ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ

ಗುರುವಾರ , ಜೂಲೈ 18, 2019
24 °C

ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ

Published:
Updated:

ರಾಯಬಾಗ: ತಾಲ್ಲೂಕಿನಲ್ಲಿ ಕೃಷ್ಣಾ ನದಿಗೆ ಬರುವ ಪ್ರವಾಹ ಹಾಗೂ ಅತಿವೃಷ್ಟಿಯಿಂದ ಎದುರಾಗುವ ಪರಿಸ್ಥಿತಿಯ ನಿಭಾಯಿಸಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ  ಕುರಿತು ಶನಿವಾರ ಇಲ್ಲಿನ ಮಿನಿ ವಿಧಾನಸೌಧದಲ್ಲಿ  ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಯಿತು. ನೋಡಲ್ ಅಧಿಕಾರಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ರವಿ ಬಸರಿಹಳ್ಳಿ ಅಧ್ಯಕ್ಷತೆ ವಹಿಸಿದ್ದರು.ಪ್ರವಾಹ ಹಾಗೂ ಅತಿವೃಷ್ಟಿಯಾದರೆ ಅದನ್ನು ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಹಸೀಲ್ದಾರ ಪ್ರವೀಣ ಬಾಗೇವಾಡಿ ಸಭೆಗೆ ತಿಳಿಸಿದರು. 

 

ಬಹುತೇಕ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಕೃಷ್ಣಾ ನದಿಗೆ ಬರುವ ಪ್ರವಾಹದ ಮುನ್ನೆಚ್ಚರಿಕೆಗಾಗಿ ಎದುರಿಸುವ ಎಲ್ಲಾ ಕ್ರಮಗಳ ಬಗ್ಗೆ ಸಭೆಗೆ ವಿವರಿಸಲಾಯಿತು. ತಾಲ್ಲೂಕಿನಲ್ಲಿ ಕೃಷ್ಣಾನದಿಯ ತೀರದ ಗ್ರಾಮಗಳಾದ ನಸಲಾಪುರ, ಬಾವಾನಸೌಂದತ್ತಿ, ಹಳೆ ದಿಗ್ಗೇವಾಡಿ, ಜಲಾಲಪುರ, ಭಿರಡಿ, ಚಿಂಚಲಿ, ಕುಡಚಿ, ಶಿರಗೂರ, ಗುಂಡವಾಡ, ಖೇಮಲಾಪುರ, ಸಿದ್ದಾಪುರ, ಪರಮಾನಂದವಾಡಿಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಅವರು ದಿನದ 12 ಗಂಟೆ ಕಾಲ ಅಲ್ಲಿಯೇ ಕಾರ್ಯನಿರ್ವಹಿಸುವಂತೆ ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.ಪ್ರವಾಹ ಮುನ್ನೆಚ್ಚರಿಕೆಯಾಗಿ ಪರಸ್ಥಿತಿ ನಿಯಂತ್ರಿಸಲು ಯಾವ ರೀತಿ ಕ್ರಮಗಳನ್ನು ಕೈಕೊಳ್ಳಬೇಕು ಎಂಬುದರ ಬಗ್ಗೆ ಆಯಾ ಇಲಾಖೆಯ ಅಧಿಕಾರಿಗಳು ಯೋಜನೆ ತಯಾರಿಸುವಂತೆ ತಿಳಿಸಲಾಯಿತು.

 

ನದಿ ತೀರದ ಗ್ರಾಮಗಳಲ್ಲಿ ಏಳು ಬೋಟ್‌ಗಳಿದ್ದು ಅವುಗಳನ್ನು ಪರಿಶೀಲಿಸಿ, ಅವಶ್ಯಕತೆ ಇರುವೆಡೆ ಅವುಗಳನ್ನು ಸಿದ್ಧತೆಯಲ್ಲಿಡುವಂತೆ  ತಿಳಿಸಲಾಯಿತು. ಪ್ರವಾಹ ಸಂದರ್ಭದಲ್ಲಿ ಪರಮಾನಂದವಾಡಿ, ಕುಡಚಿ, ಬಾವಾನ ಸೌಂದತ್ತಿ, ನಸಲಾಪುರ, ಭಿರಡಿ, ಜಲಾಲಪುರ ಚಿಂಚಲಿ ಗ್ರಾಮಗಳಲ್ಲಿ ಗಂಜಿ ಕೇಂದ್ರಗಳನ್ನು ತೆರಯಲು ಸಿದ್ಧತೆ ಮಾಡಿಕೊಳ್ಳುವಂತೆ ಸಲಹೆ ಮಾಡಲಾಯಿತು. ಮುನ್ನೆಚ್ಚರಿಕೆಗಾಗಿ ಮಿನಿವಿಧಾನ ಸೌಧದಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಿಲಾಗಿದ್ದು ಅದು ಪ್ರತಿ ದಿನ 24 ಗಂಟೆ ಕಾಲ ಕಾರ್ಯ ನಿರ್ವಹಿಸಲಿದೆ. ಅಧಿಕಾರಿಗಳು ಪ್ರತಿ ದಿನ ತಮಗೆ ನೇಮಿಸಿದ ಗ್ರಾಮದ ಸಮಗ್ರ ಮಾಹಿತಿಯನ್ನು ಈ ಕೇಂದ್ರಕ್ಕೆ ಕಳಿಸಿಕೊಡಬೇಕು. ಹಾವು ಕಡಿತದ ಔಷಧವನ್ನು ಸರಕಾರಿ ಆಸ್ಪತ್ರೆಗಳಲ್ಲಿ ಸಂಗ್ರಹಿಸಿಡುವುದರೊಂದಿಗೆ ಜಾನುವಾರುಗಳಿಗೆ ಮುಂಜಾಗ್ರತಾ ಕ್ರಮವಾಗಿ ರೋಗ ನಿರೋಧಕ ಚುಚ್ಚು ಮದ್ದನ್ನು ಅವಶ್ಯಕತೆಗೆ ತಕ್ಕಂತೆ ಸಂಗ್ರಹಿಸಿಡಬೇಕು. ಪ್ರತಿ ಪಂಚಾಯಿತಿಯಲ್ಲಿ ಸೊಳ್ಳೆನಾಶಕ ಡಿ.ಡಿ.ಟಿ ಪೌಡರನ್ನು ಸಹ ಇಡುವಂತೆ ನೋಡಲ್ ಅಧಿಕಾರಿ ರವಿ ಬಸರಿಹಳ್ಳಿ ತಿಳಿಸಿದರು.ಸಭೆಗೆ ಹಾಜರಾಗದ ಬಿ.ಇ.ಓ. ಎಂ.ಜಿ. ಬೆಳ್ಳೆನ್ನವರ, ಹೆಸ್ಕಾಂ ಅಧಿಕಾರಿ ಶೇಖರ ಬಹರೂಪಿ, ಪಶು ಇಲಾಖೆಯ ಡಾ.ಹರಿಶ್, ಲೋಕೋಪಯೋಗಿ ಇಲಾಖೆಯ ಎಸ್.ಎ. ಹಿರೇಮನಿ,  ಬಿ.ವೈ. ಪವಾರ ಅವರ ಮೇಲೆ ಶಿಸ್ತಿನ ಕ್ರಮ ಕೈಕೊಳ್ಳಲು ನೋಟಿಸ್ ಜಾರಿ ಮಾಡುವಂತೆ ತಹಸೀಲ್ದಾರರಿಗೆ ರವಿ ಬಸರಿಹಳ್ಳಿ ಆದೇಶಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry