ತಾಳೆ ಬೆಳೆದು ಲಾಭ ಗಳಿಸಿದ ಸಹೋದರರು

7
ಕೃಷಿ ಚೇತನ

ತಾಳೆ ಬೆಳೆದು ಲಾಭ ಗಳಿಸಿದ ಸಹೋದರರು

Published:
Updated:

ಕೃಷಿಯಲ್ಲೇನಿದೆ? ಎಂದು ಕೊಂಕು ಮಾತನಾಡುವ ಯುವ ಪೀಳಿಗೆಗೆ, ಕೃಷಿಯಿಂದ ಯಾವುದೇ ಸರ್ಕಾರಿ ನೌಕರಿಗಿಂತಲೂ ಕಡಿಮೆ ಇಲ್ಲದ ಆದಾಯ ಪಡೆಯುವ ಜತೆಗೆ ಆರೋಗ್ಯಪೂರ್ಣ, ಸಂತೃಪ್ತ ಜೀವನ ನಡೆಸಬಹುದು ಎಂದು ತೋರಿಸಿಕೊಟ್ಟಿದ್ದಾರೆ ಹರಿಹರ ತಾಲ್ಲೂಕಿನ ಕೊಂಡಜ್ಜಿ ಗ್ರಾಮದ ದೊಡ್ಡನಾರಪ್ಪರ್ ಮನೆತನದ ಮಲ್ಲಿಕಾರ್ಜುನ ಮತ್ತು ರಾಜೇಂದ್ರ ಸಹೋದರರು.ಕೊಂಡಜ್ಜಿ ಕೆರೆಯ ಸಮೀಪ 5 ಎಕರೆ 15 ಗುಂಟೆ ಹಾಗೂ ಕೊಂಡಜ್ಜಿ-ಗಂಗನರಸಿಗೆ ರಸ್ತೆಯ ಆಂಜನೇಯ ದೇವಸ್ಥಾನದ ಬಳಿ 5 ಎಕರೆ 20 ಗುಂಟೆ ತೋಟ ಬಸವರಾಜಪ್ಪ ದೊಡ್ಡನಾರಪ್ಪರ್ ಹೆಸರಿನಲ್ಲಿದೆ. ಮಕ್ಕಳಾದ ಮಲ್ಲಿಕಾರ್ಜುನ ಮತ್ತು ರಾಜೇಂದ್ರ ತೋಟದ ನಿರ್ವಹಣೆ ನೊಗ ಹೊತ್ತಿದ್ದಾರೆ.ಎರಡೂ ತೋಟದಲ್ಲಿ ಮಳೆ ನೀರು ಶೇಖರಣಾ ಹೊಂಡಗಳಿವೆ. ಪಕ್ಕದಲ್ಲೇ ಚಾನಲ್ ನೀರು ಹರಿಯುತ್ತಿದೆ. ಇದರಿಂದ ಕೊಳವೆ ಬಾವಿಯ ಅಂರ್ತಜಲ ಯಥೇಚ್ಛವಾಗಿದೆ. ಆಂಜನೇಯ ದೇವಸ್ಥಾನ ಬಳಿ ಇರುವ ತೋಟದಲ್ಲಿ ನಾಲ್ಕು ವರ್ಷದ ಹಿಂದೆ ತಾಳೆ ಬೆಳೆಯಲು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಲಹೆ ನೀಡಿದರು. ಅದರಂತೆ 295 ತಾಳೆ ಗಿಡಗಳನ್ನು ನೆಡಲಾಯಿತು. ಮಧ್ಯಂತರ ಹಾಲಗುಂಬಳ, ಅವರೆ, ಬದನೆಕಾಯಿ, ಬೀನ್ಸ್ ಬೆಳೆದು ಲಾಭ ಪಡೆದಿದ್ದಾರೆ.200 ಕರಿಬೇವಿನ ಗಿಡಗಳಿದ್ದು, ಮೂರು ಬಾರಿ ತೃಪ್ತಿಕರ ಲಾಭಾಂಶ ನೀಡಿದೆ. ಅದರ ಜತೆಯಲ್ಲೇ 900 ಪಪ್ಪಾಯಿ ಗಿಡಗಳಿದ್ದು ನಾಲ್ಕು ಬಾರಿ ಬಂದ ಫಸಲಿನಿಂದ ಸುಮಾರು ಒಂದುಕಾಲು ಲಕ್ಷ ಆದಾಯ ಬಂದಿದೆ. ಇದೇ ತೋಟದಲ್ಲಿ 200 ನುಗ್ಗೆಕಾಯಿ ಮರಗಳಿದ್ದು ಈಗ ಹೂವಾಡುತ್ತಿವೆ. ಕೆಲವೇ ತಿಂಗಳುಗಳಲ್ಲಿ ಫಸಲು ದೊರೆಯುವ ನಿರೀಕ್ಷೆ ಇದೆ.ಎರಡು ವರ್ಷದ ಹಿಂದೆ ನೆಟ್ಟಿದ್ದ ನಾಲ್ಕಾರು ಔಡಲದ ಬೀಜ ಎರಡು ವರ್ಷಗಳಲ್ಲಿ 50 ಗಿಡಗಳಾಗಿವೆ. ಇತ್ತೀಚೆಗೆ ಕ್ವಿಂಟಲ್‌ಗೆ ್ಙ 3,500 ಬೆಲೆ ಇದ್ದಾಗ 3 ಕ್ವಿಂಟಲ್ ಔಡಲದ ಬೀಜ ಮಾರಿದ್ದೇವೆ. ಎರಡು ವರ್ಷದ ಹಿಂದೆ ತೋಟದ ಬದುವಿನಲ್ಲಿ 100 ತೇಗ ಹಾಗೂ 250 ಸಿಲ್ವರ್ ಸಸಿಗಳನ್ನು ನೆಟ್ಟಿದ್ದೇವೆ. ಆರಂಭದಲ್ಲಿ ತಾಳೆ ಹಾಕಲು ನಮ್ಮ ಅಪ್ಪಾಜಿ ವಿರೋಧಿಸಿದ್ದರು. ನಾಲ್ಕು ವರ್ಷಗಳ ತಾಳ್ಮೆಯ ನಂತರ ತಾಳೆ ಫಸಲು ನೀಡಲು ಆರಂಭಿಸಿದೆ. ಆರಂಭದಲ್ಲೇ ಎರಡೂವರೆ ಟನ್ ತಾಳೆಹಣ್ಣು ಮಾರಾಟ ಮಾಡಿದ್ದೇವೆ. ಇದರಿಂದ ಬಂದ ಲಾಭಾಂಶ, ಅಪ್ಪಾಜಿ ಅವರಿಗೆ ತಾಳೆಯ ಬಗ್ಗೆ ಇದ್ದ ಭಯದಿಂದ ಮುಕ್ತಗೊಳಿಸಿದೆ ಎನ್ನುತ್ತಾರೆ ರಾಜೇಂದ್ರ.ಕೊಂಡಜ್ಜಿ ಕೆರೆಯ ಸಮೀಪದಲ್ಲಿರುವ ತೋಟದಲ್ಲಿ 2,250 ಅಡಿಕೆ, 1,000 ಬಾಳೆ, 200 ತೆಂಗು, 60 ತಾಳೆ ಮರಗಳಿವೆ. 50 ನಿಂಬೆ ಗಿಡಗಳಿದ್ದು, ಪ್ರತಿ ವರ್ಷ ಒಂದೊಂದು ಗಿಡದಿಂದ 500 ಕಾಯಿ ಇಳುವರಿ ಸಿಗುತ್ತದೆ. 80ಕ್ಕೂ ಹೆಚ್ಚು ಕಾಳು ಮೆಣಸಿನ ಬಳ್ಳಿಗಳು ತೆಂಗಿನಮರಗಳಿಗೆ ಒತ್ತಾಗಿ ಹಬ್ಬಿ ಉತ್ತಮ ಫಸಲಿನಿಂದ ತೂಗಾಡುತ್ತಿದೆ. ಇದಲ್ಲದೇ ಸಂಬಾರ ಪದಾರ್ಥಗಳಾದ ಚಕ್ಕೆ ಗಿಡ, ಪವಾಲ್ ಎಲೆ ಗಿಡಗಳನ್ನು ಬೆಳೆಸಿದ್ದಾರೆ. ಹತ್ತು ವರ್ಷದ ಹಿಂದೆ ತೋಟದವ ಬದುವಿನಲ್ಲಿ ನೆಟ್ಟ 200 ತೇಗ, 200 ಸಿಲ್ವರ್ ಮರಗಳು 20 ಅಡಿಗೂ ಎತ್ತರಕ್ಕೆ ಬೆಳೆದು ತೋಟಕ್ಕೆ ನೈಸರ್ಗಿಕ ಬೇಲಿಯಾಗಿ ರಕ್ಷಣೆ ನೀಡುತ್ತಿವೆ. ಮಧ್ಯಂತರ ಮುಕ್ಕಾಲು ಕರೆ ತೋಟದಲ್ಲಿ ಚೆಂಡು ಹೂವಿನ ಕೃಷಿಯಲ್ಲಿ 2ಟನ್ ಇಳುವರಿ ದೊರೆತಿದೆ. ಮನೆಗೆ ಬೇಕಾದ ತಕರಾರಿಗಳನ್ನು ಇಲ್ಲೇ ಬೆಳೆದುಕೊಳ್ಳುತ್ತಾರೆ.ಈ ಮೊದಲು ಒಂದು ಎಕರೆ ಪ್ರದೇಶದಲ್ಲಿ ಮಾವಿನ ತೋಪು ಮಾಡಿದ್ದರು. ನೀಲಂ, ರಸಪುರಿ ಮೊದಲಾದ ಜಾತಿ 60 ಮರಗಳು ಮೂರು ವರ್ಷಕ್ಕೆ ಇಳುವರಿ ಪ್ರಾರಂಭಿಸಿತ್ತು. ನೆಲದ ಮೇಲೆ ಕುಳಿತುಕೊಂಡು ಫಲ ಬಿಡಿಸಿಕೊಳ್ಳುವಷ್ಟು ಮಾವಿನ ಫಸಲು ದೃಷ್ಟಿಯಾಗುವಂತಿತ್ತು. ನಾಲ್ಕು ವರ್ಷ ಉತ್ತಮ ಫಸಲು ದೊರೆತು ಒಳ್ಳೆಯ ಲಾಭ ಪಡೆದೆವು. ಐದನೇ ವರ್ಷದಿಂದ ಇದ್ದಕ್ಕಿದ್ದಂತೆ ತೋಟದಲ್ಲಿ ಮಂಗ ಮತ್ತು ಮುಸ್ಯಾಗಳ ಕಾಟ ಪ್ರಾರಂಭವಾಯಿತು. ತಿನ್ನುವುದು ಒಂದೇ ಆದರೂ ಹಾಳು ಮಾಡುವುದು ಹತ್ತು ಎಂಬಂತೆ ಮಂಗಗಳ ಗುಂಪು ತಿಂದದ್ದಕ್ಕಿಂತ ಹಾಳು ಮಾಡಿದ್ದೇ ಹೆಚ್ಚು. ಹರಸಾಹಸ ಮಾಡಿದರೂ, ಅವುಗಳ ಕಾಟ ತಡೆಯಲು ವಿಫಲರಾದೆವು. ಎರಡು ವರ್ಷ ಬೆಳೆದ ಮಾವೆಲ್ಲಾ ಮಂಗಗಳ ಕಾಟದಿಂದ ಮಣ್ಣು ಪಾಲಾಯಿತು. ಮಾವಿನ ಮರಗಳನ್ನು ತೆಗೆಸಲು ಯೋಚನೆ ಮಾಡಿದೆವು. ಆದರೆ, ನಮ್ಮ ತಂದೆ ಇದಕ್ಕೆ ಒಪ್ಪಲಿಲ್ಲ. ಅವರನ್ನು ಬೆಂಗಳೂರಿಗೆ ಕಳುಹಿಸಿ, ಅವರು ಬರುವುದರೊಳಗಾಗಿ ಎಲ್ಲಾ ಮರಗಳನ್ನು ಕಡಿಸಿ ಹಾಕಿದೆವು.ಪ್ರಯಾಣದಿಂದ ಹಿಂತಿರುಗಿದ ಅಪ್ಪ, ಮಾವಿನಮರಗಳನ್ನು ಕಡಿಸಿ ಹಾಕಿದ ಸಂಗತಿ ತಿಳಿದು, ಫಲಕ್ಕೆ ಬಂದ ಮರಗಳನ್ನು ಕಡಿಯುವುದು ತಪ್ಪು ಎಂದು ಮಕ್ಕಳ ಮೇಲೆ ಕೂಗಾಡಿ ಸಿಟ್ಟಾದರು. ಅವರ ಸಿಟ್ಟು ತಣಿದದ್ದು, ಮಕ್ಕಳಿಬ್ಬರೂ ಸೇರಿ ಅದೇ ಜಾಗದಲ್ಲಿ ಅಡಿಕೆ ಸಸಿ ನೆಟ್ಟಾಗ.

ಮನೆಯ ಹಿತ್ತಲಿನಲ್ಲಿ ಅಡಿಕೆ ಸಂಸ್ಕರಣೆ ಘಟಕ ಪ್ರಾರಂಭಿಸಿದ್ದೇವೆ. ಹೊಸದಾಗಿ ಖರೀದಿಸಿದ ಅಡಿಕೆ ಸುಲಿಯುವ ಯಂತ್ರಕ್ಕೆ ತೋಟಗಾರಿಕೆ ಇಲಾಖೆ ಸಹಾಯಧನ ನೀಡಿದೆ. ಸಂಸ್ಕರಣೆಗೊಂಡ ಅಡಿಕೆಯನ್ನು ನೇರವಾಗಿ ಮಾರುಕಟ್ಟೆಗೆ ಮಾರಾಟ ಮಾಡುವುದರಿಂದ ಉತ್ತಮ ಆದಾಯ ದೊರೆಯುತ್ತಿದೆ. ಗೊಬರ್ ಗ್ಯಾಸ್‌ನ ಸ್ಲರಿಯೊಂದಿಗೆ ಅಡಿಕೆ ಸಿಪ್ಪೆ ಮಿಶ್ರಣ ಮಾಡಿ ಸಾವಯವ ಗೊಬ್ಬರವಾಗಿ ಪರಿವರ್ತಿಸಿ ತೋಟಕ್ಕೆ ಬಳಸುತ್ತಿದ್ದೇವೆ. ಇದರಿಂದ ಇಳುವರಿಯೂ ಹೆಚ್ಚಿದೆ ಎಂದು ಹೆಮ್ಮೆಯಿಂದ ಬೀಗುತ್ತಾರೆ ಮಲ್ಲಿಕಾರ್ಜುನ.ಎರಡೂ ತೋಟಗಳ ಬದುವಿನ ಮೇಲೆ ವೆಲ್‌ವೆಟ್ ಬೀನ್ಸ್, ಡಯಾಂಚ. ಗ್ಲಿರಿಸಿಡಿಯಾ ಗಿಡಗಳನ್ನು ಬೆಳೆಸಿದ್ದಾರೆ. ಅಕ್ಕ-ಪಕ್ಕದ ತೋಟದವರು ತಮ್ಮ ಕಡೆ ಬೆಳೆದ ಎಲೆಯನ್ನು ಸವರಿಕೊಳ್ಳಬೇಕು ಎಂದು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ತಾವು ಮಾತ್ರ ಸಾವಯವ ಕೃಷಿ ಅನುಸರಿಸುವುದಲ್ಲದೇ ಇತರರಿಗೂ ಪ್ರೇರಣೆ ಹಾಗೂ ಪ್ರೋತ್ಸಾಹ ನೀಡುತ್ತಿದ್ದಾರೆ.ತೆಂಗಿನ ತೋಟದಲ್ಲಿ ಅಡಿಕೆ ಬೆಳೆಯುವುದು ಕಷ್ಟ. ತೆಂಗು ಮತ್ತು ಅಡಿಕೆ ಒಂದೇ ಜಾತಿಯ ಮರಗಳು. ಎರಡೂ ಮರದ ಬೇರುಗಳು ಆಳವಾಗಿ ಹಾಗೂ ಅಗಲವಾಗಿ ಹರಡಿಕೊಳ್ಳುತ್ತವೆ. ಮರಗಳು ಬೆಳೆದಂತೆ ಬೇರುಗಳು ತಳಿಕೆ ಹಾಕಿಕೊಂಡು ಉಸಿರಾಟ ಸಮಸ್ಯೆಯಿಂದ ಬೆಳವಣಿಗೆ ಕುಂಠಿತವಾಗುತ್ತದೆ ಎಂಬುದು ತಜ್ಞರ ಮಾತು. ಅದಕ್ಕೆ ಅಪವಾದ ಎಂಬಂತೆ ತೆಂಗಿನ ತೋಟದಲ್ಲಿ ಅಡಿಕೆ ಬೆಳೆದಿರುವುದು ಮಾತ್ರವಲ್ಲ ಉತ್ತಮ ಇಳುವರಿ ಪಡೆಯುವ ಮೂಲಕ ಯಶಸ್ವಿಯೂ ಆಗಿದ್ದಾರೆ.ತಾಲ್ಲೂಕು ತೋಟಗಾರಿಕೆ ಸಹಾಯಕ ನಿರ್ದೇಶಕಿ ರೇಖಾ ಹಾಗೂ ತೋಟಗಾರಿಕೆ ಸಹಾಯಕ ಅಧಿಕಾರಿ ಎಚ್.ಸಿ. ಅರುಣಕುಮಾರ್ ಕಾಲಕಾಲಕ್ಕೆ ನೀಡಿದ ಸಲಹೆ, ಸೂಚನೆ ಹಾಗೂ ಸಹಾಯದಿಂದಾಗಿ ಶೂನ್ಯ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಲು ಸಾಧ್ಯವಾಗಿದೆ. ತೋಟಗಾರಿಕೆ ಇಲಾಖೆ ಸಹಕಾರ ಸ್ಮರಣಾರ್ಹ ಎನ್ನುತ್ತಾರೆ ಬಸವರಾಜಪ್ಪ.`ಬೇಸಾಯವೆಂದರೆ ನೀ ಸಾಯ, ಮನಿ ಮಂದಿಯಲ್ಲ ಸಾಯ' ಎಂಬ ನಾಣ್ನುಡಿಗೆ ಸವಾಲಾಗುವಂತೆ ಅಣ್ಣತಮ್ಮಂದಿರಿಬ್ಬರೇ ಸುಮಾರು 11 ಎಕರೆ ತೋಟ ನಿರ್ವಹಣೆ ಮಾಡಿ, ಹೀಗೂ ತೋಟ ಮಾಡಲು ಸಾಧ್ಯ? ಎಂದು ಅಚ್ಚರಿಪಡುವಂತೆ ಸಾಧಿಸಿ ತೋರಿಸಿದ್ದಾರೆ. `ತಾಳ್ಮೆ ಇದ್ದವನು ತಾಳೆ ಬೆಳೆದು, ಲಾಭ ಪಡೆದಾನು' ಎಂಬುದನ್ನು ನಾಲ್ಕು ವರ್ಷಗಳ ತಾಳ್ಮೆಯ ತಪಸ್ಸಿ ಮೂಲಕ ಸಾಬೀತುಪಡಿಸಿದ ಕೀರ್ತಿ ಈ ಅಪೂರ್ವ ಸಹೋದರರಿಗೆ ಸಲ್ಲುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry