ತಿಪಟೂರು: ಜೆಡಿಎಸ್ ಅಭ್ಯರ್ಥಿ ಕಾರು ವಶ

ತಿಪಟೂರು: ಚುನಾವಣೆ ನೀತಿ ಸಂಹಿತೆ ಪ್ರಕಾರ ಕಾರು ಬಳಕೆಗೆ ಪರವಾನಗಿ ಪತ್ರವನ್ನು ಜತೆಯಲ್ಲಿ ಇಟ್ಟುಕೊಳ್ಳದ್ದರಿಂದ ಜೆಡಿಎಸ್ ಅಭ್ಯರ್ಥಿ ಎ. ಕೃಷ್ಣಪ್ಪ ಮತ್ತು ಜೆಡಿಎಸ್ ಜಿಲ್ಲಾಧ್ಯಕ್ಷ ಡಾ.ಹುಲಿನಾಯ್ಕರ್ ಅವರ ಕಾರುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡರು.
ನಗರದಲ್ಲಿ ಶನಿವಾರ ಆಯೋಜಿಸಿದ್ದ ಜೆಡಿಎಸ್ ಮೆರವಣಿಗೆ ಮತ್ತು ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಎ.ಕೃಷ್ಣಪ್ಪ ಮತ್ತು ಹುಲಿನಾಯ್ಕರ್ ಕೆಂಪಮ್ಮದೇವಿ ದೇಗುಲ ಬಳಿ ತಮ್ಮ ಕಾರು ನಿಲುಗಡೆ ಮಾಡಿದ್ದರು.
ಪ್ಲೇಯಿಂಗ್ ಸ್ಕ್ವಾಡ್ ಅಧಿಕಾರಿ ಎಸ್.ಬಿ.ನ್ಯಾಮೇಗೌಡ ಅದೇ ಸಂದರ್ಭದಲ್ಲಿ ಮೆರವಣಿಗೆ ಮತ್ತು ಸಭೆಗೆ ಸಂಬಂಧಿಸಿ ಪಕ್ಷದವರು ಪಡೆದ ವಿವಿಧ ಅನುಮತಿಗಳನ್ನು ಪರಿಶೀಲಿಸುತ್ತಿದ್ದರು.
ಅಲ್ಲಿಗೆ ಬಂದು ನಿಂತಿದ್ದ ಜೆಡಿಎಸ್ ಅಧ್ಯಕ್ಷರ ಕಾರುಗಳ ಪರವಾನಗಿಯನ್ನೂ ವಿಚಾರಿಸಿದರು. ಚಾಲಕರಾಗಲಿ, ಮುಖಂಡರಾಗಲಿ ಪರವಾನಗಿ ಪತ್ರ ತೋರಿಸಲು ವಿಫಲರಾದರು. ಪಡೆದಿದ್ದ ಪರವಾನಗಿ ಪತ್ರವನ್ನು ವಾಹನದೊಂದಿಗೆ ತಂದಿಲ್ಲ ಎಂಬ ಕಾರಣ ನೀಡಿದರು. ಇದಕ್ಕೆ ಒಪ್ಪದ ನ್ಯಾಮೇಗೌಡ ಕಾರುಗಳನ್ನು ವಶ ಪಡಿಸಿಕೊಂಡು ಪೊಲೀಸರ ಸುಪರ್ದಿಗೆ ಒಪ್ಪಿಸಿದರು.
ಬಹಿರಂಗ ಸಭೆ ಮುಗಿಯುವಷ್ಟರಲ್ಲಿ ಎರಡೂ ಕಾರುಗಳ ವಾರಸುದಾರರಿಗೆ ನೋಟಿಸ್ ಸಿದ್ಧಪಡಿಸಿ ಸಂಬಂಧಿಸಿದವರಿಗೆ ತಲುಪಿಸಿದರು. ಅಷ್ಟರಲ್ಲಿ ಎ.ಕೃಷ್ಣಪ್ಪ ಅವರ ಕಾರಿಗೆ ಸಂಬಂಧಿಸಿ ಪಡೆದಿದ್ದರೆನ್ನಲಾದ ಪರವಾನಗಿ ಪತ್ರದ ನಕಲು ಪ್ರತಿ ಬೆಂಗಳೂರಿನಿಂದ ಫ್ಯಾಕ್ಸ್ ಮೂಲಕ ಇಲ್ಲಿನ ಚುನಾವಣಾಧಿಕಾರಿ ಕಚೇರಿ ತಲುಪಿತು. ಆದರೂ ಮೂಲಪ್ರತಿ ಹಾಜರುಪಡಿಸುವಂತೆ ಚುನಾವಣಾಧಿಕಾರಿ ಸೂಚಿಸಿದರು.
ಸಂಜೆ ವೇಳೆಗೆ ಮೂಲ ಪ್ರತಿ ತಂದು ತೋರಿಸಿದ್ದರಿಂದ ಚುನಾವಣಾಧಿಕಾರಿ ವಾಹನ ಬಿಡುಗಡೆಗೊಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.