ತಿರುಪತಿ ಆದಾಯ ಕುಸಿತ!

7
ಆಂಧ್ರ ಪ್ರತಿಭಟನೆ: ಹುಂಡಿ ಕಾಣಿಕೆಗೆ ಕುತ್ತು

ತಿರುಪತಿ ಆದಾಯ ಕುಸಿತ!

Published:
Updated:

ಹೈದರಾಬಾದ್: ಆಂಧ್ರ ಪ್ರದೇಶ ಇಬ್ಭಾಗ ವಿರೋಧಿಸಿ ಒಂದು ತಿಂಗಳಿನಿಂದ ನಿರಂತರವಾಗಿ ನಡೆಯುತ್ತಿರುವ ಅಖಂಡ ಆಂಧ್ರ ಪ್ರತಿಭಟನೆಯಿಂದಾಗಿ ತಿರುಪತಿ ತಿರುಮಲದ ಬಾಲಾಜಿ ದೇವಸ್ಥಾನದ ಆದಾಯ ಗಣನೀಯ ಪ್ರಮಾಣದಲ್ಲಿ ಕುಸಿದಿದೆ.ಕಳೆದ ಆಗಸ್ಟ್‌ನಲ್ಲಿ ದೇವಸ್ಥಾನದ ಹುಂಡಿಯಲ್ಲಿ 78 ಕೊಟಿ ರೂಪಾಯಿ ಸಂಗ್ರಹವಾಗಿತ್ತು. ಈ ಬಾರಿ ಆಗಸ್ಟ್‌ನಲ್ಲಿ ಹುಂಡಿಯಲ್ಲಿ ಸಂಗ್ರಹವಾಗಿದ್ದು 62 ಕೋಟಿ ರೂಪಾಯಿ. ಕಳೆದ ಬಾರಿ 23 ಲಕ್ಷ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರೆ, ಈ ಬಾರಿ 19.5 ಲಕ್ಷ ಭಕ್ತರು ತಿಪ್ಪಪ್ಪನ ದರ್ಶನ ಪಡೆದಿದ್ದಾರೆ. ಅಲ್ಲದೇ ವಾರಾಂತ್ಯದ ಆದಾಯವೂ ಕುಸಿದಿರುವುದು ತಿರುಪತಿ ತಿರುಮಲ ದೇವಸ್ಥಾನ ಮಂಡಳಿ ಆತಂಕಕ್ಕೆ ಕಾರಣವಾಗಿದೆ.ಹುಂಡಿಯಲ್ಲಿ ಸಂಗ್ರಹವಾದ ಬೆಳ್ಳಿ, ಬಂಗಾರ ಮತ್ತು ವಜ್ರಗಳ ಮಾಹಿತಿ ಇನ್ನೂ ದೊರೆತಿಲ್ಲ. ಮೂರು ತಿಂಗಳಿಗೊಮ್ಮೆ ಮಾತ್ರ ಇವುಗಳ ಎಣಿಕೆ ಮತ್ತು ಮೌಲ್ಯ ನಿರ್ಧಾರ ಮಾಡಲಾಗುತ್ತದೆ. ಅಖಂಡ ಆಂಧ್ರ ಹೋರಾಟದಲ್ಲಿ ಆಂಧ್ರಪ್ರದೇಶ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಯೂ ಭಾಗವಹಿಸಿದ ಕಾರಣ ತಿರುಪತಿಗೆ ನಿತ್ಯ ಬಸ್ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿರುವುದು ಆದಾಯ ಕುಸಿತಕ್ಕೆ ಮತ್ತೊಂದು ಕಾರಣವಾಗಿದೆ.80 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಿರುಪತಿ ತಿರುಮಲ ದೇವಸ್ಥಾನ ಮಂಡಳಿಯ ಹತ್ತು ಸಾವಿರ ಸಿಬ್ಬಂದಿಯೂ ಪ್ರತಿಭಟನೆಯಲ್ಲಿ ಭಾಗವಹಿಸಿದೆ. ಐದು ಸಾವಿರ ಸಿಬ್ಬಂದಿ ರಜೆಯ ಮೇಲೆ ತೆರಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry