ಭಾನುವಾರ, ಮೇ 16, 2021
26 °C

ತಿಪ್ಪೂರಿನಲ್ಲಿ ತಪ್ಪದ ಸಮಸ್ಯೆಗಳು..!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದ್ದೂರು: ಇದು ತಿಪ್ಪೂರು. ಹೆಸರಿಗೆ ತಕ್ಕಂತೆ ಈ ಗ್ರಾಮಕ್ಕೆ ಕಾಲಿಟ್ಟರೆ ಎಲ್ಲೆಂದರಲ್ಲಿ ತಿಪ್ಪೆಗಳೇ ಕಾಣುತ್ತವೆ. ಹೂಳು ತುಂಬಿದ ಚರಂಡಿಗಳು. ಸುಧಾರಣೆ ಕಾಣದ ರಸ್ತೆಗಳು ಇದು ಈ ಗ್ರಾಮದ ಸದ್ಯದ ಚಿತ್ರಣ.

ನಿಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಈ ಗ್ರಾಮ ತಾಲ್ಲೂಕು ಕೇಂದ್ರಕ್ಕೆ ಕೇವಲ 8 ಕಿ.ಮೀ ದೂರದಲ್ಲಿದೆ. 1200ಕ್ಕೂ ಹೆಚ್ಚು ಜನಸಂಖ್ಯೆ ಇರುವ ಈ ಗ್ರಾಮದ ಬಹುತೇಕ ಸ್ಥಳೀಯರು ಕಲ್ಲು ಗಣಿಯಲ್ಲಿ ಕೆಲಸ ಮಾಡುವ ಕೂಲಿಕಾರರಾಗಿದ್ದಾರೆ.ಗ್ರಾಮದ ನಿವಾಸಿಯೇ ಆಗಿರುವ ಇಂದ್ರಾಣಿ ಅವರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷಗಾದಿಯ ಚುಕ್ಕಾಣಿ ಹಿಡಿದಿದ್ದಾರೆ. ಗ್ರಾಮದಲ್ಲಿ ಮೂವರು ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಈ ಗ್ರಾಮದಲ್ಲಿ ಈ ಒಂದು ತಿಂಗಳ ಹಿಂದೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು. ಖಾಸಗಿ ಪಂಪ್‌ಹೌಸ್‌ಗಳಿಂದ ಜನರು ನೀರು ಹೊತ್ತು ತರಬೇಕಾದ ಸ್ಥಿತಿ ಇತ್ತು. ಈಚೆಗೆ ಗ್ರಾಮಕ್ಕೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆಗೆ ಬಂದ ಶಾಸಕರನ್ನು ಅಡ್ಡಗಟ್ಟಿದ ಜನರು `ನಮಗೆ ರಸ್ತೆ ಬೇಡ. ಮೊದಲು ನೀರು ಕೊಡಿ~ ಎಂದು ಆಗ್ರಹಿಸಿ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದರು.ಘಟನೆ ನಡೆದ ಎರಡು ದಿನಗಳಲ್ಲೇ, ಶಾಸಕಿ ಕಲ್ಪನಾ ಸಿದ್ದರಾಜು ಕೊಳವೆ ಬಾವಿಯೊಂದಕ್ಕೆ ಮೋಟಾರು ಅಳವಡಿಸಿ ಈ ಗ್ರಾಮದ ನೀರಿನ ಸಮಸ್ಯೆಯನ್ನು ಬಗೆಹರಿಸಿದ್ದರಿಂದ ಇದೀಗ ತಾತ್ಕಾಲಿಕವಾಗಿ ನೀರಿನ ಸಮಸ್ಯೆಗೆ ಮುಕ್ತಿ ದಕ್ಕಿದೆ.  ಚರಂಡಿ ವ್ಯವಸ್ಥೆ ಅಸಮರ್ಪಕವಾಗಿದೆ. ಇರುವ ಪುರಾತನ ಚಪ್ಪಡಿ ನಿರ್ಮಿತ ಚರಂಡಿಗಳು ನಿರ್ವಹಣೆ ಕೊರತೆಯಿಂದ ಗಬ್ಬು ನಾರುತ್ತಿವೆ. ಗ್ರಾಮ ಪಂಚಾಯಿತಿ ಸಿಬ್ಬಂದಿ `ಫಾಗಿಂಗ್~ ಮಾಡದ ಕಾರಣ ಈ ಚರಂಡಿಗಳು ಸಾಂಕ್ರಾಮಿಕ ರೋಗಗಳ ತಾಣಗಳಾಗಿವೆ.ಗ್ರಾಮದ ಮುಖ್ಯ ರಸ್ತೆಯನ್ನು ಹೊರತುಪಡಿಸಿ ಯಾವುದೇ ರಸ್ತೆಗಳು ಡಾಂಬರು ಭಾಗ್ಯ ಕಂಡಿಲ್ಲ. ಕೆಲವು ಬೀದಿಗಳಿಗೆ ಜಲ್ಲಿ ಕಲ್ಲಿನಿಂದ ಮೆಟ್ಲಿಂಗ್ ಮಾಡಿದ್ದು, ಅವರು ಇದೀಗ ಮೇಲೆದಿದ್ದು ಜನರ ಸಂಚಾರಕ್ಕೆ ತೊಡಕಾಗಿದೆ.

ಗ್ರಾಮದಲ್ಲಿ ಬೀದಿ ದೀಪಗಳ ನಿರ್ವಹಣೆ ಸರಿಯಿಲ್ಲ. ಕಸದ ವಿಲೇವಾರಿ ಸೇರಿದಂತೆ ಫಾಗಿಂಗ್ ಮಾಡಲಾಗಿಲ್ಲ.

ಗ್ರಾಮದ ಮುರುಕು ಕಟ್ಟಡದಲ್ಲಿ ಅಂಗನವಾಡಿ ಕೇಂದ್ರವಿದ್ದು, ಅದು ಶಿಥಿಲಾವಸ್ಥೆ ತಲುಪಿದೆ.  ಸ್ಥಳೀಯ ನಿಡಘಟ್ಟ ಗ್ರಾಮ ಪಂಚಾಯಿತಿ ವರಿಷ್ಠರು, ತಮ್ಮ ಊರಿನವರೇ ಆದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಇತ್ತ ಗಮನಿಸುವರೇ? ಎಂಬುದು ಇಲ್ಲಿನ ಜನರ ಸದ್ಯದ ಪ್ರಶ್ನೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.