ತಾಲ್ಲೂಕು ಪಂಚಾಯ್ತಿ ಅಧಿಕಾರಕ್ಕೆ ಪೈಪೋಟಿ

7

ತಾಲ್ಲೂಕು ಪಂಚಾಯ್ತಿ ಅಧಿಕಾರಕ್ಕೆ ಪೈಪೋಟಿ

Published:
Updated:

ಚಳ್ಳಕೆರೆ: ಕಳೆದ 10 ತಿಂಗಳಿನಿಂದ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆಯಾಗಿದ್ದ ಕಾಂಗ್ರೆಸ್‌ನ ಬೋರಮ್ಮ, ಉಪಾಧ್ಯಕ್ಷರಾಗಿದ್ದ ಜೆಡಿಎಸ್‌ನ ಎಂ.ಎಸ್. ಮಂಜುನಾಥ್ ಅವರು ಒಡಂಬಡಿಕೆಯಂತೆ ಈಚೆಗೆ ತಮ್ಮ  ಸ್ಥಾನಗಳಿಗೆ ರಾಜೀನಾಮೆ ನೀಡಿದ ಪರಿಣಾಮ ಖಾಲಿ ಇರುವ ಗಾದಿಗಾಗಿ ಆಕಾಂಕ್ಷಿ ಸದಸ್ಯರಲ್ಲಿ ಬಿರುಸಿನ ಚಟುವಟಿಕೆಗಳು ತೆರೆಮರೆಯಲ್ಲಿ ನಡೆಯುತ್ತಿರುವುದು ಕಂಡುಬಂದಿದೆ.ಕಳೆದ ವರ್ಷ ನಡೆದ ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ 29ತಾಲ್ಲೂಕು ಪಂಚಾಯ್ತಿ ಸದಸ್ಯರಲ್ಲಿ 11-ಕಾಂಗ್ರೆಸ್, 12-ಬಿಜೆಪಿ, 5-ಜೆಡಿಎಸ್, 1-ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು. ಆದರೆ, ಯಾವೊಂದು ಪಕ್ಷಕ್ಕೂ ಬಹುಮತ ಲಭಿಸದ ಕಾರಣ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಮೊದಲ ಹಂತದಲ್ಲಿ ನಾಯಕನಹಟ್ಟಿ ಕ್ಷೇತ್ರದ ಕಾಂಗ್ರೆಸ್‌ನ ಬೋರಮ್ಮ ಅಧ್ಯಕ್ಷೆಯಾಗಿ, ದೇವರಮರಿಕುಂಟೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರದ ಜೆಡಿಎಸ್ ಸದಸ್ಯ ಎಂ.ಎಸ್. ಮಂಜುನಾಥ್ ಉಪಾಧ್ಯಕ್ಷರಾಗಿ ಅಧಿಕಾರಕ್ಕೆ ಬಂದಿದ್ದರು.ಕಾಂಗ್ರೆಸ್ ಮತ್ತು ಜೆಡಿಎಸ್ ಒಡಂಬಡಿಕೆಯಂತೆ 10 ತಿಂಗಳು ಮುಗಿದು ಮೊದಲ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರಾಗಿದ್ದವರು ರಾಜೀನಾಮೆ ನೀಡಿದ್ದಾರೆ. ಇದೀಗ ಫೆ. 8ರಂದು ಇನ್ನುಳಿದ 10 ತಿಂಗಳ ಅವಧಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ.ಜೆಡಿಎಸ್‌ಗೆ ಅಧ್ಯಕ್ಷ, ಕಾಂಗ್ರೆಸ್‌ಗೆ ಉಪಾಧ್ಯಕ್ಷ ಸ್ಥಾನ ಹಂಚಿಕೆ ಆಗಬೇಕಿರುವುದರಿಂದ ಅಧ್ಯಕ್ಷ ಗಾದಿಗೆ ಜೆಡಿಎಸ್‌ನಲ್ಲಿ ತೆರೆಮರೆಯ ಚಟುವಟಿಕೆಗಳು ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಸದಸ್ಯರನ್ನು ಓಲೈಸಿಕೊಳ್ಳುವುದು, ಮುಖಂಡರನ್ನು ದಿನನಿತ್ಯ ಎಡತಾಕುವುದು ನಡೆಯುತ್ತಲೇ ಇದೆ.ಸಾಮಾನ್ಯ ಮಹಿಳೆಗೆ ಇದ್ದ ಅಧ್ಯಕ್ಷ ಸ್ಥಾನವನ್ನು ಕಳೆದ ಬಾರಿ ಮೊಳಕಾಲ್ಮುರು ಶಾಸಕ ಎನ್.ವೈ. ಗೋಪಾಲಕೃಷ್ಣ ತಮ್ಮ ವಿಧಾನಸಭಾ ವ್ಯಾಪ್ತಿಯ ನಾಯಕನಹಟ್ಟಿಯ ಪ.ಜಾತಿಯ ಮಹಿಳೆ ಬೋರಮ್ಮ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಕೂರಿಸುವಲ್ಲಿ ಸಫಲರಾಗಿದ್ದರು.ಉಪಾಧ್ಯಕ್ಷ ಸ್ಥಾನವೂ ಸಾಮಾನ್ಯ ವರ್ಗಕ್ಕೆ ಇದ್ದ ಕಾರಣ ಪರಿಶಿಷ್ಟ ಪಂಗಡದ ದೇವರಮರಿಕುಂಟೆ ಮಂಜುನಾಥ್ ಅವರನ್ನು ಜೆಡಿಎಸ್ ಆ ಸ್ಥಾನಕ್ಕೆ ಕೂರಿಸುವಲ್ಲಿ ಯಶಸ್ವಿಯಾಗಿತ್ತು.ಇದೀಗ ಜೆಡಿಎಸ್‌ನಲ್ಲಿ ಸಾಮಾನ್ಯ ವರ್ಗಕ್ಕೆ ಸೇರಿದ ಸಾಣೀಕೆರೆಯ ಹೇಮಲತಾ ಮತ್ತು ಟಿ.ಎನ್. ಕೋಟೆ ಕ್ಷೇತ್ರದ ಜಯಲಕ್ಷ್ಮೀ ಇಬ್ಬರು ಸದಸ್ಯರ ನಡುವೆ ಪೈಪೋಟಿ ನಡೆಯುತ್ತಿದೆ.ಅಂತಿಮವಾಗಿ ಜೆಡಿಎಸ್ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅಧಿಕಾರ ಹಿರಿಯೂರು ಶಾಸಕ ಡಿ. ಸುಧಾಕರ್ ಅವರ ಕೈಲಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ. ಇನ್ನುಳಿದಂತೆ ಉಪಾಧ್ಯಕ್ಷ ಸ್ಥಾನಕ್ಕೆ ನೇರಲಗುಂಟೆಯ ತಿಪ್ಪೇಶ್‌ಕುಮಾರ್ ಹಾಗೂ ತಳಕು ಕ್ಷೇತ್ರದ ಸದಸ್ಯರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಕುರಿತು ಶಾಸಕ ಎನ್.ವೈ. ಗೋಪಾಲಕೃಷ್ಣ ಅವರಲ್ಲಿ ಚರ್ಚೆಗಳು ನಡೆಯುತ್ತಿವೆ  ಎನ್ನಲಾಗುತ್ತಿದೆ.ಒಟ್ಟಾರೆ, ಚಳ್ಳಕೆರೆ ತಾಲ್ಲೂಕು ಪಂಚಾಯ್ತಿಯಲ್ಲಿ ಖಾಲಿ ಇರುವ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ  ಅಕಾಂಕ್ಷಿಗಳು 8ರವರೆಗೆ ಕಾಯಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry