ಮಂಗಳವಾರ, ಮೇ 11, 2021
27 °C

ತಾಳೆಗರಿಗಳು ಕನ್ನಡದ ಉತ್ತಮ ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಪ್ರಾಚೀನ ತಾಳೆಗರಿಗಳನ್ನು ಸರ್ಕಾರದ ಸೊತ್ತು ಎಂದು ಘೋಷಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಶಿಫಾರಸು ಮಾಡಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ವಿಷ್ಣು ನಾಯ್ಕ ಹೇಳಿದರು.ಅವರು ನಗರದ ವಿನಾಯಕ ಸಭಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಹಳಗನ್ನಡ ಕಾವ್ಯ: ಓದು, ವ್ಯಾಖ್ಯಾನ ಮತ್ತು ಚಿತ್ರ-ಗಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಾಚೀನ ತಾಳೆಗರಿಗಳು ಕನ್ನಡದ ಉತ್ತಮ ದಾಖಲೆಗಳಾಗಿದ್ದು, ಸರ್ಕಾರ ಅವನ್ನು ಕಲೆ ಹಾಕುವಂತಾಗಬೇಕು. ವ್ಯಕ್ತಿಗಳ ನೆಲೆಯಲ್ಲಿರುವ ತಾಳೆ ಗರಿ ಸಂಗ್ರಹಿಸಿ ಅವರಿಗೆ ಮನತುಂಬಿ ಬರುವಷ್ಟು ಗೌರವ ಸಂಭಾವನೆ ನೀಡಬೇಕು.

 

ಕಣ್ಮರೆ ಆಗುತ್ತಿರುವ ದಾಖಲೆ ರಕ್ಷಣೆ ಮಾಡಬೇಕು. ತಾಳೆಗರಿ ಪ್ರಸ್ತಾಪ ಸೇರಿದಂತೆ 27 ಶಿಫಾರಸುಗಳನ್ನು ಸರ್ಕಾರದ ಮುಂದೆ ಇಡಲಾಗಿದೆ. ಎಲ್ಲ ಶಾಸಕರಿಗೆ, ಎಲ್ಲ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರ ಕಚೇರಿಗೆ ಶಿಫಾರಸು ಪ್ರತಿ ತಲುಪಿಸಲಾಗುತ್ತಿದೆ ಎಂದರು.ಹಳಗನ್ನಡ ಕಾವ್ಯದಲ್ಲಿ ಬದುಕಿದೆ. ಹಳಗನ್ನಡ ಪಠ್ಯವಾಗಿ ಅಲ್ಲ ಸಂಸ್ಕೃತಿಯ ಭಾಗವಾಗಿ ನೋಡಬೇಕು. ರನ್ನ, ಪಂಪನ ಕಾವ್ಯಗಳು ಬಾಯೊಳಗೆ ಹೊಕ್ಕಿದರೆ ಎಂದೂ ಮರೆಯುವಂತಿಲ್ಲ ಅಷ್ಟೊಂದು ಅದ್ಭುತವಾಗಿವೆ. ಆದರೆ ಇಂದಿನ ಶಿಕ್ಷಕರಿಗೇ ಹಳಗನ್ನಡ ಶಬ್ದ, ವಾಕ್ಯ ಪ್ರಯೋಗವೇ ಗೊತ್ತಿಲ್ಲ, ಮಕ್ಕಳಿಗೆ ಏನು ಕಲಿಸಿಯಾರು ಎಂದು ಅವರು ವಿಷಾದ ವ್ಯಕ್ತಪಡಿಸಿದರು.ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಡಿ.ಕೆ.ಶಿವಕುಮಾರ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ರಂಗಾಯಣದ ನಿರ್ದೇಶಕ ಬಿ.ವಿ.ರಾಜಾರಾಂ, ಪ್ರೊ. ವಿಠ್ಠಲ ಭಂಡಾರಿ ಉಪಸ್ಥಿತರಿದ್ದರು. ಪ್ರೌಢಶಾಲೆ, ಕಾಲೇಜ್ ಶಿಕ್ಷಕರು ಪಾಲ್ಗೊಂಡಿದ್ದರು. ನಂತರ ಕಾವ್ಯ-ವ್ಯಾಖ್ಯಾನ, ಗಾನ-ವ್ಯಾಖ್ಯಾನ, ಚಿತ್ರ-ವ್ಯಾಖ್ಯಾನ ಕುರಿತು ಗೋಷ್ಠಿಗಳು ನಡೆದವು.`ದೇಶಾದ್ಯಂತ ಕನ್ನಡ ನಾಟಕ ಪ್ರದರ್ಶನ~

ಶಿರಸಿ: ಕನ್ನಡ ರಂಗಭೂಮಿಯ ಮಹತ್ವದ ಕೃತಿಗಳನ್ನು ದೇಶದ ವಿವಿಧ ರಾಜ್ಯಗಳಲ್ಲಿ ಪ್ರದರ್ಶಿಸಿ ಕನ್ನಡ ರಂಗಭೂಮಿಯ ಸಮೃದ್ಧತೆ ತೋರಿಸುವ ಯೋಜನೆ ಇದೆ ಎಂದು ಮೈಸೂರು ರಂಗಾಯಣದ ನಿರ್ದೇಶಕ ಬಿ.ವಿ. ರಾಜಾರಾಂ ಹೇಳಿದರು.ಸೋಮವಾರ ನಗರಕ್ಕೆ ಆಗಮಿಸಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. `ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ರಂಗಾಯಣದ ನಾಟಕ ಪ್ರದರ್ಶಿಸುವ ಯೋಜನೆ ರೂಪಿಸಲಾಗುತ್ತಿದೆ. ರಂಗಾಯಣ ಈಗ ಮೈಸೂರು ಅಲ್ಲದೇ ಧಾರವಾಡ ಮತ್ತು ಶಿವಮೊಗ್ಗದಲ್ಲೂ ಕಾರ್ಯ ನಿರ್ವಹಿಸುತ್ತಿದೆ. ಗುಲ್ಬರ್ಗಾ, ಪುತ್ತೂರಲ್ಲೂ ರಂಗಾಯಣದ ಕೇಂದ್ರಗಳು ಕಾರ್ಯ ನಿರ್ವಹಿಸಲಿವೆ ಎಂದರು.ರಂಗಭೂಮಿ ಸಾಧಕ ಬಿ.ವಿ. ಕಾರಂತರ ಕುರಿತು ರಂಗ ಭಂಡಾರ ಪ್ರಾರಂಭಿಸುವ ಉದ್ದೇಶವಿದೆ. ರಂಗಭೂಮಿ, ವಾದ್ಯ, ಪುಸ್ತಕ, ಸಿಡಿ ಸೇರಿದಂತೆ ವಿವಿಧ ಪರಿಕರಗಳನ್ನೊಳಗೊಂಡ ರಂಗ ಭಂಡಾರ ನಿರ್ಮಾಣ ಯೋಜನೆಯನ್ನು ಮೂರು ವರ್ಷದಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ರಂಗ ಭಂಡಾರ ಮುಂದಿನ ಸಂಶೋಧನಾ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಇರಬೇಕು. ರಂಗಾಯಣದ ಕುರಿತು ಇನ್ನಷ್ಟು ದಾಖಲೀಕರಣ ಮಾಡುವ ಅಗತ್ಯವಿದೆ ಎಂದರು. ರಂಗಾಯಣದಿಂದ ನಿರಂತರ ನಾಟಕ ಪ್ರದರ್ಶನ ನೀಡುವ ಯೋಜನೆ ಇದೆ. ಹಾಲಿ ಚಾಲನೆಯಲ್ಲಿರುವ ವಾರದ ನಾಟಕ ಪ್ರದರ್ಶನ, ಭೂಮಿಗೀತ ಕಾರ್ಯಕ್ರಮ, ರಂಗ ಶಾಲೆ ಮುಂದುವರಿಕೆ, ಬಹುರೂಪಿ ನಾಟಕೋತ್ಸವ, ಚಿಣ್ಣರ ಮೇಳ ಕಾರ್ಯಕ್ರಮಗಳನ್ನು ಮುಂದುವರೆಸುವ ಜೊತೆಗೆ ಹಿರಿಯ ಕಲಾವಿದರನ್ನು ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳಲು ಮಕ್ಕಳ ರಂಗಭೂಮಿ ಕೆಲಸಕ್ಕೆ ಚಾಲನೆ ನೀಡಬೇಕಾಗಿದೆ ಎಂದು ಹೇಳಿದರು.ನಾಟಕ ಅಕಾಡೆಮಿ ಅಧ್ಯಕ್ಷ ಅವಧಿಯಲ್ಲಿ ರಂಗಭೂಮಿ ದಾಖಲಾತಿ, ಮಹಿಳೆ ಮತ್ತು ರಂಗಭೂಮಿ ಪುಸ್ತಕ, ಮಕ್ಕಳ ಸಮಾವೇಶ ಮಾಡಲಾಗಿದೆ. ನಾಟಕ ಅಕಾಡೆಮಿಯಲ್ಲಿ ಆಗಬೇಕಾದ ಕೆಲಸಗಳು ಇನ್ನೂ ಸಾಕಷ್ಟಿವೆ. 30 ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ನಾಟಕ ಅಕಾಡೆಮಿಗೆ ಈ ಮೊದಲು ನೀಡುತ್ತಿದ್ದ ರೂ.16ಲಕ್ಷ ಅನುದಾನವನ್ನು  ಸರ್ಕಾರ 40ಲಕ್ಷಕ್ಕೆ ಹೆಚ್ಚಿಸಿದೆ ಆದರೂ ಈ ಅನುದಾನ ಸಾಲದಾಗುತ್ತಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.