ತಾವು ನಿರ್ಗಮಿಸುವುದಿಲ್ಲ - ಪ್ರಧಾನಿ

7

ತಾವು ನಿರ್ಗಮಿಸುವುದಿಲ್ಲ - ಪ್ರಧಾನಿ

Published:
Updated:

ನವದೆಹಲಿ (ಪಿಟಿಐ/ಐಎಎನ್ಎಸ್): ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸಲು ಕೆಲವೊಂದು ಹೊಂದಾಣಿಕೆ ಅನಿವಾರ್ಯ ಎಂಬುದನ್ನು ಒಪ್ಪಿಕೊಂಡಿರುವ ಪ್ರಧಾನಮಂತ್ರಿ ಮನಮೋಹನಸಿಂಗ್ ಅವರು ರಾಜೀನಾಮೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

ಬುಧವಾರ ಬೆಳಿಗ್ಗೆ ಪ್ರಧಾನಿ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಟಿ.ವಿ. ಸಂಪಾದಕರನ್ನು  ಉದ್ದೇಶಿಸಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ತಾವು ಯಾವುದೇ ತಪ್ಪು ಮಾಡಿಲ್ಲ. ಆದರೆ ಸದ್ಯ ಮಾಧ್ಯಮಗಳು ತಮ್ಮನ್ನು ಬಹಳ ದೊಡ್ಡ ಅಪರಾಧಿ ಎಂದು ಬಿಂಬಿಸುತ್ತಿವೆ ಎಂದು  ಪ್ರಧಾನಿ ಅವರು ದೂರಿದರು.

ಮಾಧ್ಯಮಗಳು ಇತ್ತೀಚೆಗೆ ನಕರಾತ್ಮಕ ಅಂಶಗಳತ್ತಲೇ ಹೆಚ್ಚು ಒತ್ತು ನೀಡುತ್ತಿದ್ದು, ತಾವು ಹಗರಣಗಳಿಂದ ಕೂಡಿದ ರಾಷ್ಟ್ರವನ್ನು ಮುನ್ನಡೆಸುತ್ತಿದ್ದೇವೆ ಎಂಬಂತೆ ಚಿತ್ರಿಸಲಾಗುತ್ತಿದೆ. ಇದರಿಂದ ದೇಶದ ಸ್ವಯಂ ಆತ್ಮವಿಶ್ವಾಸ ಕಡಿಮೆಯಾಗುತ್ತಿದೆ. ಇದು ದೇಶದ ಹಿತಕ್ಕೆ ಒಳ್ಳೆಯದಲ್ಲ ಎಂದು ಅವರು ಕಿವಿಮಾತು ಹೇಳಿದರು.

 ದೇಶದ ಪ್ರಗತಿ ಹಾಗೂ ಪ್ರಜಾಸತ್ತೆಗೆ ಇಡೀ ವಿಶ್ವವೇ ನಿಬ್ಬೆರಗಾಗಿದೆ. ಇಂತಹ ಸಮಯದಲ್ಲಿ ಮಾಧ್ಯಮಗಳು ಹೆಚ್ಚು ಬರಿ ಹಗರಣಗಳನ್ನೇ ಬಿಂಬಿಸುವುದರಿಂದ ದೇಶದ ಜಂಘಾಬಲವೇ ಉಡುಗಿ ಹೋಗುತ್ತದೆ. ಜೆಪಿಸಿ ಸೇರಿದಂತೆ ತಾವು ಯಾವುದೇ ತನಿಖಾ ಸಮಿತಿಗಳ ಮುಂದೆ ಹಾಜರಾಗಲು ಭಯಪಡುವುದಿಲ್ಲ ಬದಲಾಗಿ ಸಂತೋಷದಿಂದಲೇ ಹಾಜರಾಗುವುದಾಗಿ ಹೇಳಿದ ಪ್ರಧಾನಿ ಅವರು ತನಗಿನ್ನೂ ಮಾಡಬೇಕಾದ ಕೆಲಸಗಳ ಬಹಳಷ್ಟಿದ್ದು, ರಾಜೀನಾಮೆ ನೀಡಿ ಓಡಿ ಹೋಗುವ ಪ್ರಮೇಯವೇ ಇಲ್ಲ ಎಂದು ಸ್ಪಷ್ಟ ಪಡಿಸಿದರು.

2ಜಿ ಸ್ಪೆಕ್ಟ್ರಂ ಹಗರಣ, ಕಾಮನ್ ವೆಲ್ತ್ ಕ್ರೀಡಾಕೂಟದ ಅವ್ಯವಹಾರಗಳು, ಇಸ್ರೋ ಹಾಗೂ ಆದರ್ಶ ವಸತಿ ಹಗರಣಗಳಿಗೆ ಸಂಬಂಧಿಸಿದಂತೆ ತಮ್ಮ ಸರ್ಕಾರ ಗಂಭೀರವಾಗಿದ್ದು, ತನಿಖೆಗೆ ಸಹಕರಿಸಲಿದೆ ಎಂದು ತಾವು ದೇಶಕ್ಕೆ ವಾಗ್ದಾನ ಮಾಡುವುದಾಗಿ ಅವರು ತಿಳಿಸಿದರು.

2 ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿಂತೆ ಪ್ರತಿಕ್ರಿಯಿಸಿದ ಪ್ರಧಾನಿ ಅವರು ಲೈಸೆನ್ಸ್ ನೀಡುವ ವಿಷಯವನ್ನು ಸಂಪುಟದ ಗಮನಕ್ಕೆ ತಂದಿರಲಿಲ್ಲ ಎಂದು ಅವರು ತಿಳಿಸಿದರು. ~ಮೊದಲು ಬಂದವರಿಗೆ ಆದ್ಯತೆ~ ಎಂಬ ನೀತಿಯ ಕುರಿತಂತೆ ತಮಗಾಗಲಿ ತಮ್ಮ ಸಂಪುಟಕ್ಕಾಗಲಿ ಯಾವುದೇ ವಿಧವಾದ ಮಾಹಿತಿಯನ್ನೂ ಮಾಜಿ ಸಚಿವ ರಾಜಾ ಅವರು ನೀಡಿರಲಿಲ್ಲ. ಇದು ಅವರ ಸ್ವಂತ ನಿರ್ಧಾರವಾಗಿತ್ತು. ಹೀಗಾಗಿ ತಮಗೆ ಹಗರಣದ ಕುರಿತಾಗಿ ಗೊತ್ತೇ ಆಗಲಿಲ್ಲ ಎಂದು ಹೇಳಿದರು. 

ಹಣದುಬ್ಬರ ಒಂದು ಸಮಸ್ಯೆ ನಿಜ. ನಾವು ಅಭಿವೃದ್ಧಿಯ ಲಯಕ್ಕೆ ಧಕ್ಕೆಯಾಗದಂತೆ ಬಹಳ ಎಚ್ಚರಿಕೆಯಿಂದ ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು ಪ್ರಯತ್ನ ಪಡುತ್ತಿರುವುದಾಗಿ ಸಿಂಗ್ ತಿಳಿಸಿದರು. ಈ ವರ್ಷದ ಅಂತ್ಯದ ಹೊತ್ತಿಗೆ ಶೇ. 7 ರ ಪ್ರಮಾಣದಲ್ಲಿ ಹಣದುಬ್ಬರ ಇರಲಿದೆ ಹಾಗೂ ಆರ್ಥಿಕ ಪ್ರಗತಿ ದರವು ಶೇ. 8.5ರಷ್ಟು  ಇರಲಿದೆ ಎಂಬ ನಿರೀಕ್ಷೆಯನ್ನು ಇದೇ ವೇಳೆ ಅವರು ವ್ಯಕ್ತಪಡಿಸಿದರು.

ಭದ್ರತಾ ಮಂಡಳಿಯ ಎಲ್ಲಾ ಸದಸ್ಯ ರಾಷ್ಟ್ರಗಳ ನಾಯಕರು ಒಂದೇ ವರ್ಷದಲ್ಲಿ ಭಾರತಕ್ಕೆ ಭೇಟಿ ನೀಡಿದ್ದಾರೆ ಈ ರೀತಿ ಹಿಂದೆಂದೂ ಆಗಿರಲಿಲ್ಲ. ಇಡೀ ವಿಶ್ವದ ಗಮನವನ್ನು ಭಾರತ ಸೆಳೆದಿದೆ ಎಂದು ಅವರು ಇದೇ ವೇಳೆ ತಿಳಿಸಿದರು.

ವಿರೋಧ ಪಕ್ಷಗಳ ಜತೆಗೆ ಮಾತುಕತೆ ಪ್ರಗತಿಯಲ್ಲಿದ್ದು, ಮುಂಬರುವ ಸಂಸತ್ ಅಧಿವೇಶನ ಸಾಂಗವಾಗಿ ನಡೆಯುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು. ಅಧಿವೇಶನದ ತರುವಾಯ ತಾವು ಸಂಪುಟವನ್ನು ಪುನರ್ ರಚಿಸುವುದಾಗಿ ಇದೇ ವೇಳೆ ಅವರು ನುಡಿದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry