ತಾಲಿಬಾನ್ ಅಟ್ಟಹಾಸಕ್ಕೆ 41 ಬಲಿ

7
ಪಾಕಿಸ್ತಾನದಲ್ಲಿ 21 ಸೈನಿಕರು, 20 ಯಾತ್ರಾರ್ಥಿಗಳ ಹತ್ಯೆ

ತಾಲಿಬಾನ್ ಅಟ್ಟಹಾಸಕ್ಕೆ 41 ಬಲಿ

Published:
Updated:
ತಾಲಿಬಾನ್ ಅಟ್ಟಹಾಸಕ್ಕೆ 41 ಬಲಿ

ಇಸ್ಲಾಮಾಬಾದ್/ಕರಾಚಿ (ಪಿಟಿಐ): ಪಾಕಿಸ್ತಾನದ ಪೆಷಾವರ ಮತ್ತು ಖ್ವೆಟ್ಟಾದಲ್ಲಿ ತಾಲಿಬಾನ್ ಉಗ್ರರು ನಡೆಸಿದ ಎರಡು ಪ್ರತ್ಯೇಕ ದಾಳಿಗಳಲ್ಲಿ 21 ಭದ್ರತಾ ಸಿಬ್ಬಂದಿ ಮತ್ತು 20 ಯಾತ್ರಿಗಳು ಸೇರಿದಂತೆ ಒಟ್ಟು 41 ಜನರು ಬಲಿಯಾಗಿದ್ದಾರೆ.  ಒಂದು ಪ್ರಕರಣದಲ್ಲಿ, ತಾಲಿಬಾನ್ ಉಗ್ರರು ಗುರುವಾರ ಬೆಳಗಿನ ಜಾವ ಪೆಷಾವರ ಬಳಿಯ ಚೆಕ್‌ಪೋಸ್ಟ್‌ನಿಂದ ಅಪಹರಿಸಿದ್ದ 21 ಭದ್ರತಾ ಸಿಬ್ಬಂದಿಯನ್ನು ಸಾಮೂಹಿಕವಾಗಿ ಹತ್ಯೆ ಮಾಡಿದ್ದಾರೆ.ಭದ್ರತಾ ಸಿಬ್ಬಂದಿಯ ಸಮವಸ್ತ್ರ ತೊಟ್ಟಿದ್ದ  200ಕ್ಕೂ ಹೆಚ್ಚು ಉಗ್ರರು ಏಕಕಾಲಕ್ಕೆ ಮೂರು ಚೆಕ್‌ಪೋಸ್ಟ್ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದರು. ದಾಳಿಯ ಕಾಲಕ್ಕೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದರು. ಉಳಿದ 23 ಭದ್ರತಾ ಸಿಬ್ಬಂದಿಯನ್ನು ಅಪಹರಿಸಿ ಕ್ರಿಕೆಟ್ ಮೈದಾನವೊಂದಕ್ಕೆ ಒಯ್ದ ಉಗ್ರರು ಅವರ ಕೈಗಳನ್ನು ಕಟ್ಟಿ ಗುಂಡಿನ ಮಳೆಗರೆದರು. 21 ಜನರು ಸ್ಥಳದಲ್ಲಿಯೇ ಮೃತಪಟ್ಟರು.

ಗುಂಡೇಟಿನಿಂದ ಗಾಯಗೊಂಡು ಉಗ್ರರಿಂದ ತಪ್ಪಿಸಿಕೊಂಡು ಬಂದ ಇಬ್ಬರ ಪೈಕಿ ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ. ಭದ್ರತಾ ಸಿಬ್ಬಂದಿಯ ಶವಗಳನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ದಾಳಿ ಕಾಲಕ್ಕೆ ಚೆಕ್‌ಪೋಸ್ಟ್‌ನಲ್ಲಿದ್ದ ವಾಹನ, ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ಉಗ್ರರು ಕೊಂಡೊಯ್ದಿದ್ದಾರೆ.20 ಯಾತ್ರಾರ್ಥಿಗಳ ಸಾವು: ಮತ್ತೊಂದು ಪ್ರಕರಣದಲ್ಲಿ, ನೆರೆಯ ಇರಾನ್ ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ಮರಳುತ್ತಿದ್ದ ಶಿಯಾ ಮುಸ್ಲಿಮರ ಯಾತ್ರಿಗಳಿದ್ದ ಮೂರು ಬಸ್‌ಗಳನ್ನು ಗುರಿಯಾಗಿಸಿಕೊಂಡು ನಡೆದ ಆತ್ಮಾಹತ್ಯಾ ಕಾರ್ ಬಾಂಬ್ ಸ್ಫೋಟದಲ್ಲಿ ಕನಿಷ್ಠ 21 ಯಾತ್ರಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಇರಾನ್‌ನ ತಫ್ತಾನ್‌ಗೆ ಭೇಟಿ ನೀಡಿ ಬಲೂಚಿಸ್ತಾನದ ರಾಜಧಾನಿ ಖ್ವೆಟ್ಟಾಕ್ಕೆ ಹಿಂದಿರುಗುತ್ತಿದ್ದ ವೇಳೆ ಮಾಸ್ತುಂಗ್ ಜಿಲ್ಲೆಯ ಡ್ರಿಂಗಡ ಬಳಿ ದಾಳಿ ನಡೆದಿದೆ. ಸ್ಫೋಟಕಗಳನ್ನು ತುಂಬಿದ್ದ ಕಾರು ಮೊದಲು ಬಸ್‌ಗೆ ಡಿಕ್ಕಿ ಹೊಡೆದಾಗ ಭಾರಿ ಸ್ಫೋಟ ಕೇಳಿಬಂದಿತು. ಅದರ ಹಿಂದಿದ್ದ ಉಳಿದ ಎರಡು ಬಸ್‌ಗಳಿಗೂ ಬೆಂಕಿ ವ್ಯಾಪಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.20 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಬಸ್‌ನಲ್ಲಿದ್ದ ಅನೇಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಇದಕ್ಕೂ ಮೊದಲು ಜನವರಿಯಲ್ಲಿ ನಡೆದ ಇಂತಹುದೇ ದಾಳಿಯಲ್ಲಿ 14 ಯಾತ್ರಿಗಳು ಮೃತಪಟ್ಟಿದ್ದರು. ಶಿಯಾ ಮುಸ್ಲಿಮರ ಹಜಾರಾ ಪಂಗಡವನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಯುತ್ತಿವೆ. ತೆಹ್ರಿಕ್-ಎ-ತಾಲಿಬಾನ್ ಮತ್ತು ಇನ್ನಿತರ ಉಗ್ರಗಾಮಿ ಸಂಘಟನೆಗಳು ಈ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry