ತಾಲ್ಲೂಕು ಹಿಂದುಳಿಯಲು ಕಾಂಗ್ರೆಸ್ ಕಾರಣ

ಭಾನುವಾರ, ಜೂಲೈ 21, 2019
22 °C

ತಾಲ್ಲೂಕು ಹಿಂದುಳಿಯಲು ಕಾಂಗ್ರೆಸ್ ಕಾರಣ

Published:
Updated:

ಹರಪನಹಳ್ಳಿ: ಆರು ದಶಕಗಳ ಕಾಲ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಸಚಿವ-ಶಾಸಕರ ನಿರ್ಲಕ್ಷ್ಯದ ಪರಮಾವಧಿಯ ಪರಿಣಾಮ ತಾಲ್ಲೂಕು ಅತ್ಯಂತ ಹಿಂದುಳಿದ ಪ್ರದೇಶ ಎಂಬ ಕಳಂಕಕ್ಕೆ ಕಾರಣವಾಯಿತು ಎಂದು ಕಂದಾಯ ಸಚಿವ ಜಿ. ಕರುಣಾಕರ ರೆಡ್ಡಿ ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ಶನಿವಾರ ರಾಷ್ಟ್ರೀಯ ಸಮವಿಕಾಸ ಯೋಜನೆ ಅಡಿಯಲ್ಲಿ ರೂ. 13ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಿದ ಪಶು ಆಸ್ಪತ್ರೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಈ ಭಾಗವನ್ನು ಪ್ರತಿನಿಧಿಸುತ್ತಿದ್ದವರು ಗೆದ್ದಾಗಲೆಲ್ಲಾ ಸಂಪುಟದಲ್ಲಿ ಪ್ರಭಾವಿ ಸಚಿವರಾಗುತ್ತಿದ್ದರು. ಪದೇಪದೇ ಬರಗಾಲದ ಕಡುಕೋಪದ ದವಡೆಗೆ ಸಿಲುಕಿ ಪರಿತಪಿಸುತ್ತಿದ್ದ ಇಲ್ಲಿನ ಜನರ ಆರ್ಥಿಕ ಪುನಶ್ಚೇತನಕ್ಕಾಗಿ, ಸಮೃದ್ಧಿಯಾದ ಬದುಕು ಕಟ್ಟಿಕೊಳ್ಳಲಿಕ್ಕೆ ಪೂರಕವಾದಂತಹ ಚಿಂತನೆಗಳನ್ನು ಎಂದಿಗೂ ಮಾಡಲಿಲ್ಲ.

 

ಹಾಗಾಗಿ, ಅವರು ಮಾಡಿದ ಪಾಪದ ಫಲವನ್ನು ನಾವು ಅನುಭವಿಸುತ್ತಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ ಮೂರೇ ವರ್ಷದ ಅಲ್ಪಾವಧಿಯಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ರೂ. 394 ಕೋಟಿ ಅನುದಾನ ಹರಿದುಬಂದಿದೆ. ಇದು ಆ ಪುಣ್ಮಾತ್ಯರಿಗೆ ಏಕೆ ಸಾಧ್ಯವಾಗಲಿಲ್ಲ? ಎಂದು ಪ್ರಶ್ನಿಸಿದರು.ರೈತನನ್ನು ಸಮಸ್ಯೆಯ ಸಂಕೋಲೆಗಳ ಬಂಧಮುಕ್ತಿಗೊಳಿಸುವ ಹಾಗೂ ಆತನ ಶ್ರೇಯೋಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ಹಲವು ಮಹತ್ತರ ಯೋಜನೆಗಳನ್ನು ಜಾರಿಮಾಡಿದೆ. ವರ್ಷವಿಡೀ ಆತನೊಂದಿಗೆ ದುಡಿದು, ಆತನ ಕಾಯಕದಲ್ಲಿ ನೆರವಾಗುವ ಜಾನುವಾರುಗಳ ಸಂರಕ್ಷಣೆಗಾಗಿ ಶೇಖರಿಸಿಟ್ಟಿದ್ದ ಮೇವು ಹಾಗೂ ದವಸ-ಧಾನ್ಯಗಳು ಆಕಸ್ಮಿಕ ಬೆಂಕಿಗೆ ಆಹುತಿಯಾದರೆ, ಆತನಿಗೆ ನೆರವಾಗುವ ದೃಷ್ಟಿಯಿಂದ ಪರಿಹಾರದ ಮೊತ್ತವನ್ನು ರೂ. 2 ಸಾವಿರದಿಂದ 10 ಸಾವಿರಕ್ಕೆ, ಅಂದರೆ, ಐದು ಪಟ್ಟು ಹೆಚ್ಚಿಸಲಾಗಿದೆ. ಸುವರ್ಣಭೂಮಿ ಯೋಜನೆ ಅಡಿ ರೂ.  1ಸಾವಿರ ಕೋಟಿ  ಮೀಸಲಿರಿದ್ದೇವೆ ಎಂದರು.ತಮ್ಮ ಅಧಿಕಾರ ಅವಧಿಯಲ್ಲಿ ತಾಲ್ಲೂಕಿನಲ್ಲಿ 9 ಸಾವಿರ ಭಾಗ್ಯಲಕ್ಷ್ಮೀ ಬಾಂಡ್, ವಿದ್ಯಾರ್ಥಿಗಳ ವ್ಯಾಸಂಗದ ಪ್ರಯಾಣಕ್ಕಾಗಿ 8,600 ಬೈಸಿಕಲ್ ವಿತರಿಸಲಾಗಿದೆ. ಕೆರೆಗೆ ನೀರು ತುಂಬಿಸುವ ಯೋಜನೆಯಿಂದ ಹಿಡಿದು, ರಸ್ತೆ ಅಭಿವೃದ್ಧಿ, ಶುದ್ಧ ಕುಡಿಯುವ ನೀರು ಪೂರೈಕೆ, ಆರೋಗ್ಯ ಹಾಗೂ ಶಿಕ್ಷಣ ಸೇರಿದಂತೆ ತಾಲ್ಲೂಕನ್ನು ಸಮಗ್ರ ಪ್ರಗತಿ ಪಥದತ್ತ ಕೊಂಡೊಯ್ಯಲು ಕೇವಲ ಮೂರು ವರ್ಷದಲ್ಲಿ ರೂ. 394 ಕೋಟಿ ವಿನಿಯೋಗಿಸಲಾಗಿದೆ. ಉಳಿದ ಎರಡು ವರ್ಷಗಳಲ್ಲಿ ಅದರ ಮಿತಿಯನ್ನು ರೂ. 500 ಕೋಟಿ ಗಡಿ ದಾಟಿಸುತ್ತೇವೆ. ಇದಕ್ಕೆ ಸಂಪೂರ್ಣ ಸಹಕಾರ ನೀಡಿ ಎಂದು ಕೋರಿದರು.ಇದೇ ಸಂದರ್ಭದಲ್ಲಿ ಕೆಸರಹಳ್ಳಿ, ಕಡಬಗೇರಿ, ಹರಿಯಮ್ಮನಹಳ್ಳಿ, ಕಸವನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಿವಿಧ ಇಲಾಖೆಗಳಿಂದ ಕೈಗೊಳ್ಳಲಾದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.ಆಕಸ್ಮಿಕ ಬೆಂಕಿ ಅನಾಹುತದಲ್ಲಿ ರೈತರ ದವಸ-ಧಾನ್ಯ ಹಾಗೂ ಜಾನುವಾರು ಮೇವು ಭಸ್ಮ ಮತ್ತು ಕೃಷಿ ಚಟುವಟಿಕೆಯಲ್ಲಿ ತೊಡಗಿದಾಗ ಮೃತರಾದ ಕುಟುಂಬಗಳ ವಾರಸುದಾರರಿಗೆ ಪರಿಹಾರದ ಚೆಕ್ ವಿತರಿಸಿದರು.ಗ್ರಾಮ ಪಂಚಾಯ್ತಿ ಅಧ್ಯಕ್ಷ ದೊಡ್ಡನಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೆ.ಜಿ. ಬಸವಲಿಂಗಪ್ಪ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಜಯಮಾಲಾ, ಉಪಾಧ್ಯಕ್ಷ ಚನ್ನಪ್ಪ, ಸದಸ್ಯ ಕಿತ್ತೂರು ಓಬಪ್ಪ, ಉಪ ವಿಭಾಗಾಧಿಕಾರಿ ಟಿ. ವೆಂಕಟೇಶ್, ತಾ.ಪಂ. ಇಒ ಟಿ. ಪಾಂಡ್ಯಪ್ಪ, ತಹಶೀಲ್ದಾರ್ ಟಿ.ವಿ. ಪ್ರಕಾಶ್, ಮುಖಂಡರಾದ ಆರುಂಡಿ ನಾಗರಾಜ್, ಜಿ. ನಂಜನಗೌಡ, ಡಾ.ರಮೇಶ್ ಕುಮಾರ್, ಎಂ.ಪಿ. ನಾಯ್ಕ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry