ತಾರಸಿಯಲಿ ತರಾವರಿ ತರಕಾರಿ

7

ತಾರಸಿಯಲಿ ತರಾವರಿ ತರಕಾರಿ

Published:
Updated:

‘ಭೂಮ್ ತಾಯಿ ಕೆಲಸ ದೇವ್ರ ಕೆಲಸ್ರೀ, ಪ್ರೀತಿಯಿಂದ ಅಪ್ಪಿಕೊಂಡ್ರ ಬಾಳ್ ಬೆಳಗ್ತದ, ಬದುಕು ಹಸನಾಗ್ತದ...’ ಎನ್ನುತ್ತಲೇ ಸುಶ್ರಾವ್ಯ ಜಾನಪದ ಹಾಡೊಂದನ್ನು ಗುನುಗುತ್ತಾ ಗಿಡಗಳ ಆರೈಕೆಯಲ್ಲಿ ತೊಡಗಿಕೊಂಡರು ರುಕ್ಮಿಣಿಯವರು.ಕೃಷಿಯೆಂದರೆ ಕೇವಲ ಕಾಯಕ ಎಂದುಕೊಳ್ಳದೆ ಪ್ರೀತಿ, ಆಸ್ಥೆಯಿಂದ ಕಾಯ್ದುಕೊಂಡ ಬದುಕಿನ ಆಸ್ತಿ ಎಂದು ನಂಬಿರುವ ರುಕ್ಮಿಣಿ ಅವರ ವಯಸ್ಸು ಅರವತ್ತೈದು. ಇವರದ್ದು ಕೃಷಿಯಲ್ಲಿ ಪಳಗಿದ ಕೈ. ತಲೆಮಾರುಗಳಿಂದ ಕೃಷಿಯನ್ನೇ ನೆಚ್ಚಿಕೊಂಡ ಇವರ ಮೂಲ ಬಾಗಲಕೋಟೆ.ಇವರು ಬೆಂಗಳೂರಿಗೆ ಬಂದದ್ದು ಹತ್ತು ವರ್ಷಗಳ ಹಿಂದೆ. ಇರುವುದು ರಾಜಾಜಿನಗರದ ಶಿವನಹಳ್ಳಿಯಲ್ಲಿ. ಬಂದ ಹೊಸತರಲ್ಲಿ ಇಲ್ಲಿನ ಇಕ್ಕಟ್ಟು ವಾತಾವರಣ, ಜನನಿಬಿಡ ವಸತಿಗಳು, ಮೈ ಜುಮ್ಮೆನಿಸುವಂತೆ ಓಡಾಡುವ ವಾಹನಗಳು... ಇವೆಲ್ಲವನ್ನೂ ಕಂಡಾಗ ದಿಗಿಲುಗೊಂಡಿದ್ದ ಇವರಿಗೆ ಆಸರೆಯಾಗಿದ್ದು ‘ಮಣ್ಣಿನ ಕೆಲಸ’, ಜೊತೆಗೆ ಹಾಡಿನ ಸೆಳೆತ.ಮೊದಮೊದಲು ಹೊತ್ತು ಕಳೆಯಲು ಮಣ್ಣಿನ ಕುಂಡಗಳಲ್ಲಿ ಗಿಡಗಳನ್ನು ಬೆಳೆಯುವ ಅಭ್ಯಾಸದಲ್ಲಿ ತೊಡಗಿಕೊಂಡರು. ಆದರೆ ಹೊಲ ಗದ್ದೆಗಳಲ್ಲಿ ದುಡಿದಿದ್ದ ಇವರಿಗೆ ಒಂದೆರೆಡು ಗಿಡಗಳು ಸಮಾಧಾನ ನೀಡದಾಯಿತು. ಬಾಡಿಗೆ ಮನೆಯ ತಾರಸಿಯಲ್ಲಿ ತರಾವರಿ ಗಿಡಗಳನ್ನು ಬೆಳೆಯುವ ಮನಸ್ಸು ಮಾಡಿದರು. ಇದಕ್ಕೆ ಮಾಲೀಕರೂ ಆಕ್ಷೇಪ ತೋರಿಸಲಿಲ್ಲ.ಇದೇ ಹುಮ್ಮಸ್ಸಿನಿಂದ ಒಂದಾದ ನಂತರ ಒಂದರಂತೆ ಹಲವು ಗಿಡಗಳನ್ನು ನೆಡುತ್ತಾ ಸಾಗಿದರು. ಇದೀಗ ಅವರ ಚಿಕ್ಕ ತಾರಸಿ ತೋಟದಲ್ಲಿ ಬಿಳಿ ಜೋಳದ ತೆನೆ, ಕ್ಯಾರೆಟ್, ಬೆಳ್ಳುಳ್ಳಿ, ಚಪ್ಪರದವರೆ, ಗೆಣಸು, ಮೆಂತ್ಯೆ, ಕೊತ್ತಂಬರಿ, ಪುದೀನಾ, ಹತ್ತರಕಿ, ತೊಗರಿಕಾಯಿ, ಗೌತಿ, ಸಬ್ಬಕ್ಕಿ ಹೀಗೆ ಹಲವು ಸಸ್ಯಗಳು ಹಸಿರಿನಿಂದ ತುಂಬಿಕೊಂಡಿವೆ.ಆಧುನಿಕತೆಯ ಭರದಲ್ಲಿ ಜನರಲ್ಲಿ ಆರೋಗ್ಯ ಕಾಳಜಿ ಕಡಿಮೆಯಾಗುತ್ತಿರುವ ಬಗ್ಗೆ ತುಂಬಾ ವಿಷಾದ ಪಡುವ ರುಕ್ಮಿಣಿಯವರು ಪ್ರತಿಯೊಂದು ಆಹಾರವನ್ನೂ ನೈಸರ್ಗಿಕ ರೀತಿಯಲ್ಲಿ ಬೆಳೆಸಿ, ಸೇವಿಸಲು ಇಚ್ಛಿಸುವವರು. ಬೆಳಿಗ್ಗಿನ ಚಹಾದಿಂದ ರಾತ್ರಿಯ ಊಟದವರೆಗೂ ದೇಸಿ ಪದ್ಧತಿ ಕಾಯ್ದುಕೊಂಡವರು. ಹಿಂದಿನ ಕಾಲಕ್ಕೂ ಈಗಿನ ಕಾಲಕ್ಕೂ ಹೋಲಿಸಿದರೆ ಆರೋಗ್ಯಕ್ಕೆ ನೆರವಾಗುವ ಹಲವು ಔಷಧೀಯ ಸಸ್ಯಗಳೂ ಮರೆಯಾಗುತ್ತಿವೆ, ಅಂಥ ಸಸ್ಯ ಸಂಪತ್ತನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ರುಕ್ಮಿಣಿ.ತಾರಸಿಯಿಂದ ತಟ್ಟೆಗೆ...

ಬೆಂಗಳೂರಿನಲ್ಲಿ ತರಕಾರಿಗಳಿಗೇನೂ ಬರವಿಲ್ಲ. ಆದರೆ ಅವು ಎಷ್ಟು ಶುದ್ಧ ಎಂಬುದೇ ಪ್ರಶ್ನೆ. ರಾಸಾಯನಿಕದಿಂದ ಸತ್ವ ಕಳೆದುಕೊಂಡ ತರಕಾರಿಗಳನ್ನು ತಿನ್ನಲು ಬಯಸದೆ ಮನೆಗೆ ಬೇಕಾದ ಸೊಪ್ಪು ತರಕಾರಿಗಳನ್ನೂ ತಾರಸಿಯಲ್ಲೇ ಬೆಳೆದುಕೊಳ್ಳುತ್ತಿದ್ದಾರೆ ಇವರು. ಸಬ್ಬಸಿಗೆ, ಕೊತ್ತಂಬರಿ, ಮೆಂತ್ಯೆ, ಪುದೀನಾ ಇನ್ನೂ ಹಲವು ಸೊಪ್ಪುಗಳನ್ನು ಬೆಳೆದಿದ್ದಾರೆ. ಎಂತಹ ಸೊಪ್ಪಾಗಲೀ, ತಾಜಾ ಆಗಿ ಅಡುಗೆಗೆ ಬಳಸಿದರೆ ಅಡುಗೆಯೂ ರುಚಿ, ಆರೋಗ್ಯಕ್ಕೂ ಒಳ್ಳೆಯದು ಎನ್ನುತ್ತಾರೆ.ಅಷ್ಟೇ ಅಲ್ಲದೆ, ಚಪ್ಪರದವರೆ ಬಳ್ಳಿಯನ್ನು ತಾರಸಿ ತುಂಬಾ ಹಬ್ಬಿಸಿದ್ದಾರೆ. ಅಷ್ಟು ಚಿಕ್ಕ ಸ್ಥಳದಲ್ಲಿ ಬಳ್ಳಿ ಕೆ.ಜಿ.ಗಟ್ಟಲೆ ಕಾಯಿ ಬಿಡುತ್ತಿವೆ. ಜೊತೆಗೆ ಗಜ್ಜರಿ ಗಡ್ಡೆಗಳು ಅಚ್ಚರಿ ಎಂಬಂತೆ ಬೆಳೆದು ನಿಂತಿವೆ. ತಮ್ಮ ಮನೆಗಾಗುವಷ್ಟು ಆಗಿ ಮಿಕ್ಕಿ ಮನೆಗೆ ಬಂದವರಿಗೂ ಹಂಚುತ್ತಾರೆ. ಇನ್ನು ಯಾವುದೇ ಗಿಡದ ಬೀಜ ಸಿಕ್ಕರೂ ಅದನ್ನು ನೆಟ್ಟು ಪ್ರಯೋಗಕ್ಕೂ ಮುಂದಾಗುತ್ತಾರೆ. ಇದಕ್ಕೆ ಬಳಸುವ ಗೊಬ್ಬರವೂ ಮನೆಯದ್ದೇ. ಕಾಲಕ್ಕೆ ತಕ್ಕಂತೆ ಗಿಡಗಳಲ್ಲೂ ಮಾರ್ಪಾಡು ಮಾಡಿಕೊಳ್ಳುತ್ತಾರೆ.ಅಪರೂಪದ ಸಸ್ಯಗಳು

ಮನೆಗಾಗುವಂಥ ಮಾಮೂಲಿ ತರಕಾರಿ, ಸೊಪ್ಪನ್ನು ಹೊರತು ಪಡಿಸಿ ಅಪರೂಪದ ಸಸ್ಯಗಳನ್ನೂ ಬೆಳೆಸಿದ್ದಾರೆ ಇವರು. ಶೀತ, ನೆಗಡಿ, ಗಂಟಲು ಬೇನೆಯನ್ನು ಕೆಲವೇ ನಿಮಿಷಗಳಲ್ಲಿ ಶಮನ ಮಾಡಬಲ್ಲ ಗೌತಿ ಸೊಪ್ಪು, ಮಕ್ಕಳಿಗೆ ಆರೋಗ್ಯದಲ್ಲಿ ಸಮಸ್ಯೆ ಬಂದರೆ ಸೇವಿಸಬಹುದಾದ ಹತ್ತರಕಿ ಸೊಪ್ಪನ್ನೂ ಬೆಳೆಸಿದ್ದಾರೆ. ನಗರದಲ್ಲಿ ಅವುಗಳ ಗಂಧ ಗಾಳಿಯೇ ತಿಳಿಯದವರಿಗೆ ಇಂಥ ಅಪರೂಪದ ಸಸ್ಯಗಳ ಅವಶ್ಯಕತೆಯನ್ನೂ ತಿಳಿಸುವ ಪ್ರಯತ್ನ ರುಕ್ಮಿಣಿ ಅವರದ್ದು. ಅಷ್ಟೇ ಅಲ್ಲದೆ, ಹಲವು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಬಾಯಿಯಲ್ಲೇ ಉತ್ತರ ಇಟ್ಟುಕೊಂಡಿರುವ ರುಕ್ಮಿಣಿ ‘ಮನೆ ವೈದ್ಯೆ’ಯೂ ಹೌದು.ಕೃಷಿ ಹಾಡಿನೊಂದಿಗೆ ಬದುಕು

ರುಕ್ಮಿಣಿಯವರು ಕೇವಲ ಕೃಷಿಕರಲ್ಲ, ಜಾನಪದ ಕಲಾವಿದೆ. ಕೃಷಿ ಹಾಡುಗಳನ್ನು ಹೆಣೆದು ಹಾಡುವು­ದ­ರಲ್ಲಿ ಸಿದ್ಧಹಸ್ತರು. ಬದುಕಿನ ಸುಖ ದುಃಖದ, ಬಾಳ ಹೊರೆಯನ್ನು ಸಾರುವ ಜಾನಪದ ಹಾಡುಗಳಲ್ಲದೆ, ಕೃಷಿ ಹಾಡುಗಳನ್ನೂ ಪ್ರಚುರಪಡಿಸಿದವರು. ಮಣ್ಣು ಹದ ಮಾಡುವುದು, ಬೀಜ ನೆಡುವುದು, ನಾಟಿ ಮಾಡುವುದು, ಉಳುಮೆ ಮಾಡುವುದು, ಕಳೆ ತೆಗೆಯುವುದು, ಒಟ್ಟು ಮಾಡುವುದು, ಸುಗ್ಗಿ... ಹೀಗೆ ಕೃಷಿಯ ಪ್ರತಿ ಹಂತಕ್ಕೂ ಸುಂದರ ಹಾಡು ಹೆಣೆಯುವ ಇತಿಹಾಸದ ವೈಭವ ಸಾರುವ ಇವರಲ್ಲಿ ಜಾನಪದ ಸೊಗಡು ತುಂಬಿಕೊಂಡಿದೆ. ಇವರ ಈ ಜಾನಪದ ಕಲೆಗೆ ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟ, ಜಾನಪದ ಅಕಾಡೆಮಿ ಇನ್ನೂ ಹಲವು ಪ್ರತಿಷ್ಠಿತ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿದೆ. ಎಂಬತ್ತಕ್ಕೂ ಹೆಚ್ಚು ಪ್ರಶಸ್ತಿಗಳು ಇವರಿಗೆ ಸಂದಿವೆ. ಈ ಬಾರಿಯ ಕೃಷಿ ಮೇಳದಲ್ಲೂ ‘ಉತ್ತಮ ಕೃಷಿ ಪ್ರಶಸ್ತಿ’ ತಮ್ಮದಾಗಿಸಿಕೊಂಡಿದ್ದಾರೆ.  ಪ್ರೀತಿಯಿಂದ ಹಾಡು ಹಾಡುತ್ತಾ, ಗಿಡಗಳನ್ನು ಮಕ್ಕಳಂತೆ ಆರೈಕೆ ಮಾಡಿಕೊಂಡಿದ್ದರೆ ಮನುಷ್ಯನ ಆರೋಗ್ಯ, ಮನಸ್ಸು ಎಷ್ಟು ಸ್ವಸ್ಥವಾಗಿರುತ್ತದೆ ಎಂದು ನಿಟ್ಟುಸಿರುಬಿಡುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry