ತಾರೆಗಳ ಮೆಗಾನಗರ

7

ತಾರೆಗಳ ಮೆಗಾನಗರ

Published:
Updated:

ಗೆಳೆಯರೇ, ಮೋಡರಹಿತ ಇರುಳಿನಾಗಸದಲ್ಲಿ ಅಲ್ಲಲ್ಲಿ ವಿರಳವಾಗಿ, ಅಲ್ಲಲ್ಲಿ ಗುಂಪಾಗಿ, ಒಟ್ಟಾರೆ ಎಲ್ಲೆಲ್ಲೂ ಹರಡಿರುವ ತಾರಾ ಲೋಕವನ್ನು ಗಮನಿಸಿದ್ದೀರಾ? ಬೇರೆ ಬೇರೆ ದೂರಗಳಲ್ಲಿ ಭಿನ್ನ ಭಿನ್ನ ಕಾಂತಿ, ಬಣ್ಣ ಗಾತ್ರಗಳಿಂದ ಕಂಗೊಳಿಸುವ ನಕ್ಷತ್ರ ಸಾಮ್ರಾಜ್ಯ ಎಷ್ಟು ಸುಂದರ.ಎಷ್ಟು ಕುತೂಹಲಕರ ಅಲ್ಲವೇ? (ಚಿತ್ರ - 1) ವಾಸ್ತವ ಏನೆಂದರೆ ನಿರಭ್ರ ಇರುಳಿನಲ್ಲಿ ಯಾವುದೇ ವೇಳೆಯಲ್ಲಿ ಬರಿಗಣ್ಣಿಗೆ ಗೋಚರಿಸುವ ನಕ್ಷತ್ರಗಳ ಸಂಖ್ಯೆ ಐದು - ಆರು ಸಾವಿರ ಮೀರಿರುವುದಿಲ್ಲ; ಆದರೆ ವಿಶ್ವದಲ್ಲಿರುವ ತಾರೆಗಳ ಒಟ್ಟು ಸಂಖ್ಯೆ ಒಂದು ನೂರು ಕೋಟಿ ಕೋಟಿ ಕೋಟಿ ಕೋಟಿ! (1ರ ಮುಂದೆ 30 ಸೊನ್ನೆಗಳನ್ನು ಬರೆದಾಗ ಈ ಸಂಖ್ಯೆ ಬರುತ್ತದೆ).ನಕ್ಷತ್ರಗಳ ಸಂಖ್ಯೆ ಅದೆಷ್ಟೇ ಆಗಿರಲಿ, ವಿಸ್ಮಯ ಏನೆಂದರೆ, ಇಷ್ಟೂ ನಕ್ಷತ್ರಗಳು ಆಕಾಶದಲ್ಲಿ ಒಂಟೊಂಟಿಯಾಗಿ ನೆಲೆಗೊಂಡಿಲ್ಲ. ಮಹಾನಗರಗಳಲ್ಲಿ ಮನುಷ್ಯರು ಲಕ್ಷಗಟ್ಟಳೆ, ಕೋಟಿಗಟ್ಟಳೆ ಸಂಖ್ಯೆಗಳಲ್ಲಿ ನೆಲೆಸಿರುವಂತೆ ತಾರೆಗಳು ನೂರಾರು, ಸಾವಿರಾರು ಕೋಟಿಗೂ ಅಧಿಕ `ಜನ ಸಂಖ್ಯೆ~ಯಲ್ಲಿ `ಮೆಗಾನಗರ~ಗಳಲ್ಲಿ ಗುಂಪಾಗಿವೆ. ಹಾಗೆ ಒಂದಕ್ಕೊಂದು `ಜ್ಯೋತಿರ್ವರ್ಷ~ಗಳ ಅಂತರದಲ್ಲಿ ಅಸ್ತಿತ್ವದಲ್ಲಿರುವ ಕಲ್ಪನಾತೀತ ಸಂಖ್ಯೆಯ ತಾರೆಗಳ ಅಂಥ ಮೆಗಾನಗರಗಳನ್ನು `ಗ್ಯಾಲಕ್ಸಿ~ಗಳೆಂದೇ ಖಗೋಳ ವಿಜ್ಞಾನಿಗಳು ಕರೆಯುತ್ತಾರೆ.ಅನಂತವೆನಿಸುವಷ್ಟು ವಿಸ್ತಾರವಿರುವ ವಿಶ್ವದಲ್ಲಿ ಹಾಗೆ ರೂಪುಗೊಂಡಿರುವ ತಾರಾನಗರಗಳ ಸಂಖ್ಯೆಯೂ ಸುಲಭಗ್ರಾಹ್ಯವಲ್ಲ. ವೈಜ್ಞಾನಿಕ ಲೆಕ್ಕಾಚಾರಗಳ ಪ್ರಕಾರ ವಿಶ್ವದಲ್ಲಿರುವ ಗ್ಯಾಲಕ್ಸಿಗಳ ಒಟ್ಟು ಸಂಖ್ಯೆ ಸುಮಾರು ಹತ್ತು ಸಾವಿರ ಕೋಟಿ! ಪ್ರತಿ ಗ್ಯಾಲಕ್ಸಿಯಲ್ಲೂ ಇರುವ ನಕ್ಷತ್ರಗಳ ಸಂಖ್ಯೆ ಹತ್ತು ಸಾವಿರ ಕೋಟಿಯಿಂದ ಒಂದು ಲಕ್ಷ ಕೋಟಿ. ಇಂಥ ನಕ್ಷತ್ರ ನಗರಗಳ ನಡು ನಡುವಣ ದೂರ ಲಕ್ಷಾಂತರ ಜ್ಯೋತಿರ್ವರ್ಷ ಪ್ರತಿ ಗ್ಯಾಲಕ್ಸಿಯ ಉದ್ದ ಅಗಲ ವಿಸ್ತಾರಗಳೂ ಕಲ್ಪನಾತೀತ.ಅದಕ್ಕೆ ಸ್ಪಷ್ಟ ನಿರ್ದಿಷ್ಟ ನಿದರ್ಶನ ಬೇಕೆಂದರೆ ನಮ್ಮ ಸೂರ್ಯ, ನಮ್ಮ ಸೌರವ್ಯೆಹ ನೆಲೆಗೊಂಡಿರುವ ನಮ್ಮ ಗ್ಯಾಲಕ್ಸಿಯಾದ `ಕ್ಷೀರಪಥ~ವನ್ನೇ ನೋಡಿ (ಚಿತ್ರ - 3). ಈ ತಾರಾನಗರದ ಉದ್ದ ಒಂದು ಲಕ್ಷ ಜ್ಯೋತಿರ್ವರ್ಷ, ಅಗಲ ಇಪ್ಪತ್ತು ಸಾವಿರ ಜ್ಯೋತಿರ್ವರ್ಷ. ಇದರಲ್ಲಿರುವ ನಕ್ಷತ್ರಗಳ ಸಂಖ್ಯೆ ಸುಮಾರು ಒಂದು ನೂರು ಶತಕೋಟಿ. ಕ್ಷೀರಪಥದ ಸನಿಹದ `ಆ್ಯಂಡ್ರೊಮೇಡಾ ಗ್ಯಾಲಕ್ಸಿ~ಯ ಉದ್ದ (ಚಿತ್ರ - 6) ಒಂದು ಲಕ್ಷ ಮುವ್ವತ್ತು ಸಾವಿರ ಜ್ಯೋತಿರ್ವರ್ಷ.ಕ್ಷೀರಪಥದ ಅತ್ಯಂತ ಸನಿಹದ ಗ್ಯಾಲಕ್ಸಿಯಾದ `ದಿ ಲಾರ್ಜ್ ಮ್ಯಾಜಲಾನಿಕ್ ಕ್ಲೌಡ್~ (ಚಿತ್ರ - 4) ನಮ್ಮಿಂದ ಒಂದು ಲಕ್ಷ ಐವತ್ತೈದು ಸಾವಿರ ಜ್ಯೋತಿರ್ವರ್ಷ ದೂರದಲ್ಲಿದೆ. ನಮಗೆ ಅತ್ಯಂತ ದೂರದಲ್ಲಿರುವ ಗ್ಯಾಲಕ್ಸಿಯ ನೆಲೆ ಒಂದು ಸಾವಿರದ ಮುನ್ನೂರು ಕೋಟಿ ಜ್ಯೋತಿರ್ವರ್ಷ ಅಂತರದಲ್ಲಿದೆ!ಇಲ್ಲೊಂದು ಪ್ರಶ್ನೆ: ವಿಶ್ವದಲ್ಲಿ ಇಷ್ಟೆಲ್ಲ ಗ್ಯಾಲಕ್ಸಿಗಳು ಮೈದಳೆದದ್ದು ಎಂದು?ಹೇಗೆ?

ಅದಕ್ಕೆ ಸ್ಪಷ್ಟ ಉತ್ತರ ಲಭ್ಯ. ವಿಶ್ವದ ಉಗಮದ ಮೂಲ ಘಟನೆಯಾದ `ಮಹಾಸ್ಫೋಟ~ (ಬಿಗ್ ಬ್ಯಾಂಗ್) ಸಂಭವಿಸಿ ಎರಡು ನೂರು ದಶಲಕ್ಷ ವರ್ಷಗಳ ಸುಮಾರಿಗೆ - ಎಂದರೆ ಈಗ್ಗೆ ಸುಮಾರು ಒಂದು ಸಾವಿರದ ಮುನ್ನೂರು ಕೋಟಿ ವರ್ಷ ಹಿಂದೆ ವಿಶ್ವದೆಲ್ಲೆಡೆ ಚದರಿ ಹಗುರ ಧಾತುಗಳು ಬೆರೆತಿದ್ದ ದ್ರವ್ಯ ಅಲ್ಲಲ್ಲಿ ಒಟ್ಟುಗೂಡಿ ಗ್ಯಾಲಕ್ಸಿಯ ಕಾಯಗಳು ಮೈದಳೆದವು.ಅಲ್ಲಿಂದ ಮುಂದೆ ಮತ್ತೆ ಇನ್ನೂರು ದಶಲಕ್ಷ ವರ್ಷಗಳು ಕಳೆವ ವೇಳೆಗೆ ನಕ್ಷತ್ರಗಳು ಅವತರಿಸಿದವು. ಆರಂಭಿಕ ಗ್ಯಾಲಕ್ಸಿಗಳು ಸಣ್ಣ - ಪುಟ್ಟವಾಗಿದ್ದು ಅಂಥ ಗ್ಯಾಲಕ್ಸಿಗಳು ಒಂದರೊಡನೊಂದು ಬೆರೆತು ಬೆಳೆದು ಕ್ರಮೇಣ ಬೃಹದಾಕಾರದ, ಬೃಹತ್ ತಾರಾ ಸಂಖ್ಯೆಯ ಮಹಾನಗರ - ಮೆಗಾನಗರಗಳಾದುವು: ಹಳ್ಳಿಗಳು ನಗರಗಳಾಗಿ, ಮಹಾನಗರಗಳಾಗುವಂತೆಯೇ ಜರುಗಿದ ವರ್ಧನ - ವಿಕಸನ ಅದು.ಹಾಗೆಂದು ಗ್ಯಾಲಕ್ಸಿಗಳಲ್ಲಿರುವುದು ನಕ್ಷತ್ರಗಳಷ್ಟೇ ಏನಿಲ್ಲ. ಭಿನ್ನಭಿನ್ನ ದ್ರವ್ಯರಾಶಿಯ, ಕಾಂತಿಯ, ವರ್ಣಗಳ, ಗಾತ್ರಗಳ, ಬೇರೆ ಬೇರೆ ವಯಸ್ಸಿನ ನಕ್ಷತ್ರಗಳ ಜೊತೆಗೆ ಪ್ರತಿ ಗ್ಯಾಲಕ್ಸಿಯಲ್ಲೂ ಹೇರಳ `ನೀಹಾರಿಕೆ~ಗಳಿವೆ (ಚಿತ್ರ - 8, 9, 10, 11) ಹೊಸ ಹೊಸ ತಾರೆಗಳ ಜನಪರ ತಾಣಗಳಾದ, ಮೃತ ತಾರೆಗಳ ಅವಶೇಷಗಳೂ ಆದ ನೀಹಾರಿಕೆಗಳ ಜೊತೆಗೆ ಅಪಾರ ಪ್ರಮಾಣದ ಧೂಳು ಮತ್ತು ಅನಿಲ ದ್ರವ್ಯ - `ಇಂಟರ್ ಸ್ಟೆಲ್ಲಾರ್ ಮ್ಯಾಟರ್~ - ಕೂಡ (ಚಿತ್ರ - 7) ಗ್ಯಾಲಕ್ಸಿಗಳಲ್ಲಿ ಹರಡಿದೆ.

 

ಅಸಾಮಾನ್ಯ ನಕ್ಷತ್ರಗಳು - ಎಂದರೆ ಕ್ಪಾಸಾರ್, ಪಲ್ಸಾರ್, ಕಪ್ಪು ರಂಧ್ರ (ಚಿತ್ರ - 12) ಇತ್ಯಾದಿ ಮತ್ತು ಹೇರಳ `ಸೌರವ್ಯೆಹ~ಗಳೂ ಗ್ಯಾಲಕ್ಸಿಗಳಲ್ಲಿವೆ. ಈ ಎಲ್ಲ ಕಾಯಗಳ ಒಟ್ಟೂ ದ್ರವ್ಯದ ಹತ್ತಾರು ಪಟ್ಟು ಆಗುವಷ್ಟು `ಅಗೋಚರ ದ್ರವ್ಯ~ (ಡಾರ್ಕ್ ಮ್ಯಾಟರ್) ಸಹ ಗ್ಯಾಲಕ್ಸಿಗಳಲ್ಲಿದೆ.ತಮ್ಮಲ್ಲಿನ ನಕ್ಷತ್ರಗಳ ದೀಪ್ತಿಯಿಂದಲೇ ಬೆಳಗುತ್ತಿರುವ ಈ ನಕ್ಷತ್ರ ನಗರಗಳು ಅಷ್ಟೆಲ್ಲ ತಾರೆಗಳ ಅಸ್ತಿತ್ವದಿಂದಾಗಿ ತೀವ್ರ ಗುರುತ್ವ ಬಲವನ್ನೂ ಪಡೆದಿವೆ. ಹಾಗಾಗಿ ಗ್ಯಾಲಕ್ಸಿಗಳೂ ಅಲ್ಲಲ್ಲಿ ಗುಂಪು ಗುಂಪಾಗಿ ಗುಚ್ಛಗಳಾಗಿವೆ (ಚಿತ್ರ - 2). ಇಂಥ ಗ್ಯಾಲಕ್ಸೀಯ ಗುಚ್ಛಗಳಲ್ಲಿ ಹತ್ತಾರರಿಂದ ಸಾವಿರಾರು ಸಂಖ್ಯೆಗಳ ಗ್ಯಾಲಕ್ಸಿಗಳು ಗುರುತ್ವ ಬಂಧಕ್ಕೆ ಸಿಲುಕಿ ಒಟ್ಟೊಟ್ಟಾಗಿವೆ. ಉದಾಹರಣೆಗೆ ನಮ್ಮ ಕ್ಷೀರಪಥ ಇರುವ ಗುಚ್ಛದಲ್ಲಿ ಇಪ್ಪತ್ತೈದು ಗ್ಯಾಲಕ್ಸಿಗಳಿವೆ. ಅದೇ `ವಿರ್ಗೋ ಗುಚ್ಛ~ದಲ್ಲಿ ಹಲವು ಸಾವಿರ ಗ್ಯಾಲಕ್ಸಿಗಳಿವೆ.ಸಹಜವಾಗಿಯೇ ಪ್ರತಿ ಗುಚ್ಛದಲ್ಲೂ ಇರುವ ಗ್ಯಾಲಕ್ಸಿಗಳ ನಡು ನಡುವೆ ನಿರಂತರವಾಗಿ ಸೆಳೆತ - ಸಂಘರ್ಷ ನಡೆದೇ ಇದೆ. ದೊಡ್ಡ ಗ್ಯಾಲಕ್ಸಿಗಳು ಚಿಕ್ಕವನ್ನು ಸೆಳೆಯುತ್ತವೆ, ಆವರಿಸುತ್ತವೆ, `ನುಂಗಿ ಹಾಕುತ್ತವೆ~ (ಚಿತ್ರ - 13). ವಾಸ್ತವವಾಗಿ ನಮ್ಮ ಕ್ಷೀರಪಥವು ಇಂತಹದೇ ದುರಂತದ ಹಾದಿಯಲ್ಲಿದೆ; ಭವಿಷ್ಯದಲ್ಲಿ ಆ್ಯಂಡ್ರೋಮೇಡಾ ಗ್ಯಾಲಕ್ಸಿಯೊಡನೆ ಸಂಘರ್ಷಿಸಲಿದೆ.ಬೃಹತ್ ದ್ರವ್ಯ ರಾಶಿಯ ಭಾರೀ ಗುರುತ್ವದ ಇವೆರಡೂ ಗ್ಯಾಲಕ್ಸಿಗಳು ಚಕ್ರಗಳಂತೆ ತಟ್ಟೆಗಳಂತೆ ಸುತ್ತುತ್ತ, ಪರಸ್ಪರ ಸೆಳೆಯುತ್ತ ಒಂದನ್ನೊಂದು ಸಮೀಪಿಸುತ್ತಿವೆ.ಇನ್ನು ಸುಮಾರು ಏಳು ನೂರು ಕೋಟಿ ವರ್ಷಗಳ ವೇಳೆಗೆ ಸಂಭವಿಸಲಿರುವ ಈ ವಿದ್ಯಮಾನದ ಅಂತ್ಯದ ವೇಳೆಗೆ ಇವೆರಡೂ ಗ್ಯಾಲಕ್ಸಿಗಳೂ ತಪ್ತಗೊಂಡು ಭಗ್ನಗೊಂಡ ಮಹಾನಗರಗಳಂತೆ ಮೃತವಾಗಿ, ಮಂಕಾಗಿ, ಭಗ್ನಾವಶೇಷಗಳ ರಾಶಿಯಂತೆ ಉಳಿಯುತ್ತವೆ.ಸುರುಳಿ, ಎಲಿಸ್ಸೀಯ ಮತ್ತು ಅನಿಯತ ಆಕಾರಗಳಲ್ಲಿರುವ ಗ್ಯಾಲಕ್ಸಿಗಳೆಂಬ ತಾರೆಗಳ ಮೆಗಾನಗರಗಳದು ಎಂಥ ವಿಸ್ಮಯ, ಅಲ್ಲವೇ?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry