ಗುರುವಾರ , ಫೆಬ್ರವರಿ 25, 2021
29 °C
ಯಮನೂರು ಘಟನೆ: ಮನೆಮನೆಯಿಂದ ಮಾಹಿತಿ ಸಂಗ್ರಹಿಸಿದ ತನಿಖಾ ತಂಡ

ತಿಂಗಳಲ್ಲಿ ವರದಿ ಸಲ್ಲಿಕೆ– ಕಮಲ್‌ ಪಂತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿಂಗಳಲ್ಲಿ ವರದಿ ಸಲ್ಲಿಕೆ– ಕಮಲ್‌ ಪಂತ್

ನವಲಗುಂದ: ಯಮನೂರು ಘಟನೆ ಮಾತ್ರವಲ್ಲ; ಮಹಾದಾಯಿ ಹೋರಾಟಕ್ಕೆ ಸಂಬಂಧಿಸಿದಂತೆ ಈ ಒಂದು ವರ್ಷದಲ್ಲಿ ನಡೆದಿರುವ ಎಲ್ಲ ಘಟನೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ರಾಜ್ಯ ಮೀಸಲು ಪೊಲೀಸ್ ಪಡೆಯ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಕಮಲ್‌ ಪಂತ್‌ ಹೇಳಿದರು.ಯಮನೂರಿಗೆ ಬುಧವಾರ ಭೇಟಿ ನೀಡಿದ ಅವರು, ದೌರ್ಜನ್ಯಕ್ಕೆ ಒಳಗಾದ ಜನರಿಂದ ಹಾಗೂ ಒಂದು ವರ್ಷದ ಘಟನಾವಳಿಗಳ ಸಂಪೂರ್ಣ ಮಾಹಿತಿ ಕಲೆ ಹಾಕಲು ಸಮಯ ಹಿಡಿಯುತ್ತದೆ. ಆದ್ದರಿಂದ ವರದಿ ಸಲ್ಲಿಕೆಗೆ ಒಂದು ತಿಂಗಳ ಕಾಲಾವಕಾಶ ನೀಡಲು ಸರ್ಕಾರವನ್ನು ಕೋರಿರುವುದಾಗಿ ಸುದ್ದಿಗಾರರಿಗೆ ತಿಳಿಸಿದರು.ಪೊಲೀಸ್‌ ತಂಡವು ಮನೆಮನೆಗೂ ಹೋಗಿ ಸೂಕ್ಷ್ಮವಾಗಿ ವಿಚಾರಣೆ ನಡೆಸುತ್ತಿದೆ. ಇಲ್ಲಿ ಶೇ 90ರಷ್ಟು ಮಾಹಿತಿ ಪಡೆಯಲಾಗಿದ್ದು, ಗುರುವಾರ ಆರೇಕುರಹಟ್ಟಿಯಲ್ಲಿ ವಿಚಾರಣೆ ನಡೆಸಲಾಗುತ್ತದೆ. ಗಲಾಟೆಯಲ್ಲಿ ಸರ್ಕಾರಿ ಕಚೇರಿಗಳು ಹಾನಿಗೀಡಾಗಿದ್ದು, ಆಯಾ ಕಚೇರಿಗಳ ಅಧಿಕಾರಿಗಳಿಂದ ಹಾನಿಯ ಅಂದಾಜು ತಿಳಿಯಬೇಕು ಹಾಗೂ ಘಟನೆ ನಡೆದ ಸಂದರ್ಭದ ಬಗ್ಗೆ ಅಭಿಪ್ರಾಯ ಸಂಗ್ರಹಿಸಬೇಕು. ಆ ದಿನ ಹಾಜರಿದ್ದ ಪೊಲೀಸ್ ಅಧಿಕಾರಿಗಳು, ಕೈಗೊಂಡ ಮುಂಜಾಗ್ರತಾ ಕ್ರಮ ಹಾಗೂ ಕರ್ತವ್ಯದ ಮೇಲಿದ್ದ  ಪೊಲೀಸರನ್ನು ಗುರುತಿಸಿ ಅವರಿಂದಲೂ ವಿವರ ಪಡೆಯಬೇಕಿದೆ ಎಂದರು.ಮಾಹಿತಿ ದಾಖಲು: ಪಂತ್ ಅವರ ಭೇಟಿಗೂ ಮುನ್ನ ಇಬ್ಬರು ಡಿವೈಎಸ್‌ಪಿ ನೇತೃತ್ವದ ಒಂಬತ್ತು ಪೊಲೀಸರ ತಂಡವು ಗ್ರಾಮದ ಮನೆಮನೆಗೆ ಭೇಟಿ ನೀಡಿ ಬೆಳಿಗ್ಗೆಯಿಂದಲೇ ಮಾಹಿತಿ ಕಲೆ ಹಾಕಿ, ಮಧ್ಯಾಹ್ನ ನೇರವಾಗಿ ಗ್ರಾಮದ ಪಂಚಾಯ್ತಿ ಕಚೇರಿಗೆ ಬಂದಿದ್ದ ಪಂತ್‌ ಅವರಿಗೆ ವಿವರ ನೀಡಿತು. ಪಂಚಾಯ್ತಿ ಕಚೇರಿಯಲ್ಲಿರುವ ಕಂಪ್ಯೂಟರ್‌ಗಳಲ್ಲಿಯೇ ಮಾಹಿತಿಯನ್ನು ದಾಖಲಿಸಿಕೊಳ್ಳಲಾಯಿತು. ತಂಡ ಮೂರು ದಿನ ಇಲ್ಲೇ ಇದ್ದು, ನವಲಗುಂದ, ಯಮನೂರು ಹಾಗೂ ಆರೇಕುರಹಟ್ಟಿ ಗ್ರಾಮಸ್ಥರಿಂದ ಮಾಹಿತಿ ಸಂಗ್ರಹಿಸಲಿದೆ.ಅಲೋಕಕುಮಾರ್‌ ಭೇಟಿ: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಐಜಿಪಿ ಅಲೋಕಕುಮಾರ್‌ ಕೂಡ ಯಮನೂರ ಹಾಗೂ ಅಳಗವಾಡಿ ಗ್ರಾಮಗಳಿಗೆ ಪ್ರತ್ಯೇಕವಾಗಿ ಭೇಟಿ ನೀಡಿ ಜನರಿಂದ ಮಾಹಿತಿ ಪಡೆದುಕೊಂಡರು. ಇದನ್ನೆಲ್ಲ ಚಿತ್ರೀಕರಿಸಿಕೊಳ್ಳಲಾಯಿತು.

ಪೊಲೀಸರಿಂದ ಅಮಾಯಕರ ಮೇಲೆ ದೌರ್ಜನ್ಯ ನಡೆದಿದ್ದರೂ ಘಟನಾ ಸ್ಥಳಕ್ಕೆ ತೆರಳದೇ ಇರುವ ಬಗ್ಗೆ ಹೈಕೋರ್ಟ್‌, ಮಾನವ ಹಕ್ಕುಗಳ ಆಯೋಗವನ್ನು ತರಾಟೆಗೆ ತೆಗೆದುಕೊಂಡಿದ್ದನ್ನು ಸ್ಮರಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.