ಮಂಗಳವಾರ, ಮಾರ್ಚ್ 2, 2021
26 °C
ಮೊದಲ ಹಂತದಲ್ಲಿ ಬಸವೇಶ್ವರ ಚೌಕ್‌ನಿಂದ ಶಿವಾಜಿ ಚೌಕ್‌ವರೆಗೆ ರಸ್ತೆ ವಿಸ್ತರಣೆ

ತಿಂಗಳಲ್ಲಿ ಮಾಸ್ಟರ್‌ ಪ್ಲಾನ್‌ ಜಾರಿ: ಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿಂಗಳಲ್ಲಿ ಮಾಸ್ಟರ್‌ ಪ್ಲಾನ್‌ ಜಾರಿ: ಡಿಸಿ

ವಿಜಾಪುರ: ಇಲ್ಲಿಯ ಬಸವೇಶ್ವರ ಚೌಕ್‌ನಿಂದ ಶಿವಾಜಿ ಚೌಕ್‌ವರೆಗಿನ ಮುಖ್ಯ ರಸ್ತೆಯ ವಿಸ್ತರಣೆಕ್ಕೆ ಒಂದು ತಿಂಗಳಲ್ಲಿ ಮಾಸ್ಟರ್‌ ಪ್ಲಾನ್‌ ಜಾರಿಗೊಳಿಸುವುದಾಗಿ ಜಿಲ್ಲಾಧಿಕಾರಿ ರಿತ್ವಿಕ್‌ ಪಾಂಡೆ ತಿಳಿಸಿದರು.ಮಾಸ್ಟರ್‌ ಪ್ಲಾನ್‌ ಜಾರಿ ಕುರಿತು ಶನಿವಾರ ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಈ ಭಾಗದ ಆಸ್ತಿ ಮಾಲೀಕರು ‘ಮಾರುಕಟ್ಟೆ ಮೌಲ್ಯದಷ್ಟು ಪರಿಹಾರ ನೀಡಿದರೆ ನಾವು ಮಾಸ್ಟರ್‌ ಪ್ಲಾನ್‌ ಜಾರಿಗೆ ಸಹಕಾರ ನೀಡುತ್ತೇವೆ’ ಎಂದು ಒಪ್ಪಿಗೆ ಸೂಚಿಸಿದರು. ಆಸ್ತಿ ಮಾಲೀಕರಿಂದ ಕರಾರು ಪತ್ರಕ್ಕೆ ಸಹಿ ಮಾಡಿಸಿಕೊಳ್ಳಲು ನಿರ್ಧರಿಸಲಾಯಿತು.ಮಾಸ್ಟರ್‌ ಪ್ಲಾನ್‌ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಪಾಂಡೆ, ‘2006ರಲ್ಲಿ ಮಾಸ್ಟರ್ ಪ್ಲಾನ್‌ನ ಅಂತಿಮ ರೂಪರೇಷೆ ಸಿದ್ಧವಾಗಿ ಅಧಿಸೂಚನೆ ಸಹ ಪ್ರಕಟವಾಗಿದೆ. ಮಾಸ್ಟರ್ ಪ್ಲಾನ್ ಅನುಷ್ಠಾನಗೊಳಿಸಲು ಈಗಾಗಲೇ ಪಾರದರ್ಶಕವಾಗಿ ಸಮೀಕ್ಷೆ ಪೂರ್ಣಗೊಳಿಸ ಲಾಗಿದೆ. ರಸ್ತೆ ವಿಸ್ತರಣೆ, ಆಸ್ತಿಗಳಿಗೆ ಪರಿಹಾರಕ್ಕೆ ₨23 ಕೋಟಿ ಹಾಗೂ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ₨10 ಕೋಟಿ  ಅನುದಾನ ಸಹ ಲಭ್ಯವಿದೆ. ಮೊದಲ ಹಂತದಲ್ಲಿ ಗಾಂಧಿ ಚೌಕ್‌ನ್ನು ಕೇಂದ್ರವಾಗಿರಿಸಿಕೊಂಡು ಪೂರ್ವಕ್ಕೆ ಬಸವೇಶ್ವರ ಚೌಕ್‌ವರೆಗೆ ಹಾಗೂ ಪಶ್ಚಿಮಕ್ಕೆ ಶಿವಾಜಿ ಚೌಕ್‌ವರೆಗೆ ರಸ್ತೆ ವಿಸ್ತರಣೆ ಕಾರ್ಯ ಕೈಗೊಳ್ಳಲಾಗುವುದು’ ಎಂದರು.‘ಬಸವೇಶ್ವರ ಚೌಕ್‌ನಿಂದ ಶಿವಾಜಿ ಚೌಕ್‌ ವರೆಗಿನ 161 ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಳ್ಳಬೇಕಾಗಿದೆ.  ಒಟ್ಟಾರೆ ನಾಲ್ಕು ಎಕರೆಯಷ್ಟು ಜಾಗೆ ಸ್ವಾಧೀನ ಪಡಿಸಿಕೊಳ್ಳ ಲಾಗುವುದು.  ಕೇಂದ್ರ ಸರ್ಕಾರದ ಹೊಸ ಭೂಸ್ವಾಧೀನ ಕಾಯ್ದೆ ಅನ್ವಯ ಮಾರುಕಟ್ಟೆ ಮೌಲ್ಯದ ಎರಡು ಪಟ್ಟು ಪರಿಹಾರ ನೀಡಲಾಗುವುದು. ನಗರಸಭೆ ಹಾಗೂ ಲೋಕೋ ಪಯೋಗಿ ಇಲಾಖೆಯವರು ಈಗಾಗಲೆ ಆಸ್ತಿ ಮೌಲ್ಯ ನಿರ್ಧರಿಸಿದ್ದಾರೆ’ ಎಂದು ಹೇಳಿದರು.‘ರಸ್ತೆ ಮಧ್ಯ ಭಾಗದಿಂದ ಎಡಕ್ಕೆ 50ಅಡಿ ಹಾಗೂ ಬಲಕ್ಕೆ 50ಅಡಿ ಅಗಲ ಸೇರಿದಂತೆ 100ಅಡಿ ಅಗಲದ ಸುಂದರವಾದ ರಸ್ತೆ ನಿರ್ಮಿಸಲಾಗುವುದು’ ಎಂದರು.‘ನಗರ ಸೌಂದರ್ಯ ಹಾಗೂ ಮಾದರಿ ರಸ್ತೆ ನಿರ್ಮಾಣಕ್ಕೆ ಎಲ್ಲರ  ಸಹಕಾರ ಅವಶ್ಯ. ಮುಂದಿನ ಎರಡ್ಮೂರು ದಿನಗಳಲ್ಲಿ ರಸ್ತೆ ವಿಸ್ತರಣೆಕ್ಕೆ ಸ್ವಾಧೀನ ಮಾಡಿಕೊಳ್ಳುವ ಆಸ್ತಿಗಳ ವಿವರವನ್ನು ಪ್ರತಿ ಆಸ್ತಿ ಮಾಲೀಕರಿಗೆ ತಲುಪಿಸಲಾಗುವುದು. ಪರಿಹಾರ ಪಡೆದುಕೊಂಡು ಆಸ್ತಿ ಬಿಟ್ಟುಕೊಡುವ ಒಪ್ಪಿಗೆ ಪತ್ರವನ್ನು ಜಿಲ್ಲಾಡಳಿತ ಪಡೆದುಕೊಳ್ಳಲಿದೆ. ಆಸ್ತಿ ಮಾಲೀಕರು ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿ ಸಹಕರಿಸಬೇಕು’ ಎಂದು ವಿನಂತಿಸಿದರು.ಪುನರ್ವಸತಿ ಕಲ್ಪಿಸಿ: ಆಸ್ತಿಗಳ ಮಾಲೀಕರಾದ ವಿಜುಗೌಡ ಪಾಟೀಲ, ನಗರಸಭೆ ಸದಸ್ಯ ವಿಜಯಕುಮಾರ ಮಂಗಳವೇಡೆ, ಜಹಗೀರ ದಾರ, ಗೂಳಪ್ಪ ಶೆಟಗಾರ, ವಕೀಲ ಅಶೋಕ ಜೋಶಿ, ಎ.ಎಸ್.ಕೆಂಭಾವಿ ಇತರರು, ‘ಮಾಸ್ಟರ್ ಪ್ಲಾನ್ ಅನುಷ್ಠಾನಕ್ಕೆ ಯಾವುದೇ ತಕರಾರಿಲ್ಲ. ಆದರೆ, ಬಬಲೇಶ್ವರ ನಾಕಾದಿಂದ ಅಲ್-ಅಮೀನ್ ಕಾಲೇಜುವರೆಗಿನ ರಸ್ತೆ ವಿಸ್ತರಣೆ ಕಾರ್ಯವನ್ನು ಏಕಕಾಲದಲ್ಲಿ ಕೈಗೊಳ್ಳಿ. ಮಾರುಕಟ್ಟೆಯ ದರಕ್ಕೆ ಅನುಗುಣವಾಗಿ ಪರಿಹಾರ ಒದಗಿಸಿ. ಒಪ್ಪಂದ ಪತ್ರಕ್ಕೆ ಸಹಿ ಹಾಕುವ ಮುಂಚಿತವಾಗಿ ಪರಿಹಾರ ನೀಡಿ’ ಎಂದರು.

ನಿವೇಶನ ಮತ್ತು ಆಸ್ತಿ ಕಳೆದುಕೊಳ್ಳುವ ಮಾಲೀಕರಿಗೆ ಪುನರರ್ವಸತಿ ವ್ಯವಸ್ಥೆ ಮಾಡಬೇಕು. ಮಹಾನಗರ ಪಾಲಿಕೆಯಿಂದ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿಕೊಡಬೇಕು. ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಅಥವಾ ಮನೆಗಳನ್ನು ಒದಗಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮಂಡಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ‘ಹಂತ-ಹಂತವಾಗಿ ನಗರದಲ್ಲಿ ಮಾಸ್ಟರ್ ಪ್ಲಾನ್ ಅನುಷ್ಠಾನಗೊಳಿಸಲಾಗುವುದು. ಅನುದಾನದ ಲಭ್ಯತೆಗನುಸಾರವಾಗಿ ಪ್ರಥಮ ಆದ್ಯತೆಯಲ್ಲಿ ಈ ರಸ್ತೆ ವಿಸ್ತರಣೆಕ್ಕೆ ಮುಂದಾಗಿದ್ದೇವೆ. ಲಭ್ಯವಿರುವ ಹಣ ಬಳಸಿ, ಬಳಕೆ ಪ್ರಮಾಣ ಪತ್ರ ಸಲ್ಲಿಸಿದರೆ  ಎರಡನೇ ಹಂತದ ರಸ್ತೆ ವಿಸ್ತರಣೆಕ್ಕೆ ಸರ್ಕಾರ ಅನುದಾನ ನೀಡಲಿದೆ. ಇದರಲ್ಲಿ ಯಾವುದೇ ಸಂಶಯ ಬೇಡ. ಈಗಾಗಲೇ ನಿರ್ಧರಿಸಿದಂತೆ 16 ರಸ್ತೆಗಳ ವಿಸ್ತರಣೆವನ್ನು ಹಂತ-ಹಂತವಾಗಿ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು.ರಸ್ತೆ ವಿಸ್ತರಣೆದಿಂದ ಸಣ್ಣ-ಪುಟ್ಟ ಮಳಿಗೆಗಳ ವ್ಯಾಪಾರಸ್ಥರು, ಪೂರ್ಣ ಪ್ರಮಾಣದಲ್ಲಿ  ಅಂಗಡಿಗಳನ್ನು ಕಳೆದುಕೊಂಡಿದ್ದರೆ ಮಾನವೀಯ ದೃಷ್ಟಿಯಿಂದ ಅವರಿಗೆ ಮಹಾನಗರ ಪಾಲಿಕೆಯ ಖಾಲಿ ಇರುವ ಬಾಡಿಗೆ ಮಳಿಗೆಗಳನ್ನು ಆದ್ಯತೆಯ ಮೇರೆಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಆದರೆ, ನಿವೇಶನ–ಮನೆ ಹಂಚಿಕೆ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್‌ ಹಿಲೋರಿ, ಉಪವಿಭಾಗಾಧಿಕಾರಿ ಡಾ.ಬೂದೆಪ್ಪ, ಮಹಾನಗರ ಪಾಲಿಕೆ ಆಯುಕ್ತ ಜಿ.ರಾಮದಾಸ,  ಭೂದಾಖಲೆಗಳ ಉಪನಿರ್ದೇಶಕ ಜಗದೀಶ ರೂಗಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಆರ್.ಬಿ. ಪಾಟೀಲ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ  ಮಹಾದೇವಪ್ಪ ಮುರಗಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಉಪಸ್ಥಿತರಿದ್ದರು.ಭೂಮಾಲೀಕರ ಸಭೆ ನಾಳೆ

ವಿಜಾಪುರ: ರಾಷ್ಟ್ರೀಯ ಹೆದ್ದಾರಿ 13ರ ಅಗಲೀಕರಣಕ್ಕಾಗಿ ಇಂಡಿ ತಾಲ್ಲೂಕಿನ ಹೊರ್ತಿ ಗ್ರಾಮದ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದ್ದು, ಈ ಗ್ರಾಮದ ಭೂ ಮಾಲೀಕರ ಸಭೆಯನ್ನು ಇದೇ 17ರಂದು ಬೆಳಿಗ್ಗೆ 11ಕ್ಕೆ ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರೆಯಲಾಗಿದೆ.ಜಿಲ್ಲಾಧಿಕಾರಿ ರಿತ್ವಿಕ್ ಪಾಂಡೆ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ಜರುಗಲಿದ್ದು, ಭೂ ಮಾಲೀಕರು ಪಾಲ್ಗೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಡಾ.ಬೂದೆಪ್ಪ ಕೋರಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.