ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಟ್ಹತ್ತಿ ತಿರುಗಿದಾಗ ಕಂಡ ಜಪಾನ್| ಗಿರೀಶ ಕಾರ್ನಾಡರ ಬರಹ

ಗಿರೀಶ ಕಾರ್ನಾಡರು ಕಂಡಂತೆ ಜಪಾನ್‌ ಎಂಬ ಸಂಸ್ಕೃತಿ
Last Updated 10 ಜೂನ್ 2019, 12:55 IST
ಅಕ್ಷರ ಗಾತ್ರ

ಆಮಂತ್ರಣೆ
ನಾನು ಕೇಂದ್ರ ಸಂಗೀತ ನಾಟಕ ಅಕಾದೆಮಿಯ ಅಧ್ಯಕ್ಷನಾಗಿದ್ದಾಗ, 1992ರಲ್ಲಿ ನನಗೆ ಜಪಾನ್‌ ಫೌಂಡೇಶನ್‌ದಿಂದ ಒಂದು ಪತ್ರ ಬಂತು. ಅದರಷ್ಟು ಉಲ್ಲಾಸದಾಯಕ ಪತ್ರ ನನಗೆ ಆ ಮೊದಲೆಂದೂ ಬಂದಿರಲಿಲ್ಲ. ಆ ತರುವಾಯ ಕೂಡ ಬಂದಿಲ್ಲ. ಆ ಪತ್ರದ ಪ್ರತಿಯನ್ನಾದರೂ ಯಾಕೆ ಇಟ್ಟುಕೊಳ್ಳಲಿಲ್ಲವೋ ಎಂದು ಇಂದು ನನಗೆ ಪಶ್ಚಾತ್ತಾಪವಾಗುತ್ತಿದೆ. ಅದೆಲ್ಲೋ ಅಕಾದೆಮಿಯ ಕಡತದಲ್ಲಿ ಮುಚ್ಚಿಹೋಗಿರಬೇಕು. ಆದರೆ ಅದರ ಭಾವಾರ್ಥ ನನ್ನ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ. ಆ ಪತ್ರ ಹೀಗಿತ್ತು:

‘ಮಾನ್ಯರೆ,
ನೀವು ಭಾರತೀಯ ಸಂಸ್ಕೃತಿಯ ವಿವಿಧ ಆಯಾಮಗಳಲ್ಲಿ ಪರಿಣತರಾಗಿದ್ದು, ಸಾಂಸ್ಕೃತಿಕ ಆಡಳಿತದಲ್ಲಿ ನುರಿತವರಾಗಿದ್ದೀರಿ. ಆದ್ದರಿಂದ ನೀವು ನಮ್ಮ ನಾಡಿಗೂ ಬಂದು ಜಪಾನೀ ಸಂಸ್ಕೃತಿಯ ಶ್ರೀಮಂತಿಕೆಯನ್ನು ಉಪಭೋಗಿಸಿ ಆನಂದಿಸಬೇಕು ಎಂದು ನಮ್ಮ ಬಯಕೆ.

ಅದರ ಸಲುವಾಗಿ ಹದಿನೈದು ದಿನಗಳ ಮಟ್ಟಿಗೆ ನೀವು ಜಪಾನ್‌ಗೆ ಬಂದು ನಮ್ಮ ಆತಿಥ್ಯವನ್ನು ಸ್ವೀಕರಿಸಲೊಪ್ಪುತ್ತೀರಿ ಎಂದು ನಾವು ನಂಬಿದ್ದೇವೆ. ಹದಿನೈದು ದಿನ ತೀರ ದೀರ್ಘ ಕಾಲವೆನಿಸಿದಲ್ಲಿ ಅದಕ್ಕಿಂತ ಕಡಿಮೆ, ನಿಮಗೆಷ್ಟು ದಿನ ಬರಲು ಅನುಕೂಲವಾಗುತ್ತದೋ ಅಷ್ಟು ದಿನ, ಬಂದರೆ ನಮಗೆ ಸಂತೋಷ.
ನಿಮಗೆ ಭಾರತದಿಂದ ಜಪಾನ್‌ ಹಾಗೂ ಮರಳಿ ಭಾರತ ಈ ಪ್ರಯಾಣಕ್ಕೆ ಬಿಸಿನೆಸ್‌ ಕ್ಲಾಸ್‌ ಟಿಕೇಟನ್ನು ಕೊಡಲಾಗುತ್ತದೆ.

ಜಪಾನ್‌ದಲ್ಲಿ ನಿಮ್ಮ ಎಲ್ಲ ವಾಯುಯಾನದ ಹಾಗೂ ಭೂಪ್ರವಾಸದ ಖರ್ಚನ್ನು ನಾವು ಹಮ್ಮಿಕೊಳ್ಳುತ್ತೇವೆ. ಯಾವ ಯಾವ ಸ್ಥಳಗಳನ್ನು ನೋಡಬೇಕು ಎಂದು ನಿಮಗೆ ಅನಿಸುತ್ತದೋ ಅದನ್ನು ತಿಳಿಸಿದರೆ ಆ ಎಲ್ಲ ಸ್ಥಳಗಳಲ್ಲಿ ನಿಮ್ಮ ವಾಸಕ್ಕಾಗಿ ಪಂಚತಾರಾ ಹೋಟಲ್ಲುಗಳಲ್ಲಿ ವ್ಯವಸ್ಥೆ ಮಾಡಲಾಗುತ್ತದೆ.

ಪ್ರತಿ ಊರಲ್ಲಿ ನಿಮ್ಮ ಓಡಾಟಕ್ಕಾಗಿ ವಾತಾನುಕೂಲಿತ ಕಾರು ಇದ್ದು ನಿಮ್ಮ ನೆರವಿಗಾಗಿ ಒಬ್ಬ ಇಂಗ್ಲೀಷ್‌ ಬಲ್ಲ ಭಾಷಾಂತರಕಾರರು ಇರುತ್ತಾರೆ. ಇದಲ್ಲದೆ ನಿಮ್ಮ ದೈನಂದಿನ ಖರ್ಚಿಗಾಗಿ ನಿಮಗೆ ಒಂದು ಭತ್ತೆ ಕೊಡಲಾಗುತ್ತದೆ. ಅದು ನಿಮ್ಮ ಸಾಧಾರಣ ಖರ್ಚಿಗೆ ಸಾಕಾಗಬಹುದಾದಷ್ಟು ಮೊತ್ತವಿದ್ದರೂ, ಜಪಾನ್‌ ವಿಶ್ವದ ಅತ್ಯಂತ ದುಬಾರಿ ದೇಶವೆಂಬುದನ್ನು ಇಲ್ಲಿಯೇ ನಮೂದಿಸುತ್ತೇವೆ.

ಇದಲ್ಲದೆ ಬೇರೆ ಯಾವ ಅಡಚಣೆಗಳಿದ್ದರೂ ಮುಜುಗರ ಪಡದೆ ಪ್ರಯಾಣದ ಮೊದಲೇ ತಿಳಿಸಿದರೆ ತಕ್ಕ ವ್ಯವಸ್ಥೆ ಮಾಡುವ ಹೊಣೆ ನಮ್ಮದು.

ಇನ್ನು, ನಿಮ್ಮ ಜೊತೆಗೆ ನಿಮ್ಮ ಶ್ರೀಮತಿಯರನ್ನೂ ಕರೆತರುವದಾದಲ್ಲಿ ಒಂದು ‘ಬಿಸಿನೆಸ್‌ ಕ್ಲಾಸ್‌’ ಟಿಕೇಟಿನ ಹಾಸಲಿನಲ್ಲಿ ಎರಡು ‘ಇಕಾನಾಮಿ ಕ್ಲಾಸ್‌’ ಟಿಕೇಟುಗಳನ್ನು ಕೊಂಡುಕೊಳ್ಳಬಹುದು. ಎಲ್ಲ ಪಂಚತಾರಾ ಹೋಟಲುಗಳಲ್ಲಿ ‘ಡಬಲ್‌ ರೂಮು’ಗಳಿದ್ದು, ನಿಮಗೆ ಜೋಡಿ ಮಂಚ (ಡಬಲ್‌ ಬೆಡ್‌) ಅನುಕೂಲವೋ ಬೇರೆ ಬೇರೆಯಾದ ಅವಳಿ ಮಂಚಗಳು (ಟ್ವಿನ್‌ ಬೆಡ್‌್ಸ) ಅನುಕೂಲವೋ ತಿಳಿಸಿದರೆ ಆ ಪ್ರಕಾರ ವ್ಯವಸ್ಥೆ ಮಾಡುತ್ತೇವೆ.

ಪ್ರತಿ ಸ್ಥಳದಲ್ಲಿ ಮೇಲೆ ತಿಳಿಸಿದಂತೆ ಒಂದು ವಾತಾನುಕೂಲಿತ ಕಾರು ಹಾಗೂ ಅದರೊಡನೆ ಒಬ್ಬ ಭಾಷಾಂತರಕಾರ ನಿಮ್ಮ ನೆರವಿಗಿರುತ್ತಾರೆ. ಜಪಾನ್‌ ವಿಶಾಲವಾದ ದೇಶವೇನಲ್ಲ. ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಹೋಗಲಿಕ್ಕೆ ಉತ್ತಮ ರೈಲು ಮಾರ್ಗಗಳಿದ್ದು ವಾಯುಯಾನದ ಬದಲಾಗಿ ನೀವಿಬ್ಬರೂ ರೈಲಿನಲ್ಲಿ ಪ್ರಥಮ ವರ್ಗದಲ್ಲಿ ಸುಖಮಯವಾಗಿ ವೇಗವಾಗಿ ಪ್ರವಾಸ ಮಾಡಬಹುದು.

ಇನ್ನು, ನಿಮ್ಮಿಬ್ಬರ ಜೊತೆಗೆ ನಿಮ್ಮ ಮಕ್ಕಳನ್ನು ಕರೆತರುವದಾದಲ್ಲಿ, ನಾವು ನಿಮ್ಮ ಹೆಸರಿನಲ್ಲಿ ಇಟ್ಟಿರುವ ಒಟ್ಟೂ ಮೊತ್ತವನ್ನು ನಿಮಗೊಪ್ಪಿಸಿ ಬಿಡುತ್ತೇವೆ. ನೀವು ನಿಮ್ಮ travel agent ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಅಗ್ಗದ ಹಾಸಲು ಕೊಟ್ಟು ಪ್ರಯಾಣ ಮಾಡುವುದಕ್ಕೆ ನಮಗೇನೂ ಅಭ್ಯಂತರವಿಲ್ಲ.

ಜಪಾನೀ ರೈಲುಗಳ ದ್ವಿತೀಯ ವರ್ಗ ಕೂಡ ಉತ್ತಮ ಮಟ್ಟದ್ದಾಗಿದೆ. ನಮ್ಮ ರೈಲು ವ್ಯವಸ್ಥೆ ಜಗತ್ತಿನ ಅತಿ ದಕ್ಷ ಸೇವೆಗಾಗಿ ಸುಪ್ರಸಿದ್ಧವಾದದ್ದೆಂದು ಹೇಳಲು ನಮಗೆ ಹೆಮ್ಮೆ ಎನಿಸುತ್ತದೆ.

ನಾವು ನೀಡುವ ಮೊತ್ತದಲ್ಲಿ ನೀವು ಕಾಣಬೇಕೆಂಬ ಸ್ಥಳಗಳಲ್ಲಿ ಪಂಚತಾರಾ ಹೋಟಲುಗಳ ಬಳಕೆ ಸಾಧ್ಯವಾಗದಿದ್ದಲ್ಲಿ, ನಮ್ಮಲ್ಲಿ ಎರಡು–ಮೂರು ತಾರೆಗಳ ಮಟ್ಟದ ಉತ್ತಮ ವಸತಿಗೃಹಗಳಿವೆ. ಜಪಾನೀ ಪದ್ಧತಿಯನ್ನೇ ಅನುಸರಿಸುವ ‘ರಿಯೋಕಾನ್‌’ ವಸತಿಗೃಹಗಳಲ್ಲಿ ನೀವು ಇಳಿದುಕೊಂಡರೆ ಮಿತವ್ಯಯದೊಡನೆ ಸಾಂಪ್ರದಾಯಿಕ ಜಪಾನೀ ಜೀವನ ಶೈಲಿಯನ್ನೂ ಅನುಭವಿಸಲು ಆಸ್ಪದ ದೊರೆತಂತಾದೀತು. ಎಲ್ಲ ಸ್ಥಳಗಳಲ್ಲೂ ಒಂದು ವಾತಾನುಕೂಲಿತ ಕಾರು, ಒಬ್ಬ ಭಾಷಾಂತರಕಾರ ನಿಮ್ಮ ಸೇವೆಗೆ ಸಿದ್ಧರಾಗಿರುತ್ತಾರೆ.

ಈ ವ್ಯವಸ್ಥೆ ನಿಮಗೆ ಒಪ್ಪಿಗೆಯಾಗಿ ನೀವು ಜಪಾನ್‌ಗೆ ಬರುತ್ತೀರಿ ಎಂದು ನಂಬಿದ್ದೇವೆ.....

ಇತಿ,’

ಆಗ ನನ್ನ ಮಗಳು ರಾಧಾಗೆ ಹನ್ನೊಂದು ವರ್ಷ ವಯಸ್ಸು. ಮಗ ರಘುಗೆ ಒಂಭತ್ತು. ಮಕ್ಕಳು ತೀರ ಚಿಕ್ಕವರಿದ್ದಾಗ ವಿದೇಶ ಪ್ರಯಾಣಕ್ಕೆ ಕರೆದೊಯ್ದರೆ ಅವರಿಗೆ ಏನೂ ನೆನಪುಳಿಯುವುದಿಲ್ಲ ನಿಜ. ಆದರೆ ರಾಧಾ–ರಘು ಪ್ರವಾಸಕ್ಕೆ ಹದವಾದ ವಯಸ್ಸನ್ನು ತಲುಪಿದ್ದರು. ಆದರೂ ನನ್ನ ಕೆಲವು ಸಂದೇಹಗಳನ್ನು ತೋಡಿಕೊಂಡು ಉತ್ತರ ಬರೆದೆ: ‘ನೀವೇನೋ ಉದಾರ ಮನಸ್ಸಿನಿಂದ ಮಕ್ಕಳನ್ನೂ ಕರೆದುಕೊಂಡು ಬನ್ನಿ ಎಂದು ಆಮಂತ್ರಿಸಿದ್ದೀರಿ. ಆದರೆ ಈ ವಯಸ್ಸಿಗೆ ನಮ್ಮ ಮಕ್ಕಳು ನೋಹ್‌, ಕಾಬುಕಿ, ಬುನ್‌ ರಾಕು ಪ್ರಯೋಗಗಳಲ್ಲಿ ಬಹಳ ಆಸಕ್ತಿ ವಹಿಸಬಹುದು ಎಂದು ನನಗನಿಸುವದಿಲ್ಲ. ಆ ಪಕ್ವತೆ ಅವರಲ್ಲಿನ್ನೂ ಬಂದಿಲ್ಲ. ಇನ್ನೂ ಹುಡುಗಾಟದ ವಯಸ್ಸು!’.

ತಕ್ಷಣ ಉತ್ತರ ಬಂತು:

‘ನೀವೇನೂ ಚಿಂತಿಸಬೇಕಾಗಿಲ್ಲ. ಜಪಾನ್‌ದಲ್ಲಿ ಎಲ್ಲೆಡೆ ಮಕ್ಕಳನ್ನು ರಂಜಿಸಬಲ್ಲ ಉಪವನಗಳು, ಕೇಂದ್ರಗಳು ಇವೆ. ಟೋಕಿಯೋದಲ್ಲಿ ಡಿಸ್ನೀ ಲ್ಯಾಂಡ್‌ ಇದೆ. ಓಸಾಕಾದಲ್ಲಿ ಜಗತ್ತಿನ ಅತ್ಯಂತ ದೊಡ್ಡ ಮತ್ಸ್ಯಾಲಯವಿದ್ದು, ಅದರಲ್ಲಿ ಜೀವಂತ ತಿಮಿಂಗಲುಗಳಿವೆ. ಬುನ್‌ ರಾಕು ಗೊಂಬೆಯಾಟ ಮಕ್ಕಳನ್ನು ಮಂತ್ರಮುಗ್ಧಗೊಳಿಸುವುದರಲ್ಲಿ ಸಂದೇಹವಿಲ್ಲ. ದಯಮಾಡಿ ಸಹ ಕುಟುಂಬ ಬನ್ನಿ. ನೀವು ವೈಯಕ್ತಿಕವಾಗಿ ನಮ್ಮ ಸಂಸ್ಕೃತಿಯನ್ನು ಸವಿದರೆ ಸಾಕು. ನಿಮ್ಮ ಮನೆಯವರು – ಮಕ್ಕಳು ಅವರಿಗೆ ಹೇಗೆ ಬೇಕೋ ಹಾಗೆ ಮನೋರಂಜನೆ ಮಾಡಿಕೊಂಡರೂ ನಮಗೆ ತೃಪ್ತಿಯೇ!’.

ನಮ್ಮ ಜಪಾನ್‌ ಪ್ರವಾಸ ಅತ್ಯಂತ ಯಶಸ್ವಿಯಾಯಿತು ಎಂದು ಬೇರೆ ಹೇಳಬೇಕಾಗಿಲ್ಲ. ನಮ್ಮ ಮಕ್ಕಳಿಗೆ ಇಂದಿಗೂ ಜಪಾನ್‌ ಒಂದು ಆತ್ಮೀಯ ಸ್ಮೃತಿಯಾಗಿ ಉಳಿದಿದೆ.

ಸಾರ್ವಜನಿಕ ನೀತಿ
ಭಾರತದಿಂದ ಜಪಾನಿಗೆ ಹೋಗುವದೆಂದರೆ ಸದ್ದುಗದ್ದಲ, ಹಂಡ ಬಂಡ ಬಣ್ಣಗಳು, ರಂದಿ–ರಸ ಕಸಿ, ತಿಕ್ಕಾಟಗಳಿಂದ ತುಂಬಿದ ಸಂತೆಯನ್ನು ಬಿಟ್ಟು ಅತಿ ಶಿಸ್ತಿನ, ವರ್ಣರಹಿತ, ಮೆಲುದನಿಯಲ್ಲೇ ಸಾಗುವ ಸುಸಂಸ್ಕೃತ ಹೂದೋಟವನ್ನು ಪ್ರವೇಶಿಸುವಂತಿದೆ.

ವಿದೇಶದಿಂದ ಬಂದ ಪ್ರಯಾಣಿಕರಿಗೆ ಜಪಾನದ ಪ್ರವಾಸೋದ್ಯಮ ಇಲಾಖೆ ಕೊಡುವ ಮಾಹಿತಿ ಪತ್ರಿಕೆಯೇ ದಂಗುಗೊಳಿಸುವಂತೆ ತಿಳಿಸಿ ಹೇಳುತ್ತದೆ: ‘ನೀವು ಜಪಾನ್‌ದಲ್ಲಿ ಎಲ್ಲಿಯಾದರೂ ಆಗಲಿ ಓಡಾಡುವಾಗ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ನಿಮ್ಮ ಬೆಲೆಯುಳ್ಳ ಒಡವೆಗಳನ್ನೋ, ಪರ್ಸು– ಹ್ಯಾಂಡ್‌ಬ್ಯಾಗ್‌– ಕ್ಯಾಮೆರಾಗಳನ್ನೋ ಕಳೆದುಕೊಂಡಿದ್ದರೆ ಭಯ ಪಡಬೇಕಾಗಿಲ್ಲ. ಕೂಡಲೆ ಪೋಲೀಸರಿಗೆ ತಿಳಿಸಲೂ ಬೇಕಾಗಿಲ್ಲ. ಮೊದಲು ಯಾವ ಸ್ಥಳದಲ್ಲಿ ಆ ವಸ್ತುವನ್ನು ಬಿಟ್ಟು ಬಂದಿರಬಹುದೋ ಅಲ್ಲಿ ಹೋಗಿ ಪರೀಕ್ಷಿಸಿ. ಅದು ಇನ್ನೂ ಅಲ್ಲೇ ಬಿದ್ದುಕೊಂಡಿರುವ ಸಾಧ್ಯತೆಯಿದೆ!’

ಜಪಾನಿನ ಸಾರ್ವಜನಿಕ ಜೀವನದಲ್ಲಿರುವ ಪ್ರಾಮಾಣಿಕತೆ ಬೆರಗುಗೊಳಿಸುತ್ತದೆ. ಕಳುವು– ಜೇಬು ಕತ್ತರಿ– ಮೋಸ ಎಂಬುವು ಇಲ್ಲವೇ ಇಲ್ಲ ಎನ್ನಬೇಕು. ನಾನು ನನ್ನ ಭಾಷಾಂತರಕಾರ್ತಿಯ ಜೊತೆಗೆ ಬ್ಯಾಂಕಿಗೆ ಹೋಗಿ, ನನ್ನ ಹೆಸರಿನಲ್ಲಿದ್ದ ಹಣವನ್ನು ತೆಗೆದುಕೊಂಡು ನೋಟುಗಳನ್ನು ಎಣಿಸಲಾರಂಭಿಸಿದಾಗ ಬ್ಯಾಂಕಿನಲ್ಲಿ ದುಡಿಯುವ ಕಾರ್ಮಿಕರೆಲ್ಲ ನಾನೇನೋ ಅಪೂರ್ವ ಕೆಲಸ ಮಾಡುತ್ತಿರುವಂತೆ ಕುತೂಹಲದಿಂದ ನನ್ನನ್ನು ದಿಟ್ಟಿಸಲಾರಂಭಿಸಿದರು. ಭಾಷಾಂತರಕಾರ್ತಿ ಅತ್ಯಂತ ವಿನಯದ ನಗೆ ನಕ್ಕು ಎಣಿಸುವ ಅವಶ್ಯಕತೆ ಇಲ್ಲ ಎಂದು ಸೂಚಿಸಿದಳು.

ಆಗುವ ಅಪರಾಧಗಳೆಲ್ಲ ದೊಡ್ಡ ಪ್ರಮಾಣದ ಅಪರಾಧಗಳೇ ಇರಬೇಕು. ಜಪಾನಿನ ರಾಜಕೀಯ ಇತಿಹಾಸ ಕೋಟ್ಯಂತರ ‘ಯೆನ್‌’ ಕಬಳಿಸಿ, ಸಿಕ್ಕುಬಿದ್ದು, ಪದತ್ಯಾಗ ಮಾಡಿದವರ ತಸ್ಕರಾ­ಖ್ಯಾನಗಳಿಂದ ತುಂಬಿದೆ. ನಾನು ಜಪಾನಿಗೆ ಹೋದಾಗ ಒಂದೇ ರಾಜಕೀಯ ಪಕ್ಷ ಹಲವಾರು ವರ್ಷಗಳಿಂದ ಅಧಿಕಾರದಲ್ಲಿತ್ತು. ಪಕ್ಷ ಬದಲಾಗುವದಿಲ್ಲ. ಆದರೆ ಮುಖಂಡರು ಬದಲಾಗು­ತ್ತಿರುತ್ತಾರೆ. ಕಾರಣ: ಭ್ರಷ್ಟಾಚಾರ. ಕೋಟ್ಯಾವಧಿ ಹಣವನ್ನು ಕಬಳಿಸಿದ ಅಪವಾದಕ್ಕೆ ಗುರಿಯಾಗಿ ಸರಕಾರ ಪದಚ್ಯುತ­ವಾಗುತ್ತದೆ. ಅದೇ ಪಕ್ಷದ ಹೊಸ ನೇತಾರರು ನೀತಿಬದ್ಧ ಶಾಸನದ ಘೋಷಣೆ ಮಾಡುತ್ತ ಸರಕಾರ ಕಟ್ಟುತ್ತಾರೆ. ಮತ್ತೆ ಅದೇ ಕತೆ.

ಕೌಟುಂಬಿಕ ಸ್ನಾನ

ಭಾರತದಲ್ಲಿ ಕಲ್ಪಿಸಲಿಕ್ಕೂ ಸಾಧ್ಯವಿಲ್ಲದ ಇನ್ನೊಂದು ಅನುಭವವೆಂದರೆ ಜಪಾನೀ ಕೌಟುಂಬಿಕ ಸ್ನಾನ ಪದ್ಧತಿ. ಇದು ಅತ್ಯಂತ ಪುರಾತನ ಪರಂಪರೆಯಂತೆ. ಇಂಥ ಸ್ನಾನಕ್ಕಾಗಿಯೇ ಬಚ್ಚಲು ಕೋಣೆಗಳಲ್ಲಿ ವಿಶಾಲವಾದ ಪಾತ್ರೆಯಾಕಾರದ ಈಜುಗೊಳಗಳಿದ್ದು, ಕುಟುಂಬದ ಎಲ್ಲ ಸದಸ್ಯರು– ಪುರುಷರು, ಸ್ತ್ರೀಯರು, ಮಕ್ಕಳು, ಹಿರಿಯರು ಕಿರಿಯರು– ಒಟ್ಟಾಗಿ ಆ ಈಜುಗೊಳಕ್ಕಿಳಿದು ಮೀಯುವ ಪದ್ಧತಿ. ನಾನು ಸಣ್ಣವನಿದ್ದಾಗ ಆ ಬಗ್ಗೆ ಕೇತಕರ್‌ ಎಂಬವರು ರಚಿಸಿದ ‘ಮರಾಠಿ ಜ್ಞಾನಕೋಶ’ದಲ್ಲಿ ‘ಅದೊಂದು ಅನಾಗರಿಕ ಪದ್ಧತಿ’ ಎಂದು ವರ್ಣನೆ ಓದಿದ್ದೆ (ಕೇತಕರ್‌ ಕೂಡ ಈ ಶಿಷ್ಟ ಅಭಿಪ್ರಾಯವನ್ನು ಯಾವುದೋ ಪಾಶ್ಚಾತ್ಯ ಪ್ರವಾಸಿಯಿಂದ ಎರವಲು ತಂದಿರುವದು ಖಂಡಿತ). ಸಾಧಾರಣ ಹತ್ತು ವಯಸ್ಸಿನವನಿರುವಾಗ ಓದಿರಬಹುದಾದ ಈ ನಗ್ನ ಸಾಮೂಹಿಕ ಸ್ನಾನದ ಚಿತ್ರ ನನ್ನನ್ನು ಪ್ರಚೋದಿಸಿ ನೆನಪಿನಲ್ಲಿ ಇನ್ನೂ ತಾಜಾ ಆಗಿಯೇ ಉಳಿದಿತ್ತು.

ಆದರೆ ನಾನು, ಹೆಂಡತಿ ಸರಸ್‌ ಮತ್ತು ಮಕ್ಕಳು ಒಟ್ಟಾಗಿ ನಗ್ನಸ್ನಾನ ಮಾಡಿದಾಗ, ಬಟ್ಟೆ ಬಿಚ್ಚಿಡುವಾಗ ಬಿಟ್ಟರೆ ಯಾವುದೇ ನಾಚಿಕೆಯ ಅಂಶವಿಲ್ಲದೆ ಇದೇ ಪದ್ಧತಿಯಲ್ಲಿ ಬೆಳೆದವರೇನೋ ಎಂಬಂತೆ ಬಿಗುಮಾನ ಬಿಟ್ಟು ಮಿಂದು ಬಂದೆವು. ಮಕ್ಕಳಲ್ಲಿ ಮಾತ್ರವಲ್ಲ, ಪ್ರೌಢರಲ್ಲಿ ಕೂಡ, ತಂದೆ–ತಾಯಂದಿರ ಅಥವಾ ಅಣ್ಣ–ತಂಗಿಯಂದಿರ ಬಗ್ಗೆ ಅನಿಷ್ಟ ಲೈಂಗಿಕ ಕುತೂಹಲಕ್ಕೆ ಆಸ್ಪದವೇ ಉಳಿಯಗೊಡದೆ, ಸ್ತನ, ಯೋನಿ, ಶಿಶ್ನಗಳ ಬಗ್ಗೆ ಆರೋಗ್ಯಕರವಾದ ಮನೋಭಾವ ಬೆಳೆಸಬಲ್ಲ ನಾಗರಿಕ ವ್ಯವಸ್ಥೆ ಇದು ಎನಿಸಿತು ನನಗೆ.

ಆದರೆ ಮಾರನೆಯ ದಿನ ‘ರಿಯೋಕಾನ್‌’ದ ನಿರ್ವಹಣೆ ನೋಡಿಕೊಳ್ಳುವ ಮಹಿಳೆ ‘ನಿನ್ನೆ ರಾತ್ರಿ ನೀವು ಜಪಾನೀ ಸ್ನಾನ ಮಾಡಿದರಂತೆ, ಹೌದೇನು?’ ಎಂದು ನಗು ನಗುತ್ತ ಕೇಳಿದ್ದರ ಮೇಲಿಂದ ಈ ನಗ್ನಸ್ನಾನ ವಿದೇಶೀಯ ಯಾತ್ರಿಕರಲ್ಲಿ ಲೋಕಪ್ರಿಯವಿರಲಿಕ್ಕಿಲ್ಲ ಎನಿಸಿತು.
ಸಾರ್ವಜನಿಕ ಸಂತಾಪ

ಇನ್ನು ಇಪ್ಪತ್ತು ವರ್ಷಗಳು ಸಂದುಹೋದರೂ ನನ್ನ ಕಣ್ಣೆದುರಿಗೇ ಎಂಬಂತೆ ಮೂರ್ತವಾಗಿ ಅಚ್ಚಳಿಯದೆ ಉಳಿದ ಚಿತ್ರ:

ಒಂದು ಸಂಜೆ ಕತ್ತಲಾಗುತ್ತಿದ್ದಂತೆ ನಾವು ನಾಲ್ಕೂ ಜನ ರೆಸ್ಟೊರಂಟಿನಲ್ಲಿ ಊಟ ಮಾಡಬೇಕೆಂದು ‘ರಿಯೋಕಾನ್‌’ ಬಿಟ್ಟು ಹೊರಬಿದ್ದೆವು. ಜಪಾನೀ ಪೇಟೆ ಕತ್ತಲಾಗುವ ಮೊದಲೇ ಬಾಗಿಲು ಮುಚ್ಚಲಾರಂಭಿಸುತ್ತದೆ. ಆದ್ದರಿಂದ ನಾವು ಭೂಗತ ರೈಲಿನ ಮುಖಾಂತರ ಪ್ರವಾಸ ಮಾಡಿ ಹೊರಬಿದ್ದಾಗ ಬಹಳ ತಡವಾಗಿರಲಿಕ್ಕಿಲ್ಲ.

ನಿರ್ಜನವಾಗುತ್ತಿರುವ ರಾಜಮಾರ್ಗದಲ್ಲಿ ನಾವು ಮುಂದುವರಿಯುತ್ತಿರುವಾಗಲೇ ಮಗಳು ರಾಧಾ ಕೊಂಚ ಭಯಭೀತ ದನಿಯಲ್ಲೇ ‘ಇದೇನು ಅಪ್ಪ?’ ಎಂದು ಕೇಳಿದಳು. ರಸ್ತೆಗುಂಟ ಸಾಲಾಗಿ ವಿಗ್ರಹಗಳನ್ನು ನಿಲ್ಲಿಸಿರಬಹುದೇ ಎಂಬ ಭಾವ ಉಂಟು ಮಾಡುವ ಆಕೃತಿಗಳು. ಆದರೆ ವಿಗ್ರಹಗಳಲ್ಲ. ಜೀವಂತ ಸ್ತ್ರೀ ಪುರುಷರೇ. ನಿಶ್ಚಲವಾಗಿ ನಿಂತಿದ್ದಾರೆ. ಎಲ್ಲರೂ ಅಚ್ಚ ಕರಿಯ ಬಟ್ಟೆ ತೊಟ್ಟಿದ್ದಾರೆ. ಗಂಡಸರೆಲ್ಲ ಬಿಳಿಯ ಅಂಗಿ, ಕಪ್ಪು ಟಾಯ್‌, ಸೂಟು, ಆ ಕತ್ತಲಲ್ಲೂ ಕಾಲಡಿಗೆ ಮಿಂಚುವ ಹೊಳಪಿನ ಶೂಸುಗಳನ್ನು ತೊಟ್ಟಿದ್ದರೆ, ಹೆಂಗಸರು ಕಪ್ಪು ಹ್ಯಾಟು, ಡ್ರೆಸ್ಸುಗಳನ್ನು ತೊಟ್ಟಿದ್ದು, ಒಂದಿಷ್ಟೂ ಅಲುಗಾಡದೆ, ಮಾತನಾಡದೆ, ಉಸಿರಾಡುತ್ತಿದ್ದಾರೋ ಇಲ್ಲವೋ ಎಂಬ ಸಂದೇಹ ಬರುವಂತೆ ಸೆಟೆದುಕೊಂಡು ನಿಂತಿದ್ದಾರೆ. ಎಲ್ಲಕ್ಕೂ ವಿಶೇಷವೆಂದರೆ ಯಾರ ಮುಖದ ಮೇಲೂ ಭಾವನೆಯ ಸುಳಿವಿಲ್ಲ. ಚಲನೆಯಿಲ್ಲ. ಈ ಎಲ್ಲ ನಿಶ್ಚೇಷ್ಟ ಆಕೃತಿಯ ನಡುವೆ ಒಬ್ಬಳೇ ಒಬ್ಬ ಹೆಣ್ಣು ಮಗಳು ಬಿಕ್ಕಳಿಕೆಗಳನ್ನು ಹತ್ತಿಕ್ಕುತ್ತ, ಬಿಳಿಯ ಕರಚೀಫಿನಿಂದ ಕಣ್ಣೊರೆಸಿಕೊಳ್ಳುತ್ತ ನಿಂತು ಒಂದೇ ಒಂದು ಅಲುಗಾಟದ ಬಿಂದುವಾಗಿದ್ದಳು. ಇಲ್ಲದಿದ್ದರೆ ಉಳಿದವರೆಲ್ಲ ಮೇಣದ ವಿಗ್ರಹಸಾಲೆಯಲ್ಲಿ ನಿಂತ ಸಾಲಭಂಜಿಕೆಗಳೆನ್ನಬೇಕು. ಯಾರೋ ತೀರಿಕೊಂಡಿದ್ದಕ್ಕಾಗಿ ಶೋಕ ಪ್ರದರ್ಶನ ನಡೆದಿತ್ತು. ಆದರೆ ಟೋಕಿಯೋ ನಗರದ ಬಡಾವಣೆಯಲ್ಲಿ ಮುಖ್ಯ ರಸ್ತೆಯಲ್ಲಿ ಮುಚ್ಚಂಜೆಯ ಗಳಿಗೆಯಲ್ಲಿ ಅನುಭವಿಸಿದ ನೀರವತೆ, ನಮ್ಮ ನಾಡಿನಲ್ಲಿ ಸಾವನ್ನು ಎದುರುಗೊಳ್ಳುವ ರಂಪಕ್ಕೆ ತೀರ ವಿರುದ್ಧ.

ಸಾರ್ವಜನಿಕ ಸೆಕ್ಸ್

ಇಂದು ಜಪಾನೀ ಸಾರ್ವಜನಿಕ ಜೀವನ ಸಂಪೂರ್ಣವಾಗಿ ಅಮೇರಿಕೀಕೃತವಾಗಿದೆ ಎಂಬ ಮಾತು ಎಲ್ಲರಿಗೂ ಗೊತ್ತಿದ್ದದ್ದೇ. ಮಹಾಯುದ್ಧದಲ್ಲಿ ಒಂದು ರಾಷ್ಟ್ರ ಇನ್ನೊಂದು ರಾಷ್ಟ್ರದಿಂದ ಪರಾಭವಗೊಂಡ ಬಳಿಕ, ವಿಜಯಶಾಲಿಯಾದ ರಾಷ್ಟ್ರದ ಸಂಸ್ಕೃತಿಯನ್ನು ಇಷ್ಟು ಸಂಪೂರ್ಣವಾಗಿ ಇಷ್ಟು ವೇಗದಿಂದ ಮೈಗೂಡಿಸಿಕೊಂಡ ಉದಾಹರಣೆ ಇತಿಹಾಸದಲ್ಲೇ ವಿರಳವಾಗಿರಬೇಕು. 1945ರಲ್ಲಿ ಹಿರೋಶಿಮಾ ಹಾಗೂ ನಾಗಾಸಾಕಿ ನಗರಗಳ ಮೇಲೆ ಆಟಂ ಬಾಂಬ್‌ ಎಸೆದು, ಅತೋನಾತ್ ವಿಧ್ವಂಸ ಮಾಡಿ ಅಮೇರಿಕಾ ಎರಡನೆಯ ಮಹಾಯುದ್ಧದಲ್ಲಿ ವಿಜಯ ಗಳಿಸಿದಾಗ, ಜಪಾನ್‌ದ ಸಾಂಸ್ಕೃತಿಕ ಜೀವನ ಇನ್ನೂ ಸಾಂಪ್ರದಾಯಿಕವಾಗಿತ್ತಂತೆ. ಜಪಾನ್‌ದ ಸಾರ್ವಭೌಮ ಸಾಮ್ರಾಟ ದೇವಾಂಶ ಸಂಭೂತನಾಗಿದ್ದು ಅವನ ಸಲುವಾಗಿ ಆತ್ಮಬಲಿದಾನ ಮಾಡಬೇಕೆನ್ನುವ ನಂಬಿಕೆ ಒಂದು ರಾಷ್ಟ್ರೀಯತೆಯ, ಸಂಸ್ಕೃತಿಯ ಕೇಂದ್ರ ಪ್ರಜ್ಞೆಯಾಗಿತ್ತು.

ಸಾರ್ವಜನಿಕ ಜೀವನದಲ್ಲಂತೂ ಗಂಡು–ಹೆಣ್ಣು ಪರಸ್ಪರರನ್ನು ತಬ್ಬಿಕೊಳ್ಳುವದು, ಚುಂಬಿಸುವದು, ಮೈದಡವುವದು ನಿಷಿದ್ಧವಾಗಿದ್ದು, ಲೈಂಗಿಕ ವಿಚಾರಗಳಲ್ಲಿ ಜಪಾನ್‌ ಇಂದು ಭಾರತದಷ್ಟೇ ಸನಾತನಿಯಾಗಿತ್ತಂತೆ. ಆದರೆ ಜಪಾನ್ ಸೋಲನ್ನೊಪ್ಪಿಕೊಂಡ ಬಳಿಕ ಅದರ ಸರ್ವಾಧಿಕಾರಿಯಾಗಿದ್ದ ಅಮೇರಿಕನ್‌ ಜನರಲ್‌ ಡಗ್ಲಸ್‌ ಮೆಕಾರ್ಥರ್‌ (Douglas Mac Arthur) ‘ಈ ಸಮಾಜದ ಮಾನಸಿಕ ಉದ್ಧಾರವಾಗಬೇಕಾದರೆ ಸೆಕ್ಸ್‌ನ ಬಗ್ಗೆ ಅವರಲ್ಲಿದ್ದ ಗಂಟುಗಂಟಾದ ಪೂರ್ವಗ್ರಹಗಳನ್ನೆಲ್ಲ ಬಿಚ್ಚಿ ಸಡಲಿಸಬೇಕು’ ಎಂದು ನಿರ್ಧರಿಸಿ, ಒಬ್ಬ ಜಪಾನೀ ಚಿತ್ರನಿರ್ದೇಶಕನಿಗೆ ಅವನ ಚಿತ್ರದಲ್ಲಿ ಒಂದು ಚುಂಬನದ ದೃಶ್ಯವನ್ನು ಸೇರಿಸಲು ಆದೇಶವನ್ನಿತ್ತನಂತೆ. ಆ ದೃಶ್ಯ ಮೊದಲ ಬಾರಿಗೆ ಪರದೆಯ ಮೇಲೆ ಮೂಡಿದಾಗ ಇಡಿಯ ಪ್ರೇಕ್ಷಾಗೃಹ ‘ಹೋ’ ಎಂದು ದಿಗಿಲುಗೊಂಡಿತಂತೆ.

ಹೀಗೆ ಆರಂಭವಾದ ಜಪಾನ್‌ದ ‘ಗುಂಡಿ ಉಚ್ಚುವ/ ಬಿಚ್ಚುವ’ ಪ್ರಕ್ರಿಯೆ ಅವ್ಯಾಹತವಾಗಿ ಹರಿದು ಉಬ್ಬರಿಸಿ, 1990ರ ಸುಮಾರಿಗೆ ಹೊಸ ಸೀಮೆಗಳನ್ನು ದಾಟಲಾರಂಭಿಸಿತ್ತು. ಒಂದು ದಿನ ನಾನು – ಸರಸ್‌ ಮುಖ್ಯ ಮಾರ್ಕೆಟ್ಟಿನಲ್ಲಿದ್ದ ಒಂದು ಅಂಗಡಿಯಲ್ಲಿ ಕಿರಾಣಿ ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದಾಗ, ಅದೇ ಅಂಗಡಿಯಲ್ಲಿ ಗೋಡೆಗೆ ಕೊಂಚ ಎತ್ತರದಲ್ಲಿ ತೂಗಿಸಿದ ಟಿ.ವಿ. ಸೆಟ್ಟಿನ ಮೇಲೆ ಒಬ್ಬ ನಗ್ನ ಯುವತಿಯನ್ನು ಹಗ್ಗದಿಂದ ಕಟ್ಟಿಹಾಕಿ ಹಿಂಸಿಸುವ ದೃಶ್ಯ ನಡೆದಿತ್ತು. ನಾನು ನಮ್ಮ ಜೊತೆಗೆ ನಮ್ಮ ಮಕ್ಕಳಿರಲಿಲ್ಲ ಎಂದು ನಿಟ್ಟುಸಿರ್ಗರೆದರೂ, ಅಲ್ಲಿದ್ದ ಜಪಾನೀ ಗ್ರಾಹಕರು ಆ ದೃಶ್ಯದತ್ತ ಕಣ್ಣೆತ್ತಿ ಕೂಡ ನೋಡಲಿಲ್ಲ. ಇಂಥ ವಿಕೃತ ಸೆಕ್ಸ್ ಸಾಮಾನ್ಯ ಎಂಬಂತೆ ದಿನನಿತ್ಯದ ವ್ಯವಹಾರ ಮುಂದರಿಯಿತು.

1976ರಲ್ಲಿ ದಿಲ್ಲಿಯ ಅಂತರರಾಷ್ಟ್ರೀಯ ಫಿಲ್ಮೋತ್ಸವದಲ್ಲಿ ನನಗೆ ನಾಗಿಸಾ ಓಶಿಮಾ ಎಂಬ ಜಪಾನೀ ಚಿತ್ರನಿರ್ದೇಶಕನ ಪರಿಚಯವಾಯಿತು. ಆ ಹೊತ್ತಿಗೆ ಓಶಿಮಾನ ‘The Confessions of a Shinjuku Thief’ ಮತ್ತು ‘The Boy’ ಎಂಬ ಎರಡು ಜಗತ್ಫ್ರಸಿದ್ಧ ಚಿತ್ರಗಳನ್ನು ನಾನು ನೋಡಿದ್ದೆ. ‘The Boy’ ಅಂತೂ ತನ್ನ ವಿಜುಅಲ್‌ ಶೈಲಿಯಿಂದ, ಸಂವೇದನಾತ್ಮಕ ನಿರೂಪಣೆಯಿಂದ ನನ್ನ ಮನಸ್ಸನ್ನು ಕಲಕಿಬಿಟ್ಟಿತ್ತು. ಆದರೆ ಓಶಿಮಾ ನನಗೆ ಹೇಳಿದ್ದ: ‘ಈಗ ಜಪಾನ್‌ನಲ್ಲಿ ಹಿಂಸೆ ಮತ್ತು Sex ಇಲ್ಲದ ಚಿತ್ರಗಳನ್ನು ಮಾಡುವುದೇ ಅಸಾಧ್ಯವಾಗಿ ಬಿಟ್ಟಿದೆ. ಉತ್ತೇಜಕ ದೃಶ್ಯಗಳಿಗಾಗಿ ಬೇಡಿಕೆ ಅತಿರೇಕಕ್ಕೆ ತಲುಪಿ ಸಾಮಾನ್ಯ ಜೀವನವನ್ನು ಚಿತ್ರಿಸುವ ಕೃತಿಗಳಿಗೆ ಹಂಚಿಕೆದಾರರೇ ಸಿಗದಂತಾಗಿದೆ’ ಎಂದ.

ಆದರೆ ಇದೆಂದ ಮರು ವರುಷವೇ ಓಶಿಮಾ ‘ಇಂದ್ರಿಯಗಳ ರಾಜ್ಯದಲ್ಲಿ’ (In the Realm of the Senses) ಎಂಬ ಚಿತ್ರವನ್ನು ನಿರ್ದೇಶಿಸಿ ಜಗತ್ತನ್ನೇ ಮಂಕುಗೊಳಿಸಿಬಿಟ್ಟ. 1930ರ ದಶಕದಲ್ಲಿ ನಡೆದ ನಿಜವಾದ ಘಟನೆಯನ್ನು ಆಧರಿಸಿದ ಚಿತ್ರ. ಒಬ್ಬ ಗಂಡಸು ತನ್ನ ಹೆಂಡತಿಯನ್ನು ಬಿಟ್ಟು ತನ್ನ ಆಫೀಸಿನಲ್ಲಿ ದುಡಿಯುವ ಆಳುಮಗಳೊಡನೆ ವ್ಯವಹಾರ ಬೆಳೆಸುತ್ತಾನೆ. ಅವನು ಹಾಗೂ ಅವನ ಪ್ರೇಯಸಿ ಸೇರಿ ಕಾಮುಕ ಲೋಲುಪತೆಯ ಚರಮ ಸೀಮೆಯನ್ನು ಅಳೆಯುವ ಅಭಿಲಾಷೆಯಲ್ಲಿ ಎಲ್ಲ ರೀತಿಯ ಲೈಂಗಿಕ ಪ್ರಯೋಗಗಳಲ್ಲೂ ಹಾಯ್ದು ಹೋಗುತ್ತಾರೆ. ಕೊನೆಗೆ ಸಂಭೋಗದ ಉತ್ಕಟ ಕ್ಷಣದಲ್ಲೇ ಸಾಯಬೇಕೆಂಬ ಅವನ ಬಯಕೆಗೆ ಓಗೊಟ್ಟು ಆಕೆ ಅವನನ್ನು ಸಮಾಗಮದ ಉಲ್ಬಣದ ಗಳಿಗೆಯಲ್ಲಿ ಕತ್ತು ಹಿಸುಕಿ ಕೊಲ್ಲುತ್ತಾಳೆ. ಆಮೇಲೆ ಅವನ ಶಿಶ್ನವನ್ನು ಕತ್ತರಿಸಿ ಆ ರಕ್ತದಿಂದ ಅವನ ಎದೆಯ ಮೇಲೆ ‘ನಿರಂತರವಾಗಿ ನಾವಿಬ್ಬರು’ ಎಂದು ಬರೆಯುತ್ತಾಳೆ. ಚಿತ್ರೀಕರಣದ ಹೊತ್ತಿಗೆ ಸಂಭೋಗ ಅಭಿನಯದ ಬದಲಾಗಿ ಪ್ರತ್ಯಕ್ಷ ಸಂಭೋಗ ನಡೆಯುವಂತೆ ಓಶಿಮಾ ನೋಡಿಕೊಂಡ ಎಂಬ ಸುದ್ದಿಯೂ ಚಿತ್ರಕ್ಕೊಂದು ವಿಶಿಷ್ಟ ಕಳೆ ನೀಡಿತ್ತು. ಅಮೇರಿಕಾ, ಫ್ರಾನ್‌್ಸ, ಬ್ರಿಟನ್‌ನಂಥ ಸೆನ್ಸಾರ್‌ ವಿರೋಧಿ ದೇಶಗಳಲ್ಲೂ ಈ ಚಿತ್ರ ಸೆನ್ಸಾರಿಗರ ಕತ್ತರಿಗೆ ಗುರಿಯಾಯಿತು. ಇದೆಲ್ಲ ಅತಿರೇಕವೆನಿಸಿದರೂ ಒಂದು ರೀತಿಯಿಂದ ಈ ಚಿತ್ರ ಜಪಾನೀ ಚಿತ್ರಗಳಲ್ಲಿ ಕಾಣಸಿಗುವ ಲೈಂಗಿಕ ಉತ್ತಾನತೆಯ ತರ್ಕಬದ್ಧ ತೀರ್ಮಾನವಾಗಿತ್ತೆಂಬುದನ್ನು ಅಲ್ಲಗಳೆಯುವಂತಿಲ್ಲ.

ಓಶಿಮಾ ಒಬ್ಬ ಶ್ರೇಷ್ಠ ಕಲಾಕಾರ. ಈ ಚಲನಚಿತ್ರ ನಾನು ನೋಡಿದ ಅವಿಸ್ಮರಣೀಯ ಕಲಾಕೃತಿಗಳಲ್ಲೊಂದು ಎಂದು ಒಪ್ಪಿಕೊಂಡು ಬಿಡುತ್ತೇನೆ.

ಬೀಳ್ಕೊಡುಗೆ
ಕೊನೆಗೊಂದು ಚಿತ್ರ. ಟೋಕಿಯೋ ನಗರದ ದಿಗಂತದ ಮೇಲೆ ಅದಕ್ಕೆ ಈ ಮೂಲೆಯಿಂದ ಆ ಮೂಲೆಯವರೆಗೆ ಹಿನ್ನೆಲೆಯಾಗಿ ಹರಡಿರುವ ಫೂಜಿಯಾಮಾ ಎಂಬ ಪರ್ವತ ಶಿಖರವಿದೆ. ಅದರ ಸುತ್ತಮುತ್ತ ಬೇರೆ ಯಾವ ಚಿಕ್ಕಪುಟ್ಟ ಗುಡ್ಡಗಳಿಲ್ಲದೆ ಫೂಜಿಯಾಮಾದ ತುದಿ ಮೋಡಗಳನ್ನು ಸೀಳಿ ಮೇಲಕ್ಕೆ ನೆಗೆಯುತ್ತದೆ. ‘ಹೋಕುಸಾಯಿ’ ಎಂಬ ಚಿತ್ರಕಾರನ ಜಗತ್ಪ್ರಸಿದ್ಧ ಚಿತ್ರದಲ್ಲಿ ನಾವು ಅದನ್ನು ನೋಡಿದ್ದರೂ, ನಾವು ಜಪಾನದಲ್ಲಿ ಇದ್ದ ಹದಿನಾಲ್ಕೂ ದಿನ ಈ ಪರ್ವತದೆದುರಿಗೆ ಮೋಡಗಳು ಹಿಂಜಿ ಪಿಂಡಿ–ಪಿಂಡಿಯಾಗಿ ತೇಲುತ್ತಲೇ ಇದ್ದು ಪರ್ವತದ ಕೆಳಭಾಗ ಮಾತ್ರ ನಮಗೆ ನೋಡಲು ಸಿಕ್ಕಿದ್ದರಿಂದ ನಾವು ತುಂಬ ಚಡಪಡಿಸಿದ್ದೆವು.

ಆದರೆ ಕೊನೆಯ ದಿನ ಕೊನೆಯ ಗಳಿಗೆಗೆ ಫೂಜಿಯಾಮಾಕ್ಕೆ ಏನು ಮನಸ್ಸು ಬಂತೋ ಏನೋ ನಾವು ಟ್ರೇನಿನಲ್ಲಿ ಕುಳಿತು ವಿಮಾನ ನಿಲ್ದಾಣಕ್ಕೆ ಹೊರಟಿದ್ದೆವು. ನಮ್ಮ ಪಕ್ಕದಲ್ಲಿ ಕೂತ ಇಬ್ಬರು ಜಪಾನೀ ಮಹಿಳೆಯರು ಒಮ್ಮೆಲೆ ಕಿಡಕಿಯತ್ತ ಹೊರಳಿ ಆಶ್ಚರ್ಯೋದ್ಗಾರ ತೆಗೆದರು. ನಾವತ್ತ ತಿರುಗಿ ನೋಡಿದರೆ ಒಂದು ಕಿರುಮೋಡದ ಸುಳಿವೂ ಇಲ್ಲದ ನಿಚ್ಚಳವಾದ ಬಿಸಿಲಲ್ಲಿ ಶಿಖರ ರಾಜಠೀವಿಯಿಂದ ತಲೆಯೆತ್ತಿ ಮೆರೆಯುತ್ತಿತ್ತು. ದಿಗಂತದ ಎಡ ಹಾಗೂ ಬಲ ಮೂಲೆಗಳಿಂದ ಏಳುವ ರೇಖೆಗಳು ತೆಗ್ಗು–ತೆವರುಗಳಿಲ್ಲದೆ ನೇರವಾಗಿ ಮೇಲಕ್ಕೆ ಹೊಮ್ಮಿ ತ್ರಿಕೋಣಾಕೃತಿಯಾದ ಹಿಮಾಚ್ಛಾದಿತ ಶಿಖರದಲ್ಲಿ ಒಂದುಗೂಡುವ ಗಾಂಭೀರ್ಯ ಯಾವುದೇ ಭಾರತೀಯ ಪರ್ವತಕ್ಕಿಂತ ತೀರ ಬೇರೆಯಾದದ್ದು. ಇಷ್ಟು ದಿನ ಕಣ್ಣಾಮುಚ್ಚಾಲೆ ಆಡಿದ ಫೂಜಿಯಾಮಾ ಈಗ ಹೋಕುಸಾಯಿಯ ಚಿತ್ರವನ್ನು ಅನುಕರಿಸಿ ಬೀಗುತ್ತಿತ್ತು. ನಮಗಾದರೂ ಜಪಾನಿನಲ್ಲಿ ಕಳೆದ ಹದಿನಾಲ್ಕು ದಿನಗಳಿಗೆ ಇದಕ್ಕಿಂತ ಸುಂದರ ವಿದಾಯ ಹೇಳುವುದು ಸಾಧ್ಯವಿರಲಿಲ್ಲ ಎಂದು ಖುಷಿಯಾಯಿತು.

(ಮನೋಹರ ಗ್ರಂಥ ಮಾಲಾ, ಧಾರವಾಡ ಪ್ರಕಟಿಸಲಿರುವ ‘ಮೆಲುಕು’ ಲೇಖನ ಸಂಗ್ರಹದಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT