ತಾರ್ಕಿಕ ಅಂತ್ಯದತ್ತ ರಸ್ತೆ ವಿಸ್ತರಣೆ ಸಮಸ್ಯೆ

7

ತಾರ್ಕಿಕ ಅಂತ್ಯದತ್ತ ರಸ್ತೆ ವಿಸ್ತರಣೆ ಸಮಸ್ಯೆ

Published:
Updated:

ಕಾರ್ಕಳ (ಬಜಗೋಳಿ): ಕಾರ್ಕಳ ನಗರದ ಅಭಿವೃದ್ಧಿಯಲ್ಲಿ ಪ್ರಮುಖ ಅಗತ್ಯವಾಗಿರುವ ಮುಖ್ಯ ರಸ್ತೆ ವಿಸ್ತರಣೆ ಕುರಿತು ನಾಗರಿಕರೊಂದಿಗೆ ಉಡುಪಿ ಜಿಲ್ಲಾಧಿಕಾರಿ ಹೇಮಲತಾ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ರಸ್ತೆ ವಿಸ್ತರಣೆ ಕುರಿತ ದೀರ್ಘಕಾಲದ ಚರ್ಚೆಗೆ ತಾರ್ಕಿಕ ಅಂತ್ಯ ದೊರೆಯುವ ನಿರೀಕ್ಷೆ ಇದರಿಂದ ವ್ಯಕ್ತವಾಗಿದೆ.ಕಾರ್ಕಳ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ರಸ್ತೆ ವಿಸ್ತರಣೆ ಸಾಧಕ ಬಾಧಕ  ಕುರಿತು ಜನ ಪ್ರತಿನಿಧಿಗಳು, ವ್ಯಾಪಾರಸ್ಥರು, ನಾಗರಿಕ ಪ್ರಮುಖರ ಜತೆ ಅವರು ಸುಮಾರು ಎರಡೂವರೆ ಗಂಟೆ  ಚರ್ಚೆ ನಡೆಸಿದರು.ನಗರ ಸೌಂದರ್ಯ, ಮೂಲ ಸೌಕರ್ಯಗಳ ಅಭಿವೃದ್ಧಿ, ಸಂಚಾರ ದಟ್ಟಣೆ ನಿವಾರಣೆ ಮತ್ತು ಭವಿಷ್ಯದ ಅವಶ್ಯಕತೆಗಳ ಹಿನ್ನೆಲೆಯಲ್ಲಿ ಕಾರ್ಕಳ ಮುಖ್ಯರಸ್ತೆ ಅಭಿವೃದ್ಧಿಪಡಿಸುವ ಅನಿವಾರ್ಯತೆ ಇದೆ. ಅದೇ ವೇಳೆ ವಿಸ್ತರಣೆ ಕಾರ್ಯ ಸಾರ್ವಜನಿಕರ ಒಪ್ಪಿಗೆ, ಸಹಭಾಗಿತ್ವ ಮತ್ತು ಸಹಕಾರದಿಂದ ನಡೆಯಬೇಕೆಂಬುದು ಜಿಲ್ಲಾಡಳಿತದ ಆಶಯ.ನಾಗರಿಕರು ಸ್ವಯಂಪ್ರೇರಿತರಾಗಿ ಜಾಗ ಬಿಟ್ಟುಕೊಟ್ಟು ಅಭಿವೃದ್ಧಿಗೆ ಅವಕಾಶ ಮಾಡಿಕೊಡಬೇಕು. ಅದೇ ವೇಳೆ ರಸ್ತೆಗಾಗಿ ವ್ಯಾಪಾರ ವಹಿವಾಟು, ವಾಸದ ಮನೆ ಕಳೆದುಕೊಂಡವರಿಗೆ ಆಡಳಿತ ಪರ್ಯಾಯ ಅನುಕೂಲ ಹೇಗೆ ಮಾಡಬಹುದೆಂಬ ಚಿಂತನೆ ನಡೆಸಿದೆ. ಆಡಳಿತ ಮತ್ತು ನಾಗರಿಕರ ನಡುವೆ ಕೊಡುಕೊಳ್ಳುವ ರೀತಿ ಈ ಪ್ರಶ್ನೆ ಬಗೆಹರಿಯುತ್ತದೆ ಎಂಬ ವಿಶ್ವಾಸವನ್ನು ಜಿಲ್ಲಾಧಿಕಾರಿ ವ್ಯಕ್ತಪಡಿಸಿದರು. ಹಿಂದೆ ನಡೆದ ಸಭೆಯ ಆಧಾರದಲ್ಲಿ ರಸ್ತೆ ವಿಸ್ತರಣೆಗೆ ಗುರುತು ಹಾಕುವ ಮೂಲಕ ನಾಗರಿಕರಿಗೆ ಮಾಹಿತಿ ನೀಡಲಾಗಿದೆ. 60 ಅಡಿ ರಸ್ತೆ ಅಭಿವೃದ್ಧಿಗೆ ಯೋಜಿಸಲಾಗಿದೆ ಎಂದು ಹೇಮಲತಾ ತಿಳಿಸಿದರು.ಉದ್ಯಮಿ ಅನಂತ ಪ್ರಭು ಚರ್ಚೆಯಲ್ಲಿ ಭಾಗವಹಿಸಿ, ಕಾರ್ಕಳದ ರಸ್ತೆ ಇಕ್ಕಟ್ಟಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದು ಪ್ರಮುಖ ಕಾರಣ. ಏಕಮುಖ ಸಂಚಾರ ವ್ಯವಸ್ಥೆ, ಬಂಡೀಮಠಕ್ಕೆ ಬಸ್ ಸ್ಟ್ಯಾಂಡ್ ಸ್ಥಳಾಂತರ ಮುಂತಾದ ಪರ್ಯಾಯಗಳನ್ನು ಪ್ರಯೋಗಿಸಿ. ಅನಿವಾರ್ಯ ಎನಿಸಿದರೆ ಸೀಮಿತ ವಿಸ್ತರಣೆ ಮಾಡಬಹುದು. ಪುರಸಭಾ ಆಡಳಿತ ಈ ನೆಲೆಯಲ್ಲಿ ಯಾವುದೇ ಪ್ರಯತ್ನ ನಡೆಸಿಲ್ಲ. ರಸ್ತೆ ವಿಸ್ತರಣೆಯಿಂದ ಅಂಗಡಿ ಮತ್ತು ಮನೆ  ಜತೆಗೆ ಇರುವವರಿಗೆ ತೀವ್ರ ತೊಂದರೆಯಾಗುತ್ತವೆ ಎಂದು ವಾದಿಸಿದರು.ಮಾಜಿ ಪುರಸಭಾಧ್ಯಕ್ಷ ಕೆ.ಪಿ.ಶೆಣೈ ಪ್ರಸ್ತಾವಿತ ವಿಸ್ತರಣೆಯಿಂ ಪೇಟೆಯಲ್ಲಿ ಅನೇಕರು ಮನೆ-ಮಾರು  ಕಳೆದುಕೊಳ್ಳುವ ಆತಂಕವಿದೆ. ಮೇಲಾಗಿ ರಸ್ತೆಯಂಚಿನ ಹೆಚ್ಚಿನ ಜಾಗಗಳು ವರ್ಗ ಸ್ಥಳವಾಗಿದ್ದು ರಸ್ತೆ ಆಕ್ರಮಿತ ಪ್ರದೇಶಗಳಲ್ಲ. ರಸ್ತೆ ವಿಸ್ತರಣೆ ಮಿತಿ ಕುರಿತಂತೆ ಪುರಸಭೆ ಬಳಿ ನಿರ್ದಿಷ್ಟ ಯೋಜನೆ ಇಲ್ಲ ಎಂದರು. 70-80 ವರ್ಷದ ಹಳೆಯ ಕಟ್ಟಡಗಳನ್ನು ಭಾಗಶಃ ಕೆಡವಬೇಕಾದ ಸಂದರ್ಭದಲ್ಲಿ ಮೂಲ ಕಟ್ಟಡದ ಭದ್ರತೆ ಪ್ರಶ್ನೆ ಪರಿಶೀಲಿಸಬೇಕು ಎಂದು ಉದ್ಯಮಿ ಗಣೇಶ್‌ಪ್ರಸಾದ್ ನಾಯಕ್ ಹೇಳಿದರು.ಮಾಜಿ ಪುರಸಭಾಧ್ಯಕ್ಷ ಚಂದ್ರಹಾಸ ಸುವರ್ಣ, ರಿಂಗ್‌ರೋಡ್ ಸಲಹೆ ನೀಡಿದರೆ, ಸದಸ್ಯ ರವೀಂದ್ರ ಮೊಯಿಲಿ ಎರಡು ಬಸ್ ಓಡಾಡುವಷ್ಟು ಮತ್ತು ಎರಡೂ ಕಡೆ ಫುಟ್‌ಪಾತ್ ನಿರ್ಮಿಸಲು ಬೇಕಾದಷ್ಟೇ ವಿಸ್ತರಣೆ ಸಾಕು ಎಂದರು.ಸದಸ್ಯ ನವೀನ್‌ಚಂದ್ರ ಹೆಗ್ಡೆ ಮಾತನಾಡಿ ಯಾರಿಗೂ ತೊಂದರೆಯಾಗದ ರೀತಿ ರಸ್ತೆ ವಿಸ್ತರಣೆ ಮಾಡುವ ಬಗ್ಗೆ ಪುರಸಭೆ ನಿರ್ಣಯಿಸಿತ್ತೇ ವಿನಹ 60 ಅಡಿ ತೀರ್ಮಾನವಾಗಿರಲಿಲ್ಲ. ನಾಗರಿಕರಿಗೆ ತಪ್ಪು ಸಂದೇಶ ಬೇಡ ಎಂದರು. ಮಸೀದಿ ಬಳಿ ವಿಸ್ತರಣೆ ಮಾಡಿದಲ್ಲಿ ಆವರಣ ಗೋಡೆ ನಿರ್ಮಿಸಿಕೊಡಬೇಕು ಎಂದು ಪುರಸಭಾ ಸದಸ್ಯ ಆಶ್ಫಾಕ್ ಅಹಮದ್ ಮನವಿ ಮಾಡಿದರು.ಕಸ್ತೂರಿ ಎಂಬವರು ಮಾತನಾಡಿ ‘ಅನಂತಶಯನ ರಸ್ತೆಯಲ್ಲಿ ನಮ್ಮ ಮನೆ ಇದೆ. ರಸ್ತೆಗೆ ಜಮೀನು ಬಿಟ್ಟುಕೊಡಲು ನಾವು ತಯಾರಿದ್ದೇವೆ. ಆದರೆ ಉಳಿದ ಸ್ಥಳದಲ್ಲಿ ಎರಡು ಮಹಡಿ ಕಟ್ಟಲು ನಮಗೆ ಅವಕಾಶ ಕೊಡಬೇಕು. ಸದ್ಯ ಪ್ರಾಚ್ಯ ವಸ್ತು ಇಲಾಖೆಯ ಕಾನೂನು, ಮಹಡಿ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತದೆ ಎಂದು ಜಿಲ್ಲಾಧಿಕಾರಿ ಗಮನಸೆಳೆದರು.ಮಾಜಿ ಪುರಸಭಾ ಸದಸ್ಯ ಸುರೇಶ್ ಮಡಿವಾಳ್ ಮಾತನಾಡಿ ಸರ್ವಿಸ್ ಬಸ್‌ಗಳಿಗೆ ನಗರದೊಳಕ್ಕೆ ಪ್ರವೇಶ ಕೊಡದೆ ಸಿಟಿ ಬಸ್ ಸಂಚಾರಕ್ಕೆ ಅವಕಾಶ ನೀಡಿದರೆ ಸಂಚಾರದ ದಟ್ಟಣೆ ಕಡಿಮೆಯಾಗುತ್ತದೆ ಎಂದರು. ತಹಸೀಲ್ದಾರ್ ಜಗನ್ನಾಥ್ ರಾವ್, ಡಿವೈಎಸ್‌ಪಿ ಸಂತೋಷ್ ಕುಮಾರ್, ಪುರಸಭಾಧ್ಯಕ್ಷೆ ಪ್ರತಿಮಾ ಮೋಹನ್, ತಾ.ಪಂ. ಅಧ್ಯಕ್ಷ ಜಯರಾಮ್ ಸಾಲ್ಯಾನ್, ಉಪಾಧ್ಯಕ್ಷ ರವೀಂದ್ರ ಕುಮಾರ್, ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry