ತಾಲ್ಲೂಕುಗಳ ಪಟ್ಟಿಯಲ್ಲಿ ಅಕ್ಕಿಆಲೂರು ಸೇರುವುದೇ?

7

ತಾಲ್ಲೂಕುಗಳ ಪಟ್ಟಿಯಲ್ಲಿ ಅಕ್ಕಿಆಲೂರು ಸೇರುವುದೇ?

Published:
Updated:

ಅಕ್ಕಿಆಲೂರ: ರಾಜ್ಯದಲ್ಲಿಯೇ ದೊಡ್ಡ ತಾಲ್ಲೂಕುಗಳಲ್ಲಿ ಒಂದೆನಿಸಿರುವ ಹಾನಗಲ್ಲ ತಾಲ್ಲೂಕು ಸುಮಾರು 150 ಕ್ಕೂ ಹೆಚ್ಚು ಗ್ರಾಮಗಳನ್ನು ಒಗೊಂಡಿದೆ. ಸುಲಭ ಆಡಳಿತದ ದೃಷ್ಟಿಯಿಂದ ಈ ತಾಲ್ಲೂಕನ್ನು ವಿಭಜಿಸಿ ಅಕ್ಕಿಆಲೂರನ್ನು ಕೇಂದ್ರವಾಗಿಟ್ಟುಕೊಂಡು ಹೊಸ ತಾಲ್ಲೂಕನ್ನು ರಚಿಸಬೇಕೆನ್ನುವ ಕೂಗು ಈ ಪ್ರದೇಶದಿಂದ ಕಳೆದ ಹಲವಾರು ವರ್ಷಗಳಿಂದ ಕೇಳಿ ಬರುತ್ತಿದೆ.ಒಟ್ಟು 774 ಚ.ಕಿ.ಮೀ.ನಷ್ಟು ಭೌಗೋಳಿಕ ವಿಸ್ತೀರ್ಣ ಹೊಂದಿರುವ ಹಾನಗಲ್ಲ ತಾಲ್ಲೂಕು ಒಂದು ಪುರಸಭೆ ಹಾಗೂ 40 ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಿದ್ದು ಸುಮಾರು ನಾಲ್ಕು ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ತಾಲ್ಲೂಕಿನಲ್ಲಿ ಹಾನಗಲ್ಲನ್ನು ಹೊರತು ಪಡಿಸಿದರೆ ನಂತರದ ದೊಡ್ಡ ಹಾಗೂ ಪ್ರಮುಖ ಊರು ಅಕ್ಕಿಆಲೂರ.ಶಿರಸಿ- ಮೊಳಕಾಲ್ಮೂರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಊರು ಭೌಗೋಳಿಕ, ಶೈಕ್ಷಣಿಕ, ಆರ್ಥಿಕ ಹಾಗೂ ನೈಸರ್ಗಿಕವಾಗಿ ಒಳ್ಳೆಯ ಸ್ಥಿತಿಯಲ್ಲಿದ್ದು ನೂತನ ತಾಲ್ಲೂಕು ಕೇಂದ್ರವಾಗುವ ಎಲ್ಲ ಲಕ್ಷಣಗಳನ್ನು ಹೊಂದಿದೆ. ಇದು ಕಂದಾಯ ಇಲಾಖೆಯ ಹೋಬಳಿ ಪ್ರದೇಶವೆನಿಸಿಕೊಂಡಿದ್ದು ಸುಮಾರು 25 ಸಾವಿರದಷ್ಟು ಜನಸಂಖ್ಯೆ ಇದೆ.

 

ಜಿಲ್ಲೆಯ ದೊಡ್ಡ ಗ್ರಾಮ ಪಂಚಾಯಿತಿ ಎನಿಸಿಕೊಂಡಿರುವ ಇಲ್ಲಿ ಒಟ್ಟು 28 ಜನ ಸದಸ್ಯರಿದ್ದಾರೆ. ಜನಸಂಖ್ಯೆಯನ್ನು ಗಮನಿಸಿರುವ ಸರ್ಕಾರ ಇಲ್ಲಿಯ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವಲ್ಲಿ ಕಾರ್ಯಶೀಲವಾಗಿದ್ದು ಇದು ಇಷ್ಟರಲ್ಲಿಯೇ ಅಧೀಕೃತವಾಗಿ ಘೋಷಣೆಯಾಗಲಿದೆ ಎನ್ನುವ ಆಶಾಭಾವನೆ ಇದೆ.ನಿಯೋಜಿತ ಅಕ್ಕಿಆಲೂರ ತಾಲ್ಲೂಕಿನ ವ್ಯಾಪ್ತಿಗೆ 23 ಗ್ರಾ.ಪಂ.ಗಳ ಅಂದಾಜು 75 ಗ್ರಾಮಗಳು ಬರಲಿವೆ. ಭೌಗೋಳಿಕವಾಗಿ 394 ಚ.ಕಿ.ಮೀ. ವಿಸ್ತೀರ್ಣ ಹೊಂದಿರುತ್ತದೆ. ಸುಮಾರು 67.666 ಎಕರೆ ಕೃಷಿ ಭೂಮಿ, 6.676 ಎಕರೆ ಅರಣ್ಯ ಪ್ರದೇಶ, 2047 ಎಕರೆ ಗೋಮಾಳ, ಸಾಗುವಳಿಗೆ ಯೋಗ್ಯವಲ್ಲದ 662 ಎಕರೆ ಹಾಗೂ ಇತರ ಉದ್ದೇಶಕ್ಕೆ ಮೀಸಲಿಟ್ಟ 8328 ಎಕರೆ ಜಮೀನು ನಿಯೋಜಿತ ಅಕ್ಕಿಆಲೂರ ತಾಲ್ಲೂಕಿನ ವ್ಯಾಪ್ತಿಗೆ ಬರಲಿವೆ.ನೀರಾವರಿ ಕ್ಷೇತ್ರದ 20.140 ಎಕರೆ ಜಮೀನು, ಪ್ರಸ್ತುತ ಬಸಾಪುರ ಹಾಗೂ ಶೇಷಗಿರಿ ಏತ ನೀರಾವರಿ ಯೋಜನೆಗಳು, ಹಾವಣಗಿ, ಆಡೂರು, ಹೊಂಕಣದಲ್ಲಿರುವ ಮಳೆ ಮಾಪನ ಕೇಂದ್ರಗಳು ಸಹ ಇದೇ ನಿಯೋಜಿತ ತಾಲ್ಲೂಕಿಗೆ ಒಳಪಡಲಿವೆ.ಸ್ವಾತಂತ್ರ್ಯ ಪೂರ್ವದಿಂದಲೇ ಅಕ್ಕಿಆಲೂರ ಶೈಕ್ಷಣಿಕವಾಗಿ ಬಹು ಮುಂದುವರೆದ ಪ್ರದೇಶವಾಗಿದೆ. ಸರ್ಕಾರಿ ಕಲಾ ಹಾಗೂ ವಾಣಿಜ್ಯ ಪದವಿ ಕಾಲೇಜು, ಅನುದಾನಿತ ಎರಡು ಪ.ಪೂ. ಕಾಲೇಜುಗಳು ಇಲ್ಲಿದ್ದು ವಿಜ್ಞಾನ, ಬಿ.ಬಿ.ಎ. ಹಾಗೂ ಕಂಪ್ಯೂಟರ್ ಕೋರ್ಸ್‌ಗಳು ಲಭ್ಯ ಇವೆ.

 

ಸರ್ಕಾರಿ ಉರ್ದು ಪ್ರೌಢಶಾಲೆ ಸೇರಿ ಒಟ್ಟು 3 ಪ್ರೌಢಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಕೃಷಿ ಡಿಪ್ಲಮೊ ಕಾಲೇಜು, ಅನೇಕ ಪ್ರಾಥಮಿಕ ಶಾಲೆಗಳು, ಮೂರು ತಾಂತ್ರಿಕ ತರಬೇತಿ ವಿದ್ಯಾಲಯಗಳು, ಖಾಸಗಿ ಕಂಪ್ಯೂಟರ್ ಕೇಂದ್ರಗಳು ಸರ್ಕಾರಿ ಹಾಗೂ ಖಾಸಗಿ ಒಡೆತನದ ಒಟ್ಟು 7 ವಿದ್ಯಾರ್ಥಿ ವಸತಿ ನಿಲಯಗಳು ಕಾರ್ಯಶೀಲವಾಗಿವೆ.ಹಾವೇರಿಯ ಜಿಲ್ಲೆಯ ಪ್ರಮುಖ ವ್ಯವಹಾರಿಕ ಸ್ಥಳವಾಗಿರುವ ಅಕ್ಕಿಆಲೂರ ಭತ್ತ, ಮಂಡಕ್ಕಿ, ಅವಲಕ್ಕಿ, ಇಟ್ಟಂಗಿ ಸೇರಿದಂತೆ ಇನ್ನೂ ಹಲವಾರು ವಸ್ತುಗಳ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಹಲವಾರು ರೈಸ್ ಮಿಲ್‌ಗಳನ್ನು ಹೊಂದಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪ ಪ್ರಾಂಗಣ ಇಲ್ಲಿದ್ದು ಸುಮಾರು 55 ವರ್ಷಗಳಿಂದ ನಡೆಯುತ್ತಿರುವ ಜಾನುವಾರು ಮಾರಾಟ ಸುತ್ತಮುತ್ತಲಿನ ಜಿಲ್ಲೆಗಳಲ್ಲಿಯೂ ಹೆಸರು ಪಡೆದಿದೆ. ಜವಳಿ ವಹಿವಾಟಿಗೆ ರಾಜ್ಯದಲ್ಲಿಯೇ ಉತ್ತಮ ಹೆಸರು ಸಂಪಾದಿಸಿದೆ. ಇಲ್ಲಿ ಅತ್ಯಂತ ಸುಸಜ್ಜಿತ ಹಾಗೂ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಸೇವೆ ಲಭ್ಯವಿದ್ದು ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರ ಮಾದರಿ ರೂಪದಲ್ಲಿ ನವೀಕೃತಗೊಂಡು 40 ಹಾಸಿಗೆಗಳ ಜತೆಗೆ ತಜ್ಞ ವೈದ್ಯರನ್ನು ಹೊಂದಿದೆ. ಅನೇಕ ಖಾಸಗಿ ನರ್ಸಿಂಗ್ ಹೋಮ್‌ಗಳು ರೋಗಿಗಳಿಗೆ ಗುಣಮಟ್ಟದ ಸೇವೆಯನ್ನು ಒದಗಿಸುವ ಮೂಲಕ ಹೆಸರು ಗಳಿಸಿವೆ.

ತಾಲ್ಲೂಕು ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕು, ತಾಲ್ಲೂಕು ಕೃಷಿ ಹುಟ್ಟುವಳಿ ಮಾರಾಟ ಸಮಿತಿ, ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕು ಅಲ್ಲದೇ ಕೆನರಾ ಬ್ಯಾಂಕ್, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಅರ್ಬನ್ ಬ್ಯಾಂಕ್ ಹಾಗೂ ಮಹಿಳಾ ಬ್ಯಾಂಕು ಇಲ್ಲಿ ಕಾರ್ಯಶೀಲವಾಗಿದ್ದು ಸುತ್ತಲಿನ ಗ್ರಾಮಗಳ ಜನತೆಯ ವ್ಯವಹಾರಿಕ ಚಟುವಟಿಕೆಗಳಿಗೆ ಆಸರೆಯಾಗಿವೆ.

ಬಹುತೇಕ ಎಲ್ಲ ಮೂಲಭೂತ ಸೌಲಭ್ಯಗಳನ್ನು ಹೊಂದಿರುವ ಅಕ್ಕಿಆಲೂರನ್ನು ತಾಲ್ಲೂಕು ದರ್ಜೆಗೆ ಏರಿಸಿ ನೂತನ ತಾಲ್ಲೂಕನ್ನು ರಚಿಸಬೇಕೆಂಬ ಹೋರಾಟ ಇಲ್ಲಿ ಕಳೆದ 25, 30 ವರ್ಷಗಳಿಂದ ನಡೆಯುತ್ತಲೇ ಬಂದಿದೆ.

ರಾಜ್ಯದಲ್ಲಿ ಕೆಲವು ಹೊಸ ತಾಲ್ಲೂಕುಗಳನ್ನು ರಚಿಸುವಲ್ಲಿ ಸರ್ಕಾರ ಚಿಂತನೆ ನಡೆಸಿದ್ದು ನೂತನ ತಾಲ್ಲೂಕುಗಳ ಪಟ್ಟಿಯಲ್ಲಿ ಅಕ್ಕಿಆಲೂರ ಸಹ ಸೇರಲಿ ಎಂಬುದು ಈ ಭಾಗದ ಜನತೆಯ ಒತ್ತಾಸೆಯಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry