ಭಾನುವಾರ, ಆಗಸ್ಟ್ 18, 2019
23 °C

ತಾಲಿಬಾನ್ ಬೆದರಿಕೆ: ಪಾಕ್‌ನಲ್ಲಿ ಕಟ್ಟೆಚ್ಚರ

Published:
Updated:

ಇಸ್ಲಾಮಾಬಾದ್ (ಪಿಟಿಐ): ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸುವುದಾಗಿ ತಾಲಿಬಾನ್ ಬೆದರಿಕೆ ಹಾಕಿರುವುದರಿಂದ ಪಾಕಿಸ್ತಾನದಾದ್ಯಂತ ಕಟ್ಟೆಚ್ಚರ ಘೋಷಿಸಲಾಗಿದ್ದು, ವ್ಯಾಪಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.ಸೇನೆ, ವಾಯುಸೇನೆ ಮತ್ತು ನೌಕಾಪಡೆ ಕಮಾಂಡೊಗಳು ಜಂಟಿಯಾಗಿ ಭದ್ರತಾ ವ್ಯವಸ್ಥೆಯ ಹೊಣೆ ಹೊತ್ತಿವೆ. ರಾವಲ್ಪಿಂಡಿಯ ಬೆನಜೀರ್ ಭುಟ್ಟೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ರಾಜಧಾನಿ ಇಸ್ಲಾಮಾಬಾದ್‌ನಲ್ಲಿರುವ ಪ್ರಮುಖ ಸ್ಥಳಗಳನ್ನು ಭಾನುವಾರವೇ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿವೆ.`ಕಾರಾಗೃಹಗಳು, ಸಂಸತ್ತು, ರಾಯಭಾರ ಕಚೇರಿಗಳು, ಪಂಚತಾರಾ ಹೋಟೆಲ್‌ಗಳು ಸೇರಿದಂತೆ ಅತಿ ಗಣ್ಯರಿರುವ ಸ್ಥಳಗಳಿಗೆ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ದೇಶದಾದ್ಯಂತ ಉನ್ನತಮಟ್ಟದ ಭದ್ರತಾ ವ್ಯವಸ್ಥೆ ಮಾಡಲಾಗಿದೆ' ಎಂದು ಇಸ್ಲಾಮಾಬಾದ್ ಪೊಲೀಸ್ ಇಲಾಖೆ ಮುಖ್ಯಸ್ಥ ಸಿಕಂದರ್ ಹಯಾತ್ ತಿಳಿ ಸಿದ್ದಾರೆ.ತಾಲಿಬಾನ್ ಉಗ್ರರು ಪ್ರಮುಖ ಕಟ್ಟಡಗಳನ್ನು ಗುರಿಯಾಗಿರಿಸಿ ದಾಳಿ ಮತ್ತು ಜನರನ್ನು ಅಪಹರಿಸುವ ಸಂಚು ರೂಪಿಸಿರುವ ಖಚಿತ ಮಾಹಿತಿಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.ಹೋದ ವಾರ ತಾಲಿಬಾನ್ ಉಗ್ರರು ಡೇರಾ ಇಸ್ಲಾಯಿಲ್ ಖಾನ್ ಜೈಲಿನ ಮೇಲೆ ದಾಳಿ ನಡೆಸಿದ್ದರು. ಈ ವೇಳೆ 252 ಉಗ್ರರು ಪರಾರಿಯಾಗಿದ್ದರು. ಈಗ ಅದಕ್ಕಿಂತ ದೊಡ್ಡಮಟ್ಟದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಬೇಹುಗಾರಿಕೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.19 ರಾಯಭಾರ ಕಚೇರಿ ಮುಚ್ಚಿದ ಅಮೆರಿಕ

ವಾಷಿಂಗ್ಟನ್(ಪಿಟಿಐ):
ರಾಯಭಾರ ಕಚೇರಿಗಳನ್ನು ಗುರಿಯಾಗಿರಿಸಿಕೊಂಡು ಭಯೋತ್ಪಾದನಾ ಸಂಘಟನೆ ಅಲ್ ಖೈದಾ ಸಂಘಟನೆ  ಇತ್ತೀಚಿನ ವರ್ಷಗಳಲ್ಲಿ ಬೆದರಿಕೆ ಹಾಕುತ್ತಿರುವ ಹಿನ್ನೆಲೆಯಲ್ಲಿ ಮಧ್ಯ ಏಷ್ಯಾ ಹಾಗೂ ಉತ್ತರ ಆಫ್ರಿಕಾದಲ್ಲಿನ 19 ರಾಯಭಾರ ಕಚೇರಿಗಳನ್ನು ಆಗಸ್ಟ್ 10 ರವರೆಗೆ  ಅಮೆರಿಕ ಮುಚ್ಚಿದೆ. ಮೊದಲ ಹಂತದಲ್ಲಿ ಶನಿವಾರದವರೆಗೆ  22 ರಾಜತಾಂತ್ರಿಕ ಕಚೇರಿಗಳನ್ನು ಅಮೆರಿಕ ಮುಚ್ಚಿತ್ತು. ಅಲ್ ಖೈದಾ ಸಂಘಟನೆಯಿಂದ ಆಗಸ್ಟ್‌ನಲ್ಲಿ ಮಧ್ಯ ಏಷ್ಯಾದಲ್ಲಿ ದಾಳಿ ನಡೆಸುವ ಸೂಚನೆ ದೊರೆತ ಕಾರಣ ಅಮೆರಿಕ ತನ್ನ ಪ್ರಜೆಗಳು ಜಾಗರೂಕರಾಗಿರುವಂತೆ ತಿಳಿಸಿತ್ತು.ಇದೊಂದು ಹೊಸ ರೀತಿಯ ಬೆದರಿಕೆ ಅಲ್ಲ. ಬದಲಿಗೆ ತನ್ನ ಉದ್ಯೋಗಿಗಳನ್ನು ಹಾಗೂ ದೇಶಕ್ಕೆ ಭೇಟಿ ನೀಡುವ ಪ್ರವಾಸಿಗರು ರಕ್ಷಣೆಗೆ ದೇಶ ಕೈಗೊಳ್ಳುವ ಮುನ್ನೆಚ್ಚರಿಕೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.`ನಮ್ಮ ರಾಯಭಾರ ಕಚೇರಿ ಹಾಗೂ ಕಾನ್ಸುಲೇಟ್‌ಗಳನ್ನು ಪ್ರತಿ ವರ್ಷದ ಪದ್ಧತಿಯಂತೆ ರಂಜಾನ್ ಸಲುವಾಗಿ ಮುಚ್ಚಲಾಗಿದೆ. ಅದೇ ರೀತಿ ಮುನ್ನೆಚ್ಚರಿಕೆ ಕ್ರಮವಾಗಿ ಸಣ್ಣ ರಾಯಭಾರ ಕಚೇರಿ, ಕಾನ್ಸುಲೇಟ್ ಹಾಗೂ ಸಣ್ಣ ಅಧಿಕಾರಿಗಳ ಕೆಲಸ ಸ್ಥಗಿತ ಗೊಳಿಸಿದ್ದೇವೆ' ಎಂದು ಸರ್ಕಾರದ ವಕ್ತಾರರು ಹೇಳಿದ್ದಾರೆ.

Post Comments (+)