ಗುರುವಾರ , ಮೇ 19, 2022
21 °C

ತಾಳಕಟ್ಟ: ಶಿವಮೂರ್ತಿ ಮುರುಘಾ ಶರಣರ ಅಭಿಮತ.ಪ್ರಾಣಿಬಲಿ ಬಿಡಿ, ಅರಿಷಡ್ವರ್ಗ ಬಲಿಕೊಡಿ.

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳಲ್ಕೆರೆ: ‘ಮನುಷ್ಯ ಭಕ್ತಿಯ ನೆಪದಲ್ಲಿ ಪ್ರಾಣಿಬಲಿ ಕೊಡುವ ಅಮಾನವೀಯ ಆಚರಣೆ ನಡೆಸುತ್ತಿದ್ದು, ಬಲಿ ನೀಡಬೇಕಾದದ್ದು, ಕಾಮ, ಕ್ರೋಧ, ಮದ, ಮತ್ಸರ ಮತ್ತಿತರ ಅರಿಷಡ್ವರ್ಗಗಳನ್ನೇ ಹೊರತು, ಮೂಕ ಪ್ರಾಣಿಗಳನ್ನಲ್ಲ’ ಎಂದು ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.ತಾಲ್ಲೂಕಿನ ತಾಳಕಟ್ಟದಲ್ಲಿ ಸೋಮವಾರ ಕರಿಯಮ್ಮದೇವಿ ಸಮುದಾಯ ಭವನ ಉದ್ಘಾಟಿಸಿ ಅವರು ಮಾತನಾಡಿದರು.‘ಮನುಷ್ಯ ಅಹಂಕಾರದ ಮದದಲ್ಲಿ ತೇಲುತ್ತಿದ್ದು, ಅಮಾನವೀಯ ವರ್ತನೆಗಳಲ್ಲಿ ತೊಡಗಿದ್ದಾನೆ. ಅವನಲ್ಲಿ ಈರ್ಷೆ, ಸ್ವಾರ್ಥಗಳು ತುಂಬಿ ತುಳುಕುತ್ತಿದ್ದು, ಕೆಡುಕಿನ ಪರಾಕಾಷ್ಠೆ ತಲುಪಿದ್ದಾನೆ. ಇದಕ್ಕೆ ಪ್ರಸ್ತುತ ಪರಿಸ್ಥಿತಿ, ಒತ್ತಡ, ಪ್ರಭಾವಗಳು ಕಾರಣವಿರಬಹುದು. ಎಲ್ಲರೂ ಮಾನವೀಯ ನೆಲೆಯಲ್ಲಿ ಬದುಕಬೇಕಿದ್ದು, ಉತ್ತಮ ಸಂಸ್ಕಾರ, ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕಿದೆ. ಕುಟುಂಬ, ನೆರೆಹೊರೆ, ಗ್ರಾಮಗಳಲ್ಲಿ ಪ್ರೀತಿ, ಸ್ನೇಹ, ಸೌಹಾರ್ದ, ಸಹಕಾರ, ಹೊಂದಾಣಿಕೆಗಳು ಮನೆಮಾಡುವುದರಿಂದ ಇದು ಸಾಧ್ಯವಾಗುತ್ತದೆ’ ಎಂದರು.ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮನುಷ್ಯ ಆಡಂಬರದ ಜೀವನಕ್ಕೆ ಮಾರು ಹೋಗುತ್ತಿದ್ದಾನೆ. ಮೂಢನಂಬಿಕೆ, ಅಂಧಾನುಕರಣೆಗಳಿಂದ ಸ್ವಾಭಿಮಾನವನ್ನೇ ಬಲಿಕೊಡುತ್ತಿದ್ದಾನೆ. ಸ್ವಂತಿಕೆಯನ್ನು ಕಳೆದುಕೊಂಡು ಯಾಂತ್ರಿಕ ಜೀವನ ನಡೆಸುತ್ತಿದ್ದಾನೆ. ಕಲುಷಿತ ವಾತಾವರಣ ನಿರ್ಮೂಲನೆಯಾಗಿ, ಸ್ವಾಸ್ಥ್ಯ ಸಮಾಜದ ನಿರ್ಮಾಣ ಆಗಬೇಕಿದೆ ಎಂದರು. ಕಾರ್ಯಕ್ರಮದ ಅಂಗವಾಗಿ ನಡೆದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 10 ಜೋಡಿಗಳು ಸತಿಪತಿಗಳಾದರು.ನಂದಿಗುಡಿ ಸಿದ್ದರಾಮೇಶ್ವರ ದೇಶೀಕೇಂದ್ರ ಸ್ವಾಮೀಜಿ, ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ, ಇಮ್ಮಡಿ ಸಿದ್ದರಾಮ ಸ್ವಾಮೀಜಿ, ಪುರುಷೋತ್ತಮಾನಂದ ಸ್ವಾಮೀಜಿ, ಶಾಸಕ ಎಂ. ಚಂದ್ರಪ್ಪ, ಎಸ್.ಕೆ. ಬಸವರಾಜನ್, ಮಾಜಿ ಶಾಸಕರಾದ ಎ.ವಿ. ಉಮಾಪತಿ, ಎಚ್. ಆಂಜನೇಯ, ಜಿ.ಪಂ. ಸದಸ್ಯೆ ಪಾರ್ವತಮ್ಮ, ತಾ.ಪಂ. ಸದಸ್ಯೆ ಶಕುಂತಲಾ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.