ತಿಂಗಳಾದರೂ ಬಗೆಹರಿಯದ ಸಮಸ್ಯೆ

7

ತಿಂಗಳಾದರೂ ಬಗೆಹರಿಯದ ಸಮಸ್ಯೆ

Published:
Updated:

ಜಗಳೂರು: ಪಟ್ಟಣದಲ್ಲಿ ಒಂದು ತಿಂಗಳಿಂದ  ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದ್ದು, ನಾಗರಿಕರು ಪರದಾಡುವಂತಾಗಿದೆ.ಚನ್ನಗಿರಿ ತಾಲ್ಲೂಕಿನ ಸೂಳೆಕೆರೆಯಿಂದ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಯಲ್ಲಿನ ನಿರಂತರ ವ್ಯತ್ಯಯದಿಂದಾಗಿ 20 ಸಾವಿರಕ್ಕೂ ಹೆಚ್ಚು ಜನರು ನೀರಿನ ತೊಂದರೆ ಅನುಭವಿಸುವಂತಾಗಿದೆ.ಸೂಳೆಕೆರೆಯಿಂದ 114 ಕಿ.ಮೀ ಅಂತರವಿರುವ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಯಲ್ಲಿ ಸದಾ ಅಡಚಣೆ ಎದುರಾಗುತ್ತಿದ್ದು, ನಾಗರಿಕರಿಗೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಇಲ್ಲದಂತಾಗಿದೆ. ಸೂಳೆಕೆರೆ ಸಮೀಪ ಅಳವಡಿಸಿರುವ 1,250 ಕೆವಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕಗಳು ಸುಟ್ಟಿರುವ ಹಿನ್ನೆಲೆಯಲ್ಲಿ ಒಂದು ತಿಂಗಳಿಂದ ನೀರು ಪೂರೈಕೆ ಸ್ಥಗಿತವಾಗಿದೆ.`ವಿದ್ಯುತ್ ಪರಿವರ್ತಕ ದುರಸ್ತಿಗಾಗಿ ಗುಜರಾತ್ ರಾಜ್ಯಕ್ಕೆ ಕಳುಹಿಸಬೇಕಿರುವ ಕಾರಣ ನೀರು ಪೂರೈಕೆ ವಿಳಂಬವಾಗುತ್ತಿದೆ. ಇನ್ನೆರಡು ದಿನಗಳಲ್ಲಿ ನೀರು ಪೂರೈಸಲಾಗುವುದು ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಜೆ.ಟಿ. ಹನುಮಂತರಾಜು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.ವರ್ಷದುದ್ದಕ್ಕೂ  ಲೋಡ್‌ಶೆಡ್ಡಿಂಗ್ ಹಾಗೂ 114 ಕಿ.ಮೀ. ಅಂತರದಲ್ಲಿ ಅಲ್ಲಲ್ಲಿ ಪೈಪ್ ಒಡೆಯುವುದು ಮುಂತಾದ ಕಾರಣಗಳಿಂದಾಗಿ ಸೂಳೆಕೆರೆ ಕುಡಿಯುವ ನೀರಿನ ಯೋಜನೆ ಇದ್ದೂ ಇಲ್ಲದಂತಾಗಿದ್ದು, ಪಟ್ಟಣದಲ್ಲಿ ನೀರಿನ ಹಾಹಾಕಾರ ನಿರಂತರವಾಗಿದೆ.ಪ್ರಸ್ತುತ ಪಟ್ಟಣದ ಎಲ್ಲಾ 15 ವಾರ್ಡ್‌ಗಳಲ್ಲಿ ಮಹಿಳೆಯರು ನೀರಿಗಾಗಿ ದಿನವಿಡೀ ಹರಸಾಹಸ ನಡೆಸಬೇಕಾಗಿದೆ. ಟ್ಯಾಂಕರ್‌ಗಳು ಹಾಗೂ ಕೊಳವೆಬಾವಿಗಳ ನೀರನ್ನು ಸಮರ್ಪಕವಾಗಿ ಪೂರೈಸಲು ಸಾಧ್ಯವಾಗುತ್ತಿಲ್ಲ. ಫ್ಲೋರೈಡ್ ಅಂಶ ಹೆಚ್ಚಾಗಿರುವ ನೀರನ್ನೇ  ಕುಡಿಯುವ ಅನಿವಾರ್ಯ ಸ್ಥಿತಿ ಪಟ್ಟಣದಲ್ಲಿದೆ.ಸೂಳೆಕೆರೆ ನೀರು ಪಟ್ಟಣಕ್ಕೆ ಬಂದಿದ್ದನ್ನು ಪಟ್ಟಣದ ಕೆಲವು ರಿಯಲ್ ಎಸ್ಟೇಟ್ ದಲ್ಲಾಳಿಗಳು ನಿವೇಶನ ಹಾಗೂ ಮನೆ ಬಾಡಿಗೆಯನ್ನು ದುಪ್ಪಟ್ಟು ಬೆಲೆಗೆ ಹೆಚ್ಚಿಸಿ ಲಾಭ ಮಾಡಿಕೊಂಡಿದ್ದು ಬಿಟ್ಟರೆ ಜನಸಾಮಾನ್ಯರಿಗೆ ಸಮರ್ಪಕ ನೀರಿಲ್ಲ. ಕೂಡಲೇ ನೀರು ಪೂರೈಸದೇ ಇದ್ದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಹಲವು ಸಂಘಟನೆಗಳು ಎಚ್ಚರಿಕೆ ನೀಡಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry