ತಾಳೆ ಸಂಶೋಧನಾ ಕೇಂದ್ರ ಸ್ಥಾಪನೆಗೆ ಒತ್ತಾಯ

7

ತಾಳೆ ಸಂಶೋಧನಾ ಕೇಂದ್ರ ಸ್ಥಾಪನೆಗೆ ಒತ್ತಾಯ

Published:
Updated:

ಚಾಮರಾಜನಗರ: ಜಿಲ್ಲೆಯಲ್ಲಿ ತಾಳೆ ಸಂಶೋಧನಾ ಕೇಂದ್ರ ಸ್ಥಾಪಿಸುವ ಮೂಲಕ ತಾಳೆ ಕೃಷಿಗೆ ಹೆಚ್ಚಿನ ಉತ್ತೇಜನ ನೀಡಲು ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಭಾರತೀಯ ಸಹಕಾರ ಬ್ಯಾಂಕ್ ಅಧ್ಯಕ್ಷ ಉಡಿಗಾಲ ಕುಮಾರಸ್ವಾಮಿ ಒತ್ತಾಯಿಸಿದರು.`ತಾಳೆ ಎಣ್ಣೆಗೆ ಭಾರೀ ಬೇಡಿಕೆಯಿದೆ. ತಾಳೆ ಗಿಡ ನೆಡಲು ಸರ್ಕಾರವೇ ಪ್ರೋತ್ಸಾಹಧನ ನೀಡುತ್ತದೆ. ಇದು ಬಹುವಾರ್ಷಿಕ ಬೆಳೆಯಾಗಿದ್ದು, ರೈತರಿಗೆ  ಹೆಚ್ಚಿನ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ತಾಳೆ ಬೆಳೆಯಲು ಆಸಕ್ತಿ ತೋರಬೇಕು~ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.`ಈಚೆಗೆ ತಾವು ಮಲೇಷಿಯಾ ಹಾಗೂ ಥೈಲ್ಯಾಂಡ್‌ಗೆ ಭೇಟಿ ನೀಡಿ ಅಲ್ಲಿನ ತಾಳೆ ಕೃಷಿ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ಜಿಲ್ಲೆಯಲ್ಲಿ ಒಂದು ಹೆಕ್ಟೇರ್‌ನಲ್ಲಿ ಕನಿಷ್ಠ 20ಟನ್‌ನಷ್ಟು ಉತ್ಪಾದನೆ ಮಾಡಬಹುದು. ಸರ್ಕಾರವೇ ಬೆಲೆ ನಿಗದಿ ಮಾಡಿದೆ. 1 ಮೆಟ್ರಿಕ್ ಟನ್ ತಾಳೆಗೆ 5,927 ರೂ ಧಾರಣೆ ಇದೆ. ಬೆಲೆ ಕುಸಿದರೆ ಸರ್ಕಾರವೇ ಪ್ರೋತ್ಸಾಹಧನ ನೀಡಲಿದೆ~ ಎಂದರು.ಜಿಲ್ಲೆಯಲ್ಲಿ ಒಟ್ಟು 553 ಹೆಕ್ಟೇರ್ ಪ್ರದೇಶದಲ್ಲಿ ತಾಳೆ ಬೆಳೆಯಲಾಗಿದೆ. ಇದರ ಕ್ಷೇತ್ರ ವಿಸ್ತರಣೆಗೆ ಸರ್ಕಾರ ವಿಶೇಷ ಆಸ್ಥೆವಹಿಸಿದೆ. ಒಂದು ಹೆಕ್ಟೇರ್‌ನಲ್ಲಿ 143 ತಾಳೆ ಗಿಡ ನೆಡಬಹುದು.ಸರ್ಕಾರದಿಂದಲೇ ಉಚಿತವಾಗಿ ಗಿಡ ನೀಡಲಾಗುತ್ತದೆ. ಜತೆಗೆ, ಗೊಬ್ಬರಕ್ಕಾಗಿ 20 ಸಾವಿರ ರೂ ಸಹಾಯಧನ ನೀಡುತ್ತದೆ. ನಾಲ್ಕು ವರ್ಷದ ನಂತರ ಗಿಡಗಳು ಕೋಯ್ಲಿಗೆ ಬರುತ್ತವೆ. ಅಲ್ಲಿಯವರೆಗೆ ತಾಳೆ ತೋಟದಲ್ಲಿ ಅಂತರ ಬೆಳೆ ಬೆಳೆಯಬಹುದು. ಇಳುವರಿ ಆರಂಭವಾದ ನಂತರ  ಅಂತರ ಬೆಳೆ ಬೆಳೆಯಲು ಅವಕಾಶವಿಲ್ಲ ಎಂದು ವಿವರಿಸಿದರು.ತಾಳೆ ಎಣ್ಣೆಗೆ ವಿಶ್ವ ಹಾಗೂ ದೇಶದ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಕಂಪೆನಿಗಳೇ ನೇರವಾಗಿ ತಾಳೆ ಹಣ್ಣು ಕಟಾವು ಮಾಡಿಕೊಂಡು ಹೋಗುತ್ತವೆ. ಸಾಗಣೆ ವೆಚ್ಚ ಕೂಡ ಅವರೇ ಭರಿಸುತ್ತಾರೆ.ಜತೆಗೆ, ದೇಶದಲ್ಲಿ ಎಣ್ಣೆ ಇಳುವರಿ ಆಧಾರದ ಮೇಲೆ ಬೆಲೆ ನಿಗದಿ ಸಮಿತಿ ರಚಿಸಲಾಗಿದೆ. ಈ ಸಮಿತಿಯೇ ಬೆಲೆ ನಿಗದಿ ಮಾಡಲಿದೆ. ಕನಿಷ್ಠ ಬೆಲೆ ನಿಗದಿಪಡಿಸುವುದರಿಂದ ರೈತರಿಗೆ ಯಾವುದೇ ನಷ್ಟವಾಗುವುದಿಲ್ಲ ಎಂದು ಹೇಳಿದರು.`ಸ್ವತಃ ತಾವು ಕೂಡ ತಾಳೆ ಬೆಳೆದಿದ್ದೇನೆ. ಸರ್ಕಾರದ ಸಹಾಯಧನ ಬಳಸಿಕೊಂಡು ತಾಳೆ ಬೆಳೆದು ಆದಾಯಗಳಿಸಲು ಜಿಲ್ಲೆಯ ರೈತರು ಮುಂದಾಗಬೇಕು. ಇದಕ್ಕೆ ಸೂಕ್ತ ಸಲಹೆ, ಸಹಕಾರ ನೀಡಲಾಗುವುದು~ ಎಂದು ಭರವಸೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ವಿಜಯರಾಜ್, ಗೋವಿಂದರಾಜ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry