ಬುಧವಾರ, ನವೆಂಬರ್ 13, 2019
19 °C
ಆರ್‌ಟಿಇ ಸೀಟು ಹಂಚಿಕೆ ಪ್ರಕ್ರಿಯೆ

ತಿಂಗಳು ಕಳೆದರೂ ದೊರಕದ ಪ್ರವೇಶ

Published:
Updated:

ಶಿಕ್ಷಣದ ದಿಕ್ಕು

ಬೆಂಗಳೂರು: ಆರ್‌ಟಿಇ ಸೀಟುಗಳ ಹಂಚಿಕೆಗೆ ಪ್ರಾರಂಭವಾಗಿ ಒಂದು ತಿಂಗಳು ಕಳೆದರೂ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಸೇರ್ಪಡೆಗೊಳಿಸುವ ಬಗ್ಗೆ ಪೋಷಕರಿಗೆ ಕೇವಲ ಭರವಸೆ ದೊರೆತಿದೇ ವಿನಃ ಶಾಲೆಯ ಪ್ರವೇಶ ಪಡೆಯಲು ಸಾಧ್ಯವಾಗಿಲ್ಲ!ರಾಜರಾಜೇಶ್ವರಿ ನಗರದ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಆರ್‌ಟಿಇ ಕಾಯ್ದೆಯಡಿ ಸೀಟು ಪಡೆಯುವ ಸಲುವಾಗಿ ನಾಲ್ಕು ಮಂದಿ ಮಕ್ಕಳು ಆಯ್ಕೆಯಾಗಿದ್ದರೂ, ಅವರಿಗಿನ್ನೂ ಪ್ರವೇಶ ದೊರೆತಿಲ್ಲ. ಪೋಷಕರು ಸೀಟು ಹಂಚಿಕೆ ಆರಂಭಗೊಂಡ ಮಾರ್ಚ್ 1ರಿಂದಲೇ ಅರ್ಜಿ ಹಿಡಿದು ಶಾಲೆಗೂ ಮನೆಗೂ ಚಪ್ಪಲಿ ಸವೆಸುತ್ತಿದ್ದಾರೆ. ಆದರೆ, ಸೇರ್ಪಡೆಗೊಳ್ಳುವ ಮಕ್ಕಳ ದಾಖಲೆಗಳ ಪರಿಶೀಲನಾ ಕಾರ್ಯ ನಡೆಯುತ್ತಿದೆ ಎಂದು ಶಾಲೆಯ ಆಡಳಿತ ಮಂಡಳಿ ಕುಂಟು ನೆಪ ಹೇಳುತ್ತಿದೆ ಎಂಬುದು ಪೋಷಕರ ಆರೋಪ.ಆರ್‌ಟಿಇ ಕಾಯ್ದೆಯ ಶೇ.25 ಮೀಸಲಾತಿಯಡಿ  ಈ ಶಾಲೆಗೆ ಸುಮಾರು 17 ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಆಯ್ಕೆಯಾಗಿದ್ದರು. ಆದರೆ, ಅದರಲ್ಲಿ ನಾಲ್ಕು ಮಂದಿ ವಿದ್ಯಾರ್ಥಿಗಳ ದಾಖಲೆಗಳು ಪದೇ ಪದೇ ಪರಿಶೀಲನೆಗೆ ಒಳಗಾಗಿದ್ದು ಮಾತ್ರವಲ್ಲದೇ ಶಾಲೆಯ ಆಡಳಿತ ಮಂಡಳಿಯು ವಿನಾಕಾರಣ ಈ ನಾಲ್ಕು ಮಂದಿ ವಿದ್ಯಾರ್ಥಿಗಳಿಗೆ ತೊಂದರೆ ನೀಡುತ್ತಿದೆ ಎಂಬುದು ಪೋಷಕರ ಅಳಲು. ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿ ಮಾರ್ಚ್ 18 ರಂದು ಶಾಲೆಗೆ ನೋಟಿಸ್ ಜಾರಿಮಾಡಿದ್ದರೂ, ಆಡಳಿತ ಮಂಡಳಿಯು ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ.ಈ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಪೋಷಕ ಕೃಷ್ಣ (ಹೆಸರು ಬದಲಿಸಿದೆ), `ಶಾಲೆಯ ಸ್ವಾಗತಕಾರ ಕೊಠಡಿಯಲ್ಲಿ ಗಂಟೆಗಟ್ಟಲೇ ಕಾದು ಕುಳಿತಿದ್ದೇನೆ. ವಿಚಾರಿಸುವುದಿರಲಿ, ಮಾತಿಗೂ ಆಸ್ಪದ ಕೊಡದಂತೆ ಆಮೇಲೆ ಬನ್ನಿ ಎಂದಷ್ಟೇ ಹೇಳುತ್ತಾರೆ.  ಇಲ್ಲವಾದರೆ ದಾಖಲೆಗಳು ಪರಿಶೀಲನೆಯಲ್ಲಿವೆ ಎಂಬ ಉತ್ತರ ನೀಡುತ್ತಾರೆ. ಇವೆರಡನ್ನು ನಿತ್ಯ ಕೇಳಿ ರೋಸಿ ಹೋಗಿದ್ದೇನೆ' ಎಂದು ನೊಂದು ನುಡಿದರು.ದಕ್ಷಿಣ ವಲಯದ ಕ್ಷೇತ್ರಶಿಕ್ಷಣಾಧಿಕಾರಿ ಕೆಂಪಯ್ಯ, `ವಿದ್ಯಾರ್ಥಿಗಳ ದಾಖಲೆಗಳನ್ನು ಪರಿಶೀಲಿಸುವ ಅಧಿಕಾರ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಇರುತ್ತದೆ ವಿನಃ ಶಾಲೆಯ ಆಡಳಿತ ಮಂಡಳಿಗಲ್ಲ. ಸರ್ಕಾರದ ಈ ನೀತಿಯನ್ನು ಅನುಸರಿಸುವುದು ಎಲ್ಲ ಶಾಲೆಯ ಆಡಳಿತ ಮಂಡಳಿಯ ಕರ್ತವ್ಯ.

ಮಕ್ಕಳಿಗೆ ಪ್ರವೇಶ ನೀಡಿದ ಮೇಲೆ ಆಡಳಿತ ಮಂಡಳಿ ದಾಖಲೆಗಳನ್ನು ಪರಿಶೀಲಿಸಬಹುದು. ನನಗಿರುವ ಅಧಿಕಾರ ವ್ಯಾಪ್ತಿಯಲ್ಲಿ ಆಡಳಿತ ಮಂಡಳಿಯ ನೀತಿಯ ವಿರುದ್ಧ ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದೇನೆ.ಆಡಳಿತ ಮಂಡಳಿಯ ಟ್ರಸ್ಟಿ ಲೇಪಾಕ್ಷ , `ಯಾವುದೇ ಮಕ್ಕಳಿಗೆ ಪ್ರವೇಶವನ್ನು ನಿರಾಕರಿಸಿಲ್ಲ. ಸೀಟು ಹಂಚಿಕೆಯ ಪ್ರಕ್ರಿಯೆ ಚಾಲ್ತಿಯಲ್ಲಿದ್ದು. ಪ್ರವೇಶ ನೀಡಿಕೆ ಕೊನೆಯ ದಿನಾಂಕ ಏಪ್ರಿಲ್ 10ರ ಒಳಗೆ ಮಕ್ಕಳನ್ನು ಸೇರ್ಪಡೆಗೊಳಿಸಲಾಗುವುದು' ಎಂದರು.

ಪ್ರತಿಕ್ರಿಯಿಸಿ (+)