ಭಾನುವಾರ, ಮೇ 9, 2021
27 °C
ಪೊಲೀಸ್ ತಿದ್ದುಪಡಿ ಮಸೂದೆಗೆ ವಿರೋಧ ಪಕ್ಷಗಳ ಆಕ್ಷೇಪ

`ತಾಲ್ಲೂಕಿಗೊಬ್ಬರು ಗೃಹ ಸಚಿವರು ಬೇಕೆ?'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೊಲೀಸ್ ಸಿಬ್ಬಂದಿ ಮಂಡಳಿಯ ಸ್ವರೂಪದಲ್ಲಿ ಬದಲಾವಣೆ ತರುವ ಕರ್ನಾಟಕ ಪೊಲೀಸ್ (ತಿದ್ದುಪಡಿ) ಮಸೂದೆಗೆ ಮಂಗಳವಾರ ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯರ ಸಭಾತ್ಯಾಗದ ನಡುವೆ ಅಂಗೀಕಾರ ದೊರೆಯಿತು. ವಿಧಾನಸಭೆಯಲ್ಲಿ ಸೋಮವಾರವೇ ಈ ಮಸೂದೆಗೆ ಒಪ್ಪಿಗೆ ಸಿಕ್ಕಿತ್ತು.ಗೃಹ ಸಚಿವ ಕೆ.ಜೆ. ಜಾರ್ಜ್, ಮಸೂದೆ ಮಂಡಿಸುತ್ತಿದ್ದಂತೆ ಜೆಡಿಎಸ್‌ನ ಎಂ.ಸಿ. ನಾಣಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದರು. `ಪೊಲೀಸ್ ವ್ಯವಸ್ಥೆ ಸರ್ಕಾರದ ಹಸ್ತಕ್ಷೇಪದಿಂದ ಮುಕ್ತವಾಗಿರಬೇಕು ಎಂಬುದು ಸುಪ್ರೀಂ ಕೋರ್ಟ್ ಆಶಯವಾಗಿದೆ. ಆದರೆ, ತಿದ್ದುಪಡಿ ಈ ಉದ್ದೇಶಕ್ಕೆ ವಿರುದ್ಧವಾಗಿದೆ' ಎಂದು ದೂರಿದರು.`ಪೊಲೀಸ್ ವ್ಯವಸ್ಥೆಯಲ್ಲಿ ಸರ್ಕಾರದ ಹಸ್ತಕ್ಷೇಪಕ್ಕೆ ಅವಕಾಶ ಸಿಕ್ಕರೆ ಪ್ರತಿ ತಾಲ್ಲೂಕಿನಲ್ಲಿ ಶಾಸಕರ ರೂಪದಲ್ಲಿ ಒಬ್ಬೊಬ್ಬ ಗೃಹ ಸಚಿವರು ಹುಟ್ಟಿಕೊಳ್ಳುತ್ತಾರೆ. ಅದಕ್ಕೆ ಅವಕಾಶ ಬೇಕೆ' ಎಂದು ಪ್ರಶ್ನಿಸಿದರು. `ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಕ್ಕಿಂತ ವೈಯಕ್ತಿಕ ಹಿತಾಸಕ್ತಿಗಳೇ ಆಗ ಮುಖ್ಯವಾಗುತ್ತವೆ. ಪೊಲೀಸ್ ಸಿಬ್ಬಂದಿ ಮಂಡಳಿ ಕೈಗೊಂಡ ನಿರ್ಣಯವನ್ನು ಮಾರ್ಪಾಡು ಮಾಡಲು ಸರ್ಕಾರಕ್ಕೆ ನೀಡಿರುವ ಅಧಿಕಾರವನ್ನು ವಾಪಸು ಪಡೆಯಬೇಕು' ಎಂದು ಒತ್ತಾಯಿಸಿದರು.ಡಾ.ಎ.ಎಚ್. ಶಿವಯೋಗಿಸ್ವಾಮಿ, `ದುರ್ನಡತೆ ಹಾಗೂ ನಿರ್ಲಕ್ಷ್ಯದಿಂದ ಕರ್ತವ್ಯ ಮಾಡಿದವರಿಗೆ ವರ್ಗಾವಣೆ ಶಿಕ್ಷೆ ಎನಿಸುವುದಿಲ್ಲ. ಅಂತಹವರನ್ನು ಕೆಲಸದಿಂದ ವಜಾ ಮಾಡಬೇಕು. ಅದಕ್ಕೆ ಅವಕಾಶ ಕಲ್ಪಿಸುವ ನಿಯಮ ಅಳವಡಿಸಬೇಕು' ಎಂದು ಪಟ್ಟು ಹಿಡಿದರು.ಗೋ. ಮಧುಸೂಧನ, `ಠಾಣೆಗಳಲ್ಲಿ ಹಫ್ತಾ ವಸೂಲಿ ರಾಜಾರೋಷವಾಗಿ ನಡೆದಿದೆ. ಆಯಕಟ್ಟಿನ ಸ್ಥಳಗಳು ಹರಾಜು ಆಗುತ್ತಿವೆ. ವರ್ಗಾವಣೆ ಅಧಿಕಾರ ಹೊಂದುವ ಮೂಲಕ ಪೊಲೀಸ್ ವ್ಯವಸ್ಥೆ ಮೇಲೆ ಹಿಡಿತ ಸಾಧಿಸುವ ಹುನ್ನಾರ ನಡೆದಿದೆ. ಮಸೂದೆಗೆ ನಮ್ಮ ಒಪ್ಪಿಗೆ ಇಲ್ಲ' ಎಂದು ತಿಳಿಸಿದರು. ಬಿ.ಜೆ. ಪುಟ್ಟಸ್ವಾಮಿ, ಗಣೇಶ್ ಕಾರ್ಣಿಕ್ ಸಹ ಮಸೂದೆಗೆ ವಿರೋಧ ವ್ಯಕ್ತಪಡಿಸಿದರು.ಉತ್ತರ ನೀಡಿದ ಸಚಿವ ಜಾರ್ಜ್, `ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಉದ್ದೇಶದಿಂದಲೇ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮಸೂದೆ ಸಿದ್ಧಪಡಿಸಲಾಗಿದೆ. ಪೊಲೀಸ್ ಸಿಬ್ಬಂದಿ ಮಂಡಳಿ ಸದ್ಯದ ರೂಪದಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ. ನಕ್ಸಲ್ ವಿರೋಧಿ ಪಡೆ ರಚಿಸುವಾಗಲೂ ಅದರಿಂದ ಸಹಕಾರ ಸಿಗಲಿಲ್ಲ. ಇದುವರೆಗಿನ ಲೋಪ- ದೋಷಗಳನ್ನು ಹೊಸ ಮಸೂದೆ ಸರಿಪಡಿಸಲಿದೆ' ಎಂದು ವಿವರಿಸಿದರು.ಸಚಿವರ ವಿವರಣೆಗೆ ತೃಪ್ತರಾಗದ ವಿರೋಧ ಪಕ್ಷದ ಸದಸ್ಯರು, `ಮಸೂದೆಗೆ ಈಗಲೇ ಅಂಗೀಕಾರ ಪಡೆಯುವುದು ಬೇಡ. ಇನ್ನಷ್ಟು ವಿಸ್ತೃತ ಚರ್ಚೆ ನಡೆಯಬೇಕಿದೆ' ಎಂದು ಒತ್ತಾಯಿಸಿದರು. ಸರ್ಕಾರ ಅಂಗೀಕಾರ ಪಡೆಯಲು ಮುಂದಾದಾಗ ಕೆ.ಬಿ. ಶಾಣಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ಬಳಿಕ ಮಸೂದೆಗೆ ಧ್ವನಿ ಮತದ ಒಪ್ಪಿಗೆ ದೊರೆಯಿತು.ಬಾಲಕ್ಕೆ ಬಲ

`ಪೊಲೀಸ್ ತಿದ್ದುಪಡಿ ಮಸೂದೆ ಯಥಾವತ್ ರೂಪದಲ್ಲಿ ಜಾರಿಗೆ ಬಂದರೆ ಬಾಲವೇ ನಾಯಿಯನ್ನು ಅಲ್ಲಾಡಿಸಲು ಅವಕಾಶ ಕೊಟ್ಟಂತಾಗುತ್ತದೆ. ಪೊಲೀಸ್ ಅಧಿಕಾರಿಯೊಬ್ಬರು ಪೇದೆಯನ್ನು ವರ್ಗ ಮಾಡುತ್ತಾರೆ. ಆತ ಶಾಸಕರ ಮೂಲಕ ಸಚಿವರ ಮೇಲೆ ಒತ್ತಡ ಹೇರಿ, ವರ್ಗಾವಣೆಯನ್ನು ರದ್ದು ಮಾಡಿಸಿಕೊಳ್ಳುತ್ತಾನೆ. ಅಧಿಕಾರಿಗಳ ನೈತಿಕ ಸ್ಥೈರ್ಯ ಇಂತಹ ಘಟನೆಗಳಿಂದ ಕುಗ್ಗಲಿದೆ'.

- ರಾಮಚಂದ್ರಗೌಡ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.