ಗುರುವಾರ , ಜೂಲೈ 9, 2020
24 °C

ತಾಳ್ಮೆ ಪರೀಕ್ಷೆ (ತೆಲುಗು ಚಿತ್ರ: ದೊಂಗಲಮಠಾ)

ಎನ್. ಉದಯಕುಮಾರ್ Updated:

ಅಕ್ಷರ ಗಾತ್ರ : | |

ತಾಳ್ಮೆ ಪರೀಕ್ಷೆ (ತೆಲುಗು ಚಿತ್ರ: ದೊಂಗಲಮಠಾ)

ತೆಲುಗು ಸಿನಿಮಾ ನಿರ್ಮಾಣ ವೆಚ್ಚ ಮುಗಿಲು ಮುಟ್ಟಿದೆ. ವರ್ಚಸ್ವಿ ನಟರ ತಾರಾಗಣದ ಚಿತ್ರವೊಂದಕ್ಕೆ ರೂ 30 ರಿಂದ 40 ಕೋಟಿ ವೆಚ್ಚವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವೆಚ್ಚ ಕಡಿತದ ಸಾಧ್ಯತೆಗಳನ್ನು ಮನಗಾಣಿಸಲು ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಮಾಡಿರುವ ಪ್ರಯೋಗವೇ ‘ದೊಂಗಲಮುಠಾ’.ಕ್ಯಾನನ್ 5ಡಿ ಕ್ಯಾಮೆರಾ ಬಳಸಿ ಈ ಚಿತ್ರದ ಚಿತ್ರೀಕರಣವನ್ನು ಬರಿ ಐದು ದಿನಗಳಲ್ಲಿ ಪೂರ್ಣಗೊಳಿಸಿದ್ದಾರೆ. ಇದಕ್ಕೆ ಆಗಿರುವ ವೆಚ್ಚ ಕೇವಲ 6.5 ಲಕ್ಷ ರೂಪಾಯಿ. ಹಾಗಂತ ವರ್ಮಾ ಅವರೇ ಹೇಳಿಕೊಂಡಿದ್ದಾರೆ. ಬಹುಶಃ ನಟ-ನಟಿಯರ ಸಂಭಾವನೆ ವಿವರಗಳನ್ನು ಹೊರತುಪಡಿಸಿದ ಲೆಕ್ಕ ಇದಾಗಿರಬೇಕು.ಈ ಲೆಕ್ಕದ ಕಥೆಯನ್ನು ಬದಿಗೆ ಸರಿಸಿ ಚಿತ್ರದ ಅಸಲೀ ಕಥೆಯತ್ತ ಹೊರಳಿದರೆ ನಿರಾಶೆ ಕಟ್ಟಿಟ್ಟ ಬುತ್ತಿ. ಕಥೆ ಎಂಬುದು ಇಲ್ಲಿ ನೆಪಮಾತ್ರಕ್ಕೆ. ಸ್ಕ್ರಿಪ್ಟ್ ಕಡೆ ಲಕ್ಷ್ಯವನ್ನೇ ವಹಿಸಿಲ್ಲ ಎಂಬುದು ಚಿತ್ರ ನೋಡುತ್ತಾ ಹೋದಂತೆ ಮನವರಿಕೆಯಾಗುತ್ತದೆ.ಸುಧೀರ್ (ರವಿತೇಜ) ಮತ್ತು ರಾಣಿ (ಚಾರ್ಮಿ) ಪಯಣಿಸುತ್ತಿದ್ದ ಕಾರು ಅರಣ್ಯ ಪ್ರದೇಶದಲ್ಲಿ ಕೆಟ್ಟುಹೋಗುತ್ತದೆ.ಮೆಕ್ಯಾನಿಕ್‌ಗಾಗಿ ತಡಕಾಡುತ್ತಾ ಭೂತ ಬಂಗಲೆಯಂತಹ ರೆಸಾರ್ಟ್‌ನೊಳಗೆ ಹೋಗುತ್ತಾರೆ.ಮೆಕ್ಯಾನಿಕ್ ಸಿಗದ ಕಾರಣ ರೂಮ್ ಪಡೆದು ಅಲ್ಲೇ ಉಳಿದುಕೊಳ್ಳುತ್ತಾರೆ. ಅಲ್ಲಿಂದ ಈ ದಂಪತಿಗೆ ‘ಶನಿ’ ಕಾಟ ಶುರು.ರೆಸಾರ್ಟ್‌ನಲ್ಲಿ ಮೂವರಿರುತ್ತಾರೆ. ಒಬ್ಬ ಸ್ವಾಗತಕಾರ. ಒಬ್ಬ ಮ್ಯಾನೇಜರ್. ಒಬ್ಬ ನೌಕರ. ಈ ಮೂವರದೂ ಮೂರು ಬಗೆಯ ವಿಚಿತ್ರ ಲೋಕ. ಪಕ್ಕದ ರೂಮಿಂದ ಎಂತಹದೋ ಸದ್ದು ಕೇಳುತ್ತದೆ. ಏನದು ಅಂತ ಕೇಳಿದರೆ ಒಬ್ಬ ದೆವ್ವ ಅಂತಾನೆ. ಮತ್ತೊಬ್ಬ ಕಳ್ಳರ ಗ್ಯಾಂಗ್ ಸೇರಿಕೊಂಡಿದೆ ಎಂದು ಉತ್ತರಿಸುತ್ತಾನೆ. ಊಟ ಇಲ್ಲ. ತಿಂಡಿ ಇಲ್ಲ. ಹೊರಗೆ ಹೋಗುವುದಕ್ಕಾದರೂ ಬಿಡಿ ಎಂದರೆ ಅದಕ್ಕೂ ಒಪ್ಪರು.ಇಂತಹ ಪೀಕಲಾಟದಲ್ಲೇ ಮೊದಲರ್ಧ ಮುಗಿಯುತ್ತದೆ. ಅತ್ತಿಂದ ಇತ್ತ ಇತ್ತಿಂದ ಅತ್ತ, ಬರಿ ಓಡಾಟ. ಅಸಂಬದ್ಧ ಮಾತು. ಏಕತಾನತೆಯಿಂದ ನೋಡಗರ ಉತ್ಸಾಹವೇ ಉಡುಗುತ್ತದೆ. ದ್ವಿತೀಯಾರ್ಧದಲ್ಲಿ ಹತ್ತಾರು ಹೊಸ ಪಾತ್ರಗಳು ಪ್ರತ್ಯಕ್ಷ. ಗೊಂದಲ, ಗೋಜಲು. 90 ನಿಮಿಷಗಳ ಅವಧಿಯ ಚಿತ್ರ ಮುಗಿಯುವಷ್ಟರಲ್ಲಿ ಮೂರು ತಾಸು ಉರುಳಿದಂತೆ ಅನಿಸಿದರೆ ಅದು ನೋಡುಗರ ತಪ್ಪಲ್ಲ.ತಾರಾಬಳಗವೇ ಚಿತ್ರದ ಬಲ. ರವಿತೇಜ, ಚಾರ್ಮಿ, ಮಂಚು ಲಕ್ಷ್ಮಿಪ್ರಸನ್ನ, ಪ್ರಕಾಶ್ ರೈ, ಬ್ರಹ್ಮಾನಂದಂ, ಸುಬ್ಬರಾಜು, ಬ್ರಹ್ಮಾಜಿ ಮತ್ತಿತರರಿದ್ದಾರೆ. ಆದರೆ ದುರ್ಬಲ ಕಥೆ, ನೀರಸ ನಿರೂಪಣೆಯಲ್ಲಿ ಎಲ್ಲರೂ, ಎಲ್ಲವೂ ಕಳೆದುಹೋಗುತ್ತವೆ. ಲವಲವಿಕೆಯ ಅಭಿನಯಕ್ಕೆ ಹೆಸರಾದ ರವಿತೇಜ ಕೂಡ ಮಂಕಾಗಿಬಿಡುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.