ಶನಿವಾರ, ಫೆಬ್ರವರಿ 27, 2021
28 °C

ತಿ.ನರಸೀಪುರ ಅಭಿವೃದ್ಧಿಗೆ ಕ್ರಮ: ಸಚಿವ ಮಹದೇವಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿ.ನರಸೀಪುರ ಅಭಿವೃದ್ಧಿಗೆ ಕ್ರಮ: ಸಚಿವ ಮಹದೇವಪ್ಪ

ತಿ.ನರಸೀಪುರ/ ತಲಕಾಡು: ಪಟ್ಟಣದ ಗುಂಜಾನರಸಿಂಹ ಸ್ವಾಮಿ ದೇವಾಲಯ ಆಸುಪಾಸು ಸ್ಥಳವನ್ನು ವಿಸ್ತರಣೆ ಮಾಡಿ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.ಪಟ್ಟಣದ ಗುಂಜಾನರಸಿಂಹಸ್ವಾಮಿ ದೇವಾಲಯದ ಮುಂಭಾಗದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಂಟಿ ಅನುದಾನದಲ್ಲಿ ಕೈಗೊಂಡಿರುವ ಸೋಪಾನ ಕಟ್ಟೆ, ಉದ್ಯಾನ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಸೋಮವಾರ ಪರಿಶೀಲಿಸಿ ಅವರು ಪತ್ರಿಕಾಗೋಷ್ಠಿ ಮಾತನಾಡಿದರು.ಇಲ್ಲಿ ತೂಗು ಸೇತುವೆ ನಿರ್ಮಿಸುವ ಬದಲು ತಿರಮಕೂಡಲು ದೇವಾಲಯಗಳಿಗೆ ಸಂಪರ್ಕ ಕಲ್ಪಿಸಲು ಅಗತ್ಯವಾದ ಶಾಶ್ವತ ಯೋಜನೆ ನೀಡಬೇಕು. ಇದು ಪ್ರವಾಸಿ ಕೇಂದ್ರವಾಗಿರುವ ಕಾರಣ ಸಮಗ್ರವಾಗಿ ಅಭಿವೃದ್ಧಿ ಮಾಡಲು ₹ 50 ಕೋಟಿ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಾವು ದೊರಕಿಸಿದ್ದು, ದೇವಾಲಯದ ಆಸುಪಾಸಿನಲ್ಲಿ ಒತ್ತುವರಿ ತೆರವು ಮಾಡಿ  5– 6 ಎಕರೆ ವಿಸ್ತೀರ್ಣದಲ್ಲಿ ಸೋಪಾನ ನಿರ್ಮಾಣ, ಉದ್ಯಾನ, ಪಾದಚಾರಿ ಮಾರ್ಗ  ಸೇರಿದಂತೆ ಹಲವಾರು ಪ್ರಗತಿಯಲ್ಲಿರುವ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಪ್ರವಾಸಿ ಕ್ಷೇತ್ರವಾಗಿ ಮಾಡುವುದಾಗಿ ತಿಳಿಸಿದರು.ಬಳಿಕ ತಲಕಾಡಿನ ಮಾಧವ ಮಂತ್ರಿ ಅಣೆಕಟ್ಟೆಗೆ ತೆರಳಿ ಪರಿಶೀಲಿಸಿದ ನಂತರ ನೀರಾವರಿ ಯೋಜನೆಗಳ ಬಗ್ಗೆ ಅವರು ಮಾಹಿತಿ ನೀಡಿದರು. ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮಾಧವ ಮಂತ್ರಿ ಅಣೆಕಟ್ಟೆಯ ಮರು ನಿರ್ಮಾಣಕ್ಕೆ ಸಲ್ಲಿಸಲಾಗಿದ್ದ ಪ್ರಗತಿ ವರದಿ ಯೋಜನೆಯನ್ನು ಅಂಗೀಕರಿಸಿ, 800 ವರ್ಷಗಳಷ್ಟು ಹಳೆಯದಾದ ಮಾಧವ ಮಂತ್ರಿ ಅಣೆಕಟ್ಟೆ ಪುನರ್ ನಿರ್ಮಿಸಲು ₹ 70 ಕೋಟಿ ವೆಚ್ಚದಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಿ, ರಾಜ್ಯ ಸರ್ಕಾರದಿಂದ ಅನುದಾನ ಮಂಜೂರು ಮಾಡಲು ಆಡಳಿತಾತ್ಮಕ ಅನುಮೋದನೆ ದೊರಕಿದೆ ಎಂದು ಅವರು ತಿಳಿಸಿದರು

ಅಣೆಕಟ್ಟೆ ಶಿಥಿಲವಾಗಿ ರೈತರ ಬೆಳೆಗಳಿಗೆ ನೀರಾವರಿ ಸೌಲಭ್ಯದ ಕೊರತೆಯಾಗಿದ್ದ ಕಾರಣ ಮರು ನಿರ್ಮಾಣಕ್ಕೆ ಅಂಕಿತ ಹಾಕಲಾಗಿದೆ.ಅಣೆಕಟ್ಟೆಯನ್ನು ಹಾಲಿ ಇರುವ ಮಾದರಿಯಲ್ಲೇ ಮರು ನಿರ್ಮಿಸಲಾಗುವುದು. ತಲಕಾಡು ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿದ್ದರಿಂದ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಅಣೆಕಟ್ಟೆ ತಪ್ಪಲು ಪ್ರದೇಶದಲ್ಲಿರುವ ದೇವಾಲಯ ಸ್ಥಳಾಂತರಿಸಿ, ನಾಲೆಯ ಏರಿ ದುರಸ್ತಿ ಮಾಡಿ ರಸ್ತೆ ನಿರ್ಮಿಸುವಂತೆ ನೀರಾವರಿ ನಿಗಮದ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ನೀರಾವರಿ ಸೌಲಭ್ಯಗಳನ್ನು ಉತ್ತಮಗೊಳಿಸಿ ಕೃಷಿಕರ ಆರ್ಥಿಕ  ಪ್ರಗತಿಗೆ ಅವಕಾಶ ಕಲ್ಪಿಸಲಾಗುವುದು. ಕಾವೇರಿ ನ್ಯಾಯಾಧೀಕರಣ ತೀರ್ಪಿನಂತೆ ರಾಜ್ಯದ ಪಾಲಿನ ನೀರನ್ನು ಬಳಸಿಕೊಂಡು  ಏತ ನೀರಾವರಿ ಯೋಜನೆಗಳ ಮೂಲಕ ಮುಡುಕುತೊರೆ ಟಿ. ಬೆಟ್ಟಹಳ್ಳಿ ಮೇಲ್ಭಾಗದ  3,500 ಎಕರೆ ಭೂ ಪ್ರದೇಶದ ಕೃಷಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜಿಸಲಾಗಿದೆ ಎಂದರು.350 ಎಕರೆ ಬಂಜರು ಭೂಮಿಗೆ ನೀರು ಪೂರೈಸಲು  ಚಂದಹಳ್ಳಿ ಏತ ನೀರಾವರಿ ಯೋಜನೆಗೆ ಚಾಲನೆ  ನೀಡಲಾಗುವುದು.   ವಾರದೊಳಗೆ ಮಾಧವ ಮಂತ್ರಿ ನಾಲೆಯ ಹೊಳು ತೆಗೆಯಿಸಿ, 10 ದಿನಗಳಲ್ಲಿ ಬೇಸಿಗೆ ಅರೆ ಖುಷ್ಕಿ ಬೆಳೆಗಳಿಗೆ ನೀರು ಪೂರೈಸಲಾಗುವುದು ಎಂದು  ಭರವಸೆ ನೀಡಿದರು.  22 ಹಳ್ಳಿಗಳಿಗೆ 11 ಕೋಟಿ:  ನದಿ ಮೂಲದಿಂದ ತಲಕಾಡು ಹೋಬಳಿಯ 22 ಹಳ್ಳಿಗಳಿಗೆ ನೇರವಾಗಿ ಕುಡಿಯುವ ನೀರು ಪೂರೈಸಲು ನೀರಾವರಿ ನಿಗಮಗಳ ಮೂಲಕ ₹ 11 ಕೋಟಿ  ವೆಚ್ಚದಲ್ಲಿ ಮಹತ್ವದ ಹೆಚ್ಚುವರಿ ನೀರಿನ ಯೋಜನೆ ರೂಪಿಸಲಾಗುತ್ತಿದೆ. ಯೋಜನಾ ವರದಿ ಸಲ್ಲಿಕೆ ಬಳಿಕ ಕಾಮಗಾರಿಗೆ ಚಾಲನೆ ನೀಡಲಾಗುವುದು.ತಲಕಾಡು ಗ್ರಾಮದಲ್ಲಿ ಸ್ಥಗಿತಗೊಂಡಿರುವ ಸ್ವಜಲಧಾರೆ ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸಲು ₹ 30 ಲಕ್ಷ  ಅಂದಾಜು ಪಟ್ಟಿಯನ್ನು ಕಳುಹಿಸಿದ್ದು, ಅನುಮೋದನೆ ಸಿಕ್ಕಿದ ಕೂಡಲೇ ಟೆಂಡರ್ ಕರೆದು 5 ವರ್ಷಗಳ ಅವಧಿಗೆ ನಿರ್ವಹಣೆ ಗುತ್ತಿಗೆ ನೀಡಲಾಗುವುದು. ಬಳಿಕ  ನಿರಂತರ ನೀರು  ಪೂರೈಕೆಯಾಗಲಿದೆ ಎಂದು ಅವರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.