ತಾ. ಪಂ: ಯೋಗೀಶಗೌಡ ರಾಜಿನಾಮೆ?

7

ತಾ. ಪಂ: ಯೋಗೀಶಗೌಡ ರಾಜಿನಾಮೆ?

Published:
Updated:

ಧಾರವಾಡ: ತಾಲ್ಲೂಕು ಪಂಚಾಯತಿ ಅಧ್ಯಕ್ಷರಿಗೆ ಸ್ಥಾನ ತ್ಯಜಿಸುವಂತೆ ಕಾಂಗ್ರೆಸ್ ನಾಯಕರು ಸೂಚಿಸಿದ್ದರ ಹಿನ್ನೆಲೆಯಲ್ಲಿ ಯೋಗೀಶಗೌಡ ಗೌಡರ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಲು ಬಯಸಿದ್ದಾರೆ ಎಂದು ಗೊತ್ತಾಗಿದೆ.ರಾಜಿನಾಮೆ ನೀಡುವಂತೆ ಯೋಗೀಶಗೌಡ ಗೌಡರ ಅವರಿಗೆ ಗುರುವಾರದ (ಫೆ. 23) ವರೆಗೆ ಗಡುವು ನೀಡಲಾಗಿದೆ. ಭಾರತೀಯ ಜನತಾ ಪಕ್ಷವನ್ನು ತಾಲ್ಲೂಕು ಪಂಚಾಯತಿ ಆಡಳಿತದಿಂದ ದೂರವಿಡಬೇಕು ಎಂಬ ಒಂದೇ ಕಾರಣಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಕೈಜೋಡಿಸಿ ಪಕ್ಷೇತರ ಅಭ್ಯರ್ಥಿಯನ್ನು ಅಧ್ಯಕ್ಷರನ್ನಾಗಿ ಮಾಡಿದ್ದವು. ಆ ಸಂದರ್ಭದಲ್ಲಿ ಗೌಡರ ಅವರಿಗೆ ಮೊದಲ ಅವಧಿಯ 10 ತಿಂಗಳವರೆಗೆ ಅಧ್ಯಕ್ಷ ಸ್ಥಾನ ನೀಡುವ ಕುರಿತು ಒಪ್ಪಂದ ನಡೆದಿತ್ತು. ಆ ಒಪ್ಪಂದದಂತೆ ಈಗ ರಾಜಿನಾಮೆಗೆ ಗೌಡರ ಅವರಿಗೆ ಸೂಚಿಸಿಲಾಗಿದೆ.ಕಳೆದ ಒಂದು ವಾರದ ಹಿಂದೆ ಕಾಂಗ್ರೆಸ್ ನಾಯಕರು ರಾಜಿನಾಮೆ ನೀಡುವಂತೆ ಗೌಡರ ಅವರಿಗೆ ಸೂಚಿಸಿದ್ದರು. ರಾಜಿನಾಮೆ ಕುರಿತು ನಿರ್ಧಾರ ತೆಗೆದುಕೊಳ್ಳಲು ಎಂಟು ದಿವಸಗಳ ಕಾಲಾವಕಾಶವನ್ನು ಗೌಡರ ಪಡೆದಿದ್ದರು. ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವ ಬಗ್ಗೆಯೂ ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದರು.`ಅಧ್ಯಕ್ಷ ಸ್ಥಾನದ ಚುನಾವಣೆ ಸಂದರ್ಭದಲ್ಲಿ ಯಾವುದೇ ಷರತ್ತು ವಿಧಿಸಿರಲಿಲ್ಲ. ಮೊದಲ ಅವಧಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುವುದು. ನಂತರದ ಅವಧಿಗೆ ಕಾಂಗ್ರೆಸ್ ಪಕ್ಷದ ನಿರ್ಧಾರವನ್ನು ಬೆಂಬಲಿಸಬೇಕು ಎಂದು ನಾಯಕರು ಹೇಳಿದ್ದರು. ಅದರಂತೆ ನಾನು ಸಹ ಒಪ್ಪಿಗೆ ಸೂಚಿಸಿದ್ದೆ. ಆದರೆ ಈಗ 10 ತಿಂಗಳ ಅವಧಿಗೆ ಮಾತ್ರ ಅಧ್ಯಕ್ಷ ಸ್ಥಾನ ನೀಡಲಾಗಿತ್ತು ಎಂದು ಹೇಳಿ ರಾಜಿನಾಮೆ ಕೇಳಿದ್ದಾರೆ~ ಎಂದು ಯೋಗೀಶಗೌಡ ಗೌಡರ ಹೇಳಿದ್ದಾರೆ.`ನನ್ನ ಕ್ಷೇತ್ರದ ಜನರು ಹಾಗೂ ನನ್ನನ್ನು ಬೆಂಬಲಿಸಿದ ಹಿರಿಯರು ರಾಜಿನಾಮೆ ನೀಡುವಂತೆ ಸೂಚಿಸಿದ್ದಾರೆ. ಆದ್ದರಿಂದ ರಾಜಿನಾಮೆ ನೀಡುವ ನಿರ್ಧಾರ ತೆಗೆದುಕೊಂಡಿದ್ದೇನೆ~ ಎಂದು ತಿಳಿಸಿದರು. ಮೊದಲ ಅವಧಿಯ 10 ತಿಂಗಳವರೆಗೆ ಅಧ್ಯಕ್ಷರಾಗಿ ಅವಕಾಶ ನೀಡಲಾಗುವುದು ಎಂದು ಆಯ್ಕೆ ಸಂದರ್ಭದಲ್ಲಿಯೇ ಹೇಳಲಾಗಿದೆ. ಕಾಂಗ್ರೆಸ್‌ನ ತಾಲ್ಲೂಕು ಅಧ್ಯಕ್ಷ ಪಿ.ಎಸ್.ಪತ್ರಾವಳಿ ಸೇರಿದಂತೆ ತಾಲ್ಲೂಕು ಹಾಗೂ ಜಿಲ್ಲಾ ಘಟಕದ ಮುಖಂಡರು ಸಹ ಸಭೆಯಲ್ಲಿದ್ದರು. ಆದ್ದರಿಂದ ಅಂದಿನ ನಿರ್ಧಾರದಂತೆ ರಾಜಿನಾಮೆ ನೀಡಬೇಕು.

 

ಗುರುವಾರ (ಫೆ.23)ದೊಳಗೆ ರಾಜಿನಾಮೆ ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಅಧ್ಯಕ್ಷರು ಹೇಳಿದ್ದಾರೆ. ಅಲ್ಲಿಯವರೆಗೆ ಕಾದು ನೋಡುತ್ತೇವೆ. ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು~ ಎಂದು ಮಾಜಿ ಶಾಸಕ ವಿನಯ ಕುಲಕರ್ಣಿ ಹೇಳಿದ್ದಾರೆ.`ಈಗಾಗಲೇ 12 ತಿಂಗಳವರೆಗೆ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ಈವರೆಗೆ ನಮ್ಮ ಬೆಂಬಲ ಪಡದಿರುವ ಗೌಡರ, ಮುಂದೆ ನಮ್ಮ ಅಭ್ಯರ್ಥಿಗೆ ಬೆಂಬಲ ನೀಡಲೇಬೇಕಾಗುತ್ತದೆ~ ಎಂಬುದು ವಿನಯ ಅವರ ಅಭಿಪ್ರಾಯ.

ತಾಲ್ಲೂಕು ಪಂಚಾಯತಿಯ ಒಟ್ಟು 21 ಸ್ಥಾನಗಳ ಪೈಕಿ 10 ಬಿಜೆಪಿ, 7 ಕಾಂಗ್ರೆಸ್, 3 ಜೆಡಿಎಸ್ ಹಾಗೂ ಒಂದು ಪಕ್ಷೇತರ ಅಭ್ಯರ್ಥಿ ಪಾಲಾಗಿದ್ದವು. ಕಾಂಗ್ರೆಸ್ ಹಾಗೂ ಜೆಡಿಎಸ್ ಕೂಡಿಕೊಂಡು ತೀವ್ರ ಕುತೂಹಲ ಕೆರಳಿಸಿದ್ದ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಸ್ಥಾನವನ್ನು ಮಾರಡಗಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಗೌಡರ ಅವರಿಗೆ ಒಪ್ಪಿಸುವ ಮೂಲಕ ಬಿಜೆಪಿಗೆ ಮುಖಭಂಗವಾಗುವಂತೆ ಮಾಡಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry