ತಾರ್ಕಿಕ ಅಂತ್ಯ ಅಗತ್ಯ

7

ತಾರ್ಕಿಕ ಅಂತ್ಯ ಅಗತ್ಯ

Published:
Updated:

ಆಗಸ್ಟಾ ವೆಸ್ಟ್‌ಲ್ಯಾಂಡ್‌ ಕಂಪೆನಿಯಿಂದ ಹೆಲಿಕಾಪ್ಟರ್‌ಗಳನ್ನು ಖರೀದಿಸುವ ಒಪ್ಪಂದವನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ. ಈ ನಡೆಯ ಹಿಂದೆ, ಸನ್ನಿಹಿತವಾಗುತ್ತಿರುವ ಲೋಕಸಭಾ ಚುನಾವಣೆಯ ಲೆಕ್ಕಾ­ಚಾರ ಇರುವುದನ್ನು ತಳ್ಳಿಹಾಕುವಂತಿಲ್ಲ. ಚುನಾವಣೆ ಸಂದರ್ಭದಲ್ಲಿ ತನ್ನ ವರ್ಚಸ್ಸ­ನ್ನು ಹೆಚ್ಚಿಸಿಕೊಳ್ಳಲು ಹಾಗೂ ಭ್ರಷ್ಟಾಚಾರ ವಿರುದ್ಧದ ತನ್ನ ಇಚ್ಛಾ­ಶಕ್ತಿ ವ್ಯಕ್ತಪಡಿಸಲು ಈ ಪ್ರಕರಣವನ್ನು ಸರ್ಕಾರ ಬಳಸಿಕೊಳ್ಳಲು ಪ್ರಯತ್ನಿ­ಸುತ್ತಿ­ರುವಂತಿದೆ.ಅತಿ ಗಣ್ಯ ವ್ಯಕ್ತಿಗಳ ಓಡಾಟಕ್ಕಾಗಿ ರೂ. 3,600 ಕೋಟಿ  ವೆಚ್ಚ­ದಲ್ಲಿ ಆಗಸ್ಟಾ ವೆಸ್ಟ್‌ಲ್ಯಾಂಡ್‌ ಸಂಸ್ಥೆಯಿಂದ 12 ಹೆಲಿಕಾಪ್ಟರ್‌ಗಳನ್ನು ಖರೀದಿ­­­ಸುವ ಒಪ್ಪಂದವನ್ನು 2010ರಲ್ಲಿ ಮಾಡಿಕೊಳ್ಳಲಾಗಿತ್ತು. ಆದರೆ, ಈ ಗುತ್ತಿಗೆ ಪಡೆಯಲು ಆಂಗ್ಲೊ ಇಟಾಲಿಯನ್‌ ಕಂಪೆನಿ, ಭಾರತೀಯ ರಾಜ­ಕಾರಣಿ­­ಗಳು ಮತ್ತು ಅಧಿಕಾರಿಗಳಿಗೆ ರೂ. 360 ಕೋಟಿ  ಲಂಚ ನೀಡಿದೆ ಎನ್ನುವ ಆರೋಪ ಕೇಳಿಬಂದಿತ್ತು, ಇಟಲಿ ಪೊಲೀಸರು ಕಂಪೆನಿಯ ಅಧಿಕಾರಿ ಗುಸೆಪ್ಪಿ ಒರ್ಸಿ ಅವರನ್ನು ಬಂಧಿಸಿದ್ದರು. ಇದಾದ ಒಂದು ವರ್ಷದ ನಂತರ ಸರ್ಕಾರ ನಿದ್ದೆ­ಯಿಂದ ಎಚ್ಚರವಾದಂತೆ ಒಪ್ಪಂದ ಮುರಿದುಕೊಂಡಿರುವುದು ಈ ಅನು­ಮಾನಕ್ಕೆ ಕಾರಣವಾಗಿದೆ. ಅಲ್ಲದೇ, ಆಗಸ್ಟಾ ವೆಸ್ಟ್‌ಲ್ಯಾಂಡ್‌ ಕಂಪೆನಿಯಿಂದ ಈಗಾಗಲೇ ವಿಲೇವಾರಿ ಆಗಿರುವ ಮೂರು ಹೆಲಿಕಾಪ್ಟರ್‌ಗಳನ್ನು ಏನು ಮಾಡಲಾಗುತ್ತದೆನ್ನುವುದು ಕೂಡ ಪ್ರಶ್ನೆಯಾಗಿಯೇ ಉಳಿದಿದೆ.ಪ್ರಶ್ನೆಗಳ ನಡುವೆಯೂ ಹೆಲಿಕಾಪ್ಟರ್‌ಗಳ ಖರೀದಿ ಒಪ್ಪಂದದಿಂದ ಹೊರ­ಬಂದಿ­ರುವ ಸರ್ಕಾರದ ಕ್ರಮ ಸ್ವಾಗತಾರ್ಹ. ಆದರೆ, ಒಪ್ಪಂದವನ್ನು ರದ್ದು­ಗೊಳಿಸಿದ ಮಾತ್ರಕ್ಕೆ ಕೆಲಸ ಮುಗಿಯುವುದಿಲ್ಲ. ಲಂಚದ ಆರೋಪಕ್ಕೆ ಸಂಬಂಧಿ­ಸಿ­ದಂತೆ ಈಗಾಗಲೇ ನಡೆಯುತ್ತಿರುವ ಸಿಬಿಐ ತನಿಖೆ, ನಿಗದಿತ ಕಾಲ­ಮಿತಿಯಲ್ಲಿ ಪಾರದರ್ಶಕವಾಗಿ ನಡೆಯುವಂತೆ ಸರ್ಕಾರ ನೋಡಿ­ಕೊಳ್ಳ­ಬೇಕಾಗಿದೆ. ಇದೇ ವೇಳೆ, ಇಟಲಿಯಲ್ಲಿ ಕೂಡ ತನಿಖೆ ನಡೆಯುತ್ತಿದ್ದು, ಈ ತನಿಖೆಗಳ ಮೂಲಕ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾದಾಗಲೇ ಪ್ರಕರಣಕ್ಕೆ ತಾರ್ಕಿಕ ಅಂತ್ಯ ದೊರೆತಂತಾಗುತ್ತದೆ.ಈ ನಿಟ್ಟಿನಲ್ಲಿ ಸರ್ಕಾರ ತನ್ನ ಇಚ್ಛಾಶಕ್ತಿಯನ್ನು ಪ್ರದರ್ಶಿ­ಸಬೇಕಾಗಿದೆ. ಈ ಮೊದಲು ಬೊಫೋರ್ಸ್‌ ಲಂಚ ಹಗರಣಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯಂತೆ  ಇದೂ ಕಪಟ ನಾಟಕ­ವಾಗ­ಬಾರದು. ಈ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ. ಪ್ರಸ್ತುತ ಲಂಚ ಆರೋಪದ ಪ್ರಕರಣ ಭಾರತೀಯ ವಾಯುಪಡೆಗೆ ಒಂದು ಕಪ್ಪುಚುಕ್ಕೆಯಾಗಿ ಪರಿಣಮಿಸಿ­ರುವು­ದರಲ್ಲಿ ಅನುಮಾನವಿಲ್ಲ. ವಾಯುಪಡೆಯ ನಿವೃತ್ತ ಮುಖ್ಯಸ್ಥ ಎಸ್‌.ಪಿ. ತ್ಯಾಗಿ ಅವರ ವಿರುದ್ಧ ಆರೋಪಗಳು ಕೇಳಿಬಂದಿರುವುದು ವಿಷಯದ ಸಂಕೀರ್ಣ­ತೆಯನ್ನು ಸೂಚಿಸುವಂತಿದೆ. ರಕ್ಷಣಾ ಪಡೆಗಳಿಗೆ ಸಂಬಂಧಿಸಿದಂತೆ ಇಂಥ ಆರೋಪಗಳು ದೇಶದ ಭದ್ರತಾ ವ್ಯವಸ್ಥೆಯ ಸುರಕ್ಷತೆಯ ಬಗ್ಗೆ ಆತಂಕ ಹುಟ್ಟಿ­ಸುವುದರ ಜೊತೆಗೆ ನೈತಿಕತೆಗೆ ಅಂಟಿದ ಕಳಂಕವೂ ಆಗಿದೆ. ಆಗಸ್ಟಾ ವೆಸ್ಟ್‌­ಲ್ಯಾಂಡ್‌ ಪ್ರಕರಣವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಮೂಲಕ ಈ ಕಳಂಕವನ್ನು ತೊಡೆಯುವ ಕೆಲಸವನ್ನು ಸರ್ಕಾರ ಮಾಡಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry