ಶನಿವಾರ, ಮೇ 28, 2022
26 °C

ತಾಲ್ಲೂಕು ಕಚೇರಿಗೆ 7ರಂದು ಪ್ರಾಂತ ರೈತ ಸಂಘ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ : ತಾಲ್ಲೂಕಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಮತ್ತು ಭೂ ರಹಿತರಿಗೆ ಸಾಗುವಳಿ ಚೀಟಿ ನೀಡುವಂತೆ ಆಗ್ರಹಿಸಿ ಪ್ರಾಂತ ರೈತ ಸಂಘದ ವತಿಯಿಂದ 7ರಂದು ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ತಾಲ್ಲೂಕು ಪ್ರಾಂತ ರೈತ ಸಂಘದ ಅಧ್ಯಕ್ಷ ಎನ್.ವೀರಣ್ಣ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಮಾನ ನಿಲ್ದಾಣಕ್ಕೆ ಬಡ ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ಸರ್ಕಾರ ಸೂಕ್ತ ಪರಿಹಾರ ನೀಡಿಲ್ಲ. ಬಲಾಢ್ಯರಿಗೆ ಮಾತ್ರ ಪರಿಹಾರ ದೊರತಿದೆ. ಅಲ್ಲದೇ 2800 ಎಕರೆ ಭೂಮಿಯಲ್ಲಿ ಬಗರ್ ಹುಕ್ಕುಂ ಸಾಗುವಳಿ ಮಾಡುತ್ತಿದ್ದ ರೈತರಿಗೆ ಕನಿಷ್ಟ ಪರಿಹಾರ ನೀಡಿಲ್ಲ. ಸರ್ಕಾರದ ಈ ಧೋರಣೆಯಿಂದ ಬಡ ರೈತರು ಬೀದಿ ಪಾಲಾಗಿದ್ದಾರೆ ಎಂದು ದೂರಿದರು. ಈ ಬಗ್ಗೆ ಹಲವು ಬಾರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ, ಸರ್ಕಾರ ನಿರ್ಲಕ್ಷ್ಯವಹಿಸಿದೆ ಎಂದು ಆಪಾದಿಸಿದರು. ಪ್ರಾಂತ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಾರುತಿ ಮಾನ್ಪಡೆ, ಪ್ರಧಾನ ಕಾರ್ಯದರ್ಶಿ ಬೈಯಾರೆಡ್ಡಿ, ಮಾಜಿ ಶಾಸಕ ಶ್ರಿರಾಮರೆಡ್ಡಿ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.‘ಬೆರಳಚ್ಚು’ ಕಡ್ಡಾಯಕ್ಕೆ ಒತ್ತಾಯ

ದೇವನಹಳ್ಳಿ :
ಸಿ ದರ್ಜೆ ನೌಕರರ ನೇಮಕಾತಿ ಸಂದರ್ಭದಲ್ಲಿ  ಅಭ್ಯರ್ಥಿಗಳಿಗೆ ಬೆರಳಚ್ಚು ಜ್ಞಾನವನ್ನು ಕಡ್ಡಾಯಗೊಳಿಸಲು ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದ್ದು, ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ವಾಣಿಜ್ಯ ವಿದ್ಯಾಶಾಲೆಗಳ ಸಂಘದ ರಾಜ್ಯ ಸಮಿತಿ ಸದಸ್ಯ ಎನ್. ಪುಟ್ಟರಾಜು ಆಗ್ರಹಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 40 ವರ್ಷಗಳ ಹಿಂದಿನ ಬೆರಳಚ್ಚು ಶಿಕ್ಷಣ ಕ್ರಮವೇ ಇಂದಿಗೂ ಮುಂದುವರೆದಿದೆ. ಇತ್ತೀಚಿನ ವರ್ಷಗಳಲ್ಲಿ ಬದಲಾದ ತಂತ್ರಜ್ಞಾನ, ಕಂಪ್ಯೂಟರ್ ಶಿಕ್ಷಣದಿಂದ ಬೆರಳಚ್ಚು ಶಿಕ್ಷಣ ಕೇಂದ್ರಗಳು ಸಂಕಷ್ಟದಲ್ಲಿವೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯ ಸರ್ಕಾರಗಳು ನೌಕರರ ನೇಮಕಾತಿಯಲ್ಲಿ ಬೆರಳಚ್ಚು ಶಿಕ್ಷಣ ಕಡ್ಡಾಯ ಮಾಡಿವೆ. ಈ ನೀತಿಯನ್ನು ರಾಜ್ಯದಲ್ಲೂ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.