ತಿಪ್ಪಗೊಂಡನಹಳ್ಳಿಗೆ 25 ಅಡಿ ನೀರು

7

ತಿಪ್ಪಗೊಂಡನಹಳ್ಳಿಗೆ 25 ಅಡಿ ನೀರು

Published:
Updated:

ಬೆಂಗಳೂರು: ರಾಜಧಾನಿಯ ಹೊರವಲಯದಲ್ಲಿ ಸೆಪ್ಟೆಂಬರ್‌ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ನಗರದ ಹಳೆಯ ಜಲಮೂಲವಾದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ 25 ಅಡಿ ನೀರು ಹರಿದು ಬಂದಿದೆ.ಜಲಾಶಯದಲ್ಲಿ 74 ಅಡಿ ನೀರು ಸಂಗ್ರಹಕ್ಕೆ ಅವಕಾಶ ಇದೆ. ಕಳೆದ ವರ್ಷ ಸೆಪ್ಟೆಂಬರ್ 19ರಂದು  11 ಅಡಿ ನೀರಿತ್ತು. ಕಳೆದ ವರ್ಷ ಮಳೆ ಕೊರತೆಯಿಂದ ಜಲಾಶಯ ಬತ್ತಿತ್ತು. ಡಿಸೆಂಬರ್‌ ವೇಳೆಗೆ ಜಲಾಶಯ ಸಂಪೂರ್ಣ ಖಾಲಿಯಾಗಿತ್ತು. ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಬೆಂಗಳೂರು ಭಾಗದಲ್ಲಿ ಕಳೆದ ಕೆಲವು ದಿನಗಳಲ್ಲಿ ಮಳೆಯಾದ ಕಾರಣ ಜಲಾಶಯಕ್ಕೆ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಿದೆ. ಗುರುವಾರ ಜಲಾಶಯದಲ್ಲಿ 25 ಅಡಿ ನೀರಿತ್ತು.ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಬೆಂಗಳೂರು ಭಾಗದ 1,453 ಕಿ.ಮೀ. ಜಲಾಯನ ಪ್ರದೇಶವನ್ನು ಈ ಜಲಾಶಯ ಹೊಂದಿದೆ. ಜಲಾಶಯ 1933ರ ಲಾಗಾಯ್ತಿನಿಂದಲೂ ಬೆಂಗಳೂರಿನ ನೀರಿನ ದಾಹವನ್ನು ತಣಿಸುತ್ತಾ ಬಂದಿದೆ.  ರಾಜಾಜಿನಗರ, ಪಶ್ಚಿಮ ಕಾರ್ಡ್ ರಸ್ತೆ, ಸುಂಕದಕಟ್ಟೆ, ವಿಜಯನಗರ, ಮಹಾಲಕ್ಷ್ಮಿ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಒಂದು ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಈ ಜಲಾಶಯದಿಂದಲೇ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿತ್ತು. ಈ ಹಿಂದೆ ಜಲಾಶಯ ತುಂಬಿದ್ದು 1992ರಲ್ಲಿ. 1998–199ರಲ್ಲಿ ನೀರಿನ ಮಟ್ಟ 71 ಅಡಿಗೆ ತಲುಪಿತ್ತು. ಕಳೆದ ಏಳು ವರ್ಷಗಳಲ್ಲಿ ನೀರಿನ ಮಟ್ಟ 43 ಅಡಿಗಿಂತ ಹೆಚ್ಚು ಆಗಿಲ್ಲ. ಈ ಜಲಾಶಯ 1980ರ ವರೆಗೂ ನಗರಕ್ಕೆ ಕುಡಿಯುವ ನೀರು ಪೂರೈಸುವ ಪ್ರಮುಖ ಮೂಲವಾಗಿತ್ತು.ಕಾವೇರಿ ಕುಡಿಯುವ ನೀರು ಯೋಜನೆಯ ಅನುಷ್ಠಾನದಿಂದ ಈ ಜಲಾಶಯದ ಮೇಲಿನ ಒತ್ತಡ ಕಡಿಮೆಯಾಗಿತ್ತು.

‘ಕಳೆದ ವರ್ಷಕ್ಕೆ ಹೋಲಿಸಿದರೆ ಜಲಾಶಯದಲ್ಲಿ ಈ ಸಲ ನೀರಿನ ಪ್ರಮಾಣ ಜಾಸ್ತಿ ಇದೆ. ಇನ್ನಷ್ಟು ಮಳೆಯಾಗುವ ನಿರೀಕ್ಷೆ ಇದೆ. ನೀರು ಪಂಪ್‌ ಮಾಡಲು 40 ಅಡಿ ನೀರು ಇರಬೇಕಿದೆ. ಸದ್ಯ ಪಂಪ್‌ ಮಾಡುವ ಯೋಚನೆ ಇಲ್ಲ. ನೀರಿನ ಮಟ್ಟ 40 ಅಡಿಗೆ ಏರಿದರೆ ನಮ್ಮ ಅದೃಷ್ಟ’ ಎಂದು ಹೇಳುತ್ತಾರೆ ಜಲಮಂಡಳಿಯ ಅಧಿಕಾರಿಗಳು.‘ಈಗ ಇರುವ ನೀರಿನ ಗುಣಮಟ್ಟವೂ ಅಷ್ಟು ಚೆನ್ನಾಗಿಲ್ಲ. ನಗರಕ್ಕೆ ಕುಡಿಯುವ ಪೂರೈಕೆ ಮಾಡುವ ಮುನ್ನ ನೀರಿನ ಗುಣಮಟ್ಟದ ಪರೀಕ್ಷೆ ನಡೆಸಬೇಕಿದೆ. ಗುಣಮಟ್ಟ ಚೆನ್ನಾಗಿದ್ದರೆ ರಾಜಾಜಿನಗರ, ಮಹಾಲಕ್ಷ್ಮಿ ಬಡಾವಣೆ ಮತ್ತಿತರ ಭಾಗಗಳಿಗೆ ಪೂರೈಕೆ ಮಾಡಲಾಗುವುದು’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.ಸಮಾಲೋಚನಾ ಸಭೆ ಇಂದು

ಬೆಂಗಳೂರು:
ನಗರದ ತಿರುಮೇನಹಳ್ಳಿಯಲ್ಲಿರುವ ಕೆಎನ್‌ಎಸ್‌ ತಾಂತ್ರಿಕ ವಿದ್ಯಾ ಸಂಸ್ಥೆಯ ಆವರಣದಲ್ಲಿ ಶನಿವಾರ (ಸೆ. 21) ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದೆ.ಬೆ.10.30ಕ್ಕೆ ಪ್ರಾರಂಭವಾಗುವ ಸಭೆಯಲ್ಲಿ ತಾಂತ್ರಿಕ ವಿದ್ಯಾ ಸಂಸ್ಥೆಗಳು ಎದುರಿಸುತ್ತಿರುವ ಸವಾಲುಗಳು, ಸಮ­ಸ್ಯೆಗಳ ಕುರಿತು ಚರ್ಚಿಸಲಾಗುವುದು ಎಂದು ಸಂಸ್ಥೆಯ ಪ್ರಾಂಶುಪಾಲರಾದ ಡಾ.ಎಂ.ವಿ. ಚೈತನ್ಯ ಕುಮಾರ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಸಚಿವರಾದ ಡಾ.ಎಂ.ಎಂ. ಪಲ್ಲಮ್‌ ರಾಜು, ಆರ್‌.ವಿ.ದೇಶಪಾಂಡೆ, ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ನ ಅಧ್ಯಕ್ಷ ಡಾ.ಪಾಂಡುರಂಗ ಶೆಟ್ಟಿ ಭಾಗವಹಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry