ತಾಲ್ಲೂಕು ರಚನೆ; ಸಂಘಟನೆಗಳಿಂದ ಸಿಎಂಗೆ ಮನವಿ

6

ತಾಲ್ಲೂಕು ರಚನೆ; ಸಂಘಟನೆಗಳಿಂದ ಸಿಎಂಗೆ ಮನವಿ

Published:
Updated:

ಮಸ್ಕಿ: ಮಸ್ಕಿಯನ್ನು ನೂತನ ತಾಲ್ಲೂಕು ಕೇಂದ್ರವನ್ನಾಗಿಸಬೇಕು ಹಾಗೂ ಈಗಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಪರಿವರ್ತಿಸಬೇಕು ಎಂದು ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳು ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ಗೆ ಸೋಮವಾರ ಮನವಿ ಸಲ್ಲಿಸಿ ಒತ್ತಾಯಿಸಿದವು.ಮಸ್ಕಿಯಲ್ಲಿ ಜರುಗಿದ ವಾಲ್ಮೀಕಿ ಸಮಾವೇಶದಲ್ಲಿ ಪಾಲ್ಗೊಳ್ಳುವ ಸಲುವಾಗಿ ಆಗಮಿಸಿದ್ದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಜಯ ಕರ್ನಾಟಕ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ), ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ), ನವ ನಿರ್ಮಾಣ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಮನವಿ ಸಲ್ಲಿಸಿ ತಾಲ್ಲೂಕು ರಚನೆಗೆ ಆಗ್ರಹಿಸಿವೆ.ಈಗಾಗಲೇ ತಾಲ್ಲೂಕು ಪುನರ್‌ವಿಂಗಡಣಾ ಸಮಿತಿಗಳು ಮಸ್ಕಿಯನ್ನು ತಾಲ್ಲೂಕು ಕೇಂದ್ರವನ್ನಾಗಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿವೆ. ಕೂಡಲೇ ಮಸ್ಕಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಸಂಘಟನೆಗಳ ಮುಖಂಡರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿವೆ.`ಕನಕ ದಾಸರ ತತ್ವ ಪಾಲನೆಯಿಂದ ಸಮಾಜದ ಏಳ್ಗೆ'

ಹಟ್ಟಿ ಚಿನ್ನದ ಗಣಿ: ಕನಕ ದಾಸರು ತುಳಿತಕ್ಕೊಳಗಾದ ಜನರ ಆಶಾಕಿರಣವಾಗಿದ್ದರು. ಹಿಂದುಳಿದ ವರ್ಗದಲ್ಲಿ ಹುಟ್ಟಿ ವ್ಯಾಸರಾಯರ ಅಗ್ರಗಣ್ಯ ಶಿಷ್ಯರಲ್ಲಿ ಒಬ್ಬರಾಗಿದ್ದರು. ಅವರ ತತ್ವಗಳ ಪಾಲನೆಯಿಂದ ಸಮಾಜ ಏಳ್ಗೆ ಕಾಣಲು ಸಾಧ್ಯ ಎಂದು ಮುಖಂಡರಾದ ಕೆ. ನರಸಪ್ಪ ರಾಯಚೂರು ಅಭಿಪ್ರಾಯಪಟ್ಟರು.ಸೋಮವಾರ ಇಲ್ಲಿಗೆ ಸಮೀಪದ ಹಿರೇನಗನೂರು ಗ್ರಾಮದಲ್ಲಿ ಹಮ್ಮಿಕೊಂಡ ಕನಕ ದಾಸರ ಜಯಂತುತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಕನಕ ದಾಸರ ಜೀವನ ಚರಿತ್ರೆಯ ಕುರಿತು ಸವಿಸ್ತಾರವಾಗಿ ವಿವರಿಸಿದರು. ಮೊದಲು ಕನಕ ದಾಸರ ಭಾವಚಿತ್ರದ ಮೆರವಣಿಗೆಯನ್ನು ಗ್ರಾಮದ ಕರಿಯಣ್ಣ ದೇವಸ್ಥಾನದಿಂದ ಶಿವಪ್ಪ ತಾತ ಗದ್ದುಗೆವರೆಗೆ ಕಳಸ, ಡೊಳ್ಳು, ವಾದ್ಯಮೇಳದೊಂದಿಗೆ ಅದ್ದೂರಿಯಾಗಿ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಅಯ್ಯಾಳಪ್ಪ, ಬಸವರಾಜ ಹಟ್ಟಿ, ಅಮರೇಶ ಹಿರೇ ಕುರುಬರು, ಮೌನೇಶ ಇದ್ದರು. ಆದಪ್ಪ ನಿರೂಪಿಸಿದರು.ನಾಟಕೋತ್ಸವ ರದ್ದು: ಖಂಡನೆ

ಲಿಂಗಸುಗೂರ: ಕರ್ನಾಟಕ ನಾಟಕ ಅಕಾಡೆಮಿ ಸದಸ್ಯೆ ಸುಮತಿಶ್ರೀ ಅಧ್ಯಕ್ಷತೆಯಲ್ಲಿ ತಾಲ್ಲೂಕಿನಲ್ಲಿ ಒಂದೆರಡು ಬಾರಿ ಸಭೆ ನಡೆಸಿ ಪಟ್ಟಣದಲ್ಲಿಯೆ ರಾಯಚೂರು ಜಿಲ್ಲಾ ಮಟ್ಟದ ನಾಟಕೋತ್ಸವ ನಡೆಸಲು ನಿರ್ಧರಿಸಲಾಗಿತ್ತು. ಈಚೆಗೆ ಏಕಾ-ಏಕಿ ನಾಟಕೋತ್ಸವ ರದ್ದುಪಡಿಸುವುದನ್ನು ರಂಗ ನಿರ್ದೇಶಕ, ಬಂಡಾಯ ಸಾಹಿತಿ ಖಾಜಾವಲಿ ಈಚನಾಳ ಖಂಡಿಸಿ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ ಅವರಿಗೆ ಪತ್ರ ಬರೆದಿದ್ದಾರೆ.ತಾಲ್ಲೂಕು ಮಟ್ಟಕ್ಕೆ ಆಯ್ಕೆ

ಸಿಂಧನೂರು: ನಗರದ ಸುಕಾಲಪೇಟೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ನಡೆದ ಕನಕನಗರ ಸಿ.ಆರ್.ಸಿ.ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕನಕದಾಸ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ಮೂಲಕ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಅಭಿನಯ ಗೀತೆಯಲ್ಲಿ ಯಲ್ಲಾಲಿಂಗೇಶ ಗಾದಿಯಪ್ಪ ಪ್ರಥಮ, ಜಾನಪದ ಗೀತೆಯಲ್ಲಿ ಲಕ್ಷ್ಮೀ, ಭೀಮಮ್ಮ, ಸುಮತಿ, ನಿಂಗಮ್ಮ, ಅಂಬಿಕಾ, ಶಿವಗಂಗಾ, ರತ್ನಮ್ಮ ದ್ವಿತೀಯ, ಕ್ಲೇ ಮಾಡಲಿಂಗ್‌ನಲ್ಲಿ ಆನಂದ ಅಯ್ಯಪ್ಪ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಆಡಳಿತಾಧಿಕಾರಿ ಎಂ.ದೊಡ್ಡಬಸವರಾಜ, ಮುಖ್ಯಗುರು ಕೆ.ಮಲ್ಲಿಕಾರ್ಜುನ ಕುರುಕುಂದಾ ಅಭಿನಂದಿಸಿದ್ದಾರೆ.ಅತಿಥಿ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

ಲಿಂಗಸುಗೂರ: ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಗೌರವಧನ ಆಧಾರದ ಮೇಲೆ ತಾತ್ಕಾಲಿಕವಾಗಿ 70 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಹಿರಿಯ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಈಗಾಗಲೆ ಅತ್ಯವಶ್ಯವಿರುವ ಶಾಲೆಗಳನ್ನು ಗುರ್ತಿಸಿ ವಿಷಯವಾರು ಪಟ್ಟಿ ಬಿಡುಗಡೆ ಮಾಡಲಾಗಿದ್ದು ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಸ್. ಪೊಲೀಸ್ ಪಾಟೀಲ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸಂಪರ್ಕಿಸಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲು ಸೂಚಿಸಿದ್ದಾರೆ.

ಸಾಮಾನ್ಯ ಕನ್ನಡ (34), ಇಂಗ್ಲಿಷ್ (16), ಉರ್ದು (6), ವಿಜ್ಞಾನ (7), ಹಿಂದಿ (7) ಒಟ್ಟು 70 ಹುದ್ದೆಗಳ ಪಟ್ಟಿ ಹಾಗೂ ಶಾಲಾವಾರು ಮಾಹಿತಿಯನ್ನು ಆಯಾ ಶಾಲೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ನಾಮಫಲಕದಲ್ಲಿ ಪ್ರಕಟಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ವಿವರಿಸಿದ್ದಾರೆ.ಟಿಪ್ಪುಸುಲ್ತಾನ್ ಜನ್ಮ ದಿನಕ್ಕೆ ರಜೆ ಘೋಷಿಸಲು ಆಗ್ರಹ

ಸಿಂಧನೂರು: ದೇಶದ ಸ್ವಾತಂತ್ರ್ಯಕ್ಕಾಗಿ ಹೆಬ್ಬುಲಿಯಂತೆ ಹೋರಾಡಿ ಪ್ರಾಣತೆತ್ತ ಟಿಪ್ಪುಸುಲ್ತಾನ್ ಜನ್ಮದಿನದಂದು ಸರ್ಕಾರಿ ರಜೆ ನೀಡಿ, ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಬೇಕು ಎಂದು ತಾಲ್ಲೂಕು ಟಿಪ್ಪುಸುಲ್ತಾನ್ ಸಮಿತಿ ಆಗ್ರಹಿಸಿದೆ.ಮಂಗಳವಾರ ಜಂಟಿ ಹೇಳಿಕೆ ನೀಡಿರುವ ತಾಲ್ಲೂಕು ಅಧ್ಯಕ್ಷ ಖಾಜಿಮಲಿಕ್ ಹಾಗೂ ಜಿಲ್ಲಾಧ್ಯಕ್ಷ ಅಬ್ದುಲ್ ಹೈ ಫೆರೂಸ್ ಸೋಮವಾರ ಮಸ್ಕಿಗೆ ಆಗಮಿಸಿದ್ದ ಮುಖ್ಯಮಂತ್ರಿಯವರಿಗೆ ಈ ಕುರಿತು ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಸ್ವಾತಂತ್ರ್ಯಕ್ಕಾಗಿ ಮಕ್ಕಳನ್ನೇ ಪಣಕ್ಕಿಟ್ಟ ದೇಶಪ್ರೇಮಿ ಟಿಪ್ಪುಸುಲ್ತಾನ ಜನ್ಮ ದಿನವನ್ನು ಸರ್ಕಾರಿ ದಿನಾಚರಣೆಯಾಗಿ ಆಚರಿಸದಿರುವುದು ಖೇದಕರ ವಿಷಯ.ಶ್ರೀರಂಗಪಟ್ಟಣದಲ್ಲಿ ಇರುವ ಅರಮನೆ, ಸ್ಮಾರಕ ಮತ್ತು ಕೋಟೆಗಳನ್ನು ಅಭಿವೃದ್ಧಿಪಡಿಸಬೇಕು, ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪುಸುಲ್ತಾನ್ ಹೆಸರಿಡಬೇಕು, ದೇಶ ರಕ್ಷಣೆಗಾಗಿ ಹೋರಾಡಿದ ವೀರರಿಗೆ ಟಿಪ್ಪು ಸುಲ್ತಾನ್ ಶೌರ್ಯ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿದ್ದಾರೆ. ಬೇಡಿಕೆ ಈಡೇರಿಸದಿದ್ದರೆ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry