ತಾಳ್ಮೆ ವಹಿಸುವುದು ಅಗತ್ಯ: ಕೊಹ್ಲಿ

7
`ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವುದು ಇಷ್ಟ'

ತಾಳ್ಮೆ ವಹಿಸುವುದು ಅಗತ್ಯ: ಕೊಹ್ಲಿ

Published:
Updated:
ತಾಳ್ಮೆ ವಹಿಸುವುದು ಅಗತ್ಯ: ಕೊಹ್ಲಿ

ಮೊಹಾಲಿ:  ವಿರಾಟ್ ಕೊಹ್ಲಿ ಇತ್ತೀಚಿನ ಕೆಲ ಪಂದ್ಯಗಳಲ್ಲಿ ವಿಫಲರಾದಾಗ ಭಾರತ ತಂಡ ಕೂಡಾ ವೈಫಲ್ಯ ಅನುಭವಿಸಿತ್ತು. ಆದರೆ ರಾಂಚಿಯಲ್ಲಿ ನಡೆದ ಪಂದ್ಯದಲ್ಲಿ ಆಕರ್ಷಕ ಬ್ಯಾಟಿಂಗ್ ತೋರಿದ್ದರಿಂದ ಮಹೇಂದ್ರ ಸಿಂಗ್ ದೋನಿ ಬಳಗ ಇಂಗ್ಲೆಂಡ್ ವಿರುದ್ಧ ಸುಲಭ ಗೆಲುವು ಪಡೆದಿತ್ತು. ತಂಡದ ಯಶಸ್ಸಿನಲ್ಲಿ ಕೊಹ್ಲಿ ಕೊಡುಗೆ ಅಪಾರ ಎಂಬುದನ್ನು ಇದರಿಂದ ತಿಳಿಯಬಹುದು.ಮೂರನೇ ಏಕದಿನ ಪಂದ್ಯದಲ್ಲಿ ಅಜೇಯ 77 ರನ್ ಗಳಿಸಿದ್ದ ಕೊಹ್ಲಿ ಫಾರ್ಮ್‌ಗೆ ಮರಳಿದ ಸೂಚನೆ ನೀಡಿದ್ದಾರೆ. ಸತತ ವೈಫಲ್ಯ ಅನುಭವಿಸುತ್ತಿದ್ದರೂ ತಾಳ್ಮೆ ವಹಿಸಿದ್ದರಿಂದ ಯಶಸ್ಸು ಲಭಿಸಿದೆ ಎಂಬುದು ಅವರ ಹೇಳಿಕೆ. ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯಕ್ಕೆ ಮುನ್ನಾದಿನವಾದ ಮಂಗಳವಾರ ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಿವರ ಇಲ್ಲಿದೆ;*ಫಾರ್ಮ್‌ಗೆ ಮರಳಿದ ಕಾರಣ ನಿರಾಳರಾಗಿದ್ದೀರಾ?

ನನ್ನ ಫಾರ್ಮ್ ಬಗ್ಗೆ ಇತರರು ಹೊಂದಿರುವಂತಹ ಅಭಿಪ್ರಾಯವನ್ನು ನಾನು ಹೊಂದಿಲ್ಲ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 16 ರಿಂದ 18 ತಿಂಗಳ ಕಾಲ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಕೆಲವೊಮ್ಮೆ ನಾಲ್ಕು ಅಥವಾ ಐದು ಪಂದ್ಯಗಳಲ್ಲಿ ವಿಫಲವಾಗಬಹುದು. ಅಂತಹ ಸಂದರ್ಭದಲ್ಲಿ ತಾಳ್ಮೆ ವಹಿಸುವುದು ಅಗತ್ಯ. ನಾನು ಕೂಡಾ ತಾಳ್ಮೆಯಿಂದ ಇದ್ದೆ. ನೆಟ್ಸ್‌ನಲ್ಲಿ ಕಠಿಣ ಅಭ್ಯಾಸ ನಡೆಸಿದೆ. ಆದ್ದರಿಂದ ಲಯ ಕಂಡುಕೊಳ್ಳಲು ಸಾಧ್ಯವಾಯಿತು.* ಆರಂಭಿಕ ಆಟಗಾರನ ಸ್ಥಾನದಿಂದ ಆರನೇ ಕ್ರಮಾಂಕದವರೆಗೂ ಆಡಿದ್ದೀರಿ. ಯಾವ ಕ್ರಮಾಂಕದಲ್ಲಿ ಬ್ಯಾಟ್ ಮಾಡುವುದು ಇಷ್ಟ...

ಮೂರನೇ ಕ್ರಮಾಂಕ ನನಗೆ ಸೂಕ್ತವಾದುದು. ಕೆಳಗಿನ ಕ್ರಮಾಂಕದಲ್ಲಿ ಹೆಚ್ಚು ಆಡಿಲ್ಲ. ಆದ್ದರಿಂದ ಆ ಬಗ್ಗೆ ಅಭಿಪ್ರಾಯ ನೀಡಲು ಸಾಧ್ಯವಿಲ್ಲ. ಆರಂಭದಲ್ಲೇ ವಿಕೆಟ್ ಬಿದ್ದರೆ ಇನಿಂಗ್ಸ್‌ಗೆ ಬಲ ನೀಡುವ ಕೆಲಸವನ್ನು ಮೂರನೇ ಕ್ರಮಾಂಕದ ಆಟಗಾರ ಮಾಡಬೇಕು. ರನ್ ಬೆನ್ನಟ್ಟುವ ಸಂದರ್ಭ ಕೊನೆಯವರೆಗೂ ಕ್ರೀಸ್‌ನಲ್ಲಿರುವುದು ಅಗತ್ಯ. ತಂಡ ನನ್ನಿಂದ ಏನನ್ನು ಬಯಸುತ್ತದೆಯೋ, ಆ ಕೆಲಸವನ್ನು ಮೂರನೇ ಕ್ರಮಾಂಕದಲ್ಲಿ ಆಡುವಾಗ ಮಾಡಲು ಸಾಧ್ಯವಾಗುತ್ತದೆ.* ಮೊಹಾಲಿ ಪಿಚ್‌ನಲ್ಲಿ ಭಾರತದ ಬ್ಯಾಟಿಂಗ್‌ಗೆ ಅಗ್ನಿಪರೀಕ್ಷೆ ಎದುರಾಗಲಿದೆಯೇ

ಆ ಬಗ್ಗೆ ಹೆಚ್ಚು ಚಿಂತಿಸಿಲ್ಲ. ಕಳೆದ ಎರಡು ಪಂದ್ಯಗಳಲ್ಲಿ ನಾವು ಉತ್ತಮ ಪ್ರದರ್ಶನ ನೀಡಿದ್ದೆವು. ಇಲ್ಲೂ ಅದನ್ನು ಮುಂದುವರಿಸುತ್ತೇವೆ. ಬ್ಯಾಟಿಂಗ್ ವಿಭಾಗ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದು ಮುಖ್ಯ. ಬೌಲರ್‌ಗಳು ಸಾಮರ್ಥ್ಯ ತೋರಿಸಿದ್ದಾರೆ.*ಭಾರತ ಇಲ್ಲಿ ಸರಣಿ ಗೆಲುವಿನ ಮುನ್ನಡೆ ಸಾಧಿಸಲಿದೆಯೇ?

ಈ ಪಂದ್ಯ ಎಷ್ಟು ಮಹತ್ವದ್ದು ಎಂಬುದು ತಂಡದ ಎಲ್ಲರಿಗೂ ತಿಳಿದಿದೆ. ಕೆಟ್ಟ ಹವಾಮಾನ ಇದ್ದರೆ ಧರ್ಮಶಾಲಾದಲ್ಲಿ ಅಂತಿಮ ಪಂದ್ಯ ನಡೆಯುವ ಸಾಧ್ಯತೆ ಕಡಿಮೆ. ಆದ್ದರಿಂದ ಬುಧವಾರ ಗೆಲುವು ಸಾಧಿಸಿ ಸರಣಿ ಗೆಲುವಿನ ಮುನ್ನಡೆ ಸಾಧಿಸುವುದು ನಮ್ಮ ಲೆಕ್ಕಾಚಾರ.* ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಬಗ್ಗೆ ಏನನ್ನುವಿರಿ?

ಭಾರತದ ಬೌಲರ್‌ಗಳ ಶ್ರೇಷ್ಠ ಪ್ರದರ್ಶನ ಮತ್ತು ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳ ಕೆಟ್ಟ ಆಟ ಜೊತೆಯಾಗಿ ನಡೆದಿದೆ. ಟೆಸ್ಟ್‌ನಲ್ಲಿ ಪ್ರವಾಸಿ ತಂಡದ ಬ್ಯಾಟ್ಸ್‌ಮನ್‌ಗಳು ಛಲ ತೋರಿದ್ದರು. ಏಕೆಂದರೆ ಅಲ್ಲಿ ಪರಿಸ್ಥಿತಿಗೆ ಹೊಂದಿಕೊಳ್ಳಲು ಹೆಚ್ಚಿನ ಸಮಯ ದೊರೆಯುತ್ತಿತ್ತು. ಆದರೆ ಏಕದಿನ ಪಂದ್ಯದಲ್ಲಿ ಅದು ಸಾಧ್ಯವಿಲ್ಲ. ಆಕ್ರಮಣಕಾರಿ ಪ್ರದರ್ಶನ ನೀಡಬೇಕಾಗುತ್ತದೆ. ನಮ್ಮ ಬೌಲರ್‌ಗಳು ಎದುರಾಳಿಗಳ ಮೇಲೆ ಒತ್ತಡ ಹೇರುವಲ್ಲೂ ಯಶಸ್ವಿಯಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry