸೈಡ್‌ಗೆ ಹೆಚ್ಚಾಗಿ ಒಡ್ಡಲ್ಪಡುತ್ತಾರೆ. ಇದರಿಂದ ಮಕ್ಕಳಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಮತ್ತು ಗರ್ಭಪಾತವಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಮಹಿಳೆಯರು ಕ್ಯಾಡ್‌ಮಿಯಮ್, ಪಾದರಸ ಇಂತಹ ಇತರ ರಾಸಾಯನಿಕಕ್ಕೆ ಒಡ್ಡಿಕೊಂಡರೆ ಗರ್ಭ ಧರಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ಪುರುಷರು ಪರಿಸರದ ವಿಷಮತೆಗೆ ಹೆಚ್ಚಾಗಿ ತುತ್ತಾಗುತ್ತಾರೆ, ವೀರ್ಯಾಣುಗಳು ಪ್ರತಿ ಸೆಕೆಂಡಿಗೂ ಉತ್ಪತ್ತಿಯಾಗುವುದರಿಂದ ಹೆಚ್ಚು ಸೂಕ್ಷ್ಮವಾಗಿ ಪ್ರಭಾವಕ್ಕೊಳಗಾಗುತ್ತವೆ.

ಆಹಾರ, ಜೀವನ ಶೈಲಿ

ಇಂತಹುದೇ ಆಹಾರ ಸೇವನೆಯಿಂದ ಮಕ್ಕಳಾಗುವ ಸಾಧ್ಯತೆ ಹೆಚ್ಚು, ಕಡಿಮೆ ಆಗುವುದು ಎಂಬುದು ಸಾಬೀತಾಗಿಲ್ಲ. ಆದರೆ ಮಹಿಳೆಯರಲ್ಲಿ ಅತೀ ಹೆಚ್ಚು ಅಥವಾ ಅತೀ ಕಡಿಮೆ ತೂಕದಿಂದ ಅಂಡಾಶಯಗಳ ಕಾರ್ಯ ಕುಂದುತ್ತದೆ. ಅತೀ ತೂಕದಿಂದ ಪಾಲಿಸಿಸ್ಟಿಕ್ ಓವರೀಸ್ ಆಗಿ ಗರ್ಭಿಣಿಯಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಧೂಮಪಾನದ ಪಾತ್ರ ತುಂಬಾ ದೊಡ್ಡದು, ಧೂಮಪಾನ ಮಾಡುವುದರಿಂದ ಮಹಿಳೆಯರಲ್ಲಿ ಗರ್ಭ ಧರಿಸುವ ಸಾಧ್ಯತೆ ಕಡಿಮೆಯಾಗುತ್ತದೆ, ಗರ್ಭಿಣಿಯಾಗಿದ್ದಲ್ಲಿ ಮಗುವಿನ ಮೇಲೆ ದುಷ್ಪರಿಣಾಮಗಳಾಗುತ್ತವೆ. ಕಾಫಿ ಕುಡಿಯುವು ದರಿಂದ ಗರ್ಭಪಾತವಾಗುವುದು ಹೆಚ್ಚಾಗುತ್ತದೆ. ಕಾಫಿಯ ಸೇವನೆಯಿಂದ ಗರ್ಭವತಿಯಾಗುವಲ್ಲಿ ಕುಂಠಿತವಾಗುತ್ತದೆ. ಗರ್ಭಿಣಿಯಾದವಳು ಮದ್ಯಪಾನ ಮಾಡುವುದರಿಂದ ಮಗುವಿಗೆ ದುಷ್ಪರಿಣಾಮವಾಗುತ್ತದೆ. ಆದರೆ ಗರ್ಭ ಧರಿಸಲು ಯಾವ ತೊಂದರೆಯೂ ಸಾಬೀತಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry