ಮಂಗಳವಾರ, ನವೆಂಬರ್ 19, 2019
28 °C

ತಾರಾ ದೈತ್ಯರು

Published:
Updated:
ತಾರಾ ದೈತ್ಯರು

`ಕ್ಷತ್ರ'-ಅದೇ ವಿಶ್ವದ ಸಾರಸರ್ವಸ್ವ. `ಗ್ಯಾಲಕ್ಸಿ'ಗಳೆಂಬ (ಚಿತ್ರ 1, 2) ಮಹಾನ್ ಸಮೂಹಗಳಲ್ಲಿ ಪ್ರತಿಯೊಂದರಲ್ಲೂ ಹತ್ತಾರು ಸಾವಿರ ಕೋಟಿ ಸಂಖ್ಯೆಯಲ್ಲಿ ಗುಂಪು ಗುಂಪಾಗಿ ನೆಲಸಿರುವ ನಕ್ಷತ್ರಗಳ ಒಟ್ಟು ಸಂಖ್ಯೆ ಕಲ್ಪನಾತೀತ; ಅನಂತಕ್ಕೆ ಸಮೀಪ. ಈವರೆಗೆ ತಿಳಿದಿರುವಂತೆ ವಿಶ್ವದಲ್ಲಿನ ನಕ್ಷತ್ರಗಳ ಒಟ್ಟು ಸಂಖ್ಯೆ ಒಂದು ನೂರು ಕೋಟಿ ಕೋಟಿ ಕೋಟಿ ಕೋಟಿ!ಅಷ್ಟೊಂದು ಸಂಖ್ಯೆಯಲ್ಲಿದ್ದರೂ ಎಲ್ಲ ನಕ್ಷತ್ರಗಳದೂ ಏಕರೂಪ-ಸ್ವರೂಪ ಅಲ್ಲ. ದ್ರವ್ಯರಾಶಿಯಲ್ಲಿ, ಗಾತ್ರದಲ್ಲಿ ಮೇಲ್ಮೈ ಉಷ್ಣತೆಯಲ್ಲಿ (ಎಂದರೆ ಬಣ್ಣಗಳಲ್ಲಿ), ವಯಸ್ಸಿನಲ್ಲಿ, ಆಯುಷ್ಯದಲ್ಲಿ, ಬದುಕಿನ ಹಂತದಲ್ಲಿ.... ಹಾಗೆಲ್ಲ ಪ್ರತಿಯೊಂದರಲ್ಲೂ ಅವು ಭಿನ್ನ ಭಿನ್ನವಾಗಿವೆ. ತಾರಾ ಲೋಕದಲ್ಲಿ ನಮ್ಮ ಸೂರ್ಯನಂತಹ (ಚಿತ್ರ-3) ನಕ್ಷತ್ರಗಳಿವೆ; ಸೂರ್ಯನಿಗಿಂತ ಅಧಿಕ ಕಾಂತಿಯ, ಅಧಿಕ ಗಾತ್ರದ, ಅಧಿಕ ದ್ರವ್ಯರಾಶಿಯ ತಾರೆಗಳಿವೆ (ಚಿತ್ರ 9, 10). ಸೂರ್ಯನಂತೆಯೇ ಗ್ರಹಗಳನ್ನು ಪಡೆದಿರುವ ನಕ್ಷತ್ರಗಳೂ ಇವೆ (ಚಿತ್ರ-4). ಆಯುಷ್ಯ ಮುಗಿದ ಶ್ವೇತಕುಬ್ಜಗಳಿವೆ (ಚಿತ್ರ 5, 6). ಪರಮ ಸಾಂದ್ರತೆಯ `ನ್ಯೂಟ್ರಾನ್ ತಾರೆ'ಗಳು, ಪರಮ ಗುರುತ್ವದ `ಕಪ್ಪು ರಂಧ್ರ'ಗಳು, ಪರಮ ವೇಗದ ಸ್ವಭ್ರಮಣದ `ಪಲ್ಸಾರ್'ಗಳು (ಚಿತ್ರ-11)....! ನಕ್ಷತ್ರಗಳ ವಿಧ-ವೈವಿಧ್ಯ ಹೇರಳ. ಅಷ್ಟೇ ಅಲ್ಲ ನಕ್ಷತ್ರಗಳು `ಗುಚ್ಛ'ಗಳಾಗಿಯೂ ಇವೆ (ಚಿತ್ರ-7), `ನಕ್ಷತ್ರ ಪುಂಜ'ಗಳನ್ನೂ (ಚಿತ್ರ-8) ರೂಪಿಸಿವೆ. ಎಲ್ಲಕ್ಕೂ ಮಿಗಿಲಾಗಿ ತಮ್ಮ ಆಸುಪಾಸಿನ ಇತರ ತಾರೆಗಳನ್ನು ಸೆಳೆದು ನುಂಗುತ್ತಿರುವ `ಸ್ವಜನ ಭಕ್ಷಕ' ನಕ್ಷತ್ರಗಳೂ ಇವೆ (ಚಿತ್ರ-12).

ಇಂಥವೆಲ್ಲ ವಿಸ್ಮಯ-ವೈವಿಧ್ಯಮಯ ತಾರಾ ಲೋಕದಲ್ಲಿನ ಪರಮ ದ್ರವ್ಯರಾಶಿಯ ಮತ್ತು ಪರಮ ಗಾತ್ರದ ನಕ್ಷತ್ರಗಳು ಪತ್ತೆಯಾಗಿವೆ. ಆ ತಾರೆಗಳ `ವಿಶ್ವದಾಖಲೆ'ಗಳು ಯಾರನ್ನೇ ಆದರೂ ಬೆರಗುಗೊಳಿಸುತ್ತವೆ. ನೀವೇ ನೋಡಿ:* ಈವರೆಗೆ ಗುರುತಿಸಲ್ಪಟ್ಟಿರುವ ಅತ್ಯಧಿಕ ದ್ರವ್ಯರಾಶಿಯ ನಕ್ಷತ್ರದ ಹೆಸರು `ಆರ್ 136 ಎ1'. ಈ ನಕ್ಷತ್ರದ ದ್ರವ್ಯರಾಶಿ ನಮ್ಮ ಸೂರ್ಯನ ದ್ರವ್ಯರಾಶಿಯ ಇನ್ನೂರ ಅರವತ್ತೈದು ಪಟ್ಟು ಆಗುವಷ್ಟಿದೆ. ನಮ್ಮ ಸೂರ್ಯನ ದ್ರವ್ಯರಾಶಿ ಇನ್ನೂರು ಕೋಟಿ ಕೋಟಿ ಕೋಟಿ ಕೋಟಿ ಕಿಲೋಗ್ರಾಂ. `ಆರ್ 136 ಎ1' ನಕ್ಷತ್ರದ ದ್ರವ್ಯರಾಶಿ ಐವತ್ಮೂರು ಸಾವಿರ ಕೋಟಿ ಕೋಟಿ ಕೋಟಿ ಕಿಲೋಗ್ರಾಂ! (53ರ ಮುಂದೆ 31 ಸೊನ್ನೆಗಳನ್ನು ಬರೆದರೆ ಈ ಸಂಖ್ಯೆ ಬರುತ್ತದೆ).ಸಹಜವಾಗಿಯೇ ಈ ನಕ್ಷತ್ರದ ಕಾಂತಿಯೂ ತುಂಬ ತೀಕ್ಷ್ಣ. ನಮ್ಮ ಸೂರ್ಯನ ಹೊಳಪಿನ ಒಂದು ಕೋಟಿ ಪಟ್ಟು ಕಾಂತಿ ಅದರದು. ಆದರೂ ಬರಿಗಣ್ಣಿಗಿರಲಿ ಯಾವುದೇ ಸಾಮಾನ್ಯ ದೂರದರ್ಶಕಕ್ಕೂ ಈ ನಕ್ಷತ್ರ ಗೋಚರಿಸುವುದಿಲ್ಲ. ಏಕೆಂದರೆ ಈ ತಾರೆ ನಮ್ಮಿಂದ ಒಂದು ಲಕ್ಷ ಅರವತ್ತೈದು ಸಾವಿರ ಜ್ಯೋತಿರ್ವರ್ಷ ದೂರದಲ್ಲಿದೆ. ಅಷ್ಟು ದೂರದಲ್ಲಿರುವ `ಆರ್ 136' ಎಂಬ ಒಂದು ನಕ್ಷತ್ರ ಗುಚ್ಛದಲ್ಲಿ ಈ ನಕ್ಷತ್ರ ನೆಲೆಗೊಂಡಿದೆ. ವಿಸ್ಮಯ ಏನೆಂದರೆ ಈ ತಾರಾಗುಚ್ಛದಲ್ಲೇ ನಮ್ಮ ಸೂರ್ಯನ ದ್ರವ್ಯರಾಶಿಯ ನೂರೈವತ್ತು ಮಡಿಗೂ ಅಧಿಕ ದ್ರವ್ಯ ದಾಸ್ತಾನಿನ ಇನ್ನೂ ಮೂರು ತಾರೆಗಳಿವೆ. ಇಂಥ ಅಗಾಧ ದ್ರವ್ಯರಾಶಿಯ ನಕ್ಷತ್ರಗಳು ವಿಶ್ವದಲ್ಲಿ ಅತ್ಯಪರೂಪ. ಆದ್ದರಿಂದಲೇ `ಆರ್ 136 ಎ1' ನಕ್ಷತ್ರದ್ದು ಗರಿಷ್ಠ ದ್ರವ್ಯ ಸಂಗ್ರಹದ ವಿಶ್ವದಾಖಲೆ.* ಭೂಮಿಯಿಂದ ಎಂಟು ಸಾವಿರ ಜ್ಯೋತಿರ್ವರ್ಷ ದೂರದಲ್ಲಿ, ಸುಪ್ರಸಿದ್ಧ ನಕ್ಷತ್ರಪುಂಜ `ಕ್ಯಾನಿಸ್ ಮೇಜರ್'ನಲ್ಲಿ ವಿಶ್ವದ ಅತ್ಯಂತ ದೈತ್ಯ ಗಾತ್ರದ ನಕ್ಷತ್ರ ಇದೆ. `ವೈ ವಿ ಕ್ಯಾನಿಸ್ ಮೇಜೋರಿಸ್' ಎಂಬ ತಾರೆ `ಕೆಂಪು ದೈತ್ಯ' ಹಂತದಲ್ಲಿದೆ. ಸಾಮಾನ್ಯ ಕೆಂಪು ದೈತ್ಯರಿಗಿಂತ ತುಂಬ ದೊಡ್ಡ `ಸೂಪರ್ ದೈತ್ಯ'ರನ್ನೂ ಮೀರಿಸಿರುವ `ಹೈಪರ್ ದೈತ್ಯ' ಈ ನಕ್ಷತ್ರ.

ಗಾತ್ರದಲ್ಲಿ ವಿಶ್ವದಾಖಲೆ ನಿರ್ಮಿಸಿರುವ `ವೈ ವಿ ಕ್ಯಾನಿಸ್ ಮೇಜೋರಿಸ್' ನಕ್ಷತ್ರದ ವ್ಯಾಸ ಸುಮಾರು ಮುನ್ನೂರು ಕೋಟಿ ಕಿ.ಮೀ. ಎಂದರೆ ನಮ್ಮ ಸೂರ್ಯನ ವ್ಯಾಸದ ಸಮೀಪ ಎರಡು ಸಾವಿರ ಮಡಿ ಆಗುವಷ್ಟು! ಈ ನಕ್ಷತ್ರದ ಗಾತ್ರ ಎಷ್ಟು ಬೃಹತ್ತಾಗಿದೆಯೆಂದರೆ ಅದರೊಳಗೆ ಎಪ್ಪತ್ತು ಕೋಟಿ ಕೋಟಿ ಭೂಮಿಗಳನ್ನು ತುಂಬಬಹುದು! ಮತ್ತೂ ಒಂದು ಹೋಲಿಕೆ ಬೇಕೆಂದರೆ ಬೆಳಕಿನ ವೇಗದಲ್ಲಿ ಸೂರ್ಯನನ್ನು ಒಮ್ಮೆ ಸುತ್ತಲು ಹದಿನಾಲ್ಕೂವರೆ ಸೆಕೆಂಡ್ ಸಾಕಾದರೆ ಅದೇ ವೇಗದಲ್ಲಿ ಒಮ್ಮೆ ವೈ ವಿ ಕ್ಯಾನಿಸ್ ಮೇಜೋರಿಸ್ ಅನ್ನು ಸುತ್ತಿಬರಲು ಎರಡು ಗಂಟೆ ನಲವತ್ತೆರಡು ನಿಮಿಷ ಬೇಕು!ಗಾತ್ರದಲ್ಲಿ ನಮ್ಮ ಸೂರ್ಯನ ಸುಮಾರು ಎರಡು ಸಾವಿರದ ಮುನ್ನೂರು ಪಟ್ಟು ಆಗುವಷ್ಟಿರುವ ಈ ಹೈಪರ್ ದೈತ್ಯ ತಾರೆಯ ದ್ರವ್ಯರಾಶಿ ತುಂಬ ಕಡಿವೆು ಸೂರ್ಯನ ನಲವತ್ತು ಮಡಿ ಅಷ್ಟೆ! ಹಾಗೆ ಭಾರೀ ವಿರಳ ಸಾಂದ್ರತೆಯ ದ್ರವ್ಯರಾಶಿಯೊಡನೆ ಉಬ್ಬಿ ನಿಂತಿರುವ ಈ ಪರಮ ದೈತ್ಯನ ಆಯುಷ್ಯದ ಬಹುಭಾಗ ಮುಗಿದುಹೋಗಿದೆ ಕೂಡ. ಇನ್ನೇನು `ಸ್ವಲ್ಪ ಕಾಲ'ದಲ್ಲೇ ಎಂದರೆ ಕೆಲವು ನೂರು ದಶಲಕ್ಷ ವರ್ಷಗಳಲ್ಲೇ ಈ ತಾರೆ ಸಿಡಿದು ಅಂತ್ಯ ಕಾಣಲಿದೆ.ಪರಮ ದ್ರವ್ಯರಾಶಿಯ `ಆರ್ 136 ಎ1' ನಕ್ಷತ್ರದ ಆಯುಷ್ಯವೂ ಬಹಳ ಉಳಿದಿಲ್ಲ. ನಕ್ಷತ್ರಗಳ ದ್ರವ್ಯರಾಶಿ ಅಧಿಕ ಇದ್ದಷ್ಟೂ ಅವುಗಳ ಆಯುಷ್ಯ ಕಡಿವೆು. ನಮ್ಮ ಸೂರ್ಯನಂತಹ ಸಾಧಾರಣ ತಾರೆಗಳದೇ ಗರಿಷ್ಠ ಜೀವಿತಾವಧಿ. ನಮ್ಮಂತಹ ಜೀವಿಗಳೇ ಆಗಿರಲಿ, ಎಂಥ ತಾರೆಗಳೇ ಆಗಿರಲಿ, ವಿಶ್ವದಲ್ಲಿನ ಯಾವುದೇ ಸೃಷ್ಟಿಯೂ ಶಾಶ್ವತ ಅಲ್ಲ. ಎಂಥ ಸಮಾನ ನಿಯಮ! 

ಪ್ರತಿಕ್ರಿಯಿಸಿ (+)