ಸೋಮವಾರ, ಜೂನ್ 21, 2021
28 °C

ತಿಂಗಳಮಾತಿನ ಒಳ-ಹೊರಗೆ

ಡಾ.ನಂದಿನಿ ಲಕ್ಷೀಕಾಂತ್ Updated:

ಅಕ್ಷರ ಗಾತ್ರ : | |

ಹೆಣ್ಣಿಗೆ ತಿಂಗಳಚಕ್ರ ಒಂದು ಸ್ವಾಭಾವಿಕ ಕ್ರಿಯೆ. ಹಿಂದೆ ಈ ಬಗ್ಗೆ ವಯಸ್ಸಿಗೆ ಬಂದ ಮಗಳಿಗೆ ತಿಳಿ ಹೇಳುವುದು ಹೇಗೆ ಎಂಬುದು  ಎಲ್ಲಾ ತಾಯಂದಿರ ಸಂಕೋಚ ಹಾಗೂ ಕಳವಳವೂ ಆಗಿತ್ತು. ಆದರೀಗ ಆ ಸಮಸ್ಯೆಯಿಲ್ಲ,  ಇಂದು ಶಾಲಾ–ಕಾಲೇಜಿಗಳಲ್ಲಿ ಈ ಬಗ್ಗೆ ತಿಳಿವಳಿಕೆ ನೀಡಲಾಗುತ್ತದೆ.ಅಲ್ಲದೇ, ಇಂತಹ ಉತ್ಪನ್ನಗಳ ಜಾಹೀರಾತುಗಳೂ ಸಹ ಸಾಕಷ್ಟು ಪ್ರಚಾರಕ್ಕಿಳಿದಿವೆ. ಇವು ಎಲ್ಲೊ ಒಂದು ಕಡೆ ಮುಜುಗರವನ್ನುಂಟು ಮಾಡಿದರೂ, ನಮ್ಮ ಜವಾಬ್ದಾರಿಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿವೆ ಎಂಬುದನ್ನೂ ಒಪ್ಪಲೇಬೇಕು. ಅಂತೆಯೇ ಈಗ ಋತುಚಕ್ರ ಕುರಿತ ಸಂಕೋಚ ಹಿಂದಿನಷ್ಟಿಲ್ಲ.ಆದರೆ ನಾವೀಗ ಸ್ವಲ್ಪ ಮುಂದೆ ಹೋಗಿ ಆ ಸಮಯದಲ್ಲಿ ಕಾಪಾಡಿಕೊಳ್ಳಬೇಕಾದ ವೈಯುಕ್ತಿಕ ಸ್ವಚ್ಛತೆ, ನೈರ್ಮಲ್ಯ, ನ್ಯಾಪ್ ಕೀನ್‌ ಬಳಕೆ ಮತ್ತು ವಿಲೇವಾರಿ ಬಗ್ಗೆ ಗಮನಹರಿಸಬೇಕಿದೆ.ಹಿಂದೆ ಮಹಿಳೆಯರು ಈ ಸಂದರ್ಭಕ್ಕಾಗಿ ಹಳೆಯ ಹತ್ತಿಯ ಸೀರೆಯ ತುಂಡುಗಳನ್ನು ಉಪಯೋಗಿಸುತ್ತಿದ್ದರು. ಅವುಗಳನ್ನು ಒಗೆಯುವುದು ಒಣಗಿಸುವುದು ರೇಜಿಗೆಯ ಕೆಲಸವಾಗಿತ್ತು. ಈ ನಿಟ್ಟಿನಿಂದ ನೋಡಿದಾಗ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸಿದ್ಧಪಡಿಸಿದ ಸ್ಯಾನಿಟರಿ ಪ್ಯಾಡುಗಳು  ಹೆಣ್ಣಿಗೆ ಒಂದರ್ಥದಲ್ಲಿ ಮುಕ್ತಿ ನೀಡಿವೆ ಎಂದು ಹೇಳಬಹುದು.

 

ಅಗತ್ಯಕ್ಕೆ ತಕ್ಕ ಅಳತೆಯ ಪ್ಯಾಡ್ ಸ್ಯಾನಿಟರಿ ಪ್ಯಾಡುಗಳ ಕುರಿತು ವಾಣಿಜ್ಯ ಪ್ರಕಟಣೆ ೧೯00ರ ವೇಳೆಗೆ ಮೊದಲ ಬಾರಿಗೆ ಪ್ರಕಟವಾಗಿತ್ತು. ಅಂದು ಕೊಡ ವಿವಿಧ ಅಳತೆಗಳಲ್ಲಿ  ಪ್ಯಾಡುಗಳು ಲಭ್ಯವಾಗುತ್ತಿದ್ದ ಬಗ್ಗೆ ದಾಖಲೆಗಳಿವೆ. ವರ್ಷಗಳು ಉರುಳಿದಂತೆ ಈ ಪ್ಯಾಡುಗಳಲ್ಲಿ ಬದಲಾವಣೆಗಳೂ ಆಗಿವೆ. ಬೇಕಾದ ಅಳತೆಯಲ್ಲಿ, ವಿನ್ಯಾಸದಲ್ಲಿ, ಬೆಲೆಯಲ್ಲಿ ಈಗ ಅವು ಲಭ್ಯ. ಶಾಲಾ–ಕಾಲೇಜಿಗೆ ಹೋಗುವ ಮಕ್ಕಳಿಗೆ, ದುಡಿಯುವ ಮಹಿಳೆಯರಿಗೆ, ಸ್ಥೂಲಕಾಯಿಗಳಿಗೆ, ಅತಿಯಾಗಿ ಬ್ಲೀಡಿಂಗ್ ಆಗುವವರಿಗೆ.... ಹೀಗೆ ವಿವಿಧ ಅಗತ್ಯಕ್ಕೆ ತಕ್ಕಂತೆ ಪ್ಯಾಡುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.ರಾಸಾಯನಿಕಗಳ ಪರಿಣಾಮ...

ಸ್ಯಾನಿಟರಿ ಪ್ಯಾಡುಗಳ ತಯಾರಿಕೆಗೆ ವುಡ್ ಪಲ್ಪ್‌ ಬಳಸಲಾಗುತ್ತದೆ. ಅದರ ಬಿಳಿಯ ಬಣ್ಣಕ್ಕಾಗಿ ಹತ್ತಿಯನ್ನು ತೀಕ್ಣವಾಗಿ ಕ್ಲೋರಿನ್‌ನಿಂದ ಬ್ಲೀಚ್ ಮಾಡಲಾಗುತ್ತದೆ. "ಡ್ರೈ ಫೀಲ್"  ಪೆಟ್ರೋಲಿಯಂ ಆಧಾರಿತ ಪಾಲಿ ಅಕ್ರೇಲಿಕ್‌ ಬಳಕೆಯಾಗುತ್ತದೆ. ಇಂತಹ ರಾಸಾಯನಿಕಗಳನ್ನು ಬಳಸಿ ಮಾಡುವ ಈ ಸ್ಯಾನಿಟರಿ ಪ್ಯಾಡುಗಳ ಸಂಪರ್ಕಕ್ಕೆ ಬಂದಾಗ ಸೂಕ್ಷ್ಮ ಅಂಗದ ಮೇಲೆ ಉಂಟಾಗಬಹುದಾದ ಪರಿಣಾಮಗಳನ್ನೂ ನಾವಿಲ್ಲಿ ತಳ್ಳಿಹಾಕುವಂತಿಲ್ಲ.ಅಧ್ಯಯನವೊಂದರ ಪ್ರಕಾರ ಒಬ್ಬ ಮಹಿಳೆ ತನ್ನ ಜೀವಿತಕಾಲದಲ್ಲಿ ಸರಿ ಸುಮಾರು ೧೬-ರಿಂದ೧೭ ಸಾವಿರ ಸ್ಯಾನಿಟರಿ ಪ್ಯಾಡುಗಳನ್ನು ಬಳಸಬಹುದಾಗಿದೆ. ಈ ಅವಧಿಯಲ್ಲಿ ರಾಸಾಯನಿಕಗಳ ಸಂಪರ್ಕದಿಂದಾಗಿ ನವೆ, ತುರಿಕೆ, ಹಾರ್ಮೋನ್‌ಗಳ ಏರುಪೇರು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.ಹಾಗಾದರೆ ಮಾರುಕಟ್ಟೆಯಲ್ಲಿ ಲಭ್ಯವಾಗುವ ಪ್ಯಾಡ್‌ಗಳನ್ನು ಬಳಸಬಾರದೇ? ಎಂಬ ಪ್ರಶ್ನೆಗೆ ಪರಿಹಾರ ನೈರ್ಮಲ್ಯದಲ್ಲಿದೆ ಎಂದೇ ಹೇಳಬಹುದು.  ನವೆ ಉಂಟಾಗುವವರೆಗೂ ಕಾಯದೇ, ನಿಯಮಿತವಾಗಿ ಪ್ಯಾಡ್‌ಗಳನ್ನು ಬದಲಿಸಬೇಕು (ಸರಿಸುಮಾರು ೪ ಗಂಟೆಗಳಿಗೊಮ್ಮೆ), ತಪ್ಪದೇ ಸ್ನಾನ ಮಾಡಬೇಕು, ಸಾಕಷ್ಟು ನೀರು ಕುಡಿಯಬೇಕು. ಸರಿಯಾಗಿ ಊಟ ಮಾಡಬೇಕು. ಅಲ್ಲದೇ, ಇದೀಗ ಮಾರುಕಟ್ಟೆಯಲ್ಲಿ ಆರ್ಗ್ಯಾನಿಕ್‌ ಪ್ಯಾಡ್‌ಗಳು ಲಭ್ಯವಿದ್ದು, ಅವುಗಳ ಬಳಕೆ ಉತ್ತಮ ಎಂದು ನಂಬಲಾಗಿದೆ. ರಾಸಾಯನಿಕ ಬಳಕೆಯಿಂದ ಉಂಟಾಗುವ ಕಿರಿಕಿರಿಯನ್ನು ಇದರಿಂದ ತಪ್ಪಿಸಿಕೊಳ್ಳಬಹುದು.ವಿಲೇವಾರಿ ಕಡೆಗಣನೆ ಬೇಡ

ಉಪಯೋಗಿಸಿದ ಪ್ಯಾಡ್‌ಗಳ ವಿಲೇವಾರಿಯೂ ಅಷ್ಟೇ ಮುಖ್ಯ ಎನ್ನುವುದನ್ನು ಮರೆಯುವಂತಿಲ್ಲ. ಉಪಯೋಗಿಸಿದ ಪ್ಯಾಡುಗಳನ್ನು  ತೊಳೆದು ಪೇಪರಿನಲ್ಲಿ ಸುತ್ತಿ "ವೈದ್ಯಕೀಯ ವೆಟ್"ಗಳನ್ನು  ವಿಸರ್ಜಿಸುಂತೆ ಮಾಡಬೇಕು. ಅಂದರೆ ತ್ಯಾಜ್ಯ ಸಂಗ್ರಹಕನಿಗೆ ಈ ತ್ಯಾಜ್ಯವನ್ನು ಬೇರೆಯಾಗಿ ನೀಡುವುದಲ್ಲದೇ ಕವರಿನ ಮೇಲೆ ದಪ್ಪವಾಗಿ x ಚಿನ್ಹೆಯನ್ನು ಬರೆದು ನಂತರ ವಿಲೇವಾರಿ ಮಾಡಬೇಕು.ಸರಿಯಾದ ರೀತಿಯಲ್ಲಿ ಕಸದ ವಿಂಗಡಣೆಯಾಗದಿದ್ದರೆ ಹಾದಿಬದಿ ಕಸ ಮೇಯುವ ಹಸುವಿನ ಹೊಟ್ಟೆಗೂ ಇವು ಸೇರಬಹುದು.

ಹಿಂದೆ ಪ್ಯಾಡುಗಳ ಖರೀದಿಗೆ ಸಂಕೇತವನ್ನು ಬಳಸುತ್ತಿದ್ದರು. ಅಂಗಡಿಗಳಲ್ಲಿ ಅದಕ್ಕೆಂದೇ ವಿಶೇಷ  ಡಬ್ಬವಿರಿಸುತ್ತಿದ್ದರಂತೆ, ಯಾರಿಗೆ ಬೇಕೋ ಅವರು ಅ ಡಬ್ಬಿಯ ಮೇಲೆ ಹಣವಿರಿಸಿದರೆ ಅವರ ಅಗತ್ಯಕ್ಕೆ ತಕ್ಕ ಪ್ಯಾಡ್‌ ಅವರ ಕೈ ಸೇರುತಿತ್ತಂತೆ.ಇಂದು ಅಂಗಡಿಗೆ ಹೋಗಿ ನಮಗೆ ಬೇಕಾದ ಕಂಪೆನಿಯ ಹೆಸರನ್ನೂ,  ಹೇಳುತ್ತೇವೆ. ಅಂಗಡಿಯಾತ ಅದನ್ನು ಕರಿಯ ಪ್ಲಾಸ್ಟಿಕ್ ಕವರಿನಲ್ಲಿ ಮುಚಿಟ್ಟು ಕೊಡುತ್ತಾನೆ.. ನಾವದನ್ನು ಮನೆಯಲ್ಲಿ ಬಟ್ಟೆಗಳ ಸಂದಿನಲ್ಲಿ   ಮುಚ್ಚಿಡುತ್ತೇವೆ, ಇಷ್ಟಕ್ಕೂ ಋತುಚಕ್ರ ನೈಸರ್ಗಿಕ ಕ್ರಿಯೆ.   ಬಳಕೆಯಂತೆಯೇ ವಿಲೇವಾರಿಯೂ ವೈಜ್ಞಾನಿಕ ರೀತಿಯಲ್ಲಾದರೆ ಒಳಿತು ಅಲ್ಲವೆ. ಆ ನಿಟ್ಟಿನಲ್ಲಿ ಹಿಂಜರಿಯುವುದೇಕೆ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.