ತಿಪಟೂರು-ಹುಳಿಯಾರು ಬಂದ್ ಯಶಸ್ವಿ

7

ತಿಪಟೂರು-ಹುಳಿಯಾರು ಬಂದ್ ಯಶಸ್ವಿ

Published:
Updated:
ತಿಪಟೂರು-ಹುಳಿಯಾರು ಬಂದ್ ಯಶಸ್ವಿ

ತಿಪಟೂರು: ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಅಂಗೀಕರಿಸಿ ತಕ್ಷಣ ಒಳ ಮೀಸಲಾತಿ ಜಾತಿಗೊಳಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ಮಾದಿಗ-ಛಲವಾದಿ ಸಂಘಟನೆಗಳ ಒಕ್ಕೂಟದಿಂದ ಕರೆ ನೀಡಿದ್ದ ತಿಪಟೂರು ಬಂದ್ ಸೋಮವಾರ ಸಂಪೂರ್ಣ ಯಶಸ್ವಿಯಾಯಿತು.ನಗರದ ಎಲ್ಲ ಅಂಗಡಿ, ಬ್ಯಾಂಕ್, ಸರ್ಕಾರಿ ಕಚೇರಿ ಮುಚ್ಚಿದ್ದವು. ಜನ-ವಾಹನ ಸಂಚಾರ ವಿರಳವಾಗಿತ್ತು. ಕೆಂಪಮ್ಮ ದೇಗುಲ ಬಳಿ ಸಾವಿರಾರು ಸಂಖ್ಯೆಯಲ್ಲಿ ಸಮಾವೇಶಗೊಂಡ ತಾಲ್ಲೂಕಿನ ದಲಿತ ಮುಖಂಡರು, ಕಾರ್ಯಕರ್ತರು ಪ್ರಮುಖ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ವರದಿ ಜಾರಿಗೆ ಆಗ್ರಹಿಸಿದರು.

 

ಇದಕ್ಕೆ ಮೊದಲು ಯುವಕರು ನಗರಾದ್ಯಂತ ಬೈಕ್ ರ‌್ಯಾಲಿ ಮಾಡಿದರು. ವಿವಿಧ ಬಣಗಳನ್ನು ಮರೆತು ಮಾದಿಗ-ಛಲವಾದಿ ಮುಖಂಡರು, ಕಾರ್ಯಕರ್ತರು ಒಂದಾಗಿ ಭಾರಿ ಪ್ರತಿಭಟನೆ ನಡೆಸಿದರು.ಸಿಂಗ್ರಿ ಸರ್ಕಲ್‌ನಲ್ಲಿ ಪ್ರತಿಭಟನಾ ಸಭೆ ಉದ್ದೇಶಿಸಿ ಸಾಹಿತಿ ಕೆ.ಬಿ.ಸಿದ್ದಯ್ಯ ಮಾತನಾಡಿ, ಒಳ ಮೀಸಲಾತಿ ವರದಿ ಆಕ್ಷೇಪಿಸುವರು ಸಂವಿಧಾನ, ಸಾಮಾಜಿಕ ನ್ಯಾಯ ಮತ್ತು ಅಂಬೇಡ್ಕರ್ ಆಶಯದ ವಿರೋಧಿಗಳು. ವರದಿ ವಿರೋಧಿಸುವ ಕಾಂಗ್ರೆಸ್ ಮುಖಂಡ ಪರಮೇಶ್ವರ, ಸಾಹಿತಿ ಎಲ್.ಹನುಮಂತಯ್ಯ, ಸಚಿವ ಅರವಿಂದ ಲಿಂಬಾವಳಿ ವಿರುದ್ಧ ಕಿಡಿಕಾರಿದರು.ಪರಿಶಿಷ್ಟ ವ್ಯಾಪ್ತಿಯ 101 ಜಾತಿಗಳಿಗೆ ಮೀಸಲಾತಿ ಜನಸಂಖ್ಯಾವಾರು ಸಮಾನ ಹಂಚಿಕೆಯಾಗಲೆಂಬ ವರದಿ ಸಮರ್ಪಕವಾಗಿದೆ. ಜಾರಿಗೊಳಿಸುವವರೆಗೆ ರಾಜ್ಯಾದ್ಯಂತ ಹೋರಾಟ ನಿಲ್ಲುವುದಿಲ್ಲ. ಮೀಸಲು ಕ್ಷೇತ್ರಗಳಿಂದ ಗೆದ್ದಿರುವ ಶಾಸಕರ ಮನೆಗಳಿಗೆ ಮುತ್ತಿಗೆ ಹಾಕಿ ಮುಚ್ಚಳಿಕೆ ಬರೆಸಿಕೊಳ್ಳುವ ಹೋರಾಟ ಮುಂದಿದೆ ಎಂದರು.ಮುಖಂಡರಾದ ಚೇಳೂರು ವೆಂಕಟೇಶ್, ಭೀಮಯ್ಯ, ಹುಚ್ಚಯ್ಯ, ಬಂದಕುಂಟೆ ನಾಗರಾಜು, ಸುರೇಶ್, ಕುಂದೂರು ತಿಮ್ಮಯ್ಯ, ದೊಡ್ಡಯ್ಯ ಮಾತನಾಡಿದರು. ನರಸೀಯಪ್ಪ, ಶಾಂತಪ್ಪ, ರಂಗಸ್ವಾಮಿ, ಬಜಗೂರು ಮಂಜುನಾಥ್, ಕಂಚೇಘಟ್ಟ ಸುರೇಶ್, ಸದಾಶಿವಯ್ಯ, ಪೆದ್ದಿಹಳ್ಳಿ ನರಸಿಂಹಯ್ಯ, ಮಹಲಿಂಗಯ್ಯ, ನಾಗತಿಹಳ್ಳಿ ಕೃಷ್ಣಮೂರ್ತಿ, ಚಿಕ್ಕಣ್ಣ, ರಘುಪತಿ, ಗಂಗರಾಜು, ಸುಜಾತಾ ರಂಗಸ್ವಾಮಿ, ನಾರಾಯಣರಾಜು, ಶ್ರೀನಿವಾಸ್ ಮತ್ತಿತರರ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಯಥಾವತ್ ಜಾರಿಗೆ ಆಗ್ರಹ

ಹುಳಿಯಾರು:
ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಯಥಾವತ್ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಹೋಬಳಿ ಮಾದಿಗ-ಛಲವಾದಿ ಸಮುದಾಯಗಳ ಒಳ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಸೋಮವಾರ ಕರೆ ಕೊಟ್ಟಿದ್ದ ಹುಳಿಯಾರು ಬಂದ್ ಯಶಸ್ವಿಯಾಯಿತು.ಪಟ್ಟಣದ ಪರಿವೀಕ್ಷಣಾ ಮಂದಿರದಿಂದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಪ್ರತಿಭಟನಾಕಾರರು ರಾಮಗೋಪಾಲ್ ಸರ್ಕಲ್ ಬಳಿ ಮಾನವ ಸರಪಳಿ ರಚಿಸಿದರು. ನಂತರ ಸದಾಶಿವ ಆಯೋಗದ ಕುರಿತು ಮುಖಂಡರಾದ ಲ.ಪು.ಕರಿಯಪ್ಪ, ಹನುಮಂತಯ್ಯ, ಮೇಲನಹಳ್ಳಿ ಕುಮಾರ್, ತಮ್ಮಡಿಹಳ್ಳಿ ನಾಗರಾಜು, ಕಿರಣ್, ಸಿದ್ದರಾಮಯ್ಯ ಮಾತನಾಡಿದರು.ನಂತರ ನಾಡ ಕಚೇರಿಗೆ ತೆರಳಿ ಉಪತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ಬೆಳಿಗ್ಗೆಯಿಂದಲೇ ವರ್ತಕರು ಅಂಗಡಿಗಳನ್ನು ಸ್ವಯಂಘೋಷಿತರಾಗಿ ಮುಚ್ಚಿ ಬಂದ್‌ಗೆ ಸಹಕರಿಸಿದರು. ಬಸ್ ಸಂಚಾರ ಎಂದಿನಂತೆ ಇತ್ತು. ಶಾಲಾ-ಕಾಲೇಜು, ಮತ್ತಿತರರ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.ಅನುಷ್ಠಾನ ಬೇಡ: ಭೋವಿ ಜನಾಂಗ

ತುರುವೇಕೆರೆ:
ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಸರ್ಕಾರ ಜಾರಿಗೊಳಿಸಬಾರದು ಎಂದು ಒತ್ತಾಯಿಸಿ ತಾಲ್ಲೂಕು ಭೋವಿ ಜನಾಂಗ ಕ್ಷೇಮಾಭಿವೃದ್ಧಿ ಸಂಘದ ನೂರಾರು ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಮುಖಂಡರು, ಸದಾಶಿವ ಆಯೋಗದ ವರದಿ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಎ.ವೈ.ಹನುಮಂತರಾಯಪ್ಪ ಮಾತನಾಡಿ, ಶೇ 15ರ ಮೀಸಲಾತಿ ನೀತಿಯಲ್ಲಿ ಪರಿಶಿಷ್ಟ ಜಾತಿಯ 101 ಉಪಜಾತಿಗಳು ಪ್ರಯೋಜನ ಪಡೆಯುತ್ತಿದ್ದವು.ಆದರೆ ಸದಾಶಿವ ಆಯೋಗ ನೀಡಿರುವ ವರದಿ ಕೇವಲ ಎರಡು ಜಾತಿಗೆ ಅನುಕೂಲವಾಗಲಿದ್ದು, ಇತರೆ 99 ಜಾತಿಗಳಿಗೆ ಮಾರಕವಾಗಲಿದೆ. ಆದ್ದರಿಂದ ಸದಾಶಿವ ವರದಿಯನ್ನು ಯಾವುದೇ ಕಾರಣಕ್ಕೂ ಸರ್ಕಾರ ಅನುಷ್ಠಾನಕ್ಕೆ ತರಬಾರದು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಭೋವಿ ಸಮಾಜದ ಉಪಾಧ್ಯಕ್ಷ ಗೋವಿಂದರಾಜ್, ಪ್ರಧಾನ ಕಾರ್ಯದರ್ಶಿ ನಾರಾಯಣ್, ತಾಲ್ಲೂಕು ಅಧ್ಯಕ್ಷರಾದ ಶಿವಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಸಿದ್ದಾರ್ಥ, ಯತೀಶ್, ಗೋಪಾಲಭೋವಿ, ಮಹಿಳಾ ಮುಖಂಡರಾದ ಯಶೋಧಮ್ಮ, ರಾಜಮ್ಮ, ಡಿ.ಬಿ.ಹಟ್ಟಿ ದಾಸಣ್ಣ, ಉಮೇಶ್ ಇತರರು ಪಾಲ್ಗೊಂಡಿದ್ದರು. ಪ್ರತಿಭಟನಕಾರರು ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry