ತಾರಸಿ ತೋಟದ ಊಟ

7

ತಾರಸಿ ತೋಟದ ಊಟ

Published:
Updated:

ಮನೆಯಲ್ಲಿ ಸಾಂಬಾರ್ ಮಾಡಲು ಬಾಲ್ಕನಿಯಿಂದಲೇ ಕೊಯ್ದ ಬೆಂಡೆಕಾಯಿ, ವಗ್ಗರಣೆಗೆ ಅ್ಲ್ಲಲೇ ಇದ್ದ ಗಿಡದಿಂದ ಕೊಯ್ದ ಕರಿಬೇವಿನ ಸೊಪ್ಪು, ಗೊಜ್ಜಿಗೆ ಅಲ್ಲೇ ಬೆಳೆದ ಟೊಮೆಟೊ, ಊಟವಾದ ಮೇಲೆ ಬಾಯಿ ಒಂದಿಷ್ಟು ಸಿಹಿ ಮಾಡಲು ಅಲ್ಲೇ ಬೆಳೆದ ಪಪ್ಪಾಯ...ಇದು ಊರಿನ ಹಿತ್ತಲಿನ ಮಾತಲ್ಲ. ಬೆಂಗಳೂರು ಮಹಾನಗರಿಯ ಅಪಾರ್ಟ್‌ಮೆಂಟ್‌ಗಳ ಬಾಲ್ಕನಿಯಲ್ಲಿ, ಮನೆಗಳ ಟೆರೇಸ್ ಮೇಲೆ ತರಕಾರಿ, ಹಣ್ಣು ಬೆಳೆದ ಕಥೆ.`ತೋಟದಿಂದ ಊಟ~ ಎಂಬ ಘೋಷಣೆಗೆ ಇದಕ್ಕಿಂತ ಹೆಚ್ಚಿನ ಅರ್ಥ ಬೇರೆ ಬೇಡ. ಮಹಾನಗರಿಯ ಜನರಿಗೆ ಇದನ್ನು ಅರ್ಥ ಮಾಡಿಸಲೆಂದೇ ಇತ್ತೀಚೆಗೆ ಇಲೆಕ್ಟ್ರಾನಿಕ್ ಸಿಟಿಯ ಅಪನಾ ಕಾಂಪ್ಲೆಕ್ಸ್ ಮತ್ತು ಸಿಲೆಬ್ರಿಟಿ ಲೇಔಟ್ ಜತೆಗೂಡಿ `ತೋಟದಿಂದ ಊಟ~ ಎಂಬ ಕಾರ್ಯಾಗಾರ ಏರ್ಪಡಿಸಿತ್ತು. ಬೆಂಗಳೂರು ಕೇಂದ್ರೀಕೃತ ಸುದ್ದಿಗಳಿಗೆ ಮಾತ್ರ ಮೀಸಲಾದ ನಿಯತಕಾಲಿಕ ಸಿಟಿಜನ್ ಮ್ಯಾಟರ್ಸ್‌ ಅದಕ್ಕೆ ಕೈಜೋಡಿಸಿತ್ತು.ಸಾವಯವ ಕೃಷಿಗೆ ಇಂದು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ರಾಸಾಯನಿಕ ಬೆರೆಸದೆ ಸಾವಯವ ರೀತಿಯಲ್ಲಿ ಬೆಳೆದ ತರಕಾರಿ, ಹಣ್ಣು ಹಂಪಲುಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ. ಆದರೆ ಅವುಗಳನ್ನು ಬೃಹತ್ ಪ್ರಮಾಣದಲ್ಲಿ ಬೆಳೆಸಲು ಇಲ್ಲಿ ಜಾಗದ  ಕೊರತೆ. ಅದಕ್ಕೆ ಮನೆಯಲ್ಲೇ ಇರುವ ಒಂದಷ್ಟು ಜಾಗದಲ್ಲಿ `ಸಾವಯವ ಅಡುಗೆ ಮನೆ ಗಾರ್ಡನ್~ ಬೆಳೆಸುವಲ್ಲಿ ಸಾವಯವ ಪರಿಣತರು ಅವಿರತ ಶ್ರಮ ನಡೆಸುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಗಾರ್ಡನ್ ಸಿಟಿ ರೈತರ ಟ್ರಸ್ಟ್ ಸಮಾನ ಮನಸ್ಕರೊಂದಿಗೆ ಸೇರಿಕೊಂಡು ನಗರದಾದ್ಯಂತ `ಊಟ ಫ್ರಂ ತೋಟ~ ಕಾರ್ಯಾಗಾರವನ್ನು ಹಮ್ಮಿಕೊಳ್ಳುತ್ತಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದದ್ದೂ ಇಂಥದ್ದೇ ಒಂದು ಕಾರ್ಯಾಗಾರ.ಸೆಲೆಬ್ರಿಟಿ ಪ್ಯಾರಡೈಸ್ ಕ್ಲಬ್ ಹೌಸ್‌ನಲ್ಲಿ ನಡೆದ ಕಾರ್ಯಾಗಾರದಲ್ಲಿ ಸಾವಯವ ಅಡುಗೆ ಮನೆ ಗಾರ್ಡನ್‌ನ ಪ್ರಚಾರಕ  ಡಾ. ಬಿ. ಎನ್. ವಿಶ್ವನಾಥ ಅವರು ಸಾವಯವ ಕೃಷಿಯ ಬಗ್ಗೆ ಮಾತನಾಡುತ್ತಿದ್ದಂತೆ ಜನ ಬಹಳ ಕಾತರದಿಂದ ಆಲಿಸಿದರು.

 

ನಾವು ಸೇವಿಸುವ ಆಹಾರ ಎಷ್ಟು ವಿಷಕಾರಿ ಎಂದು ಮನವರಿಕೆ ಮಾಡಿಕೊಟ್ಟ ಅವರು, ಮನೆಯ್ಲ್ಲಲಿಯೇ ಸಣ್ಣ `ಅಡುಗೆ ಮನೆ ಗಾರ್ಡನ್~ ಬೆಳೆಸುವ ಪ್ರಾಮುಖ್ಯತೆ ತಿಳಿಹೇಳಿದರು. ಸದೃಢ ಆರೋಗ್ಯಕ್ಕೆ ಇದಕ್ಕಿಂತ ಬೇರೆ ಸುಲಭದ ಹಾದಿ ಇಲ್ಲ. ಮಕ್ಕಳನ್ನೂ ಈ ಗಾರ್ಡನ್ ಬೆಳೆಸುವ ಕಾರ್ಯದಲ್ಲಿ ಸೇರಿಸಿಕೊಳ್ಳುವುದರಿಂದ ಅವರಲ್ಲಿ ಉತ್ತಮ ಹವ್ಯಾಸ ಬೆಳೆಸಬಹುದು ಎಂಬುದನ್ನು ವಿವರಿಸಿದರು.ಟೆರೇಸ್ ಗಾರ್ಡನ್ ಎಂದರೇನು? ಅವುಗಳ ಅಗತ್ಯ, ಅವುಗಳ ವಿನ್ಯಾಸ, ಬೀಜಗಳ ಬಿತ್ತನೆ, ಕಳೆ ಕೀಳುವುದು, ಋತುವಿಗನುಗುಣವಾಗಿ ಹಣ್ಣು ಬೆಳೆಸುವುದಕ್ಕಾಗಿನ ಪ್ರಾರಂಭಿಕ ಹೆಜ್ಜೆಗಳ ಕುರಿತು ಇನ್ನೊಬ್ಬ ಸಾವಯವ ಪ್ರಚಾರಕ ಎಸ್. ಲಕ್ಷ್ಮೀನಾರಾಯಣ ಅವರು ಮಾಹಿತಿ ನೀಡಿದರು. ಜತೆಗೆ ಟೆರೇಸ್ ಮೇಲೆ ತರಕಾರಿ, ಹಣ್ಣು ಹಂಪಲು ಬೆಳೆಯುತ್ತಿರುವುದನ್ನು ಚಿತ್ರ ಸಹಿತ ಪ್ರದರ್ಶಿಸಿ ಅಲ್ಲಿ ನೆರೆದಿದ್ದವರ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿದರು.ದೂರದ ಮಲ್ಲೇಶ್ವರಂನಿಂದ ಆಗಮಿಸಿದ್ದ ವಾಣಿ ಮೂರ್ತಿ ಅಡುಗೆ ಕೋಣೆ ತ್ಯಾಜ್ಯವನ್ನು ಬೇರ್ಪಡಿಸಿ ಗೊಬ್ಬರ ಮಾಡುವ ವಿಧಾನವನ್ನು ಹಂಚಿಕೊಂಡರು. ಒಣ ಎಲೆಗಳು, ತರಕಾರಿಗಳ ಸಿಪ್ಪೆಗಳು ಮುಂತಾದವುಗಳನ್ನು ಬೇರ್ಪಡಿಸಿ ಮಣ್ಣಿನೊಂದಿಗೆ ಮಿಶ್ರ ಮಾಡಿ ಉತ್ತಮ ಗೊಬ್ಬರ ತಯಾರಿಕಾ ವಿಧಾನವನ್ನು ಅವರು ಪ್ರಾತ್ಯಕ್ಷಿಕೆ ನೀಡಿ ಮನದಟ್ಟು ಮಾಡಿಸಿದರು.ಅದು ಕೇವಲ ಕಾರ್ಯಾಗಾರ ಮಾತ್ರವಾಗಿರಲಿಲ್ಲ. ಸಾವಯವ ಕೃಷಿ ಬಗ್ಗೆ ಸೂಕ್ತ ತಿಳುವಳಿಕೆ ನೀಡಲೆಂದೇ ಅಲ್ಲಿ ಸಾಕಷ್ಟು ಸ್ಟಾಲ್‌ಗಳಿದ್ದವು. ಸಾವಯವ ರೀತಿಯಲ್ಲಿ ಬೆಳೆದ ಗಿಡಗಳು, ಹೂಗಳನ್ನು ನೋಡಿದ ಅನೇಕ ಜನರು ಎಲ್ಲವನ್ನೂ ಖರೀದಿಸಿದರು. ಮನೆಯಲ್ಲೇ ತಯಾರಿಸಿದ ಜಾಮ್‌ಗಳು, ನೆರೆದಿದ್ದವರ ನಾಲಿಗೆಯ ರುಚಿಯನ್ನು ಹೆಚ್ಚಿಸಿತು.ಬರೀ ಗಿಡ, ಹೂ ಹಣ್ಣು ಮಾತ್ರವಲ್ಲ, ಬಿಟಿಎಂ ಲೇ ಔಟ್‌ನ `ಇನ್ ದಿ ಪಿಂಕ್~ ಸಾವಯವ ರೆಸ್ಟೊರೆಂಟ್‌ನ ಸ್ಟಾಲ್‌ನೊಳಗೆ ಹೊಕ್ಕು ತಮ್ಮ ಹಸಿವೆ ನೀಗಿಸಿಕೊಂಡರು. ಉಂಡು ಹೊರಬಂದಾಗ ರುಚಿಯಾದ ಊಟ ಮಾಡಿದ ಸಂತೃಪ್ತಿ ಅವರಲ್ಲಿ ಮನೆಮಾಡಿತ್ತು.

ಕಿಚನ್ ಗಾರ್ಡನ್‌ಗೆ ಅನುಕೂಲವಾಗುವ ಉಪಕರಣಗಳ ಮಾರಾಟವೂ ಅಲ್ಲಿ  ನಡೆದಿತ್ತು. ಅಲ್ಲದೆ ಓಪ್ರೋನ್ ಬಯೊಟೆಕ್‌ನ ಡಿಜಿಟಲ್ ಥರ್ಮೊಮೀಟರ್ ಮತ್ತು ರಕ್ತದೊತ್ತಡ ನೋಡುವ ಉಪಕರಣಗಳೂ ಅಲ್ಲಿ ಮಾರಾಟಕ್ಕಿದ್ದವು.ಹಸಿರು ಕಾಣೆಯಾಗಿ ಕಾಂಕ್ರೀಟ್ ಕಾಡಾಗುತ್ತಿರುವ ಬೆಂಗಳೂರಿನಲ್ಲಿ ಹಸಿರು ಬೆಳೆಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅದಕ್ಕೆ ಮುನ್ನುಡಿಯಾಗಿಯೇ ಹುಟ್ಟಿಕೊಂಡ ಇಂಥ ಕಾರ್ಯಾಗಾರಗಳತ್ತ ಜನರ ಆಸಕ್ತಿಯೂ ಹೆಚ್ಚಾಗುತ್ತಿದೆ. ಮನೆಯಲ್ಲೇ ಹಸಿರು ಬೆಳೆಸಲು ಬಯಸುವವರಿಗೆ ಇದೊಂದು ಉತ್ತಮ ವೇದಿಕೆಯಾಗಿತ್ತು. ಕಾರ್ಯಾಗಾರ ಎಲೆಕ್ಟ್ರಾನಿಕ್ ಸಿಟಿಯಲ್ಲಾದರೂ ದೂರದ ಹನುಮಂತ ನಗರದಿಂದಲೂ ಜನ ಆಗಮಿಸಿದ್ದರು.

-

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry