ಬುಧವಾರ, ಜೂನ್ 16, 2021
22 °C

ತಾಲಿಬಾನ್–ಪಾಕ್ ಸರ್ಕಾರ ಮಧ್ಯೆ ಶಾಂತಿ ಮಾತುಕತೆಯ ಪ್ರಹಸನ

ಪೃಥ್ವಿರಾಜ್‌ ಎಂ.ಎಚ್‌. Updated:

ಅಕ್ಷರ ಗಾತ್ರ : | |

ಉಗ್ರರಿಗೆ ನೆಲೆ ಒದಗಿಸಿದೆ ಎನ್ನುವ ಆರೋಪ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಇನ್ನೇನು ಶಾಂತಿ ಸ್ಥಾಪನೆ ಆಗಲಿದೆ ಎಂದು ಅಲ್ಲಿನ ಜನತೆ ಅಂದು ಕೊಳ್ಳುತ್ತಿರುವಾಗಲೇ ಪಾಕಿಸ್ತಾನ ಸರ್ಕಾರ ಮತ್ತು  ತೆಹ್ರಿಕ್‌–ಎ–ತಾಲಿಬಾನ್‌- -ಪಾಕಿಸ್ತಾನ್‌ (ಟಿಟಿಪಿ) ಉಗ್ರ ಸಂಘಟನೆ ನಡುವಿನ ಶಾಂತಿ ಸಂಧಾನದ ಮಾತುಕತೆ ಹಠಾತ್ತನೇ ಸ್ಥಗಿತಗೊಂಡಿದೆ.  ಭಯೋತ್ಪಾದಕ ದುಷ್ಕೃತ್ಯಗಳನ್ನು ತಡೆದು ಶಾಂತಿ ಸ್ಥಾಪಿಸುವ ಪ್ರಕ್ರಿಯೆ ಆರಂಭಿಸುವುದಾಗಿ ಪಾಕ್‌ ಸರ್ಕಾರ ಹೇಳಿಕೊಂಡು ಟಿಟಿಪಿ ಜೊತೆ ಶಾಂತಿ ಸಂಧಾನ ಮಾತುಕತೆಗೆ ಮುಂದಾಗಿತ್ತು. ಟಿಟಿಪಿ ಉಗ್ರರು 2010ರಲ್ಲಿ ಅಪಹರಿಸಿದ್ದ 23 ಯೋಧರ ಶಿರಚ್ಛೇದನ ಮಾಡಿರುವುದಾಗಿ ಫೆಬ್ರುವರಿ 14ರಂದು ವಿಡಿಯೊ ಹೇಳಿಕೆ ನೀಡಿದ ಬಳಿಕ ಪಾಕ್‌ ಸರ್ಕಾರ ಅವರೊಂದಿಗೆ ಶಾಂತಿ ಮಾತುಕತೆ ನಡೆಸುವುದರಲ್ಲಿ ಅರ್ಥವಿಲ್ಲ ಎಂದು ಹಿಂದೆ ಸರಿಯಿತು. ಈ ಬೆಳವಣಿಗೆಯಿಂದ ಪಾಕಿಸ್ತಾನದ ಜನತೆಗೆ ಮಾತ್ರವಲ್ಲ, ಆಫ್ಘಾನಿಸ್ತಾನ ಮತ್ತು ಭಾರತಕ್ಕೂ  ನಿರಾಸೆಯಾಗಿದೆ. ಉಪ ಖಂಡದಲ್ಲಿ ಶಾಂತಿ ಸ್ಥಾಪಿಸುವ ಉದ್ದೇಶದಿಂದ ಕಳೆದೊಂದು ವರ್ಷದಿಂದ ಜೀವಂತವಾಗಿದ್ದ ಸಂಧಾನ ಮಾತುಕತೆಯ ಪ್ರಕ್ರಿಯೆ ಸ್ವಹಿತಾಸಕ್ತಿಗಳ ಮೇಲಾಟದಿಂದ ತೆರೆಗೆ ಸರಿದಿದೆ.ಪಾಕಿಸ್ತಾನ ಇಸ್ಲಾಂ ಮೂಲಭೂತವಾದಿಗಳ ಕಠೋರ ನಿಲುವುಗಳಿಂದ, ಅಸ್ಥಿರ ರಾಜಕೀಯ, ಭಯೋತ್ಪಾದನೆ ಮತ್ತು ಸೇನಾ ಕ್ರಾಂತಿಯಿಂದ ಸಾಕಷ್ಟು ನಲುಗಿ ಹೋಗಿದ್ದು ಇವತ್ತಿಗೂ ದೇಶದ ಅರ್ಧ ಭಾಗದಲ್ಲಿ ತಾಲಿಬಾನಿ ಮತ್ತು ಅಲ್‌ಖೈದಾ ಉಗ್ರರ ಕಾಟ ಇದೆ.

ಪಾಕಿಸ್ತಾನದಲ್ಲಿ ಕಳೆದೊಂದು ದಶಕದಿಂದ ಅಧಿಕಾರ ನಡೆಸುತ್ತಿರುವ ಸರ್ಕಾರಗಳು ‘ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳ ಕೃಪಾಪೋಷಿತ ಸರ್ಕಾರಗಳು’ ಎಂದೇ ತಾಲಿಬಾನ್‌, ಅಲ್‌ಖೈದಾ ಸೇರಿದಂತೆ ಅಲ್ಲಿನ ಉಗ್ರಗಾಮಿ ಸಂಘಟನೆಗಳು ಬಲವಾಗಿ ನಂಬಿವೆ. ಹಾಗಾಗಿ ಅಲ್ಲಿ ನಿರಂತರವಾಗಿ  ದಾಳಿ ನಡೆಸುತ್ತಲೇ ಬಂದಿವೆ. 2001 ರಿಂದ 2014ರ ಫೆಬ್ರುವರಿ  ಅಂತ್ಯ­ದವರೆಗೂ ಸಾರ್ವಜನಿಕರು, ಸರ್ಕಾರಿ ಅಧಿಕಾರಿಗಳು, ಪೊಲೀಸರು, ಸೈನಿಕರು ವಿವಿಧ ಭಯೋತ್ಪಾದಕ ಕೃತ್ಯಗಳಲ್ಲಿ ಭಾರಿ ಸಂಖ್ಯೆಯಲ್ಲಿ ಬಲಿಯಾಗಿದ್ದಾರೆ. ಪಾಕ್‌ ಸರ್ಕಾರ 2007ರಲ್ಲೇ ತಾಲಿಬಾನ್‌ ಉಗ್ರರ  ಜೊತೆ ಶಾಂತಿ ಮಾತುಕತೆ ಆರಂಭಿಸಿತ್ತು. ವಿಶ್ವಾಸ ಮತ್ತು ಇಚ್ಛಾಶಕ್ತಿಯ ಕೊರತೆಯಿಂದ ಸಂಧಾನ ಮಾತುಕತೆ ಆರಂಭದಲ್ಲೇ ಮುರಿದು ಬಿದ್ದ ನಂತರ ಅಧಿಕಾರಕ್ಕೆ ಬಂದ ಪ್ರಧಾನಿಗಳು ಮಾತುಕತೆ  ಮುಂದುವರಿಸಲು ಆಸಕ್ತಿ ತೋರಿಸಲಿಲ್ಲ. ಈಗ ಸರ್ಕಾರ ಮತ್ತು ಉಗ್ರರ ನಡುವಿನ ಸಂಘರ್ಷಕ್ಕೆ ತೆರೆ  ಎಳೆಯುವುದಾಗಿ ಹೇಳಿ ಸಂಧಾನಕ್ಕೆ ಪ್ರಯತ್ನ ನಡೆಸಿದವರು ಪ್ರಧಾನಿ ನವಾಜ್‌ ಷರೀಫ್.2013ರ ಮಹಾಚುನಾವಣೆ ಸಂದರ್ಭದಲ್ಲಿ ಟಿಟಿಪಿಯೊಂದಿಗೆ ಸಂಧಾನ ಮಾತುಕತೆ ನಡೆಸಿ ದೇಶದಲ್ಲಿ ಶಾಂತಿ ನೆಲೆಸಲು ಪ್ರಯತ್ನಿಸುವುದಾಗಿ ಜನತೆಗೆ ವಚನ ನೀಡಿದ್ದರು. ಚುನಾವಣೆಯಲ್ಲಿ ಗೆದ್ದು ಪ್ರಧಾನಿಯಾದ ಬಳಿಕ ತಾವು ಕೊಟ್ಟ ಮಾತಿಗೆ ಬದ್ಧರಾಗಿ 2013ರ  ಅಕ್ಟೋಬರ್‌ನಲ್ಲಿ ಟಿಟಿಪಿಯನ್ನು ಮಾತುಕತೆಗೆ ಆಹ್ವಾನಿಸಿದಾಗ ಇದನ್ನು ಟಿಟಿಪಿ ಕೂಡ ಸ್ವಾಗತಿಸಿತ್ತು.ಶಾಂತಿ ಪ್ರಕ್ರಿಯೆಗೆ ಪೂರಕವಾಗಿ ನಡೆದ  ಬೆಳವಣಿಗೆಗಳಲ್ಲಿ ಟಿಟಿಪಿಯು ಮೌಲ್ವಿಗಳು ಮತ್ತು ರಾಜಕೀಯ ತಜ್ಞರು ಇದ್ದ ಐವರ ಸಮಿತಿಯನ್ನು ರಚಿಸಿತ್ತು. ಸರ್ಕಾರ ಹಿರಿಯ ಪತ್ರಕರ್ತರು, ಮಾಜಿ ರಾಯಭಾರಿಗಳನ್ನು ಒಳಗೊಂಡ ನಾಲ್ವರು ಸದಸ್ಯರ ಸಮಿತಿಯನ್ನು ರಚಿಸಿ ಅಧಿಕೃತ ಮಾತುಕತೆ ಫೆಬ್ರುವರಿ 17ಮತ್ತು 18 ಎಂದು ದಿನ ಗೊತ್ತು ಮಾಡಿತ್ತು. ಈ ಮಧ್ಯೆ ಕಳೆದ ಜನವರಿಯಲ್ಲಿ ಸರ್ಕಾರ ಮತ್ತು ಟಿಟಿಪಿ ನಡುವೆ ಹಲವು ಸುತ್ತಿನ ಗೌಪ್ಯ ಮಾತುಕತೆಗಳು  ನಡೆದಿವೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.ಈ ವೇಳೆ ಯಾವ ವಿಷಯಗಳು ಚರ್ಚೆಗೆ ಬಂದವು? ಸರ್ಕಾರ ಟಿಟಿಪಿಯ ಕೆಲವೊಂದು ಬೇಡಿಕೆಗಳಿಗೆ ಸಮ್ಮತಿಸಿತ್ತೇ? ಎಂಬುದು ಗೊತ್ತಾಗಲಿಲ್ಲ. ಟಿಟಿಪಿ ಮತ್ತು ಸರ್ಕಾರದ ನಡುವಿನ ಗೌಪ್ಯ ಮಾತುಕತೆಯ ವಿವರ­ಗಳನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಆಗ ವಿರೋಧ ಪಕ್ಷಗಳು ಸರ್ಕಾರವನ್ನು ಒತ್ತಾಯಿಸಿದ್ದವು. ಸಭೆ ನಡೆದಾಗ ಯಾವುದೋ ಲೋಪ ಉಂಟಾಗಿ ಒಮ್ಮತಕ್ಕೆ ಬರಲಾಗದೆ ಗುಪ್ತ ಸಭೆ ವಿಫಲವಾಗಿತ್ತು.

ಟಿಟಿಪಿ ಹುಟ್ಟು ಮತ್ತು ಬೆಳವಣಿಗೆ...

­ಆಫ್ಘಾನಿಸ್ತಾನದಲ್ಲಿ ಸಕ್ರಿಯವಾಗಿರುವ ತಾಲಿಬಾನ್‌ ಉಗ್ರ ಸಂಘಟನೆಯ ಕೂಸೇ ಟಿಟಿಪಿ. ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳ ಕಾರ್ಯಾಚರಣೆಯಿಂದ ದುರ್ಬಲವಾಗಿದ್ದ ಅಲ್ ಖೈದಾ ಸಂಘಟನೆಗೆ ಪರ್ಯಾಯವಾಗಿ ತಾಲಿಬಾನರು 2007ರಲ್ಲಿ ಟಿಟಿಪಿಯನ್ನು ಹುಟ್ಟು ಹಾಕಿದರು. ಆಫ್ಘಾನಿಸ್ತಾನದಲ್ಲಿ ಚಟುವಟಿಕೆ ನಡೆಸುವುದು ಕಠಿಣವಾದಾಗ ತಾಲಿಬಾನ್‌ನ ಎರಡನೇ ಹಂತದ ನಾಯಕರು ಪಾಕಿಸ್ತಾನದ ವಾಯವ್ಯ ಭಾಗದಲ್ಲಿರುವ ಉತ್ತರ ವಜರಿಸ್ತಾನದ ಗುಡ್ಡಗಾಡು ಪ್ರದೇಶಕ್ಕೆ ವಲಸೆ ಬಂದರು. ಸ್ಥಳೀಯ ಉಗ್ರರೊಂದಿಗೆ ಸೇರಿಕೊಂಡು  ಟಿಟಿಪಿ ಬೆಳೆಸುವಲ್ಲಿ ಯಶಸ್ವಿಯಾದರು.ಟಿಟಿಪಿಗೆ ತನ್ನ ಚಟುವಟಿಕೆ ಸಾಧಿಸಲು ಪಾಕಿಸ್ತಾನ ಸೂಕ್ತ ದೇಶ ಎಂದು ಮನದಟ್ಟಾಗಲು ಬಹಳ ದಿನ ಬೇಕಾಗಲಿಲ್ಲ. ಏಕೆಂದರೆ ಇಲ್ಲಿನ ಸರ್ಕಾರಗಳು  ಮೂಲಭೂತವಾದಿಗಳ ಬಿಗಿ ಹಿಡಿತದಲ್ಲಿರುವುದು ಮತ್ತು ಉತ್ತರ ವಜರಿಸ್ತಾನ ಗುಡ್ಡಬೆಟ್ಟ ಪ್ರದೇಶಗಳಿಂದ ಆವೃತವಾಗಿರುವುದು ಟಿಟಿಪಿಗೆ ಬೆಳೆಯಲು ಸುಲಭ­ವಾಯಿತು. ವಜರಿಸ್ತಾನದಲ್ಲಿ ಬಹುತೇಕ ಬುಡಕಟ್ಟು ಜನರೇ ವಾಸವಾಗಿದ್ದು ಅವರೆಲ್ಲ ಅನಕ್ಷರಸ್ಥರಾಗಿರುವು­ದರಿಂದ ಟಿಟಿಪಿಗೆ ತನ್ನ  ಕಾರ್ಯಚಟುವಟಿಕೆ ವಿಸ್ತರಿಸಲು ಮತ್ತಷ್ಟು  ಸಹಕಾರಿಯಾಯಿತು.ಇಂದು ಅಲ್ಲಿ ಸರ್ಕಾರದ ಆಡಳಿತ ಮರೆಯಾಗಿ ಟಿಟಿಪಿಯ ಪ್ರಭುತ್ವ ಇದೆ. ಅಮೆರಿಕದ ಒತ್ತಡದಿಂದಾಗಿ ಪಾಕಿಸ್ತಾನ ಸೇನಾ ಕಾರ್ಯಾಚರಣೆ ತೀವ್ರಗೊಳಿಸಿರು­ವುದ­ರಿಂದ ಟಿಟಿಪಿಗೆ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ. ಈ  ಕಾರಣಕ್ಕೆ ಸಂಧಾನಕ್ಕೆ ಸಮ್ಮತಿಸಿತ್ತು ಎಂದು ಪಾಕಿಸ್ತಾನದ ಗುಪ್ತಚರ ಮೂಲಗಳು ಮಾಹಿತಿ ನೀಡಿವೆ. ಸಂಧಾನ ಮಾತುಕತೆಗೆ ಟಿಟಿಪಿ ವಕ್ತಾರ ಒಮರ್‌ ಖಾಲಿದ್‌ ಖುರಸಾನಿ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದರು. ಉತ್ತರ ವಜರಿಸ್ತಾನ ಪ್ರಾಂತ್ಯದಲ್ಲಿ ಡ್ರೋಣ್‌ ಅಥವಾ ಸೇನಾ ಕಾರ್ಯಾಚರಣೆಗೆ ಅವಕಾಶ ನೀಡಬಾರದು, ಬಂಧನದಲ್ಲಿರುವ ಟಿಟಿಪಿ ಕಾರ್ಯಕರ್ತರನ್ನು ಬಿಡುಗಡೆಗೊಳಿಸಬೇಕು. ಧಾರ್ಮಿಕ ಕಾನೂನು ಪಾಲಿಸುವಂತೆ ಜನತೆಗೆ ಸೂಚಿಸಬೇಕು. ಸರ್ಕಾರ ಅಮೆರಿಕದ ಕೈಗೊಂಬೆಯಂತೆ ವರ್ತಿಸುವುದನ್ನು ನಿಲ್ಲಿಸಬೇಕು– ಇವು ಪ್ರಮುಖ ಬೇಡಿಕೆಗಳು.  ಇವುಗಳನ್ನು ಸಂಧಾನ ಸಭೆಯಲ್ಲಿ ಪರಿಶೀಲಿಸುವುದಾಗಿ ಸರ್ಕಾರ ಹೇಳಿತ್ತು.ಶಾಂತಿ ಮಾತುಕತೆ ನೆಪ ಮಾತ್ರವೇ?

ಟಿಟಿಪಿ ಮತ್ತು ಸರ್ಕಾರದ ನಡುವೆ ಮಾತುಕತೆ ಸ್ಥಗಿತಕ್ಕೆ 23 ಯೋಧರ ತಲೆ ಕತ್ತರಿಸಿರುವುದು ಪ್ರಮುಖ ಕಾರಣ ಎಂಬುದು ಮೇಲ್ನೋಟಕ್ಕೆ ಗೋಚರಿಸುವ ಸತ್ಯ. ಆದರೆ ಬೇರೆಯದೇ ಕಾರಣಗಳಿವೆ ಎಂದು ರಾಜಕೀಯ ಪಂಡಿತರು ಹೇಳುತ್ತಾರೆ.ಪರಸ್ಪರರಲ್ಲಿ ವಿಶ್ವಾಸ, ಸಮನ್ವಯದ ಕೊರತೆ ಎದ್ದು ಕಾಣುತ್ತಿತ್ತು. 2013ರ ಅಕ್ಟೋಬರ್‌ನಲ್ಲಿ ಮಾತುಕತೆಗೆ ಒಪ್ಪಿದಾಗ ಕದನ ವಿರಾಮಕ್ಕೆ ಟಿಟಿಪಿ ಮುಖ್ಯಸ್ಥ ಮೌಲಾನ ಫಜಾಲುಲ್ಲಾ ಒಪ್ಪಿಕೊಂಡಿದ್ದರು. ಸರ್ಕಾರ ಕೂಡ ವಜರಿಸ್ತಾನದಲ್ಲಿ ಕಾರ್ಯಾಚರಣೆ ನಡೆಸುವು­ದನ್ನು ಸ್ಥಗಿತಗೊಳಿಸುವುದಾಗಿ ಹೇಳಿಕೆ ನೀಡಿತ್ತು.ಆದರೆ ಸರ್ಕಾರ ಮತ್ತು ಟಿಟಿಪಿ ತಮ್ಮ ಹೇಳಿಕೆಗಳಿಗೆ ಅನುಗುಣವಾಗಿ ನಡೆದುಕೊಳ್ಳಲಿಲ್ಲ. ಸರ್ಕಾರ ಅಮೆರಿಕದ ಒತ್ತಡಕ್ಕೆ ಮಣಿದು ಗೌಪ್ಯವಾಗಿ ಸೇನಾ ಕಾರ್ಯಾಚರಣೆಯನ್ನು ಮುಂದುವರಿಸಿತ್ತು. ಇತ್ತ ಟಿಟಿಪಿಯು ಸೇನಾ ಯೋಧರು, ಸರ್ಕಾರಿ ಅಧಿಕಾರಿಗಳು ಮತ್ತು ಪೊಲೀಸರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದನ್ನು ನಿಲ್ಲಿಸಲಿಲ್ಲ.ಸರ್ಕಾರವಾಗಲಿ, ಉಗ್ರರಾಗಲಿ ಶಾಂತಿ ಮಾತುಕತೆ ನಡೆಸುವ ಹೇಳಿಕೆಗಳನ್ನು ನೀಡಿ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾದರೇ ವಿನಾ ಶಾಂತಿ ಸಾಧನೆಯ ಗುರಿ ತಲುಪುವ ಇಚ್ಛಾಶಕ್ತಿಯನ್ನು ಪ್ರದರ್ಶಿಸಲಿಲ್ಲ.  ಸರ್ಕಾರಕ್ಕೆ ಹೇಗೆ ಉತ್ತರ ಕೊಡಬೇಕು ಎಂಬುದು ತಮಗೆ ಗೊತ್ತು ಎಂದು ಟಿಟಿಪಿ ವಕ್ತಾರ ಖುರಸಾನಿ ಎಚ್ಚರಿಕೆ ನೀಡುತ್ತಿದ್ದರೆ ಸರ್ಕಾರ ಮಾತ್ರ ಸಂಧಾನ ಮಾತುಕತೆಗೆ ತಾನು ಬದ್ಧ ಎಂದು

ಹೇಳುತ್ತಲೇ ಬಂದಿತ್ತು.ವಾಸ್ತವವಾಗಿ ಟಿಟಿಪಿಗೆ ಸಂಧಾನ ಮಾತುಕತೆ ಬೇಕಾಗಿಯೇ ಇರಲಿಲ್ಲ. ಸಂಘರ್ಷವನ್ನು ಜೀವಂತವಾಗಿಟ್ಟುಕೊಂಡು, ಸರ್ಕಾರವನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಮತ್ತು  ವಜರಿಸ್ತಾನದಲ್ಲಿ ಪ್ರಾಬಲ್ಯ ಸಾಧಿಸುವುದು ಅದರ ಮುಖ್ಯ ಗುರಿಯಾಗಿತ್ತು ಎನ್ನಲಾಗಿದೆ.

ಸೈನಿಕರ ಹತ್ಯೆಯ ಬಳಿಕ ಟಿಟಿಪಿಯ ಮತ್ತೊಬ್ಬ ವಕ್ತಾರ ಶಹಾಬುದ್ದೀನ್‌ ಸೈಯದ್‌ ಪ್ರಕಟಣೆಯೊಂದನ್ನು ನೀಡಿ ‘ಸರ್ಕಾರ ಶಾಂತಿ ಮಾತುಕತೆ ಎಂದು ಹೇಳಿಕೊಂಡು ವಜರಿಸ್ತಾನದಲ್ಲಿ  ಅಮೆರಿಕದ ಸೂಚನೆ ಮೇರೆಗೆ ಕಾರ್ಯಾಚರಣೆ ನಡೆಸುತ್ತಿದೆ. ನಾವು ಮತ್ತಷ್ಟು ವಿಧ್ವಂಸಕ ಕೃತ್ಯಗಳನ್ನು ನಡೆಸಲಿದ್ದೇವೆ’ ಎಂದು ಹೇಳಿದ್ದ. ಇತ್ತ ಪ್ರಧಾನಿ ನವಾಜ್ ಷರೀಫ್ ಸೈನಿಕರ ಹತ್ಯೆ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡದೆ ಘಟನೆಯನ್ನು ಖಂಡಿಸಿ ಮಾತುಕತೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದರು.ಈ ಬೆಳವಣಿಗೆಗಳನ್ನು ಗಮನಿಸಿದರೆ ಮಾತುಕತೆ ಘೋಷಣೆಯಾದ ದಿನದಿಂದ ಮುರಿದು ಬೀಳುವ ತನಕ ಸರ್ಕಾರ ಮತ್ತು ಟಿಟಿಪಿ ಮಧ್ಯೆ ಸಮನ್ವಯತೆ ಸಾಧ್ಯವಾಗಿರಲಿಲ್ಲ ಎನ್ನುವುದು ಗೊತ್ತಾಗುತ್ತದೆ.  ಎಲ್ಲಕ್ಕಿಂತ ಮುಖ್ಯವಾಗಿ ಟಿಟಿಪಿಗೆ ಅಂತರರಾಷ್ಟ್ರೀಯ ಸಮುದಾಯಕ್ಕೆ ತಾನು ಸಹ ಶಾಂತಿ ಮಂತ್ರ ಜಪಿಸುವುದನ್ನು ಮನವರಿಕೆ ಮಾಡಿಕೊಡಬೇಕಾಗಿತ್ತು.ನವಾಜ್‌ ಷರೀಫ್ ಅವರಿಗೂ ಜನತೆಗೆ ನೀಡಿದ್ದ ವಚನವನ್ನು ಈಡೇರಿಸುವ ಪ್ರಯತ್ನ ಮಾಡಬೇಕಿತ್ತು. ಇಲ್ಲಿ ಇಬ್ಬರ ಹಿತಾಸಕ್ತಿಗಳು ಶಾಂತಿ ಮಾತುಕತೆ ಎಂಬ ಕಪಟ ನಾಟಕವಾಗಿ ರೂಪತಾಳಿದವೇ ಎಂಬ ಸಂದೇಹ ಮೂಡುತ್ತಿದೆ. ಕಳೆದ ಮಂಗಳವಾರ ತಾಲಿಬಾನ್ ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರಿಸು­ವು­ದರ ಜತೆಗೆ ಶಾಂತಿ ಮಾತುಕತೆ ಮತ್ತೆ ಆರಂಭಿಸಲು ಮುಂದಾಗುವುದಾಗಿ ಪಾಕ್ ಸರ್ಕಾರ ಹೇಳಿದೆ! ಅದೇ ದಿನ ಸೇನೆ ವಜರಿಸ್ತಾನದ ಕಣಿವೆಯಲ್ಲಿ 30 ತಾಲಿಬಾನ್ ಉಗ್ರರನ್ನು ವೈಮಾನಿಕ ದಾಳಿ ನಡೆಸಿ ಸಾಯಿಸಿದೆ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.