ಭಾನುವಾರ, ಮೇ 9, 2021
26 °C

ತಿರುಗು ರಂಗಮಂದಿರ ನಿಶ್ಚಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹನುಮಸಾಗರ: ದಿವಾಳಿ ಅಂಚಿನಲ್ಲಿರುವ ವೃತ್ತಿ ರಂಗ ಭೂಮಿಗೆ ಮತ್ತೆ ಜೀವಂತಿಕೆ ತುಂಬಬೇಕು, ಕಲಾವಿದರನ್ನು ಪ್ರೋತ್ಸಾಹಿಸಬೇಕು, ರಂಗಭೂಮಿಯಿಂದ ದೂರ ಉಳಿದು ಟಿವಿಗಳ ಮುಂದೆ ಕುಳಿತಿರುವ ಪ್ರೇಕ್ಷಕರನ್ನು ಪುನಃ ರಂಗಭೂಮಿಯತ್ತ ಕರೆತರಬೇಕು ಎಂಬ ಹಲವಾರು ಉದ್ದೇಶಗಳಿಂದ ನಿರ್ಮಾಣವಾಗಿದ್ದ ವಿನೂತನ ಶೈಲಿಯ ತಿರುಗು ರಂಗ ಮಂದಿರ ಕೇವಲ ಎರಡು ಪ್ರವೇಶ ಪೂರೈಸುವುದರೊಳಗೆ ಪ್ರೇಕ್ಷಕರ ನಿರುತ್ಸಾಹದ ಕಾರಣವಾಗಿ ನಾಟಕ ಮುನ್ನಡೆಯದೇ ನಿಂತು ಹೋಗಿದೆ.ಇಲ್ಲಿನ ಶ್ರೀಗುರು ಗಂಗಾಧರೇಶ್ವರಸ್ವಾಮಿ ಸಂಗೀತ ವಿದ್ಯಾಲಯದ ಕಲಾವಿದ ಬಳಗದವರು ಸುಮಾರು ರೂ.2ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಸ್ಥಳೀಯ ಬಡಿಗ, ಕಮ್ಮಾರರನ್ನು ಬಳಸಿಕೊಂಡು ಸಂಪೂರ್ಣ ಗ್ರಾಮೀಣ ತಂತ್ರಜ್ಞಾನದ ಆಧಾರದ ಮೇಲೆ ರಂಗ ವೇದಿಕೆಯ ನಿರ್ಮಾಣ ಕಾರ್ಯ ಪೂರೈಸಿದ್ದರು. ಇದುವರೆಗೂ ಎಲ್ಲೂ ಕಾಣದ ಹಾಗೂ ಕೇಳರಿಯದ ಇಂತಹ ಅಪರೂಪದ ರಂಗಮಂದಿರ ಇದಾಗಿತ್ತು. ಸನ್ನಿವೇಶಕ್ಕೆ ತಕ್ಕಂತೆ ಪರದೆಗಳನ್ನು ಎಳೆಯುವುದು ಇಳಿಸುವುದರ ಬದಲು ಸನ್ನಿವೇಶಕ್ಕೆ ತಕ್ಕಂತೆ ಇಡೀ ರಂಗಮಂದಿರವನ್ನೇ ತಿರುಗಿಸುವಂತಂಹ ತಂತ್ರಜ್ಞಾನವನ್ನು ಇಲ್ಲಿ ಅಳವಡಿಸಲಾಗಿತ್ತು. ಇಂತಹ ಒಟ್ಟು 8ದೃಶ್ಯಗಳನ್ನು ಹೊಂದಿದ್ದ ಈ ರಂಗ ಸಜ್ಜಿಕೆಯ ಮುಂದೆ ಸುಮಾರು 3 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಏಕಕಾಲದಲ್ಲಿಯೇ ಕುಳಿತು ನಾಟಕ ವೀಕ್ಷಿಸಬಹುದಾಗಿತ್ತು. ಅಲ್ಲದೆ ದೂರದರ್ಶನದಲ್ಲಿ ದೃಶ್ಯಗಳನ್ನು ವೀಕ್ಷಿಸಿದ ಹಾಗೆ ಇಲ್ಲಿ ನೈಜವಾಗಿಯೆ ಅಂತಹ ಅನುಭವ ಪಡೆಯುವಂತೆ ಬಹು ಶ್ರಮದಿಂದ ರಂಗವೇದಿಕೆ ನಿರ್ಮಾಣ ಮಾಡಿದ್ದರು.ಹನುಮನಾಳ ಸೇರಿದಂತೆ ಸುತ್ತಲಿನ ಬಹುತೇಕ ಹಳ್ಳಿಗಳ ಸಾವಿರಾರು ಜನರು ವಿವಿಧ ನಾಟಕಗಳನ್ನು ವೀಕ್ಷಿಸುವ ನಿರೀಕ್ಷೆ ಇಟ್ಟುಕೊಂಡು ಮಾ.27 ವಿಶ್ವ ರಂಗಭೂಮಿಯ ದಿನದಂದು ನಾಟಕ ಆರಂಭವಾಗಿತ್ತು. ಅರಂಭದಲ್ಲಿ ಕುಮಾರ ವಿಜಯ ನಾಟ್ಯ ಸಂಘ ಚಿತ್ತರಗಿ ಕಲಾ ತಂಡದಿಂದ ಗುಣವಂತ ನನ್ನ ಗಂಡ ಎಂಬ ನಾಟಕ ಹಾಗೂ ಮಹಾಂತ ಜೋಳಿಗೆ ಎಂಬ ಎರಡು ಪ್ರವೇಶಗಳು ಕೊಂಚ ಗೆಲುವಾಗಿಯೇ ನಡೆದವಾದರೂ ಮುಂದಿನ ಪ್ರವೇಶಗಳಿಗೆ ಪ್ರೇಕ್ಷಕರ ಕೊರತೆಯ ಕಾರಣದಿಂದ ಅನಿವಾರ್ಯವಾಗಿ ತಿರುಗು ರಂಗಮಂದಿರದ ಕದ ಮುಚ್ಚಬೇಕಾಯಿತು ಎಂದು ಕಲಾವಿದರು ನಿರಾಶೆಯಿಂದ ಹೇಳುತ್ತಾರೆ.ದೃಶ್ಯ ಮಾಧ್ಯಮಗಳ ಭರಾಟೆಯ ಈ ದಿನಗಳ ನಡುವೆ ಮಂಕಾಗಿ ಮೂಲೆ ಹಿಡಿದಿರುವ ವೃತ್ತಿ ರಂಗಭೂಮಿಗೆ ಚೈತನ್ಯ ನೀಡುವುದೇ ನಮ್ಮಉದ್ದೇಶವಾಗಿತ್ತು, ಆದರೆ ನಮ್ಮ ನಿರೀಕ್ಷೆಗಳು ಹುಸಿಯಾದವು, ಸ್ಥಳೀಯರ ಮೇಲೆ ವಿಶ್ವಾಸವಿಟ್ಟು ನಿರ್ಮಾಣ ಮಾಡಿದ್ದ ಈ ವೇದಿಕೆಯ ಸಾಲವೆಲ್ಲ ಮೈಮೇಲೆ ಬಂದು ಹೈರಾಣಾಗುವಂತಾಯಿತು ಎಂದು ಕಲಾವಿದ ಗುರುನಾಥ ಪತ್ತಾರ ನೋವಿನಿಂದ ಹೇಳುತ್ತಾರೆ.ಮುಖ್ಯವಾಗಿ ನಾಟಕದಲ್ಲಿ ನೈಜವಾಗಿ ಸಂಗೀತ ಬಳಸದೇ ಇರುವುದು ಹಾಗೂ ಕಲಾವಿದರು ಮಾತಿಗೆ ಬದಲು ಕೇವಲ ಕೈ ಮತ್ತು ಬಾಯಿ ಸನ್ನೆಗಳ ಮೂಲಕ ನಟನೆ ಮಾಡಿ ಅದಕ್ಕೆ ಪೂರಕವಾಗಿ ಸಂಗೀತ ಹಾಗೂ ಮಾತಿಗೆ ಹಿನ್ನೆಲೆಯಾಗಿ ಕ್ಯಾಸೆಟ್‌ನಲ್ಲಿ ದಾಖಲಿಸಿರುವ ರೆಡಿಮೇಡ್ ಆಡಿಯೋ ಬಳಸಿದ್ದೇ ಇವರಿಗೆ ಮುಳುವಾಯಿತು ಎನ್ನಲಾಗಿದೆ.ಇದೆಲ್ಲದರ ಜೊತೆಗೆ ಸಾಕಷ್ಟು ಶ್ರಮವಹಿಸಿದ ಕಲಾವಿದರನ್ನು ಪ್ರೋತ್ಸಾಹಿಸಬೇಕಾಗಿದ್ದ ಸ್ಥಳೀಯರು ನಾಟಕ ಮಂದಿರದತ್ತ ಸುಳಿಯದೇ ಇರುವುದು, ಭಿಕರ ಬರಗಾಲದಿಂದ ಸಾರ್ವಜನಿಕರ ಕೈಯಲ್ಲಿ ದುಡ್ಡು ಇಲ್ಲದೆ ಇರುವುದು, ನಾಟಕ ಮಂಡಳಿಯಲ್ಲಿ ಹುಟ್ಟಿಕೊಂಡ ಕೆಲ ಒಳಮುನಿಸುಗಳು, ಅಕಾಲಿಕ ಮಳೆಯಭೀತಿ, ಬಿರುಗಾಳಿ, ಅನಾವಶ್ಯಕವಾಗಿ ವಿದ್ಯುತ್ ಕಡಿತಗೊಳಿಸುತ್ತಿರುವುದು ಸೇರಿದಂತೆ ಹಲವಾರು ಕಾರಣಗಳಿಂದ ತಿರುಗುರಂಗ ಮಂದಿರದ ಕನಸು ನುಚ್ಚುನೂರಾಗಲು ಕಾರಣವಾಗಿದೆ ಎನ್ನಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.