ಗುರುವಾರ , ಏಪ್ರಿಲ್ 22, 2021
30 °C

ತಾಲ್ಲೂಕು ಕೇಂದ್ರಕ್ಕೆ ಒತ್ತಾಯಿಸಿ ಪ್ರತಿಭಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರಶುರಾಂಪುರ: ಎಂ.ಬಿ. ಪ್ರಕಾಶ್ ಸರ್ಕಾರಕ್ಕೆ ನೀಡಿರುವ ವರದಿಯ ಪ್ರಕಾರ ಪರಶುರಾಂಪುರವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಬೃಹತ್ ಮೆರವಣಿಗೆ ನಡೆಸಿದರು.ಇಲ್ಲಿನ ಗ್ರಾಮ ಪಂಚಾಯ್ತಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನೇತೃತ್ವದಲ್ಲಿ ಶುಕ್ರವಾರ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.ಗ್ರಾಮ ಪಂಚಾಯ್ತಿ ಕಚೇರಿಯಿಂದ ಪ್ರಾರಂಭವಾದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಮುಖ್ಯ ವೃತ್ತಕ್ಕೆ ಆಗಮಿಸಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ಘೋಷಣೆ ಕೂಗಿದರು.ನಂತರ ನಾಡ ಕಚೇರಿಗೆ ತೆರಳಿ ಕಂದಾಯ ನಿರೀಕ್ಷಕ ಭಾನುಮೂರ್ತಿಗೆ ಮನವಿ ಸಲ್ಲಿಸಿದರು.

 ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಆರ್. ರಂಗಸ್ವಾಮಿ ಮಾತನಾಡಿ, ಈಗಾಗಲೇ ವಿವಿಧ ಇಲಾಖೆಗಳ ಜತೆಗೆ ಸಾಕಷ್ಟು ಮೂಲ ಸೌಕರ್ಯಹೊಂದಿರುವ ಈ ಹೋಬಳಿ ಕೇಂದ್ರವನ್ನು ತಾಲ್ಲೂಕು ಎಂದು ಸರ್ಕಾರ ಕೂಡಲೇ ಘೋಷಣೆ ಮಾಡಬೇಕು. ವಿಳಂಬವಾದಲ್ಲಿ ತೀವ್ರ ಸ್ವರೂಪದ ಹೋರಾಟ ಮಾಡಲಾಗುತ್ತದೆ ಎಂದರು.ತಾ.ಪಂ. ಸದಸ್ಯ ಇ.ಎನ್.ವೆಂಕಟೇಶ್ ಮಾತನಾಡಿ, ರಾಜ್ಯದಲ್ಲಿಯೇ ವಿಸ್ತಾರದಲ್ಲಿ ನಾಲ್ಕನೆಯ ಅತಿದೊಡ್ಡ ಹೋಬಳಿಯಾದ ಪರಶುರಾಂಪುರವು 11ಗ್ರಾಮ ಪಂಚಾಯ್ತಿಗಳನ್ನು 52 ಕಂದಾಯ ಗ್ರಾಮಗಳಿಂದ ಸುಮಾರು 1ಲಕ್ಷ25ಸಾವಿರ ಜನಸಂಖ್ಯೆ ಹೊಂದಿದೆ.ಸರ್ಕಾರ ಶೀಘ್ರವಾಗಿ ಪ್ರಕಾಶ್ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.

ಮುಖಂಡ ಜಯವೀರಾಚಾರಿ ಮಾತನಾಡಿ, ಸರ್ಕಾರ ಈಗಾಗಲೇ ಕಿತ್ತೂರನ್ನು ತಾಲ್ಲೂಕನ್ನಾಗಿ ಘೋಷಿಸಿರುವುದು ಸ್ವಾಗತಾರ್ಹ. ಅದರಂತೆಯೇ ಉಳಿದ ತಾಲ್ಲೂಕುಗಳನ್ನು ಘೋಷಿಸಬೇಕು ಎಂದರು.ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಾರುತಿ, ಸದಸ್ಯರಾದ ನಿಜಲಿಂಗಪ್ಪ, ಲೋಕೇಶ್, ಕರಿಯಣ್ಣ, ಸೋಮನಾಥಶೆಟ್ಟಿ, ಕೃಷ್ಣಪ್ಪ, ಮಲ್ಲಿಕಾರ್ಜುನ, ಹಾಗೂ ಮುಖಂಡರಾದ ತಿಪ್ಪೇಸ್ವಾಮಿ, ಸತ್ಯನಾರಾಯಣ, ಲಕ್ಷ್ಮಪ್ಪ, ರತ್ನಪ್ಪ ಹಾಜರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.