ಗುರುವಾರ , ಮೇ 13, 2021
17 °C
ಥಳುಕು ಬಳುಕು

ತಿಂಡಿಪೋತಿಯ ಡಯಟ್ ಕಥೆ!

-ಎನ್ವಿ Updated:

ಅಕ್ಷರ ಗಾತ್ರ : | |

ಸೋನಾಕ್ಷಿ ನೀಲಿ ಬಣ್ಣ ಕಂಡರೆ ಕಣ್ಣರಳಿಸುತ್ತಾರೆ. ಅವರಲ್ಲಿ ಮೂರು ಡಜನ್‌ನಷ್ಟು ನೀಲಿ ಬಟ್ಟೆಗಳಿವೆ. ಅದೇ ಬಣ್ಣದ ಚಪ್ಪಲಿಗಳಿಗಂತೂ ಲೆಕ್ಕವಿಲ್ಲ. ನೀಲಿ ಬಣ್ಣದ ತುಟಿ ರಂಗು ಹಚ್ಚಿಕೊಂಡು, ಅಮ್ಮನನ್ನು ಬೆಚ್ಚಿ ಬೀಳಿಸಿದ್ದೂ ಇದೆ. ಹುಡುಗನೊಬ್ಬ ಕಾಲೇಜಿನಲ್ಲಿಇದ್ದಾಗ ನೀಲಿ ಟಿ-ಶರ್ಟ್ ಕೊಡಿಸಿ ಪಟಾಯಿಸಲು ಯತ್ನಿಸಿದ್ದ. ಮನೆಗೆ ಬಂದು ಆ ಶರ್ಟ್ ತೆಗೆದು ನೋಡಿದರೆ, ಅದರ ಮೇಲೆ `ಲವ್ ಯೂ' ಒಕ್ಕಣೆ. ಕೆಳಗೆ ಇದ್ದ ಇನ್ನೊಂದು ಸಾಲು ಕಣ್ಣಲ್ಲಿ ನೀರು ತರಿಸಿತು. ಅದು `ಪ್ಲಂಪ್' (ಪುಷ್ಟವಾದ ಹುಡುಗಿಗೆಹೀಗೆನ್ನುತ್ತಾರೆ) ಎಂಬ ಇನ್ನೊಂದು ಪದ.ಈಗಲೂ ನೀಲಿ ತಮ್ಮ ಬದುಕಿಗೆ ಕೊಟ್ಟ ರಂಗಿನ ಕತೆಗಳನ್ನು ಸೋನಾಕ್ಷಿ ನಿಸ್ಸಂಕೋಚವಾಗಿ ಮೆಲುಕು ಹಾಕುತ್ತಾರೆ. ಆ ಬಣ್ಣದ ಜೊತೆಜೊತೆಗೇ ಅವರ ಫಿಟ್‌ನೆಸ್ ಕತೆಯೂ ಅಡಕವಾಗಿದೆ.ಮೂಲತಃ ಸೋನಾಕ್ಷಿ ತಿಂಡಿಪೋತಿ. ಕಾಲೇಜು ಮೆಟ್ಟಿಲು ಹತ್ತಿದ ಮೇಲೂ ಡಯೆಟ್ ಎಂಬ ಪದ ಅವರ ಪದಕೋಶದಲ್ಲಿ ಇರಲೇ ಇಲ್ಲ. ಕೆಲವೊಮ್ಮೆ ಅಮ್ಮನ ಕಣ್ಣುತಪ್ಪಿಸಿ ತಮ್ಮಿಷ್ಟದ ಜಂಕ್ ಫುಡ್ಡನ್ನು ವಿಪರೀತ ಸೇವಿಸುವಷ್ಟು ರುಚಿಗೆ ಬಿದ್ದಿತ್ತು ಅವರ ನಾಲಗೆ. ಡೈರಿ ಮಿಲ್ಕ್ ಚಾಕೊಲೇಟ್‌ನ ರ‌್ಯಾಪರ್ ನೀಲಿ ಬಣ್ಣದ್ದು. ಅದರ ಮೇಲೂ ಅವರಿಗೆ ವಿಪರೀತ ಪ್ರೀತಿ. ಒಂದು ಡಬ್ಬದ ತುಂಬಾ ಚಾಕೊಲೇಟ್ ರ‌್ಯಾಪರ್‌ಗಳನ್ನು ತುಂಬಿಸಿ ಅವರು ದೀರ್ಘ ಕಾಲ ಇಟ್ಟುಕೊಂಡಿದ್ದರು. ಅಮ್ಮನಿಗೆ ಅಕಸ್ಮಾತ್ತಾಗಿ ಅದು ಸಿಕ್ಕಿದಾಗ ಬೆಚ್ಚಿಬಿದ್ದರಂತೆ. ನೂರಾ ಅರವತ್ತೆಂಟು ಚಾಕೊಲೇಟ್ ಕವರ್‌ಗಳು ಅದರಲ್ಲಿ ಇದ್ದವೆಂದರೆ ಅವರ ಅಮ್ಮನಿಗೆ ಹೇಗಾಗಿರಬೇಡ?ಹೀಗೆಲ್ಲಾ ಇದ್ದ ಸೋನಾಕ್ಷಿ, ಸಲ್ಮಾನ್ ಖಾನ್ ಕಣ್ಣಿಗೆ ಬಿದ್ದಮೇಲೆ ಬದುಕಿನ ದಿಕ್ಕು ಬದಲಾಯಿತು. `ನಾಯಕಿ ಆಗಬೇಕು ಎಂದರೆ ಇಷ್ಟು ದಪ್ಪ ಇರಲೇಕೂಡದು' ಎಂದು ಸಲ್ಮಾನ್ ಹೇಳಿದ್ದು ಸೋನಾಕ್ಷಿಗೆ ವೇದವಾಕ್ಯವಾಯಿತು. ಅರ್ಧ ಬಾಲಿವುಡ್ ನಂಬಿರುವ ಫಿಟ್‌ನೆಸ್ ಗುರು ಯಾಸ್ಮಿನ್ ಕರಾಚಿವಾಲಾ. ಸೋನಾಕ್ಷಿ ಕೂಡ ಅವರಲ್ಲಿಗೆ ಹೋದರು. ನಿತ್ಯವೂ ಒಂದೂವರೆಯಿಂದ ಎರಡು ಗಂಟೆ ದೇಹವನ್ನು ದಂಡಿಸಿದರು. ವಾರಕ್ಕೆ ಐದು ದಿನ ವ್ಯಾಯಾಮ ತಪ್ಪಿಸದಂತೆ ಶಿಸ್ತು ಅಳವಡಿಸಿಕೊಂಡರು. ಕೆಲವೇ ತಿಂಗಳುಗಳಲ್ಲಿ 30 ಕೆ.ಜಿ. ತೂಕ ಇಳಿಸಿಕೊಂಡರು. ಸಲ್ಮಾನ್ ಮುಖ ಅರಳಿತು. ಮೊದಲ ಚಿತ್ರ `ದಬಾಂಗ್' ಹಿಟ್ ಆಯಿತು.ಹೆಚ್ಚು ಕೆಮಿಕಲ್ ಇರುವ ಶಾಂಪೂಗಳನ್ನು ಇಷ್ಟಪಡದ ಸೋನಾಕ್ಷಿ ತಮ್ಮಿಷ್ಟದ ಪ್ರಸಾಧನ ವಸ್ತುಗಳನ್ನೆಲ್ಲಾ ನೀಲಿ ಡಬ್ಬದಲ್ಲೇ ಇಟ್ಟುಕೊಳ್ಳುತ್ತಿದ್ದರಂತೆ. ಈಗ ಮೇಕಪ್ ಮಾಡುವ ಸಿಬ್ಬಂದಿ ಜೊತೆಗಿರುವುದರಿಂದ ಆ ಮೋಹ ದೂರವಾಗಿದೆ.ಯಾಸ್ಮಿನ್ ಕರಾಚಿವಾಲಾ ಮೊದಲು ಸೋನಾಕ್ಷಿ ಕೈಗೆ ಉದ್ದದ ಪಟ್ಟಿ ಕೊಟ್ಟರು. ಅದರಲ್ಲಿ ಜಂಕ್ ಫುಡ್‌ಗಳ ಹೆಸರುಗಳಿದ್ದವು. ಅವನ್ನು ಸುತರಾಂ ತಿನ್ನಕೂಡದು ಎಂಬುದು ಮೊದಲ ಷರತ್ತು. ಕುರುಕಲು ತಿಂಡಿ ಕಂಡರೆ ಜೊಲ್ಲುರಸದಿಂದ ತೋಯುತ್ತಿದ್ದ ನಾಲಗೆಯನ್ನು ಹಿಡಿತಕ್ಕೆ ತರುವುದು ಮೊದಮೊದಲು ಸ್ವಲ್ಪ ಕಷ್ಟವಾಯಿತು. ಯೋಗದ ಮೊರೆ ಹೋದರು. ಮನಸ್ಸು ಹದ್ದುಬಸ್ತಿಗೆ ಬಂದಿತು. `ತಿನ್ನುವುದಕ್ಕಾಗಿಯೇ ಬದುಕುವುದಲ್ಲ, ಬದುಕುವುದಕ್ಕಷ್ಟೇ ತಿನ್ನಬೇಕು' ಎಂಬ ಓಬೀರಾಯನ ಕಾಲದ ತತ್ತ್ವ ಅವರಿಗೆ ಅರ್ಥವಾಗಲು ಒಬ್ಬ ಗುರುವಿನ ಅಗತ್ಯ ಬಿತ್ತು.ಈಗ ಸೋನಾಕ್ಷಿ ಹೆಚ್ಚು ಪ್ರೊಟೀನ್, ಕಡಿಮೆ ಕಾರ್ಬೊಹೈಡ್ರೇಟ್ ಇರುವ ತಿನಿಸುಗಳನ್ನು ನಿಯಮಿತವಾಗಿ ತಿನ್ನುತ್ತಾರೆ. ಗ್ರೀನ್ ಟೀ ಕುಡಿಯುವ ಅಭ್ಯಾಸವಿದೆ. ಅಕ್ಕಿ ಬೆಲೆ ಎಷ್ಟೇ ದುಬಾರಿಯಾದರೂ ಅವರಿಗೆ ಅದರ ಚಿಂತೆ ಇಲ್ಲ. ಈಗಲೂ ಅವರು ಮನೆಯಲ್ಲಿ ಬೆಂದು ಬರುವ `ಬ್ರೌನ್ ರೈಸ್' ಅಷ್ಟೇ ತಿನ್ನುವುದು. ಕೋಳಿ ಮಾಂಸದ ಸಣ್ಣ ತುಂಡಿನ ಸಾರು, ಮೀನಿನ ಸಾರು ಈಗಲೂ ಇಷ್ಟ. ಆದರೆ ಯಾಸ್ಮಿನ್ ಸೂಚಿಸಿದ ಜಾತಿಯ ಮೀನೇ ಆಗಬೇಕು. ಒಂದು ಹೋಳು ಹಣ್ಣನ್ನೂ ಹೆಚ್ಚು ತಿನ್ನುವುದಿಲ್ಲ. ಅಮ್ಮ ಪೂನಂಗೆ ಈಗ ಮಗಳ ಜಿಹ್ವಾ ಚಾಪಲ್ಯದಿಂದ ಏನಾದೀತೋ ಎಂಬ ಆತಂಕವಿಲ್ಲ. ಸೋನಾಕ್ಷಿಗೆ ವರ್ಷಗಳಿಂದ ಬಟ್ಟೆಗಳನ್ನು ವಿನ್ಯಾಸ ಮಾಡಿಕೊಡುತ್ತಿರುವ ಅನಿತಾ ಡೋಂಗ್ರೆ ಅವರಿಗೂ ಈ ನಟಿ ದೇಹಾಕಾರ ಕಾಪಾಡಿಕೊಳ್ಳುತ್ತಿರುವ ರೀತಿ ಬೆರಗು ಮೂಡಿಸಿದೆ.`ನಾನು ಈಗಲೂ ಕನಸಿನಲ್ಲಿ ಹೊಟ್ಟೆ ಬಿರಿಯೆ ತಿನ್ನುತ್ತೇನೆ. ನನ್ನಿಷ್ಟದ ನೀಲಿ ಡಬ್ಬದಿಂದ ಸಮೋಸಾಗಳನ್ನು ಒಂದಾದ ಮೇಲೆ ಒಂದರಂತೆ ತಿನ್ನುತ್ತಾ, ಇಷ್ಟದ ಡೈರಿಮಿಲ್ಕ್ ಚಾಕೊಲೇಟನ್ನು ಚಪ್ಪರಿಸುತ್ತಾ, ಚಿಪ್ಸನ್ನು ಸಾಸ್‌ನಲ್ಲಿ ಅದ್ದಿ ಅದ್ದಿ ನಾಲಗೆಗೆ ಸವರುತ್ತಾ... ಅದಿನ್ನು ಬರೀ ಕನಸಿನಲ್ಲಿ ಮಾತ್ರ ಸಾಧ್ಯ. ನಟಿಯಾಗುವುದು, ದೇಹಾಕಾರವನ್ನು ಅದಕ್ಕಾಗಿಯೇ ತೀಡುತ್ತಾ ಇರುವುದು ಎಷ್ಟು ಕಷ್ಟ ಎಂಬುದು ನನ್ನಂಥವಳಿಗಷ್ಟೇ ಗೊತ್ತು' ಎಂಬ ಸೋನಾಕ್ಷಿ ಮಾತು ಕೇಳಿ ಅವರ ಅಮ್ಮ ಅಡುಗೆಮನೆಯಿಂದಲೇ ನಗುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.