ಮಂಗಳವಾರ, ನವೆಂಬರ್ 12, 2019
28 °C

ತಿಪಟೂರು: 223 ಮತಗಟ್ಟೆ, 45 ಅತಿ ಸೂಕ್ಷ್ಮ

Published:
Updated:

ತಿಪಟೂರು: ವಿಧಾನಸಭಾ ಕ್ಷೇತ್ರ ಚುನಾವಣೆಯ ಮತದಾನಕ್ಕಾಗಿ 223 ಮತಗಟ್ಟೆ ಕೇಂದ್ರ ಸ್ಥಾಪಿಸಲಾಗುವುದು ಎಂದು ಚುನಾವಣಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಎಂ.ಶಿಲ್ಪಾ ತಿಳಿಸಿದರು.ಚುನಾವಣಾ ಪೂರ್ವ ಸಿದ್ಧತೆ ಕುರಿತು ಮಾಹಿತಿ ನೀಡಿ, 223 ಮತಗಟ್ಟೆಗಳ ಪೈಕಿ 45 ಕೇಂದ್ರಗಳನ್ನು ಅತಿ ಸೂಕ್ಷ್ಮ, 47 ಸೂಕ್ಷ್ಮ ಹಾಗೂ 131 ಮತಗಟ್ಟೆ ಸಾಮಾನ್ಯವೆಂದು ಗುರುತಿಸಲಾಗಿದೆ. ಈ ಕ್ಷೇತ್ರದ ಒಟ್ಟು 1,65,062 ಮತದಾರರ ಪೈಕಿ 82,086 ಪುರುಷರು, 82,976 ಮಹಿಳಾ ಮತದಾರರು ಸೇರಿದ್ದಾರೆ.223 ಮತಗಟ್ಟೆ ಕೇಂದ್ರಗಳಿಗೆ ಸಂಬಂಧಿಸಿ 18 ಸೆಕ್ಷನ್ ಅಧಿಕಾರಿ, ಮೂವರು ಫ್ಲೈಯಿಂಗ್ ಸ್ಕ್ವಾಡ್ ನೇಮಿಸಲಾಗಿದೆ. ತಾಲ್ಲೂಕಿನ ಗಡಿ ಭಾಗಗಳಾದ ಬಿದರೆಗುಡಿ ಕ್ರಾಸ್, ಬಂಡಿಹಳ್ಳಿ ಗೇಟ್, ಹತ್ಯಾಳ್ ಬೆಟ್ಟ ಗೇಟ್, ಜಿ.ಮಲ್ಲೇನಹಳ್ಳಿ ಗೇಟ್, ರಾಮಚಂದ್ರಾಪುರ ಗೇಟ್‌ಗಳಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದೆ. ಅಲ್ಲಿಗೆ ಅಬಕಾರಿ, ಪೊಲೀಸ್, ಅರಣ್ಯ, ಗ್ರಾಮ ಪಂಚಾಯಿತಿ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದರು.ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ನಿಗಾ ವಹಿಸಲು ವಿಡಿಯೋ ತಂಡ ರಚಿಸಲಾಗಿದೆ. ಅನುಮಾನಾಸ್ಪದ ಸ್ಥಳಗಳಲ್ಲಿ ಚಿತ್ರೀಕರಿಸುವ ವ್ಯವಸ್ಥೆ ಮಾಡಲಾಗಿದೆ. ನೀತಿ ಸಂಹಿತೆ ಬಗ್ಗೆ ಮಾಹಿತಿ ಹಾಗೂ ದೂರುಗಳಿಗಾಗಿ 08134-251039, 08134-250129 ಸಹಾಯವಾಣಿ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.ಮೀಸಲು ಪಡೆ ಪೆರೇಡ್

ನಿರ್ಭೀತಿ ಮತ್ತು ಶಾಂತಿಯುತ ಚುನಾವಣೆಗೆ ಮತದಾರರನ್ನು ಅನುವಾಗಿಸಲು ಪೂರಕವಾಗಿ ಕೇಂದ್ರ ಮೀಸಲು ಪಡೆಯಿಂದ ನಗರದಲ್ಲಿ ಶನಿವಾರ ಪೆರೇಡ್ ನಡೆಯಿತು.ಕಾನೂನು, ಸುವ್ಯವಸ್ಥೆ ಬಗ್ಗೆ ವಿಶ್ವಾಸ ಮೂಡಿಸುವ ಸಲುವಾಗಿ ನಡೆದ ಪೆರೇಡ್‌ನಲ್ಲಿ 50ಕ್ಕೂ ಹೆಚ್ಚು ಸಿಬ್ಬಂದಿ ಪಾಲ್ಗೊಂಡಿದ್ದರು. ಯಾವುದೇ ಅಹಿತಕರ ಘಟನೆಗೆ ಆಸ್ಪದವಿಲ್ಲ ಮತ್ತು ಮುಕ್ತ ಮತದಾನಕ್ಕೆ ಸರ್ಕಾರ ಸೂಕ್ತ ವ್ಯವಸ್ಥೆ ಕಲ್ಪಿಸಲಿದೆ ಎಂಬ ಸಂದೇಶ ರವಾನಿಸಿದರು. ಸ್ಥಳೀಯ ಪೊಲೀಸ್ ಅಧಿಕಾರಿಗಳ ತಂಡ ಮಾರ್ಗದರ್ಶನ ನೀಡಿತು.ಪೆರೇಡ್‌ನಲ್ಲಿ ಗ್ರಾಮಾಂತರ ಸಿಪಿಐ ರಾಮಕೃಷ್ಣ, ನಗರ ಸಿಪಿಐ ನಾಗರಾಜು, ಎಸ್.ಐ.ಕೊಟ್ರೇಶ್ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು. ತಿಪಟೂರು, ಚಿಕ್ಕನಾಯಕನಹಳ್ಳಿ ಕ್ಷೇತ್ರಗಳ ಚುನಾವಣೆ ಕರ್ತವ್ಯಕ್ಕೆಂದು ಸುಮಾರು 600 ಸಿಬ್ಬಂದಿಯ ಕೇಂದ್ರ ಮೀಸಲು ಪಡೆ ಮತ್ತು ಅರೆಸೇನಾ ಪಡೆ ನಿಯೋಜನೆಗೊಂಡಿವೆ. ಆ ಪಡೆಗಳು ಏ. 20ರಂದು ನಗರಕ್ಕೆ ಆಗಮಿಸುವ ನಿರೀಕ್ಷೆ ಇದೆ ಎಂದು ಸಿಪಿಐ ರಾಮಕೃಷ್ಣ ತಿಳಿಸಿದರು.ಚಿಂತನಾ ಶಿಬಿರ

ಚುನಾವಣೆಯಲ್ಲಿ ಕರ್ನಾಟಕ ದಲಿತ ಸಂರಕ್ಷಣಾ ಸಮಿತಿ ಕಾರ್ಯಕರ್ತರು ಯಾವ ಪಕ್ಷ ಬೆಂಬಲಿಸಬೇಕು ಎಂಬ ನಿರ್ಧಾರ ಕೈಗೊಳ್ಳಲು ಏ.20ರ ಬೆಳಗ್ಗೆ 10ಕ್ಕೆ ತಿಪಟೂರು ತಾಲ್ಲೂಕಿನ ಹಿಂಡಿಸ್ಕೆರೆ ಗೇಟ್‌ನಲ್ಲಿ ಚಿಂತನಾ ಶಿಬಿರ ಆಯೋಜಿಸಲಾಗಿದೆ. ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಹತ್ಯಾಳು ಮೂರ್ತಿ ಸಭೆಯಲ್ಲಿ ಭಾಗವಹಿಸುವರು. ಕಾರ್ಯಕರ್ತರು ಮತ್ತು ಪಧಾಧಿಕಾರಿಗಳು ಪಾಲ್ಗೊಂಡು ಸಲಹೆ, ಸೂಚನೆ ನೀಡಬೇಕು ಎಂದು ತಾಲ್ಲೂಕು ಸಮಿತಿ ಅಧ್ಯಕ್ಷ ಶಿವಣ್ಣ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)