ಶುಕ್ರವಾರ, ಮೇ 7, 2021
19 °C

ತಾಳಿಕೋಟೆ ಯಾತ್ರಾರ್ಥಿಗಳು ಸುರಕ್ಷಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾಳಿಕೋಟೆ: ಉತ್ತರಭಾರತದ ಕೇದಾರನಾಥ ಮತ್ತು ಬದರಿನಾಥಗಳಿಗೆ ಯಾತ್ರೆಗೆ ಹೋಗಿದ್ದ ಪಟ್ಟಣದ ಹೆಬಸೂರ ಕುಟುಂಬದ ಎಂಟು ಜನ ಸದಸ್ಯರು ಸುರಕ್ಷಿತವಾಗಿರುವರೆಂದು ಕುಟುಂಬದ ವಾಸುದೇವ ಹೆಬಸೂರ ತಿಳಿಸಿದ್ದಾರೆ.ಪಟ್ಟಣದ ಹೆಬಸೂರ ಕುಟುಂಬದ ಬಾಗಲಕೋಟೆಯಲ್ಲಿ ಜಲ ನಿರ್ಮಲ ಯೋಜನೆಯಲ್ಲಿ ಎಇಇ ಆಗಿ ಸೇವೆ ಸಲ್ಲಿಸುತ್ತಿರುವ ನರಸಯ್ಯಶೆಟ್ಟಿ, ಅವರ ಪತ್ನಿ ಪಂಕಜಶೆಟ್ಟಿ, ಹಾಗೂ ಪುತ್ರಿ ಮೇಘಾಶೆಟ್ಟಿ ಸಂಬಂಧಿಗಳಾದ ಗುಲ್ಬರ್ಗಾದ ಕೇದಾರನಾಥ ಜಾಜಿ, ಸುಜಾತಾ ಜಾಜಿ, ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯ ರಾಘವೇಂದ್ರ ಶೆಟ್ಟಿ, ಗೋಪಾಲಶೆಟ್ಟಿ, ಮೇಘಾಳ ಅತ್ತೆ ಸೇರಿ ಎಂಟು ಜನ ಕಳೆದ 13ರಂದು ಬೆಂಗಳೂರಿನಿಂದ ದೆಹಲಿ ಮಾರ್ಗವಾಗಿ ಡೆಹ್ರಾಡೂನ್‌ಗೆ ಹೋಗಿದ್ದಾರೆ. ಅಲ್ಲಿ ಗದ್ವಾಲ್ ಟ್ರಾವೆಲ್ಸ್ ಮೂಲಕ ಬದರಿನಾಥದತ್ತ ಪಯಣ ಬೆಳೆಸಿದ್ದರು. 14ರಂದು ಸಂಜೆ 4 ಗಂಟೆಗೆ ಒಮ್ಮೆ ತಾಳಿಕೋಟೆಯಲ್ಲಿರುವ ಸಹೋದರ ವಾಸುದೇವ ಜೊತೆ ಮಾತನಾಡಿದ್ದರು. ನಂತರ 18ರ ಮಧ್ಯಾಹ್ನ 1 ಗಂಟೆ ವರೆಗೆ ಸಂಪರ್ಕ ಕಡಿತಗೊಂಡ ಪರಿಣಾಮವಾಗಿ ಆತಂಕವಾಗಿತ್ತು ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.ಉತ್ತರ ಭಾರತದಲ್ಲಿನ  ಭಾರಿ ಮಳೆಯಲ್ಲಿ ಸಿಲುಕಿ ಅಪಾಯಕ್ಕೆ ಸಿಲುಕಿರುವ ಆತಂಕವಿತ್ತು. ಕುಟುಂಬದ ಸದಸ್ಯರೊಬ್ಬರು ಕ್ಷೇಮದ ಬಗ್ಗೆ ಮೊಬೈಲ್ ಸಂದೇಶ ಕಳುಹಿಸಿದ್ದರು. ಅದು ಮಂಗಳವಾರ ಮ.1ಗಂಟೆಗೆ  ಸ್ವೀಕರಿಸಿದ ಬಗ್ಗೆ ಮರು ಸಂದೇಶ ಬಂದಿತು. ತಟ್ಟನೆ ಜಾಗೃತಗೊಂಡ ಕುಟುಂಬ ಅವರನ್ನು ಸಂಪರ್ಕಿಸಿದಾಗ ಸಂಪರ್ಕಕ್ಕೆ ಬಂದ ರಾಘವೇಂದ್ರಶೆಟ್ಟಿ ಅವರು `ಭಾರಿ ಮಳೆ ಕಾರಣ ಟಾವರ್ ಕೆಲಸ ಮಾಡುತ್ತಿಲ್ಲ. ಮೊಬೈಲ್‌ನಲ್ಲಿ ಚಾರ್ಜ್ ಇಲ್ಲ. ಗಾಬರಿಯಾಗಬೇಡಿ, ಬದರಿಯಲ್ಲಿ ಸುರಕ್ಷಿತವಾಗಿದ್ದೇವೆ' ಎಂದು ತಿಳಿಸಿದರು. `ಬುಧವಾರ ಬೆಂಗಳೂರಿಗೆ ಮರುಪ್ರಯಾಣಕ್ಕೆ ವಿಮಾನದ ಟಿಕೆಟ್ ಮುಂಗಡ ಕಾಯ್ದಿರಿಸಿದ್ದನ್ನು ರದ್ದುಗೊಳಿಸಲಾಗಿದೆ. ಇನ್ನೂ ಮೂರು ದಿನಗಳ ಕಾಲ ಇಲ್ಲಿ ಸಂಚಾರಕ್ಕೆ ವ್ಯತ್ಯಯವಿದೆ ಎಂದು ಎಲ್ಲ ಸರಿಯಾದ ಮೇಲೆ ಊರಿಗೆ ಬರುತ್ತೇವೆ ಎಂದು ಅವರು ತಿಳಿಸಿದ್ದಾರೆ. ಇದರಿಂದಾಗಿ ಆತಂಕ ತುಂಬಿದ ಮುಖಗಳಲ್ಲಿ  ಮತ್ತೆ ಗೆಲುವು ಬಂದಂತಾಗಿದೆ' ಎಂದು ವಾಸುದೇವ ತಿಳಿಸಿದ್ದಾರೆ.ಕ್ಷೇಮವಾಗಿದ್ದೇವೆ: ಹರಿದ್ವಾರದಿಂದ 15 ಕಿಮೀ ದೂರದಲ್ಲಿನ ಪತಂಜಲಿಯೋಗ ಪೀಠದಲ್ಲಿ ಜರುಗಲಿರುವ ಪತಂಜಲಿ ಯೋಗ ಶಿಬಿರದಲ್ಲಿ ಪಾಲ್ಗೊಳ್ಳಲು ವಿಜಾಪುರದ ಇಬ್ಬರು ಸೇರಿ ಕರ್ನಾಟಕದಿಂದ ಐದು ಜನರ ತಂಡ ತೆರಳಿತ್ತು. ತಂಡದಲ್ಲಿರುವ ಆರ್‌ಟಿಐ ಕಾರ್ಯಕರ್ತ ಬಂಟನೂರಿನ ಶಾಂತಗೌಡ ನಾವದಗಿ ಸುರಕ್ಷಿತವಾಗಿರುವ ಬಗ್ಗೆ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.14ರ ಸಂಜೆ ಹರಿದ್ವಾರಕ್ಕೆ ಬಂದೆವು. 16ರಂದು ಹರಿದ್ವಾರದಿಂದ 30 ಕಿಮೀ ದೂರದ ಬಾಬುರಿಲ್ಲಾ ಗ್ರಾಮವೊಂದಕ್ಕೆ ತೆರಳಿದ್ದೆವು. ದಾರಿ ಮಧ್ಯ ಮಳೆಗೆ ಸಿಲುಕಿದೆವು. ನದಿಯೊಂದು ದಾರಿ ಬದಲಾಯಿಸಿ ರಸ್ತೆಗೆ ನುಗ್ಗಿತು. ನಾವು  ಪ್ರವಾಹದಲ್ಲಿ ಮಧ್ಯೆ ಸಿಲುಕಿಕೊಂಡಿದ್ದೆವು. ಏಳು ತಾಸು ನೀರಲ್ಲೆ ನಮ್ಮ ವಾಹನ ಇತ್ತು. ಹಿಂದೆ-ಮುಂದೆ ಅನೇಕ ವಾಹನಗಳು ಪ್ರವಾಹದಲ್ಲಿ ಸಿಲುಕಿಕೊಂಡಿದ್ದವು. ಪ್ರವಾಹ ಹೆಚ್ಚಾಗತೊಡಗಿತ್ತು. ನಾವು ಬದುಕಿ ಹೊರಗೆ ಬರುವ ಬಗ್ಗೆ ನಂಬಿಕೆ ಇರಲಿಲ್ಲ. ನಮ್ಮ ಅದೃಷ್ಟ ಹಾಗೂ ಚಾಲಕನ ಚಾಕಚಕ್ಯತೆಯಿಂದ ಪಾರಾದೆವು. ಅದೊಂದು ಭಯಾನಕ ಅನುಭವ ಎಂದು ತಮ್ಮ ಅನುಭವ ಹಂಚಿಕೊಂಡರು.`ಇದೇ  20ರಿಂದ ಚಾರಧಾಮಗಳಲ್ಲಿ ಒಂದಾದ ಗಂಗೋತ್ರಿಯಲ್ಲಿ ಮೊದಲ ಶಿಬಿರವಿತ್ತು. ಹೃಷಿಕೇಶ ರಸ್ತೆ ಸಂಪರ್ಕ ಕಡಿತಗೊಂಡಿದೆ. ಯಮನೋತ್ರಿ, ಕೇದಾರನಾಥ, ಬದರಿನಾಥಗಳಲ್ಲಿ ಅಸ್ತವ್ಯಸ್ತವಾಗಿದೆ. ಹೀಗಾಗಿ 20ರಂದು ಇಲ್ಲಿಂದ ಬಿಟ್ಟು ತಾಳಿಕೋಟೆಗೆ 23ರಂದು ಬರುತ್ತೇವೆ' ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.