ತಿಂಗಳಲ್ಲಿ ಸಮಸ್ಯೆ ಸರಿಪಡಿಸಿ: ಜಿಲ್ಲಾಧಿಕಾರಿ

7

ತಿಂಗಳಲ್ಲಿ ಸಮಸ್ಯೆ ಸರಿಪಡಿಸಿ: ಜಿಲ್ಲಾಧಿಕಾರಿ

Published:
Updated:
ತಿಂಗಳಲ್ಲಿ ಸಮಸ್ಯೆ ಸರಿಪಡಿಸಿ: ಜಿಲ್ಲಾಧಿಕಾರಿ

ಕೋಲಾರ: ಯುವಜನ ಸೇವಾ ಕ್ರೀಡಾ ಇಲಾಖೆ ಕಾರ್ಯವೈಖರಿ ಬಗ್ಗೆ ಯುವಜನರು ಸಾಕಷ್ಟು ದೂರು, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದು ತಿಂಗಳೊಳಗೆ ಇಲಾಖೆ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ. ಒಂದು ವಾರದೊಳಗೆ ಯೋಜನೆ ಸಿದ್ಧಪಡಿಸಿ ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕಿ ಎಂ.ಎಲ್.ದೇವಿಕಾ ಅವರಿಗೆ ಸೂಚಿಸಿದರು.ರಾಜ್ಯ ಯುವನೀತಿ ಅನುಷ್ಠಾನಗೊಳಿಸುವ ಸಂಬಂಧ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಪ್ರಾಥಮಿಕ ಸಭೆಯಲ್ಲಿ ಮಾತನಾಡಿದ ಅವರು, ತಿಂಗಳ ಗಡುವಿನಲ್ಲಿ ಪ್ರಾಮಾಣಿಕವಾಗಿ ಮತ್ತು ಬದ್ಧತೆಯಿಂದ ಪ್ರಯತ್ನಿಸಿದರೆ ಅರ್ಧದಷ್ಟಾದರೂ ಸಮಸ್ಯೆಗಳು ಪರಿಹಾರವಾಗುತ್ತವೆ. ನಂತರ ಉಳಿಯುವ ಸಮಸ್ಯೆಗಳ ಬಗ್ಗೆ ಕ್ರಮ ಕೈಗೊಳ್ಳಬಹುದು ಎಂದರು.ಕಠಿಣ ಕ್ರಮಗಳಿಗೆ ಮುಂದಾದರೆ ತಮಗೆ ತೊಂದರೆಯಾಗಬಹುದು, ಈಗಿನ ಸಮಸ್ಯೆಗಳಿಗೆ ಈ ಹಿಂದೆ ಸಹಾಯಕ ನಿರ್ದೇಶಕರಾಗಿದ್ದ ಅಧಿಕಾರಿ ಕಾರಣ ಎಂದು ನೆಪ ಹೇಳಲು ಪ್ರಯತ್ನಿಸಿದ ದೇವಿಕಾ ಅವರ ಮಾತನ್ನು ತಡೆದ ಜಿಲ್ಲಾಧಿಕಾರಿ, ಇತರರ ಮೇಲೆ ದೂರು ಹೇಳುತ್ತಾ ಹೋದರೆ ನಮ್ಮ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ಹಿಂದಿನವರು ಉತ್ತಮವಾಗಿ ಕೆಲಸ ಮಾಡಿದ್ದರೆ ನಿಮಗೆ ಕೆಲಸ ಮಾಡುವ ಅವಕಾಶವೇ ದೊರಕುತ್ತಿರಲಿಲ್ಲ ಎಂದು ಹೇಳಿದರು. ಸರ್ಕಾರಿ ಅಧಿಕಾರಿಯಾಗಿ ಕಠಿಣ ಕ್ರಮ ಕೈಗೊಳ್ಳಲು ಭಯ, ಆತಂಕ ಪಡಬಾರದು ಎಂದರು.ಬಾಗಲಕೋಟೆಯಲ್ಲಿ ಮೂರು ತಾಲ್ಲೂಕು ಕೇಂದ್ರಗಳಲ್ಲಿ ಕ್ರೀಡಾಂಗಣ ಸೌಲಭ್ಯವಿದೆ. ಆದರೆ ಜಿಲ್ಲಾ ಕೇಂದ್ರವಾದ ಕೋಲಾರ ಜಿಲ್ಲಾ ಕ್ರೀಡಾಂಗಣದಲ್ಲಿ ಮೂಲಸೌಕರ್ಯ ಇಲ್ಲ ಎಂಬುದು ಬೇಸರದ ಸಂಗತಿ ಎಂದು ಹೇಳಿದರು.ಸಭೆಯಲ್ಲಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಚ್.ಆರ್.ಭಗವಾನ್ ದಾಸ್ ಅವರೂ ಜಿಲ್ಲಾ ಕ್ರೀಡಾಂಗಣದ ಅವಸ್ಥೆಗೆ ಬೇಸರ ವ್ಯಕ್ತಪಡಿಸಿದರು. ಕ್ರೀಡಾಂಗಣದ ಸುತ್ತ ದೀಪಗಳನ್ನು ಅಳವಡಿಸಿ. ಅಥ್ಲೆಟಿಕ್ ಟ್ರ್ಯಾಕ್ ರೂಪಿಸಿ. ಗಡಿಯಾರ, ರೇಡಿಯೋ ಅಳವಡಿಸಿ ಎಂದು ಸಲಹೆ ನೀಡಿದರು. ಕ್ರೀಡಾಂಗಣದಲ್ಲಿ ಅನೈತಿಕ ಚಟುವಟಿಕೆಗಳನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.ಯುವನೀತಿ ಪೂರ್ವಭಾವಿ ಸಭೆಯಾದರೂ ಪಾಲ್ಗೊಂಡ ಬಹುತೇಕ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಇಲಾಖೆಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವತ್ತಲೇ ಗಮನ ಹರಿಸಿದರು.ಇಲಾಖೆಯು ಜಿಲ್ಲೆಯಲ್ಲಿ ಇದ್ದೂ ಇಲ್ಲದಂತಾಗಿದೆ. ಯುವಜನೋತ್ಸವ, ಯುವಜನಮೇಳ ಸೇರಿದಂತೆ ಯಾವ ಕಾರ್ಯಕ್ರಮ ಸಮರ್ಪಕವಾಗಿ ನಡೆಯುತ್ತಿಲ್ಲ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸ್ಥಳೀಯ ಯುವ ಕ್ರೀಡಾಪಟುಗಳು ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿಲ್ಲ. ಇಲಾಖೆ ಆಯುಕ್ತರಿಗೂ ದೂರು ನೀಡಲಾಗಿದೆ ಎಂದು ಜನಪದ ಗಾಯಕ ಜನ್ನಘಟ್ಟ ಕೃಷ್ಣಮೂರ್ತಿ ದೂರಿದರು.ಇಲಾಖೆಯು ಯುವಜನರ ಪರವಾಗಿ ಕೆಲಸ ಮಾಡುತ್ತಿಲ್ಲ. ಬ್ಯಾಸ್ಕೆಟ್‌ಬಾಲ್ ಕ್ರೀಡಾಂಗಣವನ್ನು ಬೈಕ್ ಸವಾರಿ ತರಬೇತಿಗೆ ಬಳಸಲಾಗುತ್ತಿದೆ. ಜಿಮ್ ಶುಲ್ಕವನ್ನು ರೂ 50ರಿಂದ 100ಕ್ಕೆ ಹೆಚ್ಚಿಸಿರುವುದು ಹೊರೆಯಾಗಿದೆ.ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಅಂಟಿಕೊಂಡಂತೆ ಇರುವ ಜಿಲ್ಲಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ ಕ್ರೀಡಾಪಟುಗಳಿಗೆ ಉತ್ತಮ ವ್ಯವಸ್ಥೆ ಇಲ್ಲ. ಅಲ್ಲಿ ಚಿನ್ನಿದಾಂಡು, ಗೋಲಿ ಆಡಲು ಅವಕಾಶ ಮಾಡಿಕೊಡಲಾಗಿದೆ. ಒಂದು ವರ್ಷದಿಂದ ಸಂಘ-ಸಂಸ್ಥೆಗಳಿಗೆ ನೆರವು ನೀಡಿಲ್ಲ ಎಂದು ನೃತ್ಯಪಟು ಮಹೇಶರಾವ್ ಕದಂ ದೂರಿದರು.ಕ್ರೀಡಾಂಗಣದಲ್ಲಿ ಅಥ್ಲೆಟಿಕ್ ಟ್ರ್ಯಾಕ್, ಶೌಚಾಲಯ ವ್ಯವಸ್ಥೆ ಇಲ್ಲ, ಕುಡಿಯುವ ನೀರಿಲ್ಲ, ಅಭ್ಯಾಸ ನಿರತ ಕ್ರೀಡಾಪಟುಗಳಿಗೆ ಅಗತ್ಯವಿರುವ ಕ್ರೀಡಾ ಸಾಮಗ್ರಿಗಳನ್ನು ನೀಡುವುದಿಲ್ಲ ಎಂದು ಕ್ರೀಡಾಪಟು ಗೋಪಾಲಕೃಷ್ಣ ದೂರಿದರು.ಇಲಾಖೆ ನಡೆಸುವ ಕ್ರೀಡಾ ವಸತಿ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಕುಸಿದಿದೆ. ಅತ್ಯುತ್ತಮ ಸೌಲಭ್ಯಗಳಿದ್ದರೂ ವಿದ್ಯಾರ್ಥಿಗಳ ಸಂಖ್ಯೆ ಕುಸಿದಿರುವುದು ವಿಷಾದನೀಯ. ಹಳ್ಳಿಗಳಲ್ಲಿರುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ದೊರಕುತ್ತಿಲ್ಲ ಎಂದು ಮಾರ್ಜೇನಹಳ್ಳಿ ಬಾಬು ದೂರಿದರು.

 

ಕಳೆದ ಮೂರು ವರ್ಷದಿಂದಲೂ ತಾಲ್ಲೂಕು ಮಟ್ಟದ ಸಭೆಯನ್ನೇ ನಡೆಸಿಲ್ಲ ಎಂದು ಬಂಗಾರಪೇಟೆಯ ರೇಣುಕಾ ದೂರಿದರು. ಅಂತರರಾಷ್ಟ್ರೀಯ ಮಟ್ಟದ ಓಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ತಮಗೆ ನೆರವು ನೀಡಬೇಕು ಎಂದು ಹಿರಿಯ ಕ್ರೀಡಾಪಟು ವಿ.ಮಾರಪ್ಪ ಕೋರಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ರಾಜೇಂದ್ರ ಚೋಳನ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಟಿ.ವೆಂಕಟಾಚಲ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry