ಗುರುವಾರ , ಜೂನ್ 24, 2021
25 °C

ತಾರತಮ್ಯ ನಿವಾರಣೆ ಅಗತ್ಯ: ಕಲಾಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಪ್ರಸ್ತುತ ದೇಶದ ಪ್ರಗತಿ ಕಡಿಮೆ ಪ್ರಮಾಣದಲ್ಲಿದೆ. ಸುಸ್ಥಿರ ಅಭಿವೃದ್ಧಿ ಸಾಧಿಸಬೇಕಾದರೆ ಆರ್ಥಿಕ ಪ್ರಗತಿಯ ನಿಟ್ಟಿನಲ್ಲಿ ಹೊಸ ಅನ್ವೇಷಣೆಗಳು ಹಾಗೂ ಸಾಮಾಜಿಕ, ಆರ್ಥಿಕ ತಾರತಮ್ಯ ನಿವಾರಣೆಯಾಗುವ ಅಗತ್ಯವಿದೆ ಎಂದು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಪ್ರತಿಪಾದಿಸಿದರು.ಇಲ್ಲಿಗೆ ಸಮೀಪದ ತೊಳಹುಣಸೆಯಲ್ಲಿರುವ ದಾವಣಗೆರೆ ವಿಶ್ವವಿದ್ಯಾಲಯಲ್ಲಿ ಭಾನುವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜಗತ್ತಿನ ವಿವಿಧೆಡೆ ಆರ್ಥಿಕ ಹಿಂಜರಿತ ಉಂಟಾದಾಗ ಅದು ಭಾರತದ ಮೇಲೆ ಹೆಚ್ಚಿನ ಪರಿಣಾಮ ಬೀರಲಿಲ್ಲ. ಅದಕ್ಕೆ ಇಲ್ಲಿರುವ ಬ್ಯಾಂಕಿಂಗ್ ವ್ಯವಸ್ಥೆ ಪ್ರಮುಖ ಕಾರಣ. ಆದರೂ, ಆರ್ಥಿಕ ಪ್ರಗತಿಯ ಪ್ರಮಾಣ ಸಾಕಾಗುವುದಿಲ್ಲ. ಈ ನಿಟ್ಟಿನಲ್ಲಿ ಕೃಷಿ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕು. ಸಮೀಪದಲ್ಲಿಯೇ ಹೊಸ ಮಾರುಕಟ್ಟೆ ಸಿಗಬೇಕು.ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಹಾಗೂ ಅಂತರರಾಷ್ಟ್ರೀಯ ಸಹಯೋಗದಲ್ಲಿ ಸಹಯೋಗ ದೊರೆಯಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳ ನಡುವಿನ ಅಂತರ ಕಡಿಮೆಯಾಗಬೇಕು. ಸಮರ್ಪಕ ವಿದ್ಯುತ್ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು ಎಂದು ಆಶಿಸಿದರು.ದೇಶದಲ್ಲಿ ಇರುವ ಆರ್ಥಿಕ ಅಸಮಾನತೆ ಕಡಿಮೆ ಆಗಬೇಕು. ಪಾರದರ್ಶಕ ಆಡಳಿತ ಹಾಗೂ ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ಜಾರಿಯಾಗಬೇಕು. ಜನರಲ್ಲಿ ಹೆಮ್ಮೆ ಮೂಡಿಸುವಂತಹ ರಾಜಕಾರಣಿಗಳು ಇರಬೇಕು ಎಂಬುದು ನನ್ನ ಕನಸು. ಇದಕ್ಕಾಗಿ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಬೇಕು ಮತ್ತು ಮಹಿಳೆಗೆ ಹೆಚ್ಚಿನ ಶಿಕ್ಷಣ ಸಿಗಬೇಕು. ಇದಕ್ಕೆ ಸೃಜನಶೀಲ ನಾಯಕತ್ವ ಬಹಳ ಅಗತ್ಯ ಎಂದರು.ದೇಶದಲ್ಲಿನ ತಲಾ ವರಮಾನ ಶೇ. 7.5ರಷ್ಟಿದೆ. ಇದು ಶೇ. 10ಕ್ಕೆ ಏರಬೇಕು. 2020ರ ಅಭಿವೃದ್ಧಿಶೀಲ ಭಾರತ ಕನಸು ನನಸು ಮಾಡಲು, ದೇಶದಲ್ಲಿರುವ 600 ಮಿಲಿಯನ್ ಯುವಜನರು ವಿಶ್ವಾಸ ಹೊಂದಬೇಕು. ಆಗ, ದೇಶ ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದರಲ್ಲಿ ಸಂದೇಹವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ದೇಶ ಸಂಪೂರ್ಣ ಭ್ರಷ್ಟಾಚಾರ ಮುಕ್ತವಾಗುವುದಕ್ಕೆ ಅವಕಾಶವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಕಲಾಂ, ಇದಕ್ಕಾಗಿ ಭ್ರಷ್ಟಾಚಾರ ಮುಕ್ತ ಮನೆಗಳನ್ನು ನಿರ್ಮಾಣ ಮಾಡುತ್ತೇನೆ.ಭ್ರಷ್ಟಾಚಾರದಿಂದ ಸಂಪಾದಿಸಿದ ಕಾರಿನಲ್ಲಿ ಓಡಾಡುವುದಿಲ್ಲ; ಅಂತಹ ಹಣ ಬಳಸುವುದಿಲ್ಲ ಎಂಬ ಸಂಕಲ್ಪ ತೊಡಬೇಕು. ವೇದಗಳಲ್ಲಿಯೂ ಸಹ ಭ್ರಷ್ಟಾಚಾರ ಸಲ್ಲದು ಎಂದು ಹೇಳಿದೆ. ಭ್ರಷ್ಟಾಚಾರ ನಿರ್ಮೂಲನೆಗೆ ಯುವಜನರು ಹೋರಾಡುತ್ತೇನೆ ಎಂದು ಪ್ರತಿಜ್ಞಾವಿಧಿ ಬೋಧಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.